ಮುಂಬೈ: ಕ್ರಿಸ್‌ಮಸ್ ಹಾಗೂ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಒಟಿಟಿ ಪ್ರಿಯರಿಗೆ ಸಿಹಿ ಸುದ್ದಿ ದೊರಕಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತಿತರ ಜನಪ್ರಿಯ ಒಟಿಟಿ (OTT Releases) ಪ್ಲಾಟ್‌ಫಾರ್ಮ್‌ಗಳಲ್ಲಿ ಅತ್ಯಾಕರ್ಷಕ ಸೀರಿಸ್ (Web Series) ಮತ್ತು ಚಲನಚಿತ್ರಗಳು ಸ್ಟ್ರೀಮಿಂಗ್ ಆಗಲಿವೆ. ರ‍್ಯಾಪರ್ ಹನಿ ಸಿಂಗ್ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಬಹು ನಿರೀಕ್ಷಿತ ಸಾಕ್ಷ್ಯಚಿತ್ರದಿಂದ ಹಿಡಿದು ಮಾರ್ವೆಲ್ ಸ್ಟುಡಿಯೋಸ್‌ನ ಆ್ಯಕ್ಷನ್-ಪ್ಯಾಕ್ಡ್ ಮೂರನೇ ಸೀಸನ್‌ನ ‘ವಾಟ್ ಇಫ್’ವರೆಗೆ ನಿಮ್ಮನ್ನು ರಂಜಿಸಲು ವೈವಿಧ್ಯಮಯ ಚಿತ್ರಗಳು ಸಿದ್ದವಾಗಿವೆ. ಈ ವಾರಾಂತ್ಯದಲ್ಲಿ ನೀವು ವೀಕ್ಷಿಸಬಹುದಾದ ಇತ್ತೀಚಿನ ಸೀರಿಸ್ ಮತ್ತು ಚಲನಚಿತ್ರಗಳ ವಿವರ ಇಲ್ಲಿದೆ.
ಯೋ ಯೋ ಹನಿ ಸಿಂಗ್: ಫೇಮಸ್
ಭಾರತದ ಪ್ರಸಿದ್ಧ ರ‍್ಯಾಪರ್ ಹನಿ ಸಿಂಗ್ ಅವರ ಜೀವನವನ್ನು ಸೆರೆ ಹಿಡಿದಿರುವ ಸಾಕ್ಷ್ಯ ಚಿತ್ರ ಡಿಸೆಂಬರ್ 20ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. ಅವರ ವೃತ್ತಿ ಜೀವನ, ವಯಕ್ತಿಕ ಜೀವನದಿಂದ ಹಿಡಿದು ಅವರ ಹಠಾತ್ ಕಣ್ಮರೆ ಎಲ್ಲವನ್ನೂ ಇದು ಒಳಗೊಂಡಿದೆ.
ವಾಟ್ ಇಫ್ 3
ಮಾರ್ವೆಲ್ ಸ್ಟುಡಿಯೋಸ್ ಅವರ ವಾಟ್ ಇಫ್‌ನ ಸೀಸನ್ 3 ಎಂಟು ಕಂತುಗಳನ್ನು ಒಳಗೊಂಡಿದೆ. ಸೀಸನ್ 1 ಮತ್ತು 2ರ ಒಂಬತ್ತು-ಕಂತುಗಳ ಸ್ವರೂಪಕ್ಕೆ ಹೋಲಿಸಿದರೆ ಇದು ಸ್ವಲ್ಪ ಚಿಕ್ಕದಾಗಿದೆ. ಡಿಸೆಂಬರ್ 22ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಇದು ಬಿಡುಗಡೆಯಾಗಲಿದೆ.
ಕ್ಯೂಬಿಕಲ್ಸ್ ಸೀಸನ್ 4
ಕ್ಯೂಬಿಕಲ್ಸ್ ತನ್ನ ಬಹು ನಿರೀಕ್ಷಿತ ಸೀಸನ್ 4ರೊಂದಿಗೆ ಹಿಂದಿರುಗಲು ಸಿದ್ಧವಾಗಿದೆ. ಟಿವಿಎಫ್ ನಿರ್ಮಾಣದ ಮತ್ತು ಚೈತನ್ಯ ಕುಂಭಕೋಣಂ ನಿರ್ದೇಶಿಸಿದ ಕ್ಯೂಬಿಕಲ್ಸ್‌ನ ಕಥಾವಸ್ತುವು ಐಟಿ ಕಂಪನಿಯಲ್ಲಿ ಪಿಯೂಷ್ ಎಂಬಾತನ ದಿನನಿತ್ಯದ ಜೀವನದ ಮೇಲೆ ಬೆಳಕು ಚೆಲ್ಲುತ್ತದೆ. ಆತ ಸ್ನೇಹ, ಸಂಬಂಧಗಳು ಮತ್ತು ಉದ್ಯೋಗವನ್ನು ಸಮತೋಲನಗೊಳಿಸಲು ಹೇಗೆಲ್ಲ ಹೆಣಗಾಡುತ್ತಾನೆ ಎನ್ನುವುದನ್ನು ಇದರಲ್ಲಿ ವಿವರಿಸಲಾಗಿದೆ. ನಿರೀಕ್ಷಿತ ಸರಣಿಯು ಡಿಸೆಂಬರ್ 20ರಿಂದ ಸೋನಿ LIV ನಲ್ಲಿ ಪ್ರದರ್ಶನಗೊಳ್ಳಲಿದೆ.
ಗರ್ಲ್ಸ್ ವಿಲ್ ಬಿ ಗರ್ಲ್ಸ್
ಈ ಚಿತ್ರವು ರಿಚಾ ಚಡ್ಡಾ ಮತ್ತು ಅಲಿ ಫಜಲ್ ಅವರ ಮೊದಲ ನಿರ್ಮಾಣದಲ್ಲಿ ಮೂಡಿ ಬಂದಿದೆ. 16 ವರ್ಷದ ಮೀರಾ, ಕಟ್ಟುನಿಟ್ಟಾದ ಬೋರ್ಡಿಂಗ್ ಶಾಲೆಯ ವಿದ್ಯಾರ್ಥಿನಿಯ ಮೊದಲ ಪ್ರೀತಿಯ ರೋಮಾಂಚನ, ಲೈಂಗಿಕತೆಯನ್ನು ಇದು ಒಳಗೊಂಡಿದೆ. ಪ್ರೌಢಾವಸ್ಥೆಗೆ ಬಂದಾಗ ಹೆಣ್ಣು ಮಕ್ಕಳಲ್ಲಾಗುವ ದೈಹಿಕ, ಮಾನಸಿಕ ಬದಲಾವಣೆ, ಅವಳಲ್ಲಿರುವ ಕುತೂಹಲ, ಎಲ್ಲವನ್ನೂ ಸ್ಥೂಲವಾಗಿ ವಿವರಿಸುವ ಕಥೆ ಇದಾಗಿದೆ. ಪ್ರಸ್ತುತ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.
ವರ್ಜಿನ್ ರಿವರ್ ಸೀಸನ್ 6
ವರ್ಜಿನ್ ರಿವರ್ 6ನೇ ಸೀಸನ್ ವೀಕ್ಷಕರನ್ನು ಸುಂದರವಾದ ಉತ್ತರ ಕ್ಯಾಲಿಫೋರ್ನಿಯಾ ಪಟ್ಟಣಕ್ಕೆ ಕರೆದೊಯ್ಯುತ್ತದೆ. ಇದು ಮೆಲ್ ಮನ್ರೋ ಮತ್ತು ಜ್ಯಾಕ್ ಶೆರಿಡನ್ ಅವರ ಬಹು ನಿರೀಕ್ಷಿತ ವಿವಾಹವನ್ನು ಕೇಂದ್ರಿಕರಿಸುವ ಕಥೆಯಾಗಿದೆ. ಕೆಲ ಅನಿರೀಕ್ಷಿತ ಸತ್ಯಗಳು ತೆರೆದುಕೊಳ್ಳುತ್ತಾ ಸಾಗುತ್ತದೆ.
ಈ ಸುದ್ದಿಯನ್ನೂ ಓದಿ : Kiccha Sudeep: ಕನ್ನಡ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ; ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಜೆರ್ಸಿ ಅನಾವರಣಗೊಳಿಸಿದ ಸುದೀಪ್ ಮನದಾಳ