ಮಂಡ್ಯ: ಬಿಜೆಪಿ ನಾಯಕ ಸಿ.ಟಿ ರವಿ (CT Ravi) ಅವರ ಹೇಳಿಕೆ ಇಡೀ ಹೆಣ್ಣು ಕುಲಕ್ಕೆ ಮಾಡಲಾದ ದೊಡ್ಡ ಅಪಮಾನ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶುಕ್ರವಾರ ಅವರು ಪ್ರತಿಕ್ರಿಯೆ ನೀಡಿದರು.
ಈ ವ್ಯಕ್ತಿಯಿಂದ ಇಂತಹ ಪ್ರವೃತ್ತಿ ಇದೇ ಮೊದಲಲ್ಲ. ಸಿದ್ದರಾಮಯ್ಯ ಅವರು, ಜಯಮಾಲ, ಸೇರಿದಂತೆ ನಮ್ಮ ನಾಯಕರ ಬಗ್ಗೆ ಈ ಹಿಂದೆ ಅನೇಕ ಬಾರಿ ಹೀನವಾಗಿ ಮಾತನಾಡಿದ್ದಾರೆ. ಸಿ.ಟಿ. ರವಿ ಅವರ ಹೇಳಿಕೆ ಹಾಗೂ ನಡತೆ ಸರಿಯೋ ತಪ್ಪೋ ಎಂದು ಬಿಜೆಪಿಯ ಎಲ್ಲಾ ನಾಯಕರು ಹೇಳಲಿ. ಪೊಲೀಸರ ವಿಚಾರ ನಂತರ ಮಾತನಾಡೋಣ. ಅದನ್ನು ಬಿಟ್ಟು ಪೊಲೀಸರ ಮೇಲೆ ದೂರು ನೀಡುವುದಲ್ಲ. ಪೊಲೀಸರು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳೋಣ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ; ಹೆಬ್ಬಾಳ್ಕರ್ ಪರ ಸಿದ್ದರಾಮಯ್ಯ ಹೇಳಿಕೆ
ಚಿಕ್ಕಮಗಳೂರು ಬಂದ್ ಕರೆ ನೀಡಿರುವ ಬಗ್ಗೆ ಕೇಳಿದಾಗ, ʼಚಿಕ್ಕಮಗಳೂರು ಮಾತ್ರವಲ್ಲ, ದೇಶವನ್ನೇ ಬಂದ್ ಮಾಡಲಿ. ಆತ ಮಾಡಿರುವುದು ಘನಕಾರ್ಯವೇ? ಘನಕಾರ್ಯ ಮಾಡಿ ಧೀರಾದಿ ಧೀರನಂತೆ ಬಂದ್ ಮಾಡುತ್ತಾರಾ ಮಾಡಿಕೊಳ್ಳಲಿʼ ಎಂದು ತಿಳಿಸಿದರು.
ಜೀವ ಬೆದರಿಕೆ ಹಾಕಿದ್ದರೆ ಕ್ರಮ ಕೈಗೊಳ್ಳಲಿ
ನೀವು ಜೀವ ಬೆದರಿಕೆ ಒಡ್ಡಿದ್ದೀರಿ ಎಂದು ಬಿಜೆಪಿ ಆರೋಪ ಮಾಡುತ್ತಿದೆ ಎಂದು ಕೇಳಿದಾಗ, ʼನಾನು ಆ ಜಾಗದಲ್ಲೇ ಇರಲಿಲ್ಲ. ಪರಿಷತ್‌ನಲ್ಲಿ 10 ಪ್ರಶ್ನೆಗೆ ಉತ್ತರ ನೀಡಿ, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನಾನು ವಿಧಾನಸಭೆ ಕಲಾಪಕ್ಕೆ ಹೋದೆ. ನಂತರ ಈ ಘಟನೆ ನಡೆದಿದೆ. ನಂತರ ನಾನು ಮತ್ತೆ ಪರಿಷತ್ತಿಗೆ ಹೋದೆ. ಜೀವ ಬೆದರಿಕೆ ಒಡ್ಡಿದ್ದರೆ ತನಿಖೆ ಮಾಡಲಿ. ಎಲ್ಲಾ ವಿಡಿಯೋ ದಾಖಲೆ ಇದೆಯಲ್ಲ. ಜೀವ ಬೆದರಿಕೆ ಹಾಕಿದ್ದರೆ ಕ್ರಮ ಕೈಗೊಳ್ಳಲಿ. ನಾನು ಏನು ದೊಡ್ಡವನಲ್ಲ. ನಾನು ತಪ್ಪು ಮಾಡಿದ್ದರೆ ಕಾನೂನು ಶಿಕ್ಷೆ ನೀಡಲಿದೆʼ ಎಂದರು.
ಒಂದು ಸುಳ್ಳು ಮುಚ್ಚಿಕೊಳ್ಳಲು ನೂರು ಸುಳ್ಳು ಹೇಳಬೇಕಾಗಿದೆ
ನಾನು ಫಸ್ಟ್ರೇಷನ್ ಎಂದು ಹೇಳಿದ್ದೇನೆ ಹೊರತು ಬೇರೆ ಪದ ಬಳಸಿಲ್ಲ ಎಂಬ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಕೇಳಿದಾಗ, ಎಲ್ಲಾ ಮಾಧ್ಯಮಗಳಲ್ಲೂ ಪ್ರಸಾರವಾಗಿದೆ. ಆತ ರಾಹುಲ್ ಗಾಂಧಿ ಅವರನ್ನು ಡ್ರಗ್ ಅಡಿಕ್ಟ್ ಎಂದು ಕರೆದಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಇದು ಪ್ರಕಟವಾಗಿವೆ. ಅವರು ಒಂದು ಸುಳ್ಳು ಮುಚ್ಚಿಹಾಕಲು ನೂರು ಸುಳ್ಳು ಹೇಳಬೇಕಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ
ವಿಡಿಯೋ ದಾಖಲೆಗಳು ಇಲ್ಲ ಎಂಬ ಸಭಾಪತಿಯವರ ಹೇಳಿಕೆ ಬಗ್ಗೆ ಕೇಳಿದಾಗ, ಹಾಗಾದರೆ ಮಾಧ್ಯಮಗಳು ತೋರುತ್ತಿರುವುದು ಸುಳ್ಳಾ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮರು ಪ್ರಶ್ನೆ ಹಾಕಿದರು.