Friday, 16th May 2025

Harish Kera Column: ಕನ್ನಡದ ಗುಡಿಯೂ ಅಧ್ಯಕ್ಷರ ನುಡಿಯೂ

ಕಾಡುದಾರಿ

ಹರೀಶ್‌ ಕೇರ

ನಾಳೆಯಿಂದ (ಡಿ.20) ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 3 ದಿನಗಳ ಕಾಲ ನಡೆಯ ಲಿದೆ. ಸಮ್ಮೇಳನದ ಅಧ್ಯಕ್ಷರು ಏನೇನು ಮಾತನಾಡುತ್ತಾರೆ ಎಂದು ನಾವಾಗಲೇ ಊಹಿಸಬಹುದು. ಸಮ್ಮೇಳನಾ ಧ್ಯಕ್ಷರ ಪೀಠ ಒಂದು ಥರಾ ಆಶೀರ್ವಚನದ ಸ್ಥಾನ. ಅಲ್ಲಿಂದ ‘ಕೇಳಿದ್ರೆ ಬೆಚ್ಚಿ ಬೀಳ್ತೀರಾ, ಶಾಕ್ ಆಗ್ತೀರಾ’ದಂಥ ಮಾತುಗಳು ಬರುವುದು ಸಾಧ್ಯವಿಲ್ಲ. ಏನಿದ್ದರೂ ಕೆಲವು ಸಣ್ಣಪುಟ್ಟ ಕಂಪನದ ಅಲೆಗಳನ್ನು ನಿರೀಕ್ಷಿಸಬಹುದು. ಯು.ಆರ್.ಅನಂತಮೂರ್ತಿ ಅವರು ಅಧ್ಯಕ್ಷರಾಗಿದ್ದಾಗ ಸಿದ್ಧ ಭಾಷಣದ ಪಠ್ಯ ಆಚೆಗಿಟ್ಟು ಆಶುಭಾಷಣ ಮಾಡಿದ್ದರು. ಉಳಿದವರು ಆ ಸಾಹಸವನ್ನೂ ಮಾಡಲಿಲ್ಲ.

ಆದರೆ ಯಾವ ಅಧ್ಯಕ್ಷರು ಏನು ಮಾತನಾಡಿದರು, ಅದು ಇಂದಿಗೂ ಜೀವಂತವಾಗಿದೆಯಾ ಅಥವಾ ತಮಾಷೆ ಯಾಗಿದೆಯಾ, ನಾಡು ಬೆಳೆದಂತೆ ಅಧ್ಯಕ್ಷರ ನುಡಿಗಳೂ ಹೇಗೆ ಬದಲಾಗುತ್ತ ಬಂದಿವೆ ಎಂದು ನೋಡುವುದು ಬಹಳ ಕುತೂಹಲಕರ. ಉದಾಹರಣೆಗೆ ೧೯೧೫ರಲ್ಲಿ ಬೆಂಗಳೂರಿನಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿದ್ದ ಎಚ್ .ವಿ.ನಂಜುಂಡಯ್ಯ ಅವರು “ಮೈಸೂರು ಕನ್ನಡಕ್ಕೇ ಹೆಚ್ಚಿನ ಆದ್ಯತೆಯನ್ನು ಕೊಡಬೇಕು” ಎಂದು ಒತ್ತಿ ಹೇಳಿದರು.

“ದಕ್ಷಿಣ ಕನ್ನಡ ಅಥವಾ ಧಾರವಾಡ, ಬೆಳಗಾಂ ಪ್ರಾಂತಗಳಲ್ಲಿ ಈಗಲೂ ಕೆಲವು ಶಬ್ದಗಳೂ ಪ್ರಯೋಗಗಳೂ ಪೂರ್ವ ದಲ್ಲಿದ್ದಂತೆ ಶಬ್ದರೂಪದಲ್ಲಿ ಉಳಿದುಕೊಂಡಿರಬಹುದು, ಅವುಗಳನ್ನು ಇಲ್ಲಿ ನಾವು ನಿಷ್ಕಾರಣವಾಗಿ ಬಿಟ್ಟುಬಿಟ್ಟಿರ ಬಹುದು; ಇಲ್ಲವೆ ಆ ರೂಪಗಳನ್ನು ಕೆಡಿಸಿರಬಹುದು. ಅಂಥ ಸಂದರ್ಭಗಳು ಸರಿಯಾಗಿ ಸಿದ್ಧಾಂತ ಪಟ್ಟರೆ, ನಾವು ಅವರನ್ನೇ ಅನುಸರಿಸಲಿಚ್ಛಿಸುವೆವು. ವ್ಯಾಕರಣ ನಿಯಮಗಳಿಗೂ ಔಚಿತ್ಯ ನ್ಯಾಯಕ್ಕೂ ವಿರುದ್ಧ ವಾದ ಪ್ರಯೋಗ ಗಳು ಎಲ್ಲಿದ್ದರೂ ಅವುಗಳನ್ನು ತಿದ್ದಲೇ ಬೇಕು. ಆದರೆ ಯಾವುದಾದರೂ ಭಾಷಾರೂಢಿಯ ಅಥವಾ ಭಾಷಾ ವೈಪರೀತ್ಯದ ಪ್ರಯೋಗವು ಸಾಧುವೇ ಅಲ್ಲವೇ ಎಂದು ಚರ್ಚೆ ಹುಟ್ಟಿದಾಗ ಮೈಸೂರು ಕನ್ನಡಕ್ಕೆ ಪ್ರಾಶಸ್ತ್ಯ ತೋರಿಸುವುದು ಉಚಿತವಾಗಿರುತ್ತದೆ. ಮೈಸೂರು ದೇಶದದರೋ ಕನ್ನಡವೇ ಎಲ್ಲಿಯೂ ಹರಡಿಕೊಂಡಿದೆ”
ಎನ್ನುತ್ತಾರೆ.

ಭಾಷೆಯ ದೃಷ್ಟಿಯಿಂದ ‘ಮೈಸೂರು ಕನ್ನಡ’ವನ್ನೂ ‘ಬ್ರಿಟಿಷ್ ಇಂಡಿಯಾ’ದ ಕನ್ನಡವನ್ನೂ ಅವರು ಭಿನ್ನವಾಗಿ ನೋಡುತ್ತಾರೆ. ಕನ್ನಡವೆಂದರೆ ಒಂದೇ ಭಾಷೆಯಲ್ಲ, ‘ಹಲವು ಕನ್ನಡಂಗಳ್’ ನಮ್ಮ ನಡುವೆ ಇವೆ ಎಂದು ಬಲವಾಗಿ ನಾವು ನಂಬಿರುವ ಇಂದು ಇಂಥ ಅಭಿಪ್ರಾಯವನ್ನು ಅಧ್ಯಕ್ಷರು ಮಂಡಿಸಿದರೆ ಕೋಲಾಹಲ ಆಗಬಹುದು. ಜತೆಗೆ ಅವರ ಇನ್ನೊಂದು ಅಭಿಪ್ರಾಯ- “ಕನ್ನಡ ಭಾಷಾಭಿವೃದ್ಧಿಯಲ್ಲಿ ಆಸಕ್ತರಾಗಿಯೂ, ಸಮರ್ಥರಾಗಿಯೂ, ಕಾರ್ಯ ಭಾರವನ್ನು ವಹಿಸಲು ತಕ್ಕವರಾಗಿಯೂ ಇರುವ ಜನಗಳು ಸೇರಿ, ಅನ್ಯೋನ್ಯ ಸಹಾಯದಿಂದ ಒಟ್ಟುಗೂಡಿ ಕೆಲಸಮಾಡತಕ್ಕ ಒಂದು ಸಭೆಯನ್ನು ಸರಕಾರದ ಸಂಬಂಧವಿಲ್ಲದೆ ನಿರ್ಮಿಸಬೇಕೆಂದು ಈ ಸಮ್ಮೇಳನವನ್ನು
ಏರ್ಪಾಡು ಮಾಡಲಾಗಿದೆ”.

ಕನ್ನಡ ಸಾಹಿತ್ಯ ಪರಿಷತ್ತು ‘ಸರಕಾರದ ಸಂಬಂಧವಿಲ್ಲದೆ’ ಕೆಲಸ ಮಾಡುವ ಸಂಸ್ಥೆಯಾಗಬೇಕು ಎಂಬ ಕನಸು
ಅಂದಿನಿಂದಲೂ ಇತ್ತು. ಆದರೆ ರಾಜಕಾರಣಿಗಳಿಲ್ಲದ ಸಮ್ಮೇಳನವನ್ನು ಊಹಿಸುವುದು ಕಷ್ಟ. ಇವರು ಮೊದಲ ಮೂರೂ ಸಾಹಿತ್ಯ ಸಮ್ಮೇಳನಗಳಿಗೂ ಅಧ್ಯಕ್ಷರಾಗಿದ್ದರು. ಮೂರರಲ್ಲೂ ಅವರು ‘ಆಳುವ ಮಹಾರಾಜ’ರನ್ನು ಪೂಜ್ಯ ಭಾವನೆಯಿಂದ ಮತ್ತೆ ಮತ್ತೆ ನೆನೆದಿzರೆ. ಉದಾಹರಣೆಗೆ ಮೂರನೇ ಸಮ್ಮೇಳನದ ಭಾಷಣದಲ್ಲಿ-
“ಶ್ರೀಮದ್ಯುವರಾಜರವರು ಈ ಸಭಾಸಮಾರಂಭದ ಅಧ್ಯಕ್ಷ ಸ್ಥಾನವನ್ನು ಕೃಪಾಪರಿಪೂರ್ಣತೆಯಿಂದ ಅಂಗೀಕರಿಸಿರು ವುದನ್ನು ನೋಡಿದರೆ, ಪರಿಷತ್ತಿನ ಸದುದ್ದೇಶಗಳು ಶ್ರೀಮದ್ಯುವರಾಜರವರ ಮೆಚ್ಚುಗೆಯನ್ನು ಪಡೆದಿರುವುದೆಂಬ ಸಂಗತಿಯೂ ಶ್ರೀಮನ್ಮಹಾರಾಜರವರಿಗೂ ವಿಶೇಷವಾದ ಆದರಾಸಕ್ತಿಗಳು ಉಂಟೆಂಬ ಸಂಗತಿಯೂ ಕನ್ನಡ ಭಾಷಾ ಸಾಹಿತ್ಯಗಳ ಏಳಿಗೆಗೆ ಬಲವಾದ ರಾಜಾಶ್ರಯವು ದೊರೆತಿರುವುದೆಂಬ ಸಂಗತಿಯೂ ದೃಢಪಡುತ್ತಿ ರುವುವು ಎಂದು ಸಂತುಷ್ಟರಾಗಿದ್ದೇವೆ. ಮಹಾಸ್ವಾಮಿ” ಎಂದಿದ್ದಾರೆ. ಇಂದಿನ ಅನೇಕ ಕನ್ನಡ ಸಂಸ್ಥೆಗಳ ಪೀಠಸ್ಥರು ಇವೇ ಮಾತು ಗಳನ್ನು ಬೇರೆ ವಾಕ್ಯಗಳಲ್ಲಿ ‘ಆಳುವ ಮಹಾರಾಜರಿಗೆ’ ನಿವೇದಿಸಿಕೊಳ್ಳುತ್ತಿರುತ್ತಾರೆ ಎಂಬುದನ್ನು ಮತ್ತೆ ಹೇಳುವ ಅಗತ್ಯವಿಲ್ಲವಷ್ಟೆ!

ಬಳ್ಳಾರಿಯಲ್ಲಿ ೧೯೨೬ರಲ್ಲಿ ನಡೆದ ೧೨ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಫ.ಗು. ಹಳಕಟ್ಟಿಯವರು ಹೇಳುವ ಒಂದು ಮಾತು ವಿಶಿಷ್ಟವಾಗಿದೆ- “ಸಾಹಿತ್ಯ ಪರಿಷತ್ತಿನವರು ಕೈಗೊಳ್ಳಬಹುದಾದ ಅನೇಕ ಕಾರ್ಯಗಳಲ್ಲಿ ಯೋಗ್ಯ ಪಠ್ಯಪುಸ್ತಕಗಳನ್ನು ನಿರ್ಮಿಸುವ ಕಾರ್ಯಕ್ಕೆ ನಾನು ಅಗ್ರಸ್ಥಾನವನ್ನು ಕೊಡುತ್ತೇನೆ. ಹೀಗೆ ನಿರ್ಮಿಸಿದ ಪುಸ್ತಕಗಳು ಎಲ್ಲ ಪ್ರಾಂತಗಳ ಕನ್ನಡ ಶಾಲೆಗಳಲ್ಲಿ ಉಪಯೋಗಿಸಲ್ಪಡಲು ಪ್ರಯತ್ನಿಸತಕ್ಕದ್ದು. ಹೀಗೆ ನಾವು ಈ ಪ್ರಯತ್ನದಲ್ಲಿ ಯಶಸ್ಸನ್ನು ಸಂಪಾದಿಸಿದರೆ, ಒಂದೇ ಮಾದರಿಯ ಪಠ್ಯಪುಸ್ತಕಗಳು ಎಲ್ಲ ಕಡೆಗೆ ಪ್ರಚಾರಕ್ಕೆ ಬಂದು, ಇದರಿಂದ ಕರ್ನಾಟಕದ ಅರಿವು ನಮ್ಮ ಜನರಿಗೆ ಆಗುವುದಲ್ಲದೆ, ಕರ್ನಾಟಕದ ಭಾಷೆಯಲ್ಲಿ ಈಗ ತೋರುವ ಭಿನ್ನತೆಗಳೂ ಕಡಿಮೆಯಾಗುತ್ತ ಹೋಗುವವು”. ಪಠ್ಯಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್ ರಚಿಸಬೇಕು ಎಂಬ ಈ ಸೂಚನೆ ಈಗ ಸ್ವಲ್ಪ ವಿಚಿತ್ರವಾಗಿ ಕಾಣಬಹುದು. ಆದರೆ ಇದರಲ್ಲಿ ಚರ್ಚೆ ಸಾಧ್ಯ.

ಇಂದು ನಮ್ಮ ಹಲವು ಅಧ್ಯಕ್ಷರು ದಿಟ್ಟವಾಗಿ ಆಡುತ್ತಿರುವ ಹಲವು ಮಾತುಗಳ ಬೀಜಗಳು ಹೈದರಾಬಾದ್‌ನಲ್ಲಿ 1941ರಲ್ಲಿ ನಡೆದ 26ನೇ ಸಮ್ಮೇಳನದ ಅಧ್ಯಕ್ಷರಾಗಿದ್ದ ಎ.ಆರ್. ಕೃಷ್ಣಶಾಸ್ತ್ರಿಗಳ ಭಾಷಣದಲ್ಲಿವೆ. ಭಾಷಾವಾರು ಪ್ರಾಂತ ವಿಭಾಗದ ಬಗ್ಗೆ ಮೊದಲು ದಿಟ್ಟವಾಗಿ ಹೇಳಿದವರು ಅವರು. ಜತೆಗೆ ಸಂಸ್ಕೃತದ ಮತ್ತು ಇಂಗ್ಲಿಷ್‌ನ ಕುರುಡು
ಅಭಿಮಾನಗಳ ಬಗ್ಗೆ ಕಟುವಾಗಿ ಎಚ್ಚರಿಸಿದವರು.

“ಆಗ ಒಂದು ಭಾಷೆಯ ಮೇಲೆ ಹಿಂದಿನಿಂದ ಬಂದ ಅಭಿಮಾನವಿದ್ದರೆ, ಈಗ ಮತ್ತೊಂದು ಭಾಷೆಯ ಮೇಲೆ ಇಂದು ತಾನೇ ಬಂದ ಅಭಿಮಾನವುಂಟಾಯಿತು. ಮೊದಲು ಹುಟ್ಟಿದ ಕಿವಿಗಿಂತ ಆ ಮೇಲೆ ಹುಟ್ಟಿದ ಕೋಡೇ ಮುಂದಾ ಯಿತು; ಅದು ತಿವಿಯುವುದಕ್ಕೂ ಮೊದಲಾಯಿತು” ಎಂದೂ ಅವರು ಟೀಕಿಸಿದರು.

ಮುಂಬಯಿಯಲ್ಲಿ 1951ರಲ್ಲಿ ನಡೆದ 34ನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಂಜೇಶ್ವರ ಗೋವಿಂದ ಪೈಗಳು ಒಂದು ಆಸಕ್ತಿಕರ ಪ್ರಸ್ತಾವವನ್ನು ಮುಂದಿಡುತ್ತಾರೆ: “ವರ್ಷೇವರ್ಷೇ ಅಲ್ಲಲ್ಲಿ ನಡೆಯತಕ್ಕ ಸಾಹಿತ್ಯ ಸಮ್ಮೇಳನದ ಜತೆಯಲ್ಲಿ ಕನ್ನಡ ನಾಡಿನ ವೈಜ್ಞಾನಿಕ ಸಮ್ಮೇಳನವನ್ನು ಕರೆಯುತ್ತಿರಬೇಕು. ಇದು ಮುಂದಣ ಪ್ರತಿ ವಾರ್ಷಿಕ ಸಾಹಿತ್ಯ ಸಮ್ಮೇಳನವನ್ನು ಕರೆಯಿಸುವ ಆಯಾ ಸ್ಥಳವಂದಿಗರಿಗೆ ಮಾಡುವ ಸೂಚನೆ, ಅವರಲ್ಲಿ ಮಾಡುವ ವಿeಪನೆ ಅಷ್ಟೆ. ಇಂದಿನ ಯುಗವೆಂದರೆ ಯಂತ್ರದ ಯುಗ, ವಿಜ್ಞಾನದ (Science) ಯುಗ, ವಿವಿಧ ಬಾಂಬುಗಳ (bombs) ಯುಗ. ಈ ಯುಗದಲ್ಲಿ ನಾವು ಹತ್ತು ಮಂದಿಯ ಜತೆಯಲ್ಲಿ ಇರಬೇಕಲ್ಲದೆ, ಬೆಕ್ಕಿನ ಬಿಡಾರ ಬೇರೆಯಂತೆ ಲೋಕ ದಿಂದ ಪೃಥಕ್ಕಾಗಿ ವಿಂಗಡವಾಗಿ ಇದ್ದಿರಲಾರೆವು. ಹಾಗೂ ಈ ಹತ್ತು ಮಂದಿ ವಿಜ್ಞಾನದಲ್ಲಿ ವಿಚಕ್ಷಣರಾಗಿದ್ದು ಅವರ ನಡುವೆ ನಾವು ಅವರಂತೆಯೇ ಸ್ವತಂತ್ರವಾಗಿ ತಲೆಯನ್ನು ಮೇಲೆತ್ತಿ ಬಾಳಬೇಕಾದರೆ ನಮಗೆ ಸಾಹಿತ್ಯ ನೆರವಾಗದು, ವಿಜ್ಞಾನ ಬೇಕು.

ವಿeನವಲ್ಲದೆ ಅನ್ಯಗತಿಯಿಲ್ಲ. ಈ ಕಾರಣ ನಮ್ಮಲ್ಲಿ ಸಾಹಿತ್ಯ ಹತ್ತುವವರು ಸಾಹಿತ್ಯವನ್ನು ಹೇಗೋ ಹಾಗೆ
ವಿಜ್ಞಾನ ಹತ್ತುವವರು ವಿಜ್ಞಾನವನ್ನು ಆಶ್ರಯಿಸಬೇಕು. ಹಾಗೆ ಎರಡೂ ದಾರಿಗಳಿಂದ ನಮ್ಮ ಜನ ಮುಂದು ವರಿಸಬೇಕು”. ಇದು ಈಗಲೂ ನಾವು ಪರಿಗಣಿಸಬಹುದಾದ, ಪರಿಗಣಿಸಲೇಬೇಕಾದ ಸಂಗತಿ. ಯಾಕೆಂದರೆ ಶಿಕ್ಷಣದ ಜತೆಗೆ ಬಗೆಬಗೆಯ ಮೌಢ್ಯವೂ ವಿಸ್ತರಿಸುತ್ತಿರುವ ಕಾಲವಿದು. ಪರಸ್ಪರ ವಿರೋಧಾಭಾಸ ಎನಿಸುವ ಒಂದು
ಆಶಯವನ್ನು ಶಿವರಾಮ ಕಾರಂತರು 1955ರಲ್ಲಿ ನಡೆದ 37ನೇ ಸಮ್ಮೇಳನಾಧ್ಯಕ್ಷತೆಯಿಂದ ಹೇಳಿದರು.
ಆ ಭಾಷಣದಲ್ಲಿ ಅವರು, “ಸಾಹಿತ್ಯದಲ್ಲಿ ಏಕರೂಪ ಕನ್ನಡ ಅಗತ್ಯ ಎಂದರೆ, ನಿಘಂಟು ರಚನೆಯ ವಿಸ್ತರಣೆ ಜನನುಡಿಯಿಂದ ಆಗಬೇಕು” ಎಂದರು.

“ನಮ್ಮ ಕನ್ನಡ ಜನಗಳ ಆಡುಭಾಷೆ ಒಂದೊಂದು ತೆರನಾಗಿದೆ. ಆದರೆ, ನಾವು ಬರೆಯುವುದು ಜನಕ್ಕೆ ತಿಳಿಯ ಬೇಕಾದಲ್ಲಿ ನಾವು ಭಾಷೆಯ ಏಕರೂಪತೆಗೆ ಗಮನ ಕೊಡಬೇಕಾಗುತ್ತದೆ. ಇಂದು ಮೈಸೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ ಎಂದು ಹೇಳುವ ಸಂಪ್ರದಾಯ ನಮ್ಮ ಬರವಣಿಗೆಯಿಂದಾಗಿ ಬಂದುಬಿಟ್ಟಿದೆ. ಅಲ್ಲಲ್ಲಿನ ಸ್ಥಳೀಕ ಗ್ರಾಮ್ಯಪದಗಳನ್ನು ಹಟದಿಂದ, ಪುಸ್ತಕಗಳಲ್ಲಿ ತುಂಬಿಸುವ ಪ್ರಯತ್ನದಿಂದ, ಯಾವ ದೇವರಿಗೆ ಪ್ರೀತಿಯೋ ನಾನು ಕಾಣೆ. ಇರುವುದನ್ನು ಎಲ್ಲ ಭಾಗದ ಕನ್ನಡಿಗರಿಗೂ ಅರ್ಥವಾಗುವ ರೀತಿಯಲ್ಲಿ ಸಾಮಾನ್ಯವಾದ ಒಂದು ಭಾಷೆಯ ರೂಪ ಬೆಳೆಯುವಂತೆ ನಾವು ಮಾಡಬೇಡವೆ?” ಎಂದು ಹೇಳಿದ ಕಾರಂತರೇ ಮುಂದುವರಿದು, “ನಾವು ಮಾಡುತ್ತಿರುವುದು ಕನ್ನಡ-ಕನ್ನಡ ನಿಘಂಟನ್ನು. ಇದಕ್ಕೆ ಶಬ್ದಗಳ ಆಯ್ಕೆಗೆ ಆಧಾರ, ಹಳಗನ್ನಡ, ಹೊಸಗನ್ನಡ ಗ್ರಂಥಗಳು, ಇಷ್ಟೇ ನಮ್ಮ ಶಬ್ದಕೋಶದ ಮಿತಿಯಾದರೆ, ಅದು ತುಂಬ ಖೇದದ ಸಂಗತಿಯೇ ಸರಿ. ಕನ್ನಡ ಬದುಕಿರುವುದು ಗ್ರಂಥಗಳಲ್ಲಿ ಮಾತ್ರವಲ್ಲ, ಕವಿಗಳಲ್ಲಿ, ಕಾವ್ಯಗಳಲ್ಲಿ ಮಾತ್ರವಲ್ಲ. ಅದು ಸಮುದಾಯದ ಭಾಷೆ. ಅಲ್ಲಿ ಅದು ನಿತ್ಯ ನಿತ್ಯ ಬದುಕಿದೆ. ನಾನು ಮಾಡಬೇಕಾದುದು ಮಾತೃಭಾಷೆಯ ನಿಘಂಟನ್ನಲ್ಲ, ಜೀವಂತ ಭಾಷೆಯ ನಿಘಂಟನ್ನು, ಜೀವಂತ ಭಾಷೆಯು ಜನಜೀವನದಲ್ಲಿ ಬದಲಾಗುತ್ತಲೇ ಇರುತ್ತದೆ. ಗ್ರಂಥಗಳಿಗಿರುವ ಹತ್ತು
ಪಾಲು ಹೆಚ್ಚಿನ ಮನ್ನಣೆ, ಜನಜೀವನ ಕನ್ನಡಕ್ಕೆ ಸಲ್ಲಬೇಕು” ಎನ್ನುತ್ತಾರೆ.

ಮಂಡ್ಯದಲ್ಲಿ ನಡೆದ ಮೊದಲ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಜಯದೇವಿತಾಯಿ ಲಿಗಾಡೆ (48ನೇ ಸಮ್ಮೇಳನ, 1974) ಅವರು, “ಒಮ್ಮೊಮ್ಮೆ ಈ ಭಾಷಾವಾರು ಪ್ರಾಂತ ರಚನೆಯಾದದ್ದು ತಪ್ಪಾಯಿತೇನೋ ಎನ್ನುವ ವಿಚಾರ ನನ್ನಲ್ಲಿಯೂ ಸುಳಿದು ಹೋಗುತ್ತದೆ. ದೇಶದಲ್ಲಿ ಇಂಥ ಒಂದು ಪರಿಸ್ಥಿತಿಯುಂಟಾಗಲು ಮೂಲ ಕಾರಣ ಭಾಷಾ ದುರಭಿಮಾನ ಮತ್ತು ರಾಷ್ಟ್ರೀಯ ಮನೋಭಾವದ ಕೊರತೆ. ಈ ಭಾಷಾ ಪ್ರಾಂತಗಳ ರಥವನ್ನು ಸರಿಯಾದ ದಾರಿಗೆ ತಿರುಗಿಸಿ ಮುನ್ನಡೆಸಬೇಕಾಗಿದೆ” ಎಂದು ಕೂಡ ಹೇಳಿ ಕೊರಗಿದ್ದುಂಟು. ಅ ನಡೆದ 63ನೇ (1994, ಮಂಡ್ಯದ 2ನೇ) ಸಮ್ಮೇಳನಾಧ್ಯಕ್ಷ ಚದುರಂಗ ಅವರು, “ಕನ್ನಡ ಸಾಹಿತ್ಯ ಪರಿಷತ್ತನ್ನು ಒಳಗೊಂಡಂತೆ ಎಲ್ಲಾ ಪ್ರಾಧಿಕಾರಗಳು, ವಿಶ್ವವಿದ್ಯಾಲಯಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾಹಿತ್ಯ, ಲಲಿತಕಲೆ, ನಾಟಕ, ಜಾನಪದ, ಸಂಗೀತ ಇವುಗಳಿಗೆ ಸಂಬಂಧಪಟ್ಟ ವಿವಿಧ ಅಕಾಡೆಮಿಗಳು ಎಲ್ಲವನ್ನೂ ಒಂದು ಸಮಗ್ರ ನೀಲನಕ್ಷೆಯ ಚೌಕಟ್ಟಿ ನಲ್ಲಿ ಕೆಲಸ ಮಾಡುವಂತೆ ನಿಯೋಜಿಸಿದರೆ ಸಂಪನ್ಮೂಲಗಳನ್ನು ಹೆಚ್ಚು ಫಲಪ್ರದವಾಗಿ ಬಳಸುವುದಕ್ಕೆ ಅನುಕೂಲವಾಗುತ್ತದೆ.

ಅಂದರೆ ಕನ್ನಡ ಅಭಿವೃದ್ಧಿಗೆ ಸರಕಾರವು ಸಮಗ್ರ ಯೋಜನೆಯನ್ನು ತಯಾರಿಸುವುದು ಅತ್ಯವಶ್ಯಕವಾಗಿದೆ”
ಎಂದು ಕಿವಿಮಾತು ಹೇಳಿದ್ದುಂಟು. ಹುಡುಕುತ್ತಾ ಹೋದರೆ ಇಂಥ ನೂರಾರು ಸ್ವಾರಸ್ಯಗಳು ನಮ್ಮ ಹಿಂದಿನ ಸಮ್ಮೇಳನಾಧ್ಯಕ್ಷರುಗಳ ಭಾಷಣಗಳಲ್ಲಿ ಸಿಗುತ್ತವೆ. ಈ ಸಲ ಗೊ.ರು. ಚನ್ನಬಸಪ್ಪ ಅವರ ಭಾಷಣದಲ್ಲೂ ಏನಿದ್ದೀತು ಅಂತ ನೋಡೋಣ.

ಇದನ್ನೂ ಓದಿ: Harish Kera Column: ಇದು ಬರೀ ಬಾಳೆಹಣ್ಣಲ್ಲವೋ ಅಣ್ಣ!