ಮಂಡ್ಯ: ʼಮಧುರ ಮಂಡ್ಯʼ ಎಂದೇ ಇಲ್ಲಿನ ಜನ ಪ್ರೀತಿಯಿಂದ ಕರೆಯುವ ಸಕ್ಕರೆ ನಾಡು ಮಂಡ್ಯದಲ್ಲಿ ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನ(Sahitya Sammelana)ಕ್ಕೆ ಇಂದು ತೆರೆಯೆದ್ದಿದೆ. ಅಪ್ಪಟ ದೇಸಿ ಕನ್ನಡ ಮಾತಾಡುವ ಈ ನೆಲದ ಜನ ನಾಡಿನಾದ್ಯಂತದ ಕನ್ನಡಿಗರನ್ನು ಪ್ರೀತಿಯಿಂದ ಸ್ವಾಗತಿಸಲು ಸಜ್ಜಾಗಿದ್ದಾರೆ. ಇಂದಿನಿಂದ ಮೂರು ದಿನ (ಡಿ.20, 21, 22) ಮಂಡ್ಯದ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದ ವಿಶಾಲ ಜಮೀನಿನಲ್ಲಿ ನುಡಿ ಸಡಗರ ಮೇಳೈಸಲಿದೆ. ಕನ್ನಡ ತಾಯಿ ಭುವನೇಶ್ವರಿ ನುಡಿಜಾತ್ರೆಯ ಅರಶಿನ- ಕುಂಕುಮದಿಂದ ಮತ್ತಷ್ಟು ಸಿಂಗಾರಗೊಳ್ಳಲಿದ್ದಾಳೆ.
ಮಂಡ್ಯದ ಕನ್ನಡ ಯಾವುದೇ ರೀತಿಯಿಂದಲೂ ಅನ್ಯ ಭಾಷೆಗಳಿಂದ ಮಿಶ್ರಣಗೊಳ್ಳದ ಅಪ್ಪಟ ನೆಲದ ಘಮಲಿನ ಭಾಷೆ. ಇಲ್ಲಿನ ಜನತೆಯ ಸೊಗಸಾದ ಉಚ್ಚಾರಣೆ, ಇನ್ನೊಬ್ಬರನ್ನು ಕರೆಯುವ ರೀತಿ, ಇಲ್ಲಿನ ಆತಿಥ್ಯ ಎಲ್ಲವೂ ಒಂದು ಕೈ ಮಿಗಿಲು. ಕನ್ನಡ ಸಾಹಿತ್ಯದಲ್ಲಿ ಪ್ರಾತಃಸ್ಮರಣೀಯರಾದ ಅನೇಕ ಹಿರಿಯ, ಜನಪ್ರಿಯ ಸಾಹಿತಿಗಳು ಈ ನೆಲದಲ್ಲಿ ಆಗಿಹೋಗಿದ್ದಾರೆ. ಬಿ.ಎಂ.ಶ್ರೀಕಂಠಯ್ಯ, ಪು. ತಿ ನರಸಿಂಹಾಚಾರ್, ಎ.ಎನ್ ಮೂತಿ೯ರಾವ್, ಕೆ.ಎಸ್ ನರಸಿಂಹಸ್ವಾಮಿ, ಎಚ್.ಎಲ್ ನಾಗೇಗೌಡ, ಬೆಸಗರಹಳ್ಳಿ ರಾಮಣ್ಣ ಮುಂತಾದವರು ಕನ್ನಡದ ಮಣ್ಣಿಗೆ ಸಾಹಿತ್ಯದ ಸೊಗಡನ್ನು ಕೂಡಿಸಿದ ಮಹನೀಯರು. ಇಂಥವರು ಹುಟ್ಟಿ ಬೆಳಗಿದ ನೆಲದಲ್ಲಿ ನುಡಿಯ ರಥವನ್ನು ಮುನ್ನಡೆಸುತ್ತಿರುವವರು ಸಮ್ಮೇಳನಾಧ್ಯಕ್ಷರಾದ ನಾಡೋಜ ಗೊರು ಚನ್ನಬಸಪ್ಪ ಅವರು.
ಸಮ್ಮೇಳನಾಧ್ಯಕ್ಷತೆಯ ಗೊಂದಲ
ಗೊರು ಚನ್ನಬಸಪ್ಪ ಅವರ ಆಯ್ಕೆಗೂ ಮುನ್ನ ಈ ಸಲದ ಸಮ್ಮೇಳನಾಧ್ಯಕ್ಷರ ಆಯ್ಕೆಯ ಬಗ್ಗೆಯೇ ಹಲವು ಗೊಂದಲಗಳಿದ್ದವು. ಸಾಹಿತ್ಯೇತರ ವಲಯದ ಮಹನೀಯರನ್ನು ಅಧ್ಯಕ್ಷತೆಗೆ ಪರಿಗಣಿಸಬೇಕು ಎಂಬ ಬೇಡಿಕೆಯಿದೆ ಎಂದು ಪರಿಷತ್ ಅಧ್ಯಕ್ಷರೇ ಹೇಳಿದರು. ಇದರ ಪರ- ವಿರೋಧ ವಾದಗಳು ನಡೆದವು. ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಗಳನ್ನೇ ಅಧ್ಯಕ್ಷರನ್ನಾಗಿ ಪರಿಗಣಿಸಬೇಕು ಎಂದು ಸಾಹಿತಿಗಳ ವಲಯದಿಂದ ಬಲವಾದ ನಿಲುವು ಮಂಡಿತವಾಯಿತು. ಹೀಗಾಗಿ ಸಾಹಿತಿಗಳೇ ಅಧ್ಯಕ್ಷರಾಗುವುದು ಖಚಿತವಾಯಿತು. ಇದುವರೆಗಿನ ಮಹಿಳಾ ಪ್ರಾತಿನಿಧ್ಯ ಅತಿ ಕಡಿಮೆ ಇದ್ದುದರಿಂದ, ಈ ಬಾರಿ ಸ್ತ್ರೀಯರು ಅಧ್ಯಕ್ಷರಾಗಲಿ ಎಂಬ ಹಕ್ಕೊತ್ತಾಯವೂ ಕೇಳಿಬಂತು. ಕಡೆಗೂ ಜಾನಪದ ತಜ್ಞ, ಸಂಶೋಧಕ, ಆಡಳಿತಗಾರ, ಕನ್ನಡಕ್ಕಾಗಿ ಹಲವು ಕೆಲಸಗಳನ್ನು ಮಾಡಿದ ಚನ್ನಬಸಪ್ಪ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿ ಭಿನ್ನ ಧ್ವನಿಗಳೆಲ್ಲ ಕ್ಷೀಣವಾದವು.
ಮೂರನೇ ಸಮ್ಮೇಳನ
ಮಂಡ್ಯಕ್ಕೆ ಮೂರನೇ ಬಾರಿ ಸಮ್ಮೇಳನದ ಆತಿಥ್ಯ ದೊರೆಯುತ್ತಿರುವ ಹೊತ್ತಿನಲ್ಲಿ ಇಲ್ಲಿನ ಈ ಹಿಂದಿನ ಸಮ್ಮೇಳನಗಳ ನೆನಪೂ ಆಗುವುದು ಸಹಜ. 1974ರಲ್ಲಿ 48ನೇ ಸಮ್ಮೇಳನ ಮಂಡ್ಯದಲ್ಲಿ ನಡೆದಾಗ ಜಯದೇವಿತಾಯಿ ಲಿಗಾಡೆ ಅಧ್ಯಕ್ಷರಾಗಿದ್ದರು. ಅವರು ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಅಧ್ಯಕ್ಷೆಯಾದವರು ಎಂಬುದು ಮಂಡ್ಯದ ಇನ್ನೊಂದು ಹೆಮ್ಮೆ. 1994ರಲ್ಲಿ 63ನೇ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಾದಂಬರಿಕಾರ ಚದುರಂಗ, ಕನ್ನಡದ ಎಲ್ಲ ಸಂಸ್ಥೆಗಳ ಸಮಗ್ರೀಕರಣಕ್ಕೆ ಕರೆ ನೀಡಿದ್ದರು. ಈ ಸಮ್ಮೇಳನ ನಡೆದಾಗ ಗೊರುಚ ಅವರೇ ಪರಿಷತ್ತಿನ ಅಧ್ಯಕ್ಷರಾಗಿದ್ದರು ಎಂಬುದು ಇನ್ನೊಂದು ವಿಶೇಷ. ಅಂದಿನ ಪರಿಷತ್ ಅಧ್ಯಕ್ಷರಿಗೆ ಇಂದು ಸಮ್ಮೇಳನಾಧ್ಯಕ್ಷತೆಯ ಮಕುಟ.
ಬಾಡೂಟದ ಪ್ರಶ್ನೆ
ಈ ಬಾರಿ ಸಮ್ಮೇಳನಕ್ಕೆ ಮುಂಚಿತವಾಗಿ ಸಾಕಷ್ಟು ವಿವಾದ ಎಬ್ಬಿಸಿದ ವಿಚಾರ ಎಂದರೆ ಬಾಡೂಟದ್ದು. ಮಂಡ್ಯದ ನೆಲ ಬಾಡೂಟಕ್ಕೆ ಪ್ರಸಿದ್ಧ. ಹೊಲದಲ್ಲಿ ದುಡಿಯುವ ಪರಶ್ರಮಿಗಳೇ ಬಹುಸಂಖ್ಯಾತರಾಗಿರುವ ಮಂಡ್ಯದಲ್ಲಿ ಬಾಡೂಟ ಇಲ್ಲಿನ ಸಿಗ್ನೇಚರ್ ಖಾದ್ಯವೂ ಹೌದು. ಸಮೀಪದ ಬನ್ನೂರು ಕುರಿಗಳು ಬಾಡೂಟಪ್ರಿಯರ ನಾಲಿಗೆಯಲ್ಲಿ ನೀರೂರಿಸುವವು. ಹೀಗಾಗಿ ಇಲ್ಲಿ ಬಾಡೂಟಕ್ಕೆ ಆದ್ಯತೆ ನೀಡಬೇಕು ಎಂದು ಹಲವು ಸಂಘ ಸಂಸ್ಥೆಗಳು, ಪ್ರಗತಿಪರರು, ಆಹಾರಪ್ರಿಯರು, ಸ್ಥಳೀಯರು ಒತ್ತಾಯಿಸಿದ್ದರು. ಆದರೆ ಸಮ್ಮೇಳನ ಸ್ವಾಗತ ಸಮಿತಿಯಿಂದ ಸಸ್ಯಾಹಾರವೇ ಅಂತಿಮವಾಯಿತು. ಘೋಷಿತ ಮೂರು ದಿನಗಳ ಮೆನುವಿನಲ್ಲೂ ಮಾಂಸಾಹಾರ ಖಾದ್ಯಗಳಿಲ್ಲ. ಸಚಿವ ಚಲುವರಾಯಸ್ವಾಮಿ ಅವರು ಮಾಂಸಾಹಾರದ ಬೇಡಿಕೆ ಮಂಡಿಸಿದವರನ್ನು ನಯವಾಗಿ ಮನವೊಲಿಸಿದರು. ಆದರೆ ಹಲವು ಬಾಡೂಟಪ್ರಿಯರು ಸುಮ್ಮನೆ ಕುಳಿತಿಲ್ಲ. “ಮನೆಗೊಂದು ಕೋಳಿ, ಊರಿಗೊಂದು ಕುರಿ” ಎಂಬ ಅಭಿಯಾನ ಆರಂಭಿಸಿದ್ದಾರೆ. ಆದರೆ ಸಮ್ಮೇಳನದಲ್ಲಿ ಚರ್ಚೆಯಾಗಬೇಕಾದುದು ಸಾಹಿತ್ಯವೇ ಹೊರತು ಸಸ್ಯಾಹಾರ- ಮಾಂಸಾಹಾರದ ವಿಷಯವಲ್ಲ ಎಂದು ಸಮ್ಮೇಳನಾಧ್ಯಕ್ಷರು ತಣ್ಣಗೆ ಹೇಳಿದ್ದಾರೆ. ಅವರ ಮಾತಿಗೆ ಮನ್ನಣೆ ಕೊಟ್ಟು ಸುಮ್ಮನಾಗುತ್ತಾರೆಯೇ ಅಥವಾ ವಿವಾದದ ಕಾವು ಊಟದ ಕಂಟರ್ಗೂ ತಟ್ಟಲಿದೆಯೋ ಕಾದು ನೋಡಬೇಕು.
ಅಧ್ಯಕ್ಷರ ಮಾತುಗಳು
ಸಮ್ಮೇಳನಾಧ್ಯಕ್ಷರು ಭಾಷಣದಲ್ಲಿ ಏನನ್ನು ಪ್ರಸ್ತಾವಿಸಲಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಅನ್ಯಭಾಷಿಕರ ದೊಡ್ಡ ಪ್ರಮಾಣದ ವಲಸೆಯಿಂದ ನಾಡಿನ ಭಾಷೆ ಸಂಸ್ಕೃತಿಗೆ ಆಗುತ್ತಿರುವ ದುಷ್ಪರಿಣಾಮ, ಶಿಕ್ಷಣ ಮಾಧ್ಯಮವಾಗಿ ಕನ್ನಡ, ಗಡಿ ವಿವಾದ, ಜಲ ವಿವಾದ, ರಾಜ್ಯ ಮತ್ತು ಕೇಂದ್ರದ ಸಂಬಂಧ, ರಾಜ್ಯದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾರ್ಯಗಳು, ಪ್ರಾದೇಶಿಕ ತಾರತಮ್ಯ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡಕ್ಕೆ ಆದ್ಯತೆ, ಕನ್ನಡಿಗರ ಉದ್ಯೋಗಕ್ಕೆ ಆದ್ಯತೆ- ಇವುಗಳನ್ನೆಲ್ಲ ಪ್ರಸ್ತಾವಿಸಿ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರವನ್ನು ಒತ್ತಾಯಿಸುವುದಾಗಿ ಗೊರುಚ ಹೇಳಿದ್ದಾರೆ. ಅವರ ಹಕ್ಕೊತ್ತಾಯಗಳು ನಾಡಿನ ಬೇಡಿಕೆಗಳೂ ಆಗಿವೆ. ಈ ಹಿಂದಿನ ಸಮ್ಮೇಳನಗಳ ಅನೇಕ ನಿರ್ಣಯಗಳೂ ಇತ್ಯರ್ಥಕ್ಕಾಗಿ ಕಾಯುತ್ತಿವೆ.
ಸಾಹಿತ್ಯದಲ್ಲಿ ರಾಜಕೀಯ
ರಾಜಕಾರಣಿಗಳಿಲ್ಲದೆ ಸಾಹಿತ್ಯ ಸಮ್ಮೇಳನವನ್ನು ಊಹಿಸುವುದು ಕಷ್ಟದ ಮಾತು. ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿ ಮಂಡ್ಯದ ಮತ್ತು ಆಸುಪಾಸಿನ ರಾಮನಗರ, ಕನಕಪುರ ಮುಂತಾದ ಜಿಲ್ಲೆಗಳು ಪಕ್ಷ ರಾಜಕೀಯದ ಉತ್ತುಂಗವನ್ನು ಹಾಗೂ ಗರಿಷ್ಠ ಸಂಘರ್ಷವನ್ನು ಕಂಡಿವೆ. ಇಲ್ಲಿಂದ ಆರಿಸಿಬಂದಿರುವವರು ಕೇಂದ್ರ ಸಚಿವರೂ ಆಗಿದ್ದು, ಅವರ ಉಪಸ್ಥಿತಿಯೂ ಇರಲಿದೆ. ಪಕ್ಷ ರಾಜಕೀಯ ಏನೇ ಇದ್ದರೂ ನಾಡು- ನುಡಿಯ ವಿಚಾರದಲ್ಲಿ ಎಲ್ಲರೂ ಒಂದಾಗಿ ಒಂದೇ ಧ್ವನಿಯಲ್ಲಿ ಮಾತನಾಡಲಿ ಎಂದು ನಾವು ಹಾರೈಸಬೇಕಿದೆ.
ಗರಿಷ್ಠ ಅನುದಾನ
ಪ್ರತಿ ಸಲದ ಸಮ್ಮೇಳನಕ್ಕೆ ಮುನ್ನವೂ ಕೆಲವು ವಿಘ್ನವಿಡ್ಡೂರಗಳು ಎದುರಾಗುವುದು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಕಳೆದ ಬಾರಿಯ ಸಮ್ಮೇಳನ ಹಾವೇರಿಯಲ್ಲಿ ನಡೆದಿತ್ತು. ದೊಡ್ಡರಂಗೇಗೌಡರು ಅಧ್ಯಕ್ಷರಾಗಿದ್ದರು. ಆದರೆ ಈ ಸಮ್ಮೇಳನ ನಾಡಿನ ಬರಪರಿಸ್ಥಿತಿ, ಚುನಾವಣೆಗಳು ಎಂದೆಲ್ಲ ಪದೇ ಪದೆ ಮುಂದೆ ಹೋಗುತ್ತಲೇ ಇತ್ತು. ಈ ಸಲ ಸಾಕಷ್ಟು ಮಳೆಯಾಗಿ ಈ ಸಮಸ್ಯೆಯೇನೂ ಉಂಟಾಗಿಲ್ಲ. ಅನುದಾನದ ಕುರಿತು ಪ್ರಶ್ನೆಗಳು ಎದ್ದಿವೆ. ಕಳೆದ ಸಲ ಹಾವೇರಿಯಲ್ಲಿ ನಡೆದ ಸಮ್ಮೇಳನಕ್ಕೆ ಗರಿಷ್ಠ ಅನುದಾನ ಅಂದರೆ 20 ಕೋಟಿ ರೂ. ನೀಡಲಾಗಿತ್ತು. ಈ ಅನುದಾನದ ಮೊತ್ತವನ್ನೂ ಮೀರಿ ಹೆಚ್ಚುವರಿ 5 ಕೋಟಿ ರೂ. ಖರ್ಚಾಗಿತ್ತು. ಈ ಬಾರಿ ಸರಕಾರವೇ 25 ಕೋಟಿ ರೂ.ಗಳನ್ನು ಸಮ್ಮೇಳನಕ್ಕೆ ಒದಗಿಸಿದೆ. ಹಣದುಬ್ಬರದ ಈ ದಿನಗಳಲ್ಲಿ ಇದು ಸಾಕೇ ಎಂಬ ಪ್ರಶ್ನೆಯೂ ಎದ್ದಿದೆ. ಹಾಗೇ ವರ್ಷದಿಂದ ವರ್ಷಕ್ಕೆ ಸಮ್ಮೇಳನದ ವೆಚ್ಚವೂ ಅಧಿಕವಾಗುತ್ತ ನಡೆದಿದೆ. ಈ ಅನುದಾನಗಳು ಸಮರ್ಪಕ ರೀತಿಯಲ್ಲಿ ವೆಚ್ಚವಾಗಬೇಕು ಎಂಬುದೇ ಎಲ್ಲರ ಕಾಳಜಿ.
ವಿಶಿಷ್ಟ ಗೋಷ್ಠಿಗಳು
ಇಷ್ಟೊಂದು ವೆಚ್ಚ ಮಾಡಿ ನಡೆಸುವ ಸಮ್ಮೇಳನದಲ್ಲಿ ಗೋಷ್ಠಿಗಳು, ವಿಚಾರಮಂಡನೆಗಳು, ಸಂವಾದಗಳು ಅರ್ಥಪೂರ್ಣವಾಗಿ ನಡೆಯಬೇಕು ಹಾಗೂ ನಾಡಿಗೆ ಹೊಸ ಬೆಳಕು ತೋರಿಸುವಂತಿರಬೇಕು. ಈ ನಿಟ್ಟಿನಲ್ಲಿ ಗೋಷ್ಠಿಗಳ ಆಯೋಜನೆಯಲ್ಲಿ ಪರಿಷತ್ತು ಸಾಕಷ್ಟು ಕಸರತ್ತು ನಡೆಸಿದೆ. ಹಳೆ ಬೇರು ಹಾಗೂ ಹೊಸಚಿಗುರನ್ನು ಒಂದುಗೂಡಿಸಲು ಯತ್ನಿಸಿದೆ. ಈ ಬಾರಿ ಕೆಲವು ವಿಶಿಷ್ಟ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ʼಸಾಹಿತ್ಯದಲ್ಲಿ ರಾಜಕೀಯ, ರಾಜಕೀಯದಲ್ಲಿ ಸಾಹಿತ್ಯʼ ಎಂಬುದು ಅಂಥದೊಂದು ಗೋಷ್ಠಿ. ಈ ಗೋಷ್ಠಿಯಲ್ಲಿ, ಸಾಹಿತ್ಯವನ್ನೂ ಚೆನ್ನಾಗಿ ಓದಿಕೊಂಡ ರಾಜಕಾರಣಿಗಳಿದ್ದು, ಏನು ಮಾತಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಹಾಗೆಯೇ ದೃಷ್ಟಿವಿಕಲಚೇತನರಿಗಾಗಿ ಏರ್ಪಡಿಸಲಾದ ಕವಿಗೋಷ್ಠಿಯೂ ಗಮನ ಸೆಳೆದಿದೆ. ಅಂಧರು ಈ ಲೋಕವನ್ನು ನೋಡುವ ಬಗೆ ಮತ್ತು ಅದನ್ನು ಬರೆದು ನಮಗೆ ಹೇಗೆ ಕಾಣಿಸಬಹುದು ಎಂಬ ಕುತೂಹಲ ಸಹಜ. ಇದೇ ಮೊದಲ ಬಾರಿಗೆ ಕನ್ನಡದ ಸೋದರ ಭಾಷೆಗಳ ಕವಿಗೋಷ್ಟಿಯನ್ನೂ ಕರೆಯಲಾಗಿದೆ. ತುಳು, ಕೊಂಕಣಿ, ಹವ್ಯಕ ಕನ್ನಡ, ಕೊರಗ, ಬ್ಯಾರಿ, ಲಂಬಾಣಿ, ಕುಂದಗನ್ನಡ ಮುಂತಾದ ಭಾಷೆಗಳಲ್ಲಿ ಕವಿಗಳು ತಮ್ಮ ಕವಿತೆ ಓದಲಿದ್ದಾರೆ. ಇದು ಕೂಡ ಸ್ವಾಗತಾರ್ಹ ನಡೆ ಎಂದು ಹಲವರು ಪ್ರಶಂಸಿಸಿದ್ದಾರೆ. ಇನ್ನುಳಿದಂತೆ ಮಹಿಳಾ ವಿಶಿಷ್ಟತೆ, ಕೃಷಿಕರ ಸಮಸ್ಯೆಗಳು, ಕೃಷ್ಣಾ- ಕಾವೇರಿ ನೀರಾವರಿ, ಮಂಡ್ಯದ ನೆಲದ ವಿಚಾರಗಳು, ಚಳವಳಿಗಳು, ಮಕ್ಕಳ ಸಾಹಿತ್ಯ, ರಂಗಭೂಮಿ- ಚಲನಚಿತ್ರ- ಕಿರುತೆರೆ, ಪುಸ್ತಕೋದ್ಯಮ, ದಲಿತ ಸಾಹಿತ್ಯ, ಪ್ರಕೃತಿ ವಿಕೋಪ ಎಲ್ಲವೂ ಸ್ಥಾನ ಪಡೆದಿವೆ.
ಅಂತೂ ಮಂಡ್ಯದ ಮೂರು ದಿನಗಳ ಸಮ್ಮೇಳನ ಸಾಹಿತ್ಯಾಭಿಮಾನಿಗಳು ಪುಷ್ಕಳ ರಸದೂಟವನ್ನು ಹೊಟ್ಟೆ- ಬುದ್ಧಿಗಳಿಗೆ ಬಡಿಸಲು ಸಜ್ಜಾಗಿದೆ. ಕನ್ನಡಿಗರು ಉತ್ಸಾಹದಿಂದ ಪಾಲ್ಗೊಳ್ಳಬೇಕಿದೆಯಷ್ಟೆ.
ಈ ಸುದ್ದಿಯನ್ನೂ ಓದಿ: Kannada Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ; ಇಷ್ಟೆಲ್ಲಾ ಇದೆ ವಿಶೇಷ!