ಸಂಸ್ಮರಣೆ
ನಾಡೋಜ ಡಾ.ಮಹೇಶ ಜೋಶಿ
1994 ರಲ್ಲಿ ಮಂಡ್ಯದಲ್ಲಿ ಚದುರಂಗರ ಅಧ್ಯಕ್ಷತೆಯಲ್ಲಿ ನಡೆದ ೬೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರೂವಾರಿ ಎನ್ನಿಸಿಕೊಂಡಿದ್ದ ಎಸ್.ಎಂ.ಕೃಷ್ಣ ಅವರ ಹೆಸರನ್ನು ಮತ್ತೆ ಮಂಡ್ಯದಲ್ಲಿಯೇ ಆಯೋಜನೆ ಗೊಂಡಿರುವ 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆಗೆ ಇಡಬೇಕಾಗಿ ಬಂದಿರುವುದು ನಿಜಕ್ಕೂ ನೋವಿನ ಸಂಗತಿ. ಅವರು ನನ್ನನ್ನು ಬಹು ಪ್ರೀತಿಯಿಂದ ‘ಮಹೇಶ್’ ಎಂದು ಕರೆಯುತ್ತಿದ್ದರು.
ಸಮ್ಮೇಳನದ ಕುರಿತು ನನ್ನ ಬಳಿ ತೀರಾ ಖಾಸಗಿಯಾಗಿ “ನನ್ನ ಆರೋಗ್ಯ ಕ್ಷೀಣಿಸುತ್ತಿದೆ, ಸಮ್ಮೇಳನದ ಸಂದರ್ಭದಲ್ಲಿ
ಆರೋಗ್ಯ ಚೆನ್ನಾಗಿದ್ದರೆ ನಾನೇ ಬರುತ್ತೇನೆ. ಇಲ್ಲದಿದ್ದರೆ ನೀವು ವ್ಹೀಲ್ ಚೇರ್, ಆಂಬುಲೆ, ಜೀರೋ ಟ್ರಾಫಿಕ್ನ ವ್ಯವಸ್ಥೆ ಮಾಡಿದರೆ ಕೆಲವು ನಿಮಿಷಗಳ ಮಟ್ಟಿಗಾದರೂ ಬರುತ್ತೇನೆ. ನಾನು ಬರುವ ಸುದ್ದಿ ಗೋಪ್ಯವಾಗಿರಬೇಕು, ನಾನು ಬಂದ ನಂತರವೇ ಎಲ್ಲರಿಗೂ ಗೊತ್ತಾಗಬೇಕು. ಚೆನ್ನಾಗಿದ್ದರೆ ನಾನು ಮಾತಾಡುತ್ತೇನೆ, ಇಲ್ಲದಿದ್ದರೆ ನನ್ನೂರು
ಮಂಡ್ಯದಲ್ಲಿ ನಡೆಯುವ ಸಮ್ಮೇಳನದಲ್ಲಿ ಮುಖ ತೋರಿಸುತ್ತೇನೆ. ಕನ್ನಡ ಹಬ್ಬದಲ್ಲಿ ಭಾಗಿಯಾದ ಧನ್ಯತೆ ದೊರಕು ತ್ತದೆ. ದೇವರು ನನ್ನನ್ನು ತನ್ನ ಬಳಿಗೆ ಯಾವಾಗ ಕರೆಸಿಕೊಳ್ಳುತ್ತಾನೆಯೋ ಗೊತ್ತಿಲ್ಲ” ಎಂದು ಹೇಳಿದ್ದರು.
ಈ ಘಟನೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಅದನ್ನು ನೆನಪು ಮಾಡಿಕೊಂಡರೆ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಅವರ ಕೊನೆಯ ಆಸೆ ನೆರವೇರದೇ ಹೋಯಿತಲ್ಲ ಎನ್ನಿಸಿ, ವಿಧಿಯ ಮುಂದೆ ನಾವೆಷ್ಟು ಅಸಹಾಯಕರು ಎನ್ನುವ ಭಾವ ಕಾಡುತ್ತದೆ.
ಸುಸಂಸ್ಕೃತ ರಾಜಕಾರಣಿಯಾಗಿದ್ದ ಅವರು ಕಲೆ, ಸಾಹಿತ್ಯದ ಕುರಿತು ಅಪಾರ ಪ್ರೇಮವನ್ನು ಇಟ್ಟುಕೊಂಡಿದ್ದರು. ಹಲವು ಕ್ಷೇತ್ರಗಳಲ್ಲಿ ಆಳವಾದ ಅಧ್ಯಯ ನವನ್ನು ನಡೆಸಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕಳೆದ ವರ್ಷ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದಂದು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಕಾರ್ಯಕ್ರಮದ ವಿವರಗಳನ್ನು ದಿನಪತ್ರಿಕೆಯಲ್ಲಿ ನೋಡಿ ದೂರವಾಣಿ ಮೂಲಕ ವಿವರಗಳನ್ನು ತಿಳಿದುಕೊಂಡು, ಅಭ್ಯಾಗತರಾಗಿ ಬಂದು ಪ್ರೇಕ್ಷಕರಾಗಿ ಮುಂದಿನ ಸಾಲಿನಲ್ಲಿ ಕುಳಿತು, ನಂತರ
ನನ್ನ ಒತ್ತಾಯದ ಮೇರೆಗೆ ವೇದಿಕೆಗೆ ಬಂದು ತರುವಾಯ ತಮ್ಮ ಮನದಾಳದ ಮಾತುಗಳನ್ನಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಅವರಿಗಿದ್ದ ಅಕ್ಕರೆ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕುರಿತು ಅವರಿಗಿದ್ದ ಗೌರವಕ್ಕೆ ಹಾಗೂ ನನ್ನ ಸ್ನೇಹಕ್ಕೆ ಕೊಟ್ಟ ಮನ್ನಣೆಗೆ ನಿದರ್ಶನವಾಗಿದೆ. ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಘೋಷಣೆಯಾದ ದಿನದಿಂದಲೂ ಉತ್ಸಾಹ ತೋರಿದ್ದ ಅವರು ಹಲವು ಉಪಯುಕ್ತ
ಸಲಹೆಗಳನ್ನು ನೀಡಿ ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆಯನ್ನು ನೀಡಿದ್ದರು. ಈಗ ಅವರ ಅಗಲುವಿಕೆಯು ನನಗೆ ಹಾಗೂ ಮಂಡ್ಯದವರಿಗೆ ಮಾತ್ರವಲ್ಲದೆ ಕನ್ನಡಾಭಿಮಾನಿಗಳ ಪಾಲಿಗೆ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದೇ ಹೇಳಬೇಕು.
ನವೀಕರಣಗೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಕಟ್ಟಡ ಮತ್ತು ಸಭಾಂಗಣಗಳ ಬಗ್ಗೆ ಎಸ್.ಎಂ.ಕೃಷ್ಣ ಅವರು ಅಪಾರ ಮೆಚ್ಚುಗೆಯನ್ನು ಸೂಚಿಸಿದ್ದರು. “ಅತ್ಯುತ್ತಮ ಗುಣಮಟ್ಟದ ಜತೆಗೆ ಸಾಹಿತ್ಯಕ ವಾತಾವರಣವನ್ನು ಸೃಷ್ಟಿ ಮಾಡಿದ್ದೀರಿ, ಪರಂಪರೆ ಮತ್ತು ಆಧುನಿಕತೆ ಎರಡನ್ನೂ ಹೀಗೆ ಜತೆಯಲ್ಲಿ ತೆಗೆದುಕೊಂಡು ಹೋಗುವುದು ಬಹು
ಕಷ್ಟದ ಕೆಲಸ. ಈ ಕೆಲಸ ನಿಮ್ಮಿಂದಲೇ ಆಗಬೇಕು ಎಂದು ತಾಯಿ ಭುವನೇಶ್ವರಿ ನಿರ್ಧರಿಸಿದ್ದಳು. ಅದನ್ನು ನೀವು ಸಾಧಿಸಿದ್ದೀರಿ.
ಆಧುನಿಕೀಕರಣದ ಮೆರುಗನ್ನು ತಂದು ಸರ್ ಎಂ. ವಿಶ್ವೇಶ್ವರಯ್ಯನವರ ಕನಸನ್ನು ನನಸು ಮಾಡಿದ್ದೀರಿ” ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ವಿಧಾನಸೌಧದ ಕಟ್ಟಡವು ಆಡಳಿತಕ್ಕೆ ಚಿಕ್ಕದು ಎನ್ನಿಸಿದಾಗ ‘ವಿಕಾಸ ಸೌಧ’ವನ್ನು ಕಟ್ಟಿದ್ದ ಎಸ್.ಎಂ.ಕೃಷ್ಣ ಅವರಿಂದ ದೊರೆತ ಈ ಮೆಚ್ಚುಗೆಯ ಮಾತು ನಿಜಕ್ಕೂ ಸಾರ್ಥಕತೆಯ ಭಾವವನ್ನು ನನ್ನಲ್ಲಿ ತಂದಿತ್ತು.
ಎಸ್.ಎಂ.ಕೃಷ್ಣ ಅವರ ಕೊನೆಯ ಸಂದೇಶವು, ಮಂಡ್ಯದಲ್ಲಿ ಆಯೋಜಿತವಾಗಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತೇ ಆಗಿತ್ತು ಎನ್ನುವುದು, ಈ ಕುರಿತು ಅವರು ಎಷ್ಟು ಗಾಢವಾಗಿ ಚಿಂತಿಸುತ್ತಿದ್ದರು, ಸಮ್ಮೇಳನದಲ್ಲಿ ಭಾಗವಹಿಸಲು ಎಷ್ಟರ ಮಟ್ಟಿಗೆ ಉತ್ಸುಕರಾಗಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಈ ವಿಚಾರಗಳನ್ನು ಅವರು ನನ್ನ ಜತೆಗೂ ಬಹಳ ಕಾಲದಿಂದ ಹಂಚಿಕೊಳ್ಳುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಯ ಬಗ್ಗೆ ಸ್ಪಷ್ಟ ಕಲ್ಪನೆಗಳಿದ್ದ ವಿರಳ ರಾಜಕಾರಣಿಗಳಲ್ಲಿ ಅವರೊಬ್ಬರಾಗಿದ್ದರು. ಸಾಹಿತ್ಯ ಪರಿಷತ್ತು ಸ್ಥಾಪಿತವಾದ ಹಿನ್ನೆಲೆ, ಅದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ ಪ್ರೋತ್ಸಾಹ ಅವರಿಗೆ ಖಚಿತವಾಗಿ ಗೊತ್ತಿತ್ತು. ಸಾಹಿತ್ಯ ಸಮ್ಮೇಳನಗಳು ಕನ್ನಡ ಹಬ್ಬದ ಜತೆಗೆ ಕನ್ನಡದ ಅಸ್ಮಿತೆಯನ್ನು ಸಾರುವ ವಿಶೇಷಹಬ್ಬ ಗಳಾಗಬೇಕೆಂದು ಅವರು ಸದಾ ಹೇಳುತ್ತಿದ್ದರು.
“ಆತಿಥ್ಯಕ್ಕೆ ಹೆಸರಾದ ಮಂಡ್ಯ ಜಿಲ್ಲೆ, ಅತಿ ಹೆಚ್ಚು ಕನ್ನಡ ಭಾಷಿಕರನ್ನು ಹೊಂದಿದೆ. ಇಲ್ಲಿನ ಜನ ಕನ್ನಡ
ಭಾಷೆಯನ್ನು ಗೌರವಿಸುವಲ್ಲಿ ಸದಾ ಮುಂದಿರುತ್ತಾರೆ” ಎನ್ನುತ್ತಿದ್ದ ಕೃಷ್ಣ ಅವರು ಮಂಡ್ಯದಲ್ಲಿ ನಡೆದಿದ್ದ ಹಿಂದಿನ ಎರಡೂ ಸಮ್ಮೇಳನಗಳಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿದ್ದನ್ನು ನೆನಪು ಮಾಡಿಕೊಳ್ಳುತ್ತಾ, “1994ರಲ್ಲಿ ನಾನು
ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದಾಗ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ನಡೆದಿತ್ತು. ಮಾದೇಗೌಡರ ಮುಂದಾಳತ್ವ ಮತ್ತು ಬಾಲಗಂಗಾಧರನಾಥ ಮಹಾಸ್ವಾಮಿಗಳ ಶ್ರೀರಕ್ಷೆಯಲ್ಲಿ ಇದು ನಡೆದಿತ್ತು” ಎಂದಿದ್ದರು.
ವಯೋಕಾರಣದಿಂದ ಅವರ ಅನುಭವ ಸಂಪತ್ತನ್ನು ಬಳಸಿಕೊಳ್ಳಲಾಗಲಿಲ್ಲ, ನಷ್ಟ ನಮ್ಮದು.
ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಬಾಗಲಕೋಟೆ, ತುಮಕೂರು, ಬೆಳಗಾವಿ, ಮೂಡುಬಿದರೆ ಹೀಗೆ
68ರಿಂದ 71ರವರೆಗಿನ ನಾಲ್ಕು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಬಹು ಯಶಸ್ವಿಯಾಗಿ ನಡೆದಿದ್ದವು.
ಅವುಗಳ ಆಯೋಜನೆಯಲ್ಲಿ ಅವರು ಅಪಾರ ಸಹಕಾರ ಮತ್ತು ಕಾಳಜಿಯನ್ನು ತೋರಿಸಿದ್ದರು. ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅವರಿಗೆ ಅಪಾರ ಒಲವಿತ್ತು. ಗಮಕ ವಾಚನವನ್ನು ತಮ್ಮ ಮನೆಯಲ್ಲಿ ಏರ್ಪಡಿಸಿ ಕಾವ್ಯಗಳನ್ನು
ಆನಂದಿಸುತ್ತಿದ್ದ ಕೃಷ್ಣ, ತಬಲಾ ವಾದನವನ್ನು ಬಲ್ಲವರಾಗಿದ್ದರು. ಸಾಹಿತ್ಯ-ಸಂಗೀತದ ಕಾರ್ಯಕ್ರಮಗಳಿಗೆ ಇಷ್ಟಪಟ್ಟು ಹೋಗುತ್ತಿದ್ದರು.
ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ಭಾಗವಹಿಸಿದ್ದಷ್ಟು ಸಂಖ್ಯೆಯ ಸಂಗೀತ ಕಾರ್ಯಕ್ರಮಗಳಲ್ಲಿ
ಇನ್ಯಾವ ರಾಜಕಾರಣಿಗಳೂ ಭಾಗವಹಿಸಿರಲಾರರು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಮೇಲೆ ಅವರಿಗೆ ಒಳ್ಳೆಯ ಹಿಡಿತವಿತ್ತು. ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಜಾನ್ ಎಫ್.ಕೆನಡಿ ಸ್ಪರ್ಧಿಸಿದ್ದಾಗ ಅವರ ಪರವಾಗಿ ಕೃಷ್ಣರು ಪ್ರಚಾರ ಮಾಡಿ ಜಗತ್ತಿನ ಗಮನ ಸೆಳೆದಿದ್ದರು.
ಆ ಕಾಲದಲ್ಲಿಯೇ ಅಮೆರಿಕದಲ್ಲಿ ಓದಿ ಬಂದಿದ್ದ ಅವರಿಗೆ ಮಂಡ್ಯದಲ್ಲಿ ನೂರು ಎತ್ತಿನ ಗಾಡಿಗಳಿಂದ ಸ್ವಾಗತ ಕೋರಲಾಗಿತ್ತು. ಇಂಥ ಹಿನ್ನೆಲೆ ಇದ್ದವರು ಚುನಾವಣಾ ರಾಜಕೀಯಕ್ಕೆ ಬಂದರು, ಒಳಸುಳಿಗಳನ್ನು ಎದುರಿಸಿದರು. ಸಾಮಾನ್ಯ ಜನರ ನೋವಿಗೆ ಸ್ಪಂದಿಸಿದರು. ಆದರೆ ಎಂದಿಗೂ ಎದುರಾಳಿಗಳ ಬಗ್ಗೆ ಕಹಿಯನ್ನು ನುಡಿಯಲಿಲ್ಲ,
ತಮ್ಮ ಗಾಂಭೀರ್ಯವನ್ನು ಸಡಿಲಿಸಲಿಲ್ಲ. ಸಾಧ್ಯವಾದಾಗಲೆಲ್ಲ ಕಲೆ-ಸಾಹಿತ್ಯಕ್ಕೆ ಮನ್ನಣೆ ನೀಡಿದರು. ಕನ್ನಡಕ್ಕೆ ಅಽಕೃತವಾಗಿ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕುವಂತೆ ಮಾಡುವಲ್ಲಿ ಅವರು ಪ್ರಧಾನ ಪಾತ್ರವನ್ನು ವಹಿಸಿದ್ದರು.
ನಾನು ಒಮ್ಮೆ ದೂರದರ್ಶನದಲ್ಲಿ ಅವರ ಸಂದರ್ಶನ ಮಾಡುವಾಗ ಮಹಾಭಾರತದ ಕೃಷ್ಣನಿಗೆ ಸಮನಾದ ಚಾಣಾಕ್ಷತೆ ನಿಮ್ಮಲ್ಲಿದೆ ಎಂದು ಹೋಲಿಸಿದಾಗ, “ಶ್ರೀಕೃಷ್ಣನ ರಾಜಕೀಯ ತಂತ್ರಗಾರಿಕೆ ಮತ್ತು ಮುತ್ಸದ್ದಿತನ ನನಗೆ ಮಾದರಿ; ಆದರೆ ನಾನೆಲ್ಲಿ ಅವನ ಸಮಕ್ಕೆ ಬರಲು ಸಾಧ್ಯ?! ನಾನು ಹೆಸರಿಗೆ ಮಾತ್ರ ಕೃಷ್ಣ” ಎಂದಿದ್ದರು. ಅದು
ಅವರ ವಿನಮ್ರತೆಯನ್ನು ಸೂಚಿಸುತ್ತದೆ. ಆದರೆ ಕೃಷ್ಣ ಅವರ ವ್ಯಕ್ತಿತ್ವದಲ್ಲಿ ಶ್ರೀಕೃಷ್ಣನಿಗೆ ಹೋಲಿಸಬಲ್ಲ
ರಾಜಕೀಯ ಮತ್ಸದ್ದಿತನವಿದ್ದುದು ನಿಜ. ಅವರು ಎಂದಿಗೂ ಎದುರಾಳಿಗಳ ಜತೆಗೆ ವಾಗ್ವಾದಕ್ಕೆ ಹೋದವರಲ್ಲ, ಅವರ ಕುರಿತು ಕೀಳಾಗಿ ಮಾತನಾಡಿದವರಲ್ಲ. ತಮ್ಮ ಅಂತರಂಗದ ಮಾತುಗಳನ್ನು ಎಂದಿಗೂ ಬಹಿರಂಗಕ್ಕೆ ತಂದವರಲ್ಲ.
ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮಹತ್ವಾಕಾಂಕ್ಷೆಯನ್ನು ಬಿಟ್ಟುಕೊಟ್ಟವರಲ್ಲ. ಸಜ್ಜನ ರಾಜಕಾರಣಿಯಾಗಿದ್ದ ಎಸ್.ಎಂ. ಕೃಷ್ಣರು, ರಾಜಕೀಯದಲ್ಲಿ ಮೌಲಿಕತೆ ಹೇಗಿರಬೇಕು ಎನ್ನುವುದಕ್ಕೆ ರೂಪಕದಂತಿ ದ್ದರು. ಪರಂಪರೆ ಮತ್ತು ಆಧುನಿಕತೆಯ ಕೊಂಡಿಯಂತಿದ್ದ ಅವರ ಕಾಲದಲ್ಲಿ ಬೆಂಗಳೂರು ಹೊಸ ರೂಪವನ್ನು ಪಡೆಯಿತು. ಅದು ಜಾಗತಿಕ ಮನ್ನಣೆಯನ್ನು ಪಡೆದಂತೆ, ಮಂಡ್ಯದ ಮಣ್ಣಿನ ಹಿರಿಮೆಯನ್ನೂ ಹೆಚ್ಚಿಸಿದ್ದರು. ಮಂಡ್ಯದಲ್ಲಿ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಜ್ಜಾಗಿದೆ; ಆದರೆ ಅದಕ್ಕಾಗಿ ಹಂಬಲಿಸಿದ್ದ ಎಸ್.ಎಂ.ಕೃಷ್ಣ ಅವರು ನಮ್ಮೊಡನಿಲ್ಲ.
ಅವರ ನೆನಪುಗಳು ನಮ್ಮ ಜತೆಗಿವೆ. ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣ ಅವರದು ನಿಸ್ಸಂಶಯವಾಗಿ ಸ್ಮರಣೀಯ ಹೆಸರಾಗಿ ಉಳಿದುಕೊಳ್ಳುತ್ತದೆ ಎನ್ನುವ ನಂಬಿಕೆ ನನ್ನದು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ಎಸ್.ಎಂ.ಕೃಷ್ಣ ಅವರಿಗೆ ನನ್ನ ಅಶ್ರುತರ್ಪಣಗಳು.
(ಲೇಖಕರು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು)
ಇದನ್ನೂ ಓದಿ: #ManoharJoshi