ಮರುಸ್ಪಂದನ
ಸುರೇಂದ್ರ ಪೈ, ಭಟ್ಕಳ
ವಾರದಲ್ಲಿ 70 ಗಂಟೆ ಕೆಲಸ ಯಾರಿಗಾಗಿ…?’ ಎಂಬ ನನ್ನ ಲೇಖನಕ್ಕೆ (ವಿಶ್ವವಾಣಿ ಡಿ.14) ಪ್ರತಿಕ್ರಿಯೆಯಾಗಿ ದಾವಣ ಗೆರೆ ಮುಕುಂದ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವುದು ಸ್ವಾಗತಾರ್ಹ. ನನ್ನ ಲೇಖನದ ಶೀರ್ಷಿಕೆಯೇ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ಇಲ್ಲಿ 70 ಗಂಟೆಯ ಕಾರ್ಯಾವಧಿಯ ಫಲ ಯಾರಿಗೆ ಎಂಬುದೇ ಮುಖ್ಯ. ಸರ್ ಎಂ.ವಿಶ್ವೇಶ್ವರಯ್ಯ, ಎ.ಪಿ.ಜೆ.ಅಬ್ದುಲ್ ಕಲಾಂರನ್ನೊಳಗೊಂಡಂತೆ ನಮ್ಮ ಹಲವು ಎಂಜಿನಿಯರುಗಳು, ವಿಜ್ಞಾನಿ ಗಳು, ಶಿಕ್ಷಕರು, ವೈದ್ಯರು ದೇಶದ ಹಿತಕ್ಕಾಗಿ, ಅಭಿವೃದ್ಧಿಗಾಗಿ ನಿತ್ಯವೂ 18-20 ಗಂಟೆ ಕಾಲ ಕೆಲಸ ಮಾಡಿದ ಉದಾಹರಣೆಗಳಿವೆ.
ಆಂತರಿಕ ಪ್ರೇರಣೆಯಿದ್ದರೆ ಮಾತ್ರವೇ ಇದು ಸಾಧ್ಯ. ಈ ಪರಿಪಾಠ ವ್ಯಕ್ತಿಗತವಾಗಿ ಅನ್ವಯವಾಗುವಂಥದ್ದೇ ವಿನಾ, ಇದನ್ನು ಎಲ್ಲರಲ್ಲೂ ಅಪೇಕ್ಷಿಸಲಾಗದು. ಹೀಗಾಗಿ, ಸರಕಾರವು ನೀತಿ-ನಿಯಮಾವಳಿಯನ್ನು ರೂಪಿಸುವಾಗ, ಒಬ್ಬ ವ್ಯಕ್ತಿ, ಒಂದು ಸಂಸ್ಥೆ ಅಥವಾ ನಿರ್ದಿಷ್ಟ ವಿಭಾಗವನ್ನು ಮಾತ್ರ ಪರಿಗಣಿಸುವುದಿಲ್ಲ; ಅದು ಅವೈಜ್ಞಾನಿಕವಾಗುತ್ತದೆ.
ಹಾಗಾಗಿ, ಸಾರ್ವತ್ರಿಕವಾಗಿ ಯಾವುದು ಮಾನ್ಯ ಎಂಬುದರ ಮೇಲೆ ಪ್ರಮಾಣೀಕೃತ ಕಾರ್ಯಾವಧಿ/ನಿಯಮಗಳನ್ನು ನಿಗದಿಪಡಿಸಲಾಗುತ್ತದೆ. ಏಕೆಂದರೆ ನಿಗದಿತ ಕಾರ್ಯದ ಹಿಂದೆ ದೈಹಿಕ-ಮಾನಸಿಕ ಶ್ರಮದ ಸಮಪಾಲು ಇರುತ್ತದೆ. ಆದ್ದರಿಂದಲೇ ರಾಜ್ಯ ಮತ್ತು ಕೇಂದ್ರ ಸರಕಾರಿ ಕಚೇರಿಗಳೆಲ್ಲವೂ ಪ್ರತಿನಿತ್ಯ 8 ಗಂಟೆ ಅವಧಿವರೆಗೆ ಕೆಲಸ ಮಾಡ ಬೇಕೆಂಬ ನಿಯಮವಿದೆ.
ಆದರೆ ಈ ಅವಧಿಯಲ್ಲಿ ಪ್ರಾಮಾಣಿಕವಾಗಿ ಎಷ್ಟರ ಮಟ್ಟಿಗೆ ಉತ್ಪಾದಕತೆ ಹೊಮ್ಮುತ್ತಿದೆ, ಜನರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿದೆ? ಎಂಬುದೇ ಮುಖ್ಯ. ಒಂದೊಮ್ಮೆ, ಉದ್ಯೋಗಿಗಳು ಈ ಅವಽಯೊಳಗೇ ಅಂದಿನ ಕೆಲಸವನ್ನು ಅಂದೇ ಜವಾಬ್ದಾರಿಯುತವಾಗಿ ಪೂರ್ಣಗೊಳಿಸಿದರೆ, ಅಧಿಕ ಸಮಯದ ಕೆಲಸಕ್ಕೆ ಆಸ್ಪದವೇ ಇರದು. ಪರೋಕ್ಷವಾಗಿ ಅದು ದೇಶದ ಅಭಿವೃದ್ಧಿಗೆ ನೀಡಿದ ಕೊಡುಗೆಯಾಗುತ್ತದೆ.
ಇನ್ನು ರಾಜ್ಯದಲ್ಲಿನ ಕಟ್ಟಡ ಕಾಮಗಾರಿಗಳಿಗಾಗಿ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಜನರೇ ಬರುತ್ತಿದ್ದು, ಕಳೆದ ಕೆಲ ವರ್ಷಗಳಿಂದ ಈ ಸಂಖ್ಯೆಯಲ್ಲಿ ಏರಿಕೆಯಾಗಿದೆ, ನಿಜ. ಅದಕ್ಕಾಗಿ ಅವರು ತಮ್ಮ ಸಂಸಾರ ವನ್ನು ಊರಲ್ಲೇ ಬಿಟ್ಟು ನಿತ್ಯವೂ 12-13 ಗಂಟೆ ದುಡಿಯುತ್ತಾರೆ ಎಂದು ಮುಕುಂದ ಅವರು ನೀಡಿರುವ ನಿದರ್ಶನ ದಲ್ಲೇ ಉತ್ತರವಿದೆ. ಕೆಲಸವಷ್ಟೇ ಪ್ರಧಾನವೆಂದು ಪರಿಗಣಿಸಿದರೆ ಅವರ ಕುಟುಂಬದ ಬಗ್ಗೆ ಗಮನಿಸುವವ ರಾರು? ಮಕ್ಕಳಿಗೆ ಸಿಗಬೇಕಾದ ಪ್ರೀತಿ, ಮಾರ್ಗದರ್ಶನ, ಮೌಲ್ಯಗಳ ಬೋಧನೆಯ ಹೊಣೆ ಯಾರದ್ದು? ಹೆಚ್ಚು ಗಂಟೆ ಕೆಲಸ ಮಾಡಲು ಸಂಸಾರಸುಖವನ್ನು ತ್ಯಾಗಮಾಡುವುದು ಯಾವ ನ್ಯಾಯ? ಅನ್ಯರಾಜ್ಯದಿಂದ ಕೆಲಸಕ್ಕಾಗಿ ವಲಸೆ ಬರುವವರ ಸಮಸ್ಯೆಯೆಂದರೆ ಅಲ್ಲಿರುವ ನಿರುದ್ಯೋಗ, ಬಡತನ, ಹಸಿವು.
ಇದನ್ನು ನಿಭಾಯಿಸುವ ಹೊಣೆ ಯಾರದ್ದು? ವ್ಯಕ್ತಿಯೊಬ್ಬ ದಿನಗೂಲಿ ನೌಕರನಾಗಿರಲಿ, ಅಧಿಕಾರಿ ಆಗಿರಲಿ, ‘ನಿತ್ಯವೂ 12-13 ಗಂಟೆ ಕೆಲಸ ಮಾಡಿ ಸಾಕಷ್ಟು ಹಣ ಸಂಪಾದಿಸಿ, ನಿವೃತ್ತಿ ಜೀವನದಲ್ಲಿ ಸುಖ ಪಡೋಣ’ ಎಂಬ ಚಿಂತನೆಯಿದ್ದರೆ, ಕಳೆದುಹೋದ ಸಮಯ, ಜೀವನೋತ್ಸಾಹವನ್ನು ಮರಳಿ ಪಡೆಯಲು ಸಾಧ್ಯವೇ? ಆಗ ಮನಸ್ಸು ಹಾತೊರೆದರೂ ದೇಹವು ಸ್ಪಂದಿಸುವ ಸ್ಥಿತಿಯಲ್ಲಿರುವುದಿಲ್ಲ.
ಯಾವು ಕ್ಷೇತ್ರವಾದರೂ ಅನಿವಾರ್ಯತೆಯಿದ್ದಾಗ ಕೆಲವು ದಿನ/ತಿಂಗಳು ಬಹುತೇಕರು ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡಿಯೇ ಮಾಡುತ್ತಾರೆ. ಉದಾಹರಣೆಗೆ, ಆರ್ಥಿಕ ವರ್ಷದ ಕೊನೆಯಾದ ಮಾರ್ಚ್ ತಿಂಗಳಲ್ಲಿ ಬ್ಯಾಂಕ್ ಉದ್ಯೋಗಿಗಳು ರಾತ್ರಿಯವರೆಗೆ ಕೆಲಸ ಮಾಡುವುದುಂಟು. ನಿಗದಿತ 8 ಗಂಟೆ ಕೆಲಸದ ಬಳಿಕ ಮಿಕ್ಕುಳಿದ ಸಮಯವು ಕೇವಲ ಸಂಸಾರಕ್ಕೋ, ಆರೋಗ್ಯಕ್ಕೋ, ವೈಯಕ್ತಿಕ ನೆಮ್ಮದಿಗೋ ಮಾತ್ರವೇ ಬೇಕೆಂದಲ್ಲ; ಅವುಗಳ ಹೊರತಾಗಿ ಯೂ ಮರುದಿನದ ಕೆಲಸ ಪೂರ್ವತಯಾರಿಗಾಗಿ ಕೆಲ ಗಂಟೆಗಳನ್ನು ಮೀಸಲಿಡಬೇಕಾಗುತ್ತದೆ.
ಹಾಗಾಗಿ ಅದನ್ನೂ ಉತ್ಪಾದಕತೆಯ ಭಾಗವೆಂದು ಪರಿಗಣಿಸಲಾಗುತ್ತದೆ. ‘ಅಭಿವೃದ್ಧಿ ಹೊಂದಿದ’ ದೇಶಗಳೆಲ್ಲವೂ ಒಂದು ಕಾಲಕ್ಕೆ ನಮ್ಮಂತೆಯೇ ಪರಕೀಯರಿಂದ ಸ್ವಾತಂತ್ರ್ಯ ಪಡೆದ ದೇಶಗಳೇ ಎಂಬುದನ್ನು ಮರೆಯಬಾರದು. ಆ
ದೇಶಗಳವರು ಇಂದು ತಮ್ಮ ಕಾರ್ಯಾವಧಿಯನ್ನು 40-50 ಗಂಟೆಗೆ ಸೀಮಿತಗೊಳಿಸಿದ್ದರೂ, ಅಭಿವೃದ್ಧಿಯ ವಿಷಯ ದಲ್ಲಿ ಹೊಂದಾಣಿಕೆ ಮಾಡಿಕೊಂಡಿಲ್ಲ. ಏಕೆಂದರೆ ಅಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗಳ ಪ್ರಮಾಣ ಕೆಳಮಟ್ಟದಲ್ಲಿದೆ, ಆ ದೇಶಗಳಿಗೆ ತಮ್ಮ ಪ್ರಜೆ ಗಳ ಹಿತಾಸಕ್ತಿ ಮುಖ್ಯ. ಹಿಂದೆಲ್ಲಾ ನಮ್ಮ ಹಿರಿಯರು ಹೊಲ-ಗದ್ದೆ ಗಳಲ್ಲಿ ದಿನಕ್ಕೆ ೧೨-೧೩ ಗಂಟೆ ದುಡಿಯುತ್ತಿದ್ದರು, ಆ ಶ್ರಮಕ್ಕೆ ಆಹಾರ ಕ್ರಮಗಳು ಪೂರಕವಾಗಿದ್ದವು.
ಆದರೆ ಇಂದು ಎಲ್ಲವೂ ಕಲಬೆರಕೆ. ಹೀಗಾಗಿ ಇಂದಿನ ಮಕ್ಕಳ ಬೆಳವಣಿಗೆ ಹಿಂದಿನವರಂತಿಲ್ಲ. ಬಹುತೇಕ ಐಟಿ ಉದ್ಯೋಗಿಗಳಲ್ಲಿ (ಸ್ತ್ರೀ/ಪುರುಷ) ಬಂಜೆತನ ಕಾಣಿಸಿಕೊಳ್ಳುತ್ತಿದ್ದು, ಐವಿಎ- ವೈದ್ಯಕೀಯ ಚಿಕಿತ್ಸೆಯ ಮೂಲಕ ಮಕ್ಕಳನ್ನು ಪಡೆಯುವವರ ಸಂಖ್ಯೆ ಹೆಚ್ಚಿದೆ. ಕಾರ್ಯಾವಽಯ ಹೆಚ್ಚಳವು ಒಂದು ವೈಯಕ್ತಿಕ ಅಭಿಪ್ರಾಯವಷ್ಟೇ. ನಾವು ಎಷ್ಟು ಆಹಾರ ಸೇವಿಸುತ್ತೇವೆ ಎಂಬುದು ಮುಖ್ಯವಲ್ಲ, ಸೇವಿಸಿದ್ದರಲ್ಲಿ ಎಷ್ಟು ಪೌಷ್ಟಿಕಾಂಶವಿದೆ ಎಂಬುದೇ ಮುಖ್ಯ. ಅಂತೆಯೇ, ನಮ್ಮಲ್ಲಿ ಕ್ರಿಯಾಶೀಲತೆ ಹೆಚ್ಚಿದಷ್ಟೂ ಅಭಿವೃದ್ಧಿ ಏರುಮುಖವಾಗುತ್ತದೆ.
(ಲೇಖಕರು ಶಿಕ್ಷಕರು)
ಇದನ್ನೂ ಓದಿ: Surendra Pai Column: ಮಣ್ಣಿನ ಹಣತೆ ಬೆಳಗೋಣ