Saturday, 17th May 2025

INDW vs WIW: ಮೂರನೇ ಪಂದ್ಯ ಗೆದ್ದು ಮಹಿಳಾ ಟಿ20ಐ ಸರಣಿ ಮುಡಿಗೇರಿಸಿಕೊಂಡ ಭಾರತ!

INDW vsv WIW: India women won 3rd T20I by 60 Runs against west indies and clinch T20I Series by 2-1

ಮುಂಬೈ: ಸ್ಮೃತಿ ಮಂಧಾನಾ (77 ರನ್‌) ಹಾಗೂ ರಿಚಾ ಘೋಷ್‌ (54 ರನ್‌) ಅವರ ಅರ್ಧಶತಕಗಳು ಹಾಗೂ ರಾಧ ಯಾದವ್‌ (29ಕ್ಕೆ 4) ಅವರ ಸ್ಪಿನ್‌ ಮೋಡಿಯ ಸಹಾಯದಿಂದ ಭಾರತ ಮಹಿಳಾ ತಂಡ ಮೂರನೇ ಟಿ20ಐ (INDW vsv WIW) ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ದ 60 ರನ್‌ಗಳಿಂದ ಗೆಲುವು ಪಡೆಯಿತು. ಆ ಮೂಲಕ ಮೂರು ಪಂದ್ಯಗಳ ಟಿ20ಐ ಸರಣಿಯನ್ನು ಭಾರತ ತಂಡ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಐದು ವರ್ಷಗಳ ಬಳಿಕ ಭಾರತ ಮಹಿಳಾ ತಂಡಕ್ಕೆ ಇದು ಮೊದಲು ಟಿ20ಐ ಸರಣಿ ಇದಾಗಿದೆ.

ಇಲ್ಲಿನ ಡಿವೈ ಪಾಟೀಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 218 ರನ್‌ಗಳ ಗುರಿಯನ್ನು ಹಿಂಬಾಲಿಸಿದ ವೆಸ್ಟ್‌ ಇಂಡೀಸ್‌ ತಂಡ ಕೂಡ ಕಠಿಣ ಹೋರಾಟ ನಡೆಸಿತ್ತು. ಆದರೆ, ರಾಧ ಯಾದವ್‌ ಸೇರಿದಂತೆ ಭಾರತದ ಬೌಲಿಂಗ್‌ ದಾಳಿಗೆ ನಲುಗಿದ ವಿಂಡೀಸ್‌, 20 ಓವರ್‌ಗಳನ್ನು ಮುಗಿಸಿದರೂ 9 ವಿಕೆಟ್‌ಗಳ ನಷ್ಟಕ್ಕೆ 157 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು.

ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿರಿಸಿಕೊಂಡಿದ್ದ ವಿಂಡೀಸ್‌, ಮೂರನೇ ಪಂದ್ಯ ಗೆದ್ದು ಟಿ20ಐ ಸರಣಿಯನ್ನು ಮುಡಿಗೇರಿಸಿಕೊಳ್ಳಲು ಬಯಸಿತ್ತು. ಆದರೆ, ಭಾರತ ತಂಡ ಇದಕ್ಕೆ ಅವಕಾಶ ನೀಡಲಿಲ್ಲ. ಬ್ಯಾಟಿಂಗ್‌ನಲ್ಲಿ ದಾಖಲೆಯ ಮೊತ್ತವನ್ನು ಕಲೆ ಹಾಕಿದ್ದ ಭಾರತ, ಚೇಸಿಂಗ್‌ನಲ್ಲಿ ಪ್ರವಾಸಿ ತಂಡವನ್ನು ದೊಡ್ಡ ಮೊತ್ತವನ್ನು ಕಲೆ ಹಾಕಲು ಬಿಡಲಿಲ್ಲ.

INDW vs WIW: ಭಾರತ ವನಿತೆಯರ ವಿರುದ್ಧ ವೆಸ್ಟ್‌ ಇಂಡೀಸ್‌ಗೆ 9 ವಿಕೆಟ್‌ ಭರ್ಜರಿ ಜಯ!

ವಿಂಡೀಸ್‌ ಪರ ಚಿನೆಲ್‌ ಹೆನ್ರಿ 43 ರನ್‌ಗಳಿಸಿದ್ದು, ಬಿಟ್ಟರೆ ಇನ್ನುಳಿದ ಬ್ಯಾಟರ್‌ಗಳು ವೈಯಕ್ತಿಕ 30ರ ಗಡಿ ದಾಟುವಲ್ಲಿ ಎಡವಿದರು. ಆದರೆ, ಹೇಲಿ ಮ್ಯಾಥ್ಯೂಸ್‌ (22), ದೇವೇಂದ್ರ ಡಾಟಿನ್‌ (25) ಹಾಗೂ ಶೆಮೆನ್‌ ಕ್ಯಾಂಪ್‌ಬೆಲ್‌ (17) ಅವರು ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ಆದರೆ, ಭಾರತದ ಸ್ಪಿನ್‌ ಮೋಡಿ ಮಾಡಿದ ರಾಧಾ ಯಾದವ್‌ ಬೌಲ್‌ ಮಾಡಿದ ನಾಲ್ಕು ಓವರ್‌ಗಳಲ್ಲಿ 29 ರನ್‌ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ವಿಂಡೀಸ್‌ ತಂಡವನ್ನು 150ರ ಆಸುಪಾಸಿನಲ್ಲಿ ಕಟ್ಟಿ ಹಾಕಲು ಭಾರತಕ್ಕೆ ನೆರವು ನೀಡಿದರು.

ದಾಖಲೆಯ ಮೊತ್ತ ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ಮಹಿಳಾ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 217 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಮಹಿಳಾ ಟಿ20ಐ ಕ್ರಿಕೆಟ್‌ನಲ್ಲಿ ಭಾರತದ ಅತಿ ಹೆಚ್ಚು ಮೊತ್ತ ಇದಾಯಿತು. ಇದರೊಂದಿಗೆ ಟೀಮ್‌ ಇಂಡಿಯಾ ಎದುರಾಳಿ ವಿಂಡೀಸ್‌ಗೆ 218 ರನ್‌ಗಳ ಗುರಿಯನ್ನು ನೀಡಿತ್ತು.

ಸ್ಮೃತಿ ಮಂಧಾನಾ-ರಿಚಾ ಘೋಷ್‌ ಅರ್ಧಶತಕಗಳು

ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡದ ಪರ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ ರಿಚಾ ಘೋಷ್‌ ಅವರ ಬ್ಯಾಟಿಂಗ್‌ ಎಲ್ಲರ ಗಮನ ಸೆಳೆಯಿತು. ಉಮಾ ಚೆಟ್ರಿ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರೂ ಮಂಧಾನಾ ಮತ್ತು ಜೆಮಿಮಾ ರೊಡ್ರಿಗಸ್‌ ಜೋಡಿ ಎರಡನೇ ವಿಕೆಟ್‌ಗೆ 98 ರನ್‌ಗಳನ್ನು ಕಲೆ ಹಾಕಿ, ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿತ್ತು. 39 ರನ್‌ ಗಳಿಸಿದ ರೊಡ್ರಿಗಸ್‌ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಸ್ಮೃತಿ ಮಂಧಾನಾ, 47 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 13 ಬೌಂಡರಿಗಳೊಂದಿಗೆ 77 ರನ್‌ಗಳನ್ನು ಸಿಡಿಸಿದ್ದರು. ಕೊನೆಯ ಹಂತದಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ರಿಚಾ ಘೋಷ್‌ ಅವರು, 21 ಎಸೆತಗಳಲ್ಲಿ 54 ರನ್‌ಗಳನ್ನು ಸಿಡಿಸಿದ್ದರು. ಇವರ ಇನಿಂಗ್ಸ್‌ನಲ್ಲಿ 5 ಸಿಕ್ಸರ್‌ ಹಾಗೂ ಮೂರು ಬೌಂಡರಿಗಳನ್ನು ಬಾರಿಸಿದ್ದರು. ಇವರ ಜೊತೆ ಕೊನೆಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ್ದ ರಾಘ್ವಿ ಬಿಸ್ಟ್‌ 31 ರನ್‌ಗಳನ್ನು ಕಲೆ ಹಾಕಿದ್ದರು.

ಪಂದ್ಯ ಶ್ರೇಷ್ಠ ಪ್ರಶಸ್ತಿ: ರಿಚಾ ಘೋಷ್‌

ಸರಣಿ ಶ್ರೇಷ್ಠ ಪ್ರಶಸ್ತಿ: ಸ್ಮೃತಿ ಮಂಧಾನಾ