ಹೊಸದಿಲ್ಲಿ: ನಮ್ಮ ದೇಶದಲ್ಲಿ ಪ್ರವಾಸಿ ತಾಣಗಳಿಗೆ (Tourist Place) ಕೊರತೆಯೇನು ಇಲ್ಲ. ಒಂದೊಂದು ಕಾಲಕ್ಕೆ ಒಂದೊಂದು ಸ್ಥಳಗಳಿಗೆ ಭೇಟಿ ನೀಡಬಹುದಾದ ಪ್ರವಾಸಿ ತಾಣಗಳೂ ಇವೆ. ಅದೇ ರೀತಿ ಕೆಲವೊಂದು ಪ್ರದೇಶಗಳಿಗೆ ವರ್ಷಪೂರ್ತಿ ಭೇಟಿ ನೀಡಬಹುದು. ಕೆಲವು ಪ್ರದೇಶಗಳಿಗೆ ಚಳಿಗಾಲದಲ್ಲಿ(Winter), ಮಳೆಗಾಲದಲ್ಲಿ(Rainy season) ಹೋಗಿ ಅಲ್ಲಿನ ಸೌಂದರ್ಯವನ್ನು ಆಸ್ವಾದಿಸಬಹುದು. ಅದೇ ರೀತಿ ಭಾರತದಲ್ಲಿ ಚಳಿಗಾಲದ ಸಮಯದಲ್ಲಿ ಭೇಟಿ ನೀಡಬೇಕಾದ ಹಲವು ಅದ್ಭುತ ಸ್ಥಳಗಳಿದ್ದು, ಪ್ರಕೃತಿ ಪ್ರಿಯರು, ಪ್ರಾಕೃತಿಕ ಸೌಂದರ್ಯವನ್ನು ಆರಾಧಿಸುವುದರ ಜತೆಗೆ ರಜೆಯನ್ನು ಎಂಜಾಯ್ ಮಾಡಬಹುದು. ಹೀಗಾಗಿ ಚಳಿಗಾಲದಲ್ಲಿ ನೀವು ಟ್ರಿಪ್ ಹೋಗಲು ಪ್ಲಾನ್ ಮಾಡುತ್ತಿದ್ದಾರೆ ಮಿಸ್ ಮಾಡದೆ ಈ ಸ್ಥಳಗಳಿಗೆ ಹೋಗಿ.

ಗೋವಾ
ಗೋವಾ ಪ್ರವಾಸ ಮಾಡಲು ಉತ್ತಮವಾದ ಋತುಮಾನವೆಂದರೆ ಅದು ಚಳಿಗಾಲ. ಬಹುತೇಕರು ಗೋವಾ ಟ್ರಿಪ್‌ಗೆ ಅಕ್ಟೋಬರ್‌ನಿಂದ ಮಾರ್ಚ್ ತಿಂಗಳ ನಡುವಿನಲ್ಲಿ ಪ್ರಯಾಣ ಮಾಡಲು ಶಿಫಾರಸು ಮಾಡುತ್ತಾರೆ. ಗೋವಾ ಕಡಲತೀರಗಳಿಂದ ತುಂಬಿದೆ. ಕುಟುಂಬ ಅಥವಾ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡಲು ಗೋವಾ ಪ್ರವಾಸ ಮಾಡಬಹುದು. ಇಲ್ಲಿ ಹಳೆಯ ಚರ್ಚುಗಳು, ಪ್ರಾಚೀನ ಕೋಟೆಗಳು, ಉಲ್ಲಾಸಕರವಾದ ಕಡಲತೀರ ಮತ್ತು ಜಲಪಾತಗಳಿವೆ. ಸಮುದ್ರಾಹಾರ, ಸೊಗಸಾದ ಕೆಫೆಗಳು, ರಾತ್ರಿಯ ಜೀವನವನ್ನು ಅಂತ್ಯವಿಲ್ಲದೇ ಆನಂದಿಸಬಹುದು.

ಸಿಕ್ಕಿಂ
ಚಳಿಗಾಲದ ಪ್ರವಾಸಕ್ಕೆ ಸೂಕ್ತವಾದ ತಾಣಗಳಲ್ಲಿ ಸಿಕ್ಕಿಂ ಕೂಡ ಒಂದಾಗಿದೆ. ಸಿಕ್ಕಿಂ ನೈಸರ್ಗಿಕ ಸೌಂದರ್ಯ ಮತ್ತು ಸಾಹಸಕ್ಕಾಗಿ ಜನಪ್ರಿಯವಾಗಿದೆ. ಈ ಸ್ಥಳವು ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಪ್ರಶಾಂತತೆ ಅಥವಾ ಏಕಾಂತ ಬಯಸುವ ಮಂದಿ ಸಿಕ್ಕಿಂಗೆ ಹೋಗಬಹುದು. ಇಲ್ಲಿನ ಕಾಂಚನಜುಂಗಾ ಪರ್ವತಕ್ಕೆ ಜನಪ್ರಿಯ. ಇದು 3,586 ಮೀಟರ್ ಎತ್ತರವನ್ನು ಹೊಂದಿದ್ದು, ವಿಶ್ವದ ಮೂರನೇ ಅತಿ ಎತ್ತರದ ಪರ್ವತ ಎನಿಸಿಕೊಂಡಿದೆ. ಗ್ಯಾಂಗ್ಟಾಕ್ ಕೊಠಡಿ, ಆಶ್ರಮ ನಾಮ್ಚಿ, ಜವಾಹರಲಾಲ್ ನೆಹರೂ ಸಸ್ಯೋದ್ಯಾನ ಇತ್ಯಾದಿಗಳಿಗೆ ನೀವು ಭೇಟಿ ನೀಡಲೇಬೇಕು.

ಕೇರಳ
ಕೇರಳವು ನೈಸರ್ಗಿಕ ಸೌಂದರ್ಯ, ಶ್ರೀಮಂತ ಸಂಸ್ಕೃತಿ ಮತ್ತು ವೈವಿಧ್ಯಮಯ ಅನುಭವಗಳ ಅನನ್ಯ ಮಿಶ್ರಣವಾಗಿದೆ. ಕೇರಳ ಚಳಿಗಾಲದ ತಿಂಗಳುಗಳಲ್ಲಿ ತನ್ನದೇ ಆದ ಆಕರ್ಷಣೆಯಿಂದ ಕಂಗೊಳಿಸುತ್ತದೆ. ಬಹುಶಃ ಕೇರಳದ ಈ ತಾಣಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸಬಹುದು. ಡಿಸೆಂಬರ್‌ನಲ್ಲಿ ಕೇರಳ ಸೌಮ್ಯವಾದ ಮತ್ತು ಆಹ್ಲಾದಕರವಾದ ಹವಾಮಾನ, ತಾಪಮಾನ ಹೊಂದಿರುತ್ತದೆ. ಆಗ 10ರಿಂದ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಇರುತ್ತದೆ. ಆದ್ದರಿಂದ ನೀವು ಹೊರಾಂಗಣವನ್ನು ಸುಲಭವಾಗಿ ಅನ್ವೇಷಿಸಬಹುದು. ಕೇರಳ ಹಿನ್ನೀರಿಗೆ ತುಂಬಾನೇ ಫೇಮಸ್. ಇಲ್ಲಿನ ಪ್ರಶಾಂತವಾದ ಸರೋವರಗಳು, ಕಾಲುವೆಗಳು ಮತ್ತು ನದಿಗಳು ಮನಸ್ಸಿಗೆ ಹಿತವನ್ನು ಉಂಟು ಮಾಡುತ್ತದೆ. ಸುತ್ತಲೂ ಸೌಮ್ಯವಾದ ಹವಾಮಾನದೊಂದಿಗೆ, ಅಲೆಪ್ಪಿ, ಕುಮಾರಕೋಮ್, ಕಾಸರಗೋಡು, ಕೊಚ್ಚಿ ಮತ್ತು ಕೊಲ್ಲಂನಂತಹ ಜನಪ್ರಿಯ ಹಿನ್ನೀರಿನ ತಾಣಗಳು ಡಿಸೆಂಬರ್‌ನಲ್ಲಿ ತನ್ನದೇ ಆದ ಸೌಂದರ್ಯದಿಂದ ಆಕರ್ಷಿಸುತ್ತವೆ.

ಶಿಲ್ಲಾಂಗ್
ಜಗತ್ತಿನಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಚಿರಾಪುಂಜಿಯಿಂದ 55 ಕಿ.ಮೀ. ದೂರದಲ್ಲಿರುವ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ತನ್ನ ನೈಸರ್ಗಿಕ ಸೌಂದರ್ಯದಿಂದ ದೇಶ- ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಚಳಿಗಾಲದಲ್ಲಿ ಹಸುರು ಬೆಟ್ಟಗಳ ನಡುವೆ ಕೆಲ ಕಾಲ ವಿಶ್ರಾಂತಿ ಪಡೆಯಬೇಕಿದ್ದರೆ ಶಿಲ್ಲಾಂಗ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಶಿಲ್ಲಾಂಗ್‌ಗೆ ಭೇಟಿ ನೀಡಿದರೆ ಇಲ್ಲಿ ತಪ್ಪಿಸಿಕೊಳ್ಳಬಾರದ 9 ಪ್ರಮುಖ ಪ್ರವಾಸಿ ಆಕರ್ಷಣೆಗಳಿವೆ. ಹಚ್ಚಹಸುರಿನ ಬೆಟ್ಟಗಳ ನಡುವೆ ನೆಲೆಯಾಗಿರುವ ಶಿಲ್ಲಾಂಗ್ ನೈಸರ್ಗಿಕ ಔದಾರ್ಯ ಮತ್ತು ರೋಮಾಂಚಕ ಸಂಸ್ಕೃತಿಯಿಂದ ಪ್ರವಾಸಿಗರನ್ನು ಮೋಡಿ ಮಾಡುತ್ತದೆ. ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲೇ ಜಲಪಾತ, ಸರೋವರ, ವಸ್ತುಸಂಗ್ರಹಾಲಯ, ಮಾರುಕಟ್ಟೆಗಳು ಸೇರಿದಂತೆ ಇನ್ನು ಹಲವು ಆಕರ್ಷಣೆಗಳನ್ನು ಹೊಂದಿದೆ.

ಪಾಂಡಿಚೇರಿ
ಗಿರಿಧಾಮ ಬಿಟ್ಟು ಬೇರೆ ಕಡೆ ಹೋಗಬೇಕು ಎಂದು ನೀವಂದುಕೊಂಡಿದ್ದರೆ ದಕ್ಷಿಣ ಭಾರತದ ಪಾಂಡಿಚೇರಿ ಕೂಡ ಉತ್ತಮ ಆಯ್ಕೆಯೇ. ಚಳಿಗಾಲದ ಆರಂಭದಲ್ಲಿ ಮತ್ತು ಚಳಿಗಾಲದ ಸಂದರ್ಭದಲ್ಲಿ ಭೇಟಿ ನೀಡಬಹುದಾದಂತಹ ತಾಣಗಳಲ್ಲಿ ಫ್ರೆಂಚ್ ಕಾಲೋನಿ ಎಂದೇ ಖ್ಯಾತಿಗಳಿಸಿರುವ ಪಾಂಡಿಚೇರಿ ಪ್ರಮುಖವಾದುದು. ಪುದುಚೇರಿ ಎಂದೂ ಇದನ್ನು ಕರೆಯುತ್ತಾರೆ. ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶ. ಬಂಗಾಳ ಕೊಲ್ಲಿ ಮತ್ತು ತಮಿಳುನಾಡಿನಿಂದ ಸುತ್ತುವರಿದಿರುವ ಪುದುಚೇರಿಯಲ್ಲಿ ತಮಿಳು ಸಂಸ್ಕೃತಿ, ಪರಂಪರೆಯನ್ನೂ ನೋಡಬಹುದಾಗಿದೆ. 18ನೇ ಶತಮಾನದ ವಸಾಹತುಶಾಹಿ ಕಟ್ಟಡ, ಚರ್ಚುಗಳು ಇಲಲಿ ಕಂಡು ಬರುತ್ತದವೆ. ಕಡಲತೀರದಲ್ಲಿ ವಿಹಾರಕ್ಕೆ, ಚೆನ್ನೈನಿಂದ ವಾರಾಂತ್ಯಕ್ಕೆ ಭೇಟಿ ನೀಡುವುದಕ್ಕೆ ಇದು ಸುಂದರ ತಾಣ ಕೂಡ ಹೌದು. ತಮಿಳು ಮತ್ತು ಫ್ರೆಂಚ್ ಪಾಕಪದ್ಧತಿ ಮತ್ತು ವಾಸ್ತುಶಿಲ್ಪದ ಸಂಯೋಜನೆಯನ್ನೂ ಇಲ್ಲಿ ನೋಡಬಹುದು. ಅಕ್ಟೋಬರ್‌ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ.
ಈ ಸುದ್ದಿಯನ್ನು ಓದಿ: 2024 Flashback: ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು