Sunday, 11th May 2025

Shishir Hegde Column: ಶಿಕಾಗೋ ಚಳಿಗಾಲ ಬಂತೆಂದರೆ ತಯಾರಿ ಒಂದೆರಡಲ್ಲ !

ಶಿಶಿರಕಾಲ

ಶಿಶಿರ್‌ ಹೆಗಡೆ

ವಿವೇಕಾನಂದರು ಶಿಕಾಗೋದಲ್ಲಿದ್ದಾಗ ಚಳಿಗಾಲದಲ್ಲಿಯೂ ಐಸ್‌ಕ್ರೀಮ್ ತಿನ್ನುತ್ತಿದ್ದರಂತೆ ಎಂದು ಓದಿದ ನೆನಪು. ಆನಂತರದಲ್ಲಿ ಇದೇ ಉದಾಹರಣೆಯನ್ನು ಅವರ ಹಠಜೀವನದ ಬಗ್ಗೆ ಹೇಳುವಾಗ ಕೂಡ ಬಳಸಿಕೊಂಡದ್ದನ್ನು ಕಂಡಿದ್ದೇನೆ. ವಿವೇಕಾನಂದರು ಬಂದ ಹೊಸತರಲ್ಲಿ ಅವರನ್ನು ಸತ್ಕರಿಸಲು ಅಮೆರಿಕನ್ನರು ರೆಸ್ಟೋರೆಂಟ್‌ಗೆ ಕರೆದರೆ ಅವರಿಗೆ ಬಿಗುಮಾನ ಮತ್ತು ಹಿಂಜರಿಕೆ. ಅವರಿಗೆ ಐಸ್‌ಕ್ರೀಮ್ ಇಷ್ಟವಾಗಿದ್ದರಿಂದ ಐಸ್‌ಕ್ರೀಮ್ -ಪಾರ್ಲರ್‌ ಗಳಲ್ಲಿ ಅವರ ಜತೆಗಿನ ಮೀಟಿಂಗುಗಳು ನಡೆಯುತ್ತಿದ್ದವಂತೆ. ಹೀಗಾಗಿ ವಿವೇಕಾನಂದರ ಶಿಕಾಗೋ ಚಳಿಯ ಅನುಭವದ ಜತೆ ಐಸ್‌ಕ್ರೀಮ್ ಕೂಡ ತಳಕು ಹಾಕಿ ಕೊಂಡಿದೆ. ಏನೇ ಇರಲಿ, ಶಿಕಾಗೋದ ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದು ಇವತ್ತಿಗೂ ನಡೆದುಕೊಂಡು ಬಂದಿರುವ ಬಹುಜನರ ರೂಢಿ. ಬಿರುಬೇಸಗೆಯಲ್ಲಷ್ಟೇ ಅಲ್ಲ, -30 ಡಿಗ್ರಿ ಸೆಲ್ಸಿಯಸ್‌ನಲ್ಲಿಯೂ ಐಸ್‌ಕ್ರೀಮ್ ತಿಂದು ಸುಖಿಸಬಹುದು. ಆದರೆ ತಿನ್ನುವಾಗ ಬೆಚ್ಚಗಿನ ಮನೆ/ಹೋಟೆಲ್‌ ನೊಳಕ್ಕೆ ಕೂತಿರಬೇಕು.

ಅಮೆರಿಕದ ಉತ್ತರದಲ್ಲಿರುವ ರಾಜ್ಯಗಳಲ್ಲಿ ಚಳಿಗಾಲವೆಂದರೆ ರಣಭೀಕರ. ಹಿಮಪಾತ, ಜತೆಗೆ ಸಹಿಸಲಸಾಧ್ಯವಾದ
ಚಳಿ, ಐಸ್ ಮಳೆ. ಬೇಸಗೆಯಲ್ಲಿ ಸೆಕೆ. ಹಾಗಾಗಿ ಇಲ್ಲಿನ ಬಿಲ್ಡಿಂಗ್, ಬ್ರಿಕ್ಸ್, ರಸ್ತೆಯಿಂದ ಹಿಡಿದು ಕಾರಿನ ಟೈರ್‌ವರೆಗೆ
ಎಲ್ಲವೂ ಈ ಹವಾಮಾನ ವೈಪರೀತ್ಯಕ್ಕೆ ತಕ್ಕಂತೆಯೇ ವಿನ್ಯಾಸಗೊಂಡಿರುತ್ತವೆ. ಆದರೆ ಜನರು, ಸರಕಾರ, ಗಿಡಮರ ಗಳು‌ ಹಾಗಲ್ಲ; ಸದಾಕಾಲ ಮುಂದಿನ ಕಾಲಕ್ಕೆ ತಯಾರಾಗುತ್ತಿರಬೇಕು. ಅದರಲ್ಲಿಯೂ ಚಳಿಗಾಲದ ನಿರ್ವಹಣೆ ದೊಡ್ಡದು. ಹಿಮ ಬೀಳುವ ರಾಜ್ಯಗಳ ಸರಕಾರಗಳು ಚಳಿಗಾಲದ ನಿರ್ವಹಣೆ ಗೆಂದೇ ಒಂದಿಷ್ಟು ವಾರ್ಷಿಕ ಬಜೆಟ್ಟನ್ನು ಪ್ರತ್ಯೇಕವಾಗಿ ತೆಗೆದಿಟ್ಟಿರುತ್ತವೆ.

ಹಿಮ ಬೀಳುವ ಜಾಗದಲ್ಲಿ ಅವಶ್ಯವಾಗಿ ದಾಸ್ತಾನು ಮಾಡಿಟ್ಟುಕೊಳ್ಳಬೇಕಾದ ವಸ್ತುಗಳಲ್ಲಿ ಮೊದಲನೆಯದು ಉಪ್ಪು. ಉಪ್ಪಿಗೊಂದು ವಿಶೇಷ ಗುಣವಿದೆ. ಉಪ್ಪನ್ನು ಹಿಮದ ಅಥವಾ ಐಸ್‌ನ ಮೇಲೆ ಹಾಕಿದರೆ ಅದು ಘನೀಕೃತ ನೀರನ್ನು ಕರಗಿಸುತ್ತದೆ. ಈ ಪ್ರಕ್ರಿಯೆಯನ್ನು freezing point depression ಎನ್ನುತ್ತಾರೆ. ಐಸ್ ಮೇಲೆ ಉಪ್ಪನ್ನು ಹಾಕಿದಾಗ ಅದು ಮೇಲ್ಪದರ ವನ್ನು ಕರಗಿಸಿ ನಂತರ ಹಾಗೆ ಕರಗಿದ ಮೇಲ್ಪದರದ ನೀರು ಕೆಳಸ್ತರದ ಐಸ್ ಅನ್ನು ಕರಗಿಸುತ್ತ ಹೋಗುತ್ತದೆ. ಸಾಮಾನ್ಯವಾಗಿ ಹಿಮ ಬೀಳುವ ಪ್ರದೇಶಗಳಲ್ಲಿ ರಸ್ತೆಗಳು ಹೆಪ್ಪುಗಟ್ಟಿರುತ್ತವೆ. ಐಸ್ ಕರಗಿಸಲು ಉಪ್ಪು ಬೇಕು. ಈ ಕಾರಣದಿಂದ ಟನ್‌ಗಟ್ಟಲೆ ಶೇಖರಿಸಿಟ್ಟುಕೊಂಡಿರಬೇಕು. ರಸ್ತೆಯ ಮೇಲೆ ಬಿದ್ದ ಹಿಮವನ್ನು ಪಕ್ಕಕ್ಕೆ ಸರಿಸಲು, ಮೇಲಿಂದ ಉಪ್ಪು ಸಿಂಪಡಿಸಲು ವಿಶೇಷ ವಾಹನಗಳ ತಯಾರಿಯೂ ಆಗಿರಬೇಕು. ರಸ್ತೆಯೊಂದೇ ಅಲ್ಲ- ನಾವು ಓಡಾಡುವ ಎಲ್ಲ ಕಾಲುದಾರಿಗಳಲ್ಲೂ ಹಿಮಪಾತವಾದಾಗಲೆಲ್ಲ ಉಪ್ಪು ಬೀರಿ ಕೊಳ್ಳಬೇಕು. ಇನ್ನು ಕೆಲವೊಮ್ಮೆ ಹಿಮ ಬಿದ್ದ ನಂತರ ಮಳೆಬಂದರೆ ಅಥವಾ ಐಸ್ ಮಳೆಯಾದರೆ (ಆಲಿಕಲ್ಲು ಅಲ್ಲ- ಐಸ್ ಮಳೆಯೆಂದರೆ ತುಂತುರು ಐಸ್ ಬೀಳುವುದು), ಕೆಲವೇ ನಿಮಿಷದಲ್ಲಿ ಹತ್ತಿಪ್ಪತ್ತು ಡಿಗ್ರಿ ಉಷ್ಣಾಂಶ ಇಳಿದುಬಿಡುತ್ತದೆ. ಆಗ ನೆಲದ ಮೇಲೆಲ್ಲ ತೀರಾ ತೆಳ್ಳನೆಯ ಐಸ್ ಕಟ್ಟಿಬಿಡುತ್ತದೆ. ಆಗ ನೆಲ ನೋಡಲು ಸಹಜವಾಗಿ ಕಂಡರೂ, ಅದರ ಮೇಲೆ ಕಾಲಿಟ್ಟರೆ ಬಿದ್ದು ಸೊಂಟ ಮುರಿದುಕೊಳ್ಳಬೇಕಾಗುತ್ತದೆ.

ವಾಹನಗಳಿಗೆ ಹಿಮಕ್ಕೆ ಒಗ್ಗಿಕೊಳ್ಳುವ ಟೈರ್ ಹಾಕಿಕೊಳ್ಳಬೇಕು. ಹಿಮ ಸ್ಥಿತಿಗೆಂದೇ ತಯಾರಿಸಿದ ದೊಡ್ಡ ಗ್ರೂವ್
ಇರುವ ಚಕ್ರಗಳನ್ನು ಹಾಕಿಕೊಂಡರೆ ವಾಹನ ಐಸ್‌ನಿಂದ ಜಾರುವುದನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳ ಬಹುದು. ಚಳಿಗಾಲದಲ್ಲಿ ವೈಪರ್‌ಗೆ ಸಿಂಪಡಿಸಲು ನೀರು ಬಳಸುವಂತಿಲ್ಲ. ತೀವ್ರ ಕಡಿಮೆ freezing point ಇರುವ ವಿಶೇಷ ದ್ರಾವಣವನ್ನೇ ಬಳಸಬೇಕು. ಇಲ್ಲದಿದ್ದರೆ ವಾಹನ ದಲ್ಲಿರುವ ನೀರೇ ಐಸ್ ಆಗಿ ಹಿಗ್ಗಿದಾಗ ಪೈಪ್‌ಗಳು ಒಡೆದು ಬಿಡುತ್ತವೆ. ಇನ್ನು ಮನೆಯ ನೀರಿನ ಪೈಪ್‌ಗಳು ವಿಶೇಷದ್ದೇ ಆಗಿರಬೇಕು. ಎಲ್ಲ ಮನೆಯಲ್ಲೂ ನಿತ್ಯಬಳಕೆಗೆ ಬಿಸಿನೀರೇ ಬೇಕು. ನಲ್ಲಿಯಿಂದ ಬರುವ ನೀರು ಮುಟ್ಟಲಾಗದಷ್ಟು ತಂಪು. ಉಷ್ಣಾಂಶ ತೀರಾ ಕೆಳಕ್ಕಿಳಿದರೆ ನೀರು ಸರಬರಾಜು ಮಾಡುವ ಪೈಪ್ ಹೆಪ್ಪುಗಟ್ಟಿಬಿಡುತ್ತದೆ. ಅಂಥ ಸಂದರ್ಭದಲ್ಲಿ ಮನೆಯ ನಲ್ಲಿಗಳನ್ನು ಸಣ್ಣಗೆ ನೀರು ಹರಿಯುತ್ತಿರುವಂತೆ ಬಿಟ್ಟೇ ಇಡಬೇಕಾಗುತ್ತದೆ.

ಇನ್ನು ಮನೆಯಲ್ಲಿ ಸದಾ ಹೀಟರ್- ಬಿಸಿಗಾಳಿಯ ವ್ಯವಸ್ಥೆ ಓಡುತ್ತಲೇ ಇರಬೇಕು. ಮನೆಯಲ್ಲಿ ಜನರಿರಲಿ ಇಲ್ಲದಿರಲಿ ಹೀಟರ್ ಉರಿಯುತ್ತಲೇ ಇರಬೇಕು. ಅದೇನಾದರೂ ಕೆಟ್ಟು ನಿಂತರೆ ಕೆಲವೇ ಗಂಟೆಗಳಲ್ಲಿ ಅಲ್ಲಿರಲು ಅಸಾಧ್ಯ ಚಳಿ ಯಾಗುತ್ತದೆ. ಅಷ್ಟೇ ಅಲ್ಲ, ಹಾಗೆಯೇ ಬಿಟ್ಟರೆ ಮನೆಯೊಳ ಗಿನ ಎಲ್ಲಾ ದ್ರವಗಳೂ ಹೆಪ್ಪುಗಟ್ಟಿಬಿಡುತ್ತವೆ. ವಸ್ತುಗಳು ಹಾಳಾಗಿ ಬಿಡುತ್ತವೆ. ಕಿಟಕಿ ಬಾಗಿಲಿಗೆ ಚಿಕ್ಕ ಸಂದಿಯೂ ಇರುವಂತಿಲ್ಲ. ಹೊರ ಹೋಗಬೇಕೆಂದರೆ 2-3 ಪದರದ ಬಟ್ಟೆ ಧರಿಸಿ ಹೋಗದಿದ್ದಲ್ಲಿ ಕೈಕಾಲು ಮರಗಟ್ಟಿ ಹೋಗು ತ್ತವೆ. ಹೀಗೆ ಸಾವಿರದೆಂಟು ವ್ಯವಸ್ಥೆಯಾದರಷ್ಟೇ ಜೀವಂತವಿರಲು ಸಾಧ್ಯ. ಈ ಇಡೀ ವ್ಯವಸ್ಥೆಯ ಪ್ರತಿಯೊಂದು ಭಾಗವೂ ಕೆಲಸಮಾಡಬೇಕು. ಒಂದೇ ಕೆಟ್ಟರೂ ಕಥೆ ಪಡ್ಚ. ಎಲ್ಲದಕ್ಕೂ ನಿರಂತರ ವಿದ್ಯುತ್ ಸರಬರಾಜಾಗು ತ್ತಿರಬೇಕು. ಒಂದು ಗಂಟೆ ಕರೆಂಟ್ ಹೋಯಿತು ಎಂದರೂ ಮನೆಯೊಳಗೆ 10-15 ಡಿಗ್ರಿ ಉಷ್ಣಾಂಶ ಇಳಿದು ಬಿಡುತ್ತದೆ. ಚಳಿಗಾಲ ವೆಂದರೆ ನಿರಂತರ ಐಸಿಯುನಲ್ಲಿಟ್ಟಂತೆ. ಇದು ತೀವ್ರ ಚಳಿಪ್ರದೇಶದ ಬದುಕು.

ಆದರೆ ಪ್ರಾಣಿಗಳಿಗೆ ಈ ಎಲ್ಲ ಐಷಾರಾಮಗಳಿಲ್ಲ. ಅವುಗಳದು ಅನನ್ಯ ಜೀವನಕ್ರಮ. ಕೆಲವು ಪ್ರಾಣಿ-ಪಕ್ಷಿಗಳು
ಚಳಿಗಾಲ ಶುರುವಾಗುತ್ತಿದ್ದಂತೆ ಇಲ್ಲಿಂದ ಜಾಗ ಖಾಲಿ ಮಾಡುತ್ತವೆ. ಉಷ್ಣ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಇನ್ನು ಕೆಲವು ಅಲ್ಲಿಯೇ ಇದ್ದು ದೇಹವನ್ನು ಋತುಮಾನಕ್ಕೆ ತಕ್ಕಂತೆ ಬದಲಿಸಿಕೊಂಡು ಬದುಕುತ್ತವೆ.

ಅಮೆರಿಕದ ಉತ್ತರ ರಾಜ್ಯಗಳ ಕಾಡುಗಳಲ್ಲಿ ಕರಡಿಗಳು ಸಾಮಾನ್ಯ. ಈ ಕರಡಿಗಳ ಚಳಿಗಾಲದ ಬದುಕು ತೀರಾ
ವಿಚಿತ್ರ. ಇನ್ನೇನು ಚಳಿಗಾಲ ಶುರುವಾಗಬೇಕು, ಈ ಕರಡಿಗಳು ಹಗಲು ರಾತ್ರಿ ಲೆಕ್ಕವಿಲ್ಲದಷ್ಟು ತಿನ್ನುತ್ತವೆ. ಈ ಮೂಲಕ ತೂಕವನ್ನು ಮತ್ತು ದೇಹದ ಕೊಬ್ಬನ್ನು ಹೆಚ್ಚಿಸಿಕೊಳ್ಳುತ್ತವೆ. ಇದನ್ನು Hyperphagia ಎನ್ನಲಾಗುತ್ತದೆ. ಇದು ಕರಡಿ ಚಳಿಗಾಲಕ್ಕೆ ಮಾಡಿಕೊಳ್ಳುವ ತಯಾರಿ. ಕೆಲವೊಮ್ಮೆ ಆಹಾರ ಕಾಡಿನಲ್ಲಿ ಸಿಗದಿದ್ದರೆ ಊರಿಗೂ ಲಗ್ಗೆಯಿಡುವುದೂ ಇದೆ. ಈ ಸಮಯದಲ್ಲಿ ಕರಡಿಗಳು ತೀರಾ ಆಕ್ರಮಣ ಕಾರಿ. ಕಾಡಿನ ಅಂಚಿನಲ್ಲಿರುವ ಮನೆಗಳ ಕಿಟಕಿ ಒಡೆದು ಒಳ ನುಗ್ಗುವುದು, ಕಸದ ಬುಟ್ಟಿಗಳನ್ನು ಚೆಪಿಲ್ಲಿ ಮಾಡು ವುದು ಇವೆಲ್ಲ ಸಾಮಾನ್ಯ. ಹೀಗೆ ಕೊಬ್ಬಿದ ನಂತರ, ಚಳಿಗಾಲ ಶುರುವಾಗುತ್ತಿದ್ದಂತೆ ಈ ಕರಡಿಗಳು ಗುಹೆ ಸೇರಿಕೊಳ್ಳುತ್ತವೆ. ತಿಂಗಳಾನುಗಟ್ಟಲೆ, ಚಳಿಗಾಲ ಮುಗಿಯುವಲ್ಲಿಯವರೆಗೆ ಅಲ್ಲಿಯೇ ಊಟ ನೀರಿಲ್ಲದೇ ನಿದ್ರಿಸುತ್ತವೆ. ಈ ಸಮಯದಲ್ಲಿ ಕರಡಿಯ ದೇಹದ ಉಷ್ಣಾಂಶ ತೀವ್ರ ಇಳಿದುಬಿಡುತ್ತದೆ. ಉಸಿರಾಟ, ಹೃದಯ ಮಿಡಿತ ಎಲ್ಲವೂ ನಿಧಾನವಾಗುತ್ತದೆ. ದೇಹದಲ್ಲಿ ಶೇಖರಿಸಿಟ್ಟು ಕೊಂಡ ಕೊಬ್ಬನ್ನು ದೇಹ ಲೆಕ್ಕಾಚಾರ ಮಾಡಿ ಬಳಸಿಕೊಳ್ಳುವ ಸಮಯವಿದು. ಅಲ್ಲದೇ ಒಂದು ಚೂರೂ ಅಲುಗಾಡದೇ ಇರುವುದರಿಂದ ಅವುಗಳ ಸುತ್ತಲಿನ ದೇಹದ ಶಾಖ ಅಷ್ಟು ಪೋಲಾಗುವುದಿಲ್ಲ. ಹೀಗೆಲ್ಲ ಸರ್ಕಸ್ ಮಾಡಿ ಕರಡಿಗಳು ಚಳಿಗಾಲವನ್ನು ಕಳೆಯುತ್ತವೆ. ನಂತರದ ಬೇಸಗೆಯಲ್ಲಿ ಮತ್ತೆ ಆಹಾರಕ್ಕಾಗಿ ಹೋರಾಟ. ಬೇಸಗೆಯಲ್ಲಿ ದೇಹ ಕೃಶವಾಗಿರುತ್ತದೆ. ಈ ರೀತಿ, ಕಾಲಕ್ಕೆ ದೇಹವನ್ನು ಒಗ್ಗಿಸಿಕೊಳ್ಳುವುದು ಒಂದು ರೀತಿ.

ಇನ್ನು ಹಕ್ಕಿಗಳ ಕಥೆ. ಹಲವಾರು ಹಕ್ಕಿಗಳು ಪ್ರತಿ ವರ್ಷ ಚಳಿಗಾಲ ಶುರುವಾಗುತ್ತಿದ್ದಂತೆ ದಕ್ಷಿಣಕ್ಕೆ- ಸಮಭಾಜಕ ವೃತ್ತದ ಕಡೆಗೆ ವಲಸೆ ಹೋಗುತ್ತವೆ. ಅಲ್ಲಿ ಹೋಗಿ, ಇದ್ದು, ಪುನಃ ಚಳಿ ಕಡಿಮೆಯಾಗುತ್ತಿದ್ದಂತೆ ಉತ್ತರಕ್ಕೆ ಪ್ರಯಾಣಿಸುತ್ತವೆ. ಆದರೆ ಕೆಲವು ಚಳಿ ದೇಶದ ಹಕ್ಕಿಗಳು ವಲಸೆ ಹೋಗುವುದಿಲ್ಲ. ಸಾವಿರಾರು ಮೈಲಿ ಹಾರಿ ಹೋಗುವುದು ಎಲ್ಲ ಹಕ್ಕಿಗಳಿಗೆ ಶಕ್ಯವಿರುವುದಿಲ್ಲ. ಹೀಗೆ ಉಳಿದುಕೊಳ್ಳುವ ಹಕ್ಕಿಗಳು ಕೂಡ ಕರಡಿ, ಜಿಂಕೆಗಳಂತೆ ದೇಹದ ಕೊಬ್ಬನ್ನು ಹೆಚ್ಚಿಸಿಕೊಳ್ಳುತ್ತವೆ. ಅಲ್ಲದೆ ದೇಹದಲ್ಲಿ ಉತ್ಪತ್ತಿಯಾಗುವ ಎಣ್ಣೆಯನ್ನು ಸವರಿಕೊಳ್ಳುವುದರ ಮೂಲಕ ಅವು ರೆಕ್ಕೆ ಪುಕ್ಕಗಳನ್ನು ಒದ್ದೆಯಾಗ ದಂತೆ ನೋಡಿಕೊಳ್ಳುತ್ತವೆ. ಚಳಿಗಾಲದಲ್ಲಿ ಮೈ ಒದ್ದೆಯಾಯಿ ತೆಂದರೆ ದೇಹದ ಉಷ್ಣತೆ ಯನ್ನು ಹೆಚ್ಚಿಗೆಯಿಟ್ಟು ಕೊಳ್ಳಲು ಇನ್ನಷ್ಟು ಶಕ್ತಿಯನ್ನು ವ್ಯಯಿಸಬೇಕು.

ಇನ್ನೊಂದಿಷ್ಟು ವಿಚಿತ್ರ ಪ್ರಾಣಿಗಳಿವೆ. ಉದಾಹರಣೆಗೆ ‘ಅರ್ಕಿಟಿಕ್ ಇಣಚಿ’. ಇವು ಸಾಮಾನ್ಯವಾಗಿ ಉತ್ತರ ಅಮೆರಿಕ ಮತ್ತು ಕೆನಡಾದಲ್ಲಿ ವಾಸಿಸುತ್ತವೆ. ಇವು ಚಳಿಗಾಲ ಬಂತೆಂದರೆ, ಭೂಮಿಯಲ್ಲಿ ಆಳವಾದ ಬಿಲ ಕೊರೆದು ಅಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ಬದುಕುತ್ತವೆ. ಈ ಸಮಯದಲ್ಲಿ ಅವು ತಮ್ಮ ದೇಹತಾಪವನ್ನು ೬ ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಿಕೊಂಡು, ಅಷ್ಟೇ ಉಷ್ಣಾಂಶವನ್ನು ಕಾಯ್ದುಕೊಳ್ಳುವುದರ ಮೂಲಕ ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುತ್ತವೆ. ಈ ಸಮಯದಲ್ಲಿ ಅವುಗಳ ದೈಹಿಕ ಪ್ರಕ್ರಿಯೆ ಬಹುತೇಕ ಶೂನ್ಯ. ಮೂರು ವಾರಕ್ಕೊಮ್ಮೆ ಕೆಲ ಕ್ಷಣ ಎಚ್ಚರಗೊಳ್ಳುವ ಮೂಲಕ ತಮ್ಮ ಮಿದುಳು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ಬಿಟ್ಟರೆ ಇನ್ನೇನೂ ಕ್ರಿಯೆಯೇ ಇಲ್ಲ. .

ಇನ್ನೊಂದು ವಿಚಿತ್ರ ಜೀವಿ- ಕೀಟ ಎಂದರೆ Red Flat Bark Beetle. ಈ ಕೀಟ ಚಳಿಗಾಲ ಬಂತೆಂದರೆ ದೇಹದಲ್ಲಿನ ಸುಮಾರು ಶೇ.40ರಷ್ಟು ನೀರನ್ನು ಹೊರ ಹಾಕಿ ಆ ಜಾಗದಲ್ಲಿ ಹೆಪ್ಪುಗಟ್ಟದ ಪ್ರೋಟೀನ್ ದ್ರವ್ಯವನ್ನು ತಯಾರಿಸಿ ತುಂಬಿಸಿಕೊಳ್ಳುತ್ತದೆ. ಈ ಮೂಲಕ ಅವುಗಳ ದೇಹದಲ್ಲಿನ ರಕ್ತ ಮತ್ತು ಅಂಗಾಂಗಗಳು ಘನೀಕೃತ ಗೊಳ್ಳುವುದಿಲ್ಲ. ಅಷ್ಟೇ ಅಲ್ಲ, ಅವುಗಳ ದೇಹದ್ರವ್ಯಗಳು ಅತಿ ಚಿಕ್ಕ ಹರಳುಗಳಂತಾಗುತ್ತವೆ. ಈ ರೀತಿ 150 ಡಿಗ್ರಿ ಸೆಲ್ಸಿಯಸ್‌ನಲ್ಲೂ ಅವು ಬದುಕಿರಬಲ್ಲವು.

ಇನ್ನು ಚಳಿ ಪ್ರದೇಶದಲ್ಲಿ ಬದುಕುವ ಮೊಸಳೆಗಳದ್ದು ಇನ್ನೊಂದು ರೀತಿ. ಮೊಸಳೆಗಳು ನೀರಿನಲ್ಲಿದ್ದರೂ ಉಸಿರಾಡ
ಬೇಕೆಂದರೆ ಮೇಲಕ್ಕೆ ಬರಬೇಕು. ಕೆರೆ-ನದಿಗಳ ನೀರಿನ ಮೇಲಿನ ಸ್ತರ ಹೆಪ್ಪುಗಟ್ಟಿದರೂ ಕೆಳಗಿನ ನೀರು ಬೆಚ್ಚಗಿರುತ್ತವೆ.
ಮೊಸಳೆಗೆ ಮೇಲೆ ಬಂದರೆ ವಿಪರೀತ ಚಳಿ. ಹಾಗಂತ ನೀರಿನೊಳಗೇ ಇದ್ದರೆ ಉಸಿರುಗಟ್ಟುತ್ತದೆ. ಈ ಕಾರಣಕ್ಕೆ ಅವು
ನೀರಿನಿಂದ ಹೊರಗೆ ಮೂಗನ್ನು/ಮೂತಿಯನ್ನು ಇಟ್ಟು ದೀರ್ಘ ನಿದ್ರೆಗೆ ಜಾರಿಬಿಡುತ್ತವೆ. ಈ ಮೂಲಕ ಅವುಗಳ
ದೇಹ ನೀರಿನೊಳಗೆ ಬೆಚ್ಚಗಿರುತ್ತವೆ. ಮುಖ ಮೂಗು ಹೊರಗೆ ಹೆಪ್ಪುಗಟ್ಟಿದ ಐಸ್‌ನ ನಡುವೆ ಸಿಕ್ಕಿಕೊಂಡಿರುತ್ತವೆ. ಇವುಗಳಿಗೆ ಈ ತ್ರಿಶಂಕು ಸ್ಥಿತಿಯಿಂದ ಮುಕ್ತಿ- ಹೆಪ್ಪುಗಟ್ಟಿದ ನೀರಿನ ಆಕರದ ಮೇಲ್ಪದರ ಕರಗಿದ ಮೇಲೆಯೇ!

ಅಮೆರಿಕದ ಮರ ಕಪ್ಪೆಗಳು ಚಳಿಗಾಲವನ್ನು ಸಂಭಾಳಿಸುವ ರೀತಿಯೇ ಅನನ್ಯ. ಇವು ಚಳಿಗಾಲ ಬಂತೆಂದರೆ ದೇಹದಲ್ಲಿ ಮೂತ್ರ ತಯಾರಿಸಲು ಶುರುಮಾಡುತ್ತವೆ (!). ಆದರೆ ಈ ಮೂತ್ರವನ್ನು ಅವು ಹೊರ ಹಾಕುವುದಿಲ್ಲ. ಬದಲಿಗೆ ತಮ್ಮ ರಕ್ತದಲ್ಲಿಯೇ ಇಟ್ಟುಕೊಳ್ಳುತ್ತವೆ. ಉಷ್ಣಾಂಶ ಕಡಿಮೆಯಾದಂತೆ ಈ ಕಪ್ಪೆಯ ರಕ್ತ ಅರೆಹೆಪ್ಪು ಗಟ್ಟುತ್ತದೆ. ಅದೇ ಸಮಯದಲ್ಲಿ ಕಪ್ಪೆಯ ಲಿವರ್ ಗ್ಲುಕೋಸ್ ಅನ್ನು ತಯಾರಿಸಲು ಶುರುಮಾಡುತ್ತದೆ. ಈ ಗ್ಲುಕೋಸ್ (ಸಕ್ಕರೆ) ರಕ್ತ ಮತ್ತು ರಕ್ತದ ಒಂದಾಗಿರುವ ಮೂತ್ರ (ಉಪ್ಪು)ದ ಜತೆ ಸೇರಿ ಹೆಪ್ಪುಗಟ್ಟದ ದ್ರವ್ಯ ಅಲ್ಲಿ ತಯಾರಾಗುತ್ತದೆ. ಈ ಹೆಪ್ಪು ತಡೆಯುವ ದ್ರವ್ಯ ಕಪ್ಪೆಯ ದೇಹದ ಜೀವಕೋಶಗಳ ಸುತ್ತ ಒಂದು ರೀತಿಯ
ಕವಚ ವನ್ನು ನಿರ್ಮಿಸುತ್ತದೆ. ಈ ಮೂಲಕ ಅವುಗಳ ಎಲ್ಲ ಜೀವಕೋಶಗಳು ಸುರಕ್ಷಿತ. ಕಪ್ಪೆಯ ರಕ್ತ ಸಂಚಲನ
‘ಸಂಪೂರ್ಣ’ ನಿಂತುಬಿಡುತ್ತದೆ. ಶ್ವಾಸಕೋಶ ಮತ್ತು ಹೃದಯ ಕೂಡ ಸ್ತಬ್ಧವಾಗಿ, ಕಪ್ಪೆ ಒಂದು ಕೊರಡಂತೆ ಮರದ ಕೊಂಬೆಗೆ ಅಂಟಿಕೊಂಡಿರುತ್ತದೆ. ಈ ರೀತಿಯ ದೇಹದ ಸ್ಥಿತಿಗೆ ಯಾವುದೇ ಶಬ್ದ ಇಲ್ಲ. ಏಕೆಂದರೆ ಇದು ಜೀವಂತ ಸ್ಥಿತಿಯೂ ಅಲ್ಲ ಅಥವಾ ಮೃತ ಸ್ಥಿತಿಯೂ ಅಲ್ಲ. ಸುಮಾರು 8 ತಿಂಗಳುಗಳ ಕಾಲ ಇದೇ ಸ್ಥಿತಿಯಲ್ಲಿ ಅವು ಇರುತ್ತವೆ. ನಂತರ ವಾತಾವರಣದ ಉಷ್ಣಾಂಶ ಹೆಚ್ಚಿದಂತೆ ಅವುಗಳ ದೇಹ ಸಹಜ ಸ್ಥಿತಿಗೆ ಮರಳುತ್ತದೆ. ಅದು ಸಹಜಕ್ಕೆ, ಜೀವ ಸ್ಥಿತಿಗೆ ಬದಲಾಗುವುದು ಎಂದರೆ ಬಿಸಿ ಬಾಣಲಿಯ ಮೇಲಿನ ಐಸ್ ಕರಗಿದಂತೆ. ಕೇವಲ 30 ನಿಮಿಷದಲ್ಲಿ ಅವುಗಳ ಹೃದಯ ಬಡಿತ, ರಕ್ತಸಂಚಲನ ಎಲ್ಲ ಶುರುವಾಗುತ್ತವೆ. ಕಣ್ಣೆದುರಿಗೆ ಮರುಜೀವ ಪಡೆದು ಗಿಡಗಳ ಮಧ್ಯೆ ಮಾಯವಾಗಿ ಬಿಡುತ್ತವೆ.

ಈ ರೀತಿ ಫ್ರೀಜ್ ಆಗಿಬಿಡುವ ಪ್ರಾಣಿಗಳಲ್ಲಿ ಇನ್ನೊಂದು ಎಂದರೆ ಟಾರ್ಡಿಗ್ರೇಡ್ಸ್. ಇದೊಂದು ಅಸಾಮಾನ್ಯ
ಪ್ರಾಣಿಯೇ ಸೈ. ಈ ಟಾರ್ಡಿಗ್ರೇಡ್‌ಗಳು ಸಮುದ್ರದ ಅತ್ಯಂತ ಆಳದಲ್ಲಿ, ಅತಿ ಕಡಿಮೆ ಉಷ್ಣಾಂಶದಲ್ಲಿ ಬದುಕ ಬಲ್ಲವು. ನೋಮಟೋಡ್ಸ್ ಮೊದಲಾದ ಅತಿ ಚಿಕ್ಕ ಹುಳುಗಳು ಅದೆಷ್ಟೋ ವರ್ಷಗಳ ಕಾಲ ಈ ರೀತಿ ಸತ್ತಂತೆ ಬದುಕಿರಬಲ್ಲವು. ಸೈಬೀರಿಯಾದ ಐಸ್‌ನಲ್ಲಿ ಈ ನೋಮಟೋಡ್ಸ್ ಎಂಬ ಅತಿ ಚಿಕ್ಕ ಹುಳುಗಳು ಬರೋಬ್ಬರಿ 32000 ವರ್ಷಗಳಿಂದ ಸಿಲುಕಿಕೊಂಡಿದ್ದವಂತೆ. ಅವನ್ನು ವಿಜ್ಞಾನಿಗಳು ಲ್ಯಾಬ್‌ಗೆ ತಂದು ಬಿಸಿನೀರಲ್ಲಿ ಹಾಕಿದಾಗ ಅವು ಪುನರ್ಜೀವ ಪಡೆದುಕೊಂಡವು ಎಂಬುದು ಇತ್ತೀಚೆಗೆ ದೊಡ್ಡ ಸುದ್ದಿಯಾಗಿತ್ತು. ಸತ್ತಂತಿದ್ದವರನ್ನು ವಿeನಿಗಳು ಬಿಸಿ ಮಾಡಿ ಎಬ್ಬಿಸಿದ್ದರು.

ಚಳಿಯೆಂದರೆ ಜನರ ಓಡಾಟ ಕಡಿಮೆ, ಒಡನಾಟವೂ ಕಡಿಮೆ. ಸಂಜೆ ಮೂರು ಗಂಟೆ ಕಳೆಯುವುದರೊಳಗೆ
ಸೂರ್ಯಾಸ್ತ. ಮರಗಿಡಗಳೆಲ್ಲ ಎಲೆ ಉದುರಿಸಿಕೊಂಡು ಬೋಳು ಬೋಳು. ಎಲ್ಲಿ ನೋಡಿದರಲ್ಲಿ ಹಿಮ, ಬಿಸಿಲು
ಬಿದ್ದರೆ ಪ್ರತಿಫಲಿಸಿ ಕಣ್ಣರಳಿಸಲಿಕ್ಕಾಗದಷ್ಟು ಬೆಳಕು, ಮನೆಯಿಂದಾಚೆ ಕಾಲಿಡಬೇಕೆಂದರೆ ಹೊರೆಯಾಗುವಷ್ಟು ಬಟ್ಟೆ ಜಾಕೆಟ್. ಹೀಗೆ ಇಡೀ ಜನಸಮೂಹವೇ ವಿಚಿತ್ರ ಸಾಮೂಹಿಕ ಒತ್ತಡದೊಳಗೆ ಸಿಲುಕುತ್ತದೆ. ಬೇಸಗೆಯಷ್ಟು ಸ್ವಾತಂತ್ರ ವಿಲ್ಲ.

ಅಂತೆಯೇ ನರಿ, ತೋಳ, ಹದ್ದು, ಪಾರಿವಾಳ, ಗುಬ್ಬಿ, ಎರೆಹುಳು, ಇರುವೆ, ದುಂಬಿ ಇತ್ಯಾದಿ ಅಸಂಖ್ಯ ಕೀಟಗಳು,
ಮೀನು, ಗಿಡ, ಬಳ್ಳಿ ಎಲ್ಲವಕ್ಕೂ ಚಳಿಗಾಲವೆಂದರೆ ಅವುಗಳದೇ ಆದ ಸವಾಲುಗಳು. ಅವಕ್ಕೂ ಮುಂದಿನ ಕಾಲಕ್ಕೆ
ತಯಾರಾಗುವುದೇ ಜೀವನ. ಒಟ್ಟಾರೆ, ಅವಕ್ಕೂ ಈ ಬದುಕು ಅನಿವಾರ್ಯ, ಇಲ್ಲಿರುವ ಮನುಷ್ಯರಂತೆ!!

ಇದನ್ನೂ ಓದಿ: Shishirhegde