Sunday, 11th May 2025

Dr Vijay Darda Column: ಜನರ ಹೃದಯ ಆವರಿ ಸಿಕೊಂಡಿರುವ ರಾಜ್‌ ಸಾಹೇಬ್‌ !

ಸಂಗತ

ಡಾ.ವಿಜಯ್‌ ದರಡಾ

ನೀವು ಯಾವತ್ತಾದರೂ ಚಿತ್ರಗಳು ಮಾತನಾಡುವುದನ್ನು ನೋಡಿದ್ದೀರಾ? ಎಂದು ರಾಜ್ ಕಪೂರ್ ಕೇಳಿದರು. ಅವು ಮಾತನಾಡದೆ ಇದ್ದರೆ ನಾವೇಕೆ ಇಟ್ಟುಕೊಳ್ಳಬೇಕು? ಎಂದು ನಾನು ಕೇಳಿದೆ. ಇನ್ನೊಮ್ಮೆ ಅವರು ಹೇಳಿದ ಮಾತು ಯಾವತ್ತೂ ಮರೆಯಲಾರೆ. ‘ಎಲ್ಲರೂ ಊಟ ಮಾಡುತ್ತಾರೆ. ಆದರೆ ಖುಷಿಯಿಂದ ಊಟ ಮಾಡುತ್ತಾರೋ, ಕಣ್ಣೀರಿಡುತ್ತಾ ಉಣ್ಣುತ್ತಾರೋ ಎಂಬುದು ಮುಖ್ಯ’.

ಶಾಲೆಯಲ್ಲಿ ನನಗೊಬ್ಬ ಗೆಳೆಯನಿದ್ದ. ಅವನ ಹೆಸರು ಭಾವು ದೇಶಮುಖ್. ಜಿಲ್ಲಾಧಿಕಾರಿಯ ಮಗ. ಈಗ ಅವನು ಡಾಕ್ಟರ್. ಚಿಕ್ಕವನಿದ್ದಾಗ ಅವನಿಗೆ ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಪತ್ರ ಬರೆಯುವ ಹವ್ಯಾಸವಿತ್ತು. ಆ ಕಾಲದಲ್ಲಿ ಹಾಗೆ ಯಾರಾದರೂ ಪತ್ರ ಬರೆದರೆ ಪ್ರಸಿದ್ಧರು ಅದಕ್ಕೆ ಉತ್ತರ ಬರೆಯುತ್ತಿದ್ದರು. ಭಾವು ಒಮ್ಮೆ ರಾಜ್ ಕಪೂರ್‌ಗೆ ಪತ್ರ ಬರೆದಿದ್ದ. ಅದಕ್ಕೆ ಬಂದ ಸ್ವೀಕೃತಿ ಪತ್ರವನ್ನು ನನಗೆ ಹೆಮ್ಮೆಯಿಂದ ತೋರಿಸಿದ್ದ. ಅದನ್ನು ನೋಡಿ ನನಗೂ ಆಸೆ ಯಾಗಿತ್ತು- ಒಮ್ಮೆಯಾದರೂ ನಾನು ರಾಜ್ ಕಪೂರ್‌ರನ್ನು ಭೇಟಿಯಾಗಿ ಮಾತನಾಡಬೇಕು ಅಥವಾ ಕೊನೆಯ ಪಕ್ಷ ಒಮ್ಮೆ ಅವರನ್ನು ಪ್ರತ್ಯಕ್ಷವಾಗಿ ನೋಡಬೇಕು! ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಅವರ ಬಗ್ಗೆ ಅಧ್ಯಾಯವೊಂದು ದಾಖಲಾಗಲಿದೆ ಎಂಬ ಯಾವುದೇ ಕಲ್ಪನೆ ಆಗ ನನಗೆ ಇರಲಿಲ್ಲ.

ಈಗ ರಾಜ್ ಕಪೂರ್ ಅವರ ಜನ್ಮಶತಮಾನೋತ್ಸವ ಸಮಾರಂಭಗಳು ನಡೆಯುತ್ತಿವೆ. ನನಗೆ ಆ ಕಾಲದ ಘಟನೆಗಳು
ಒಂದೊಂದಾಗಿ ನೆನಪಾಗುತ್ತಿವೆ. ಅವೆಲ್ಲ ನಿನ್ನೆ ಮೊನ್ನೆ ನಡೆದಿವೆಯೇನೋ ಎಂಬಷ್ಟು ಹಸಿರಾಗಿವೆ!

ಆ ದಿನಗಳಲ್ಲಿ ನಾನು ನಾಲ್ವರು ನಟರಿಗೆ ಬಹುದೊಡ್ಡ ಅಭಿಮಾನಿಯಾಗಿದ್ದೆ. ರಾಜ್ ಕಪೂರ್, ದೇವಾನಂದ್, ದಿಲೀಪ್ ಕುಮಾರ್ ಮತ್ತು ಸುನಿಲ್ ದತ್ ನನಗೆ ಆರಾಧ್ಯ ದೈವದಂತಿದ್ದರು. ಅದರಲ್ಲೂ ರಾಜ್ ಕಪೂರ್ ಮತ್ತು ದೇವಾನಂದ್ ಬಗ್ಗೆ ನನ್ನಲ್ಲೊಂದು ವಿಶೇಷ ಹುಚ್ಚಿತ್ತು! ಕಾಲೇಜು ದಿನಗಳಲ್ಲಿ ರಾಜ್ ಕಪೂರ್‌ರನ್ನು ಖುದ್ದಾಗಿ ನೋಡುವ ಅವಕಾಶ ಲಭಿಸಿತು. ‘ಮೇರಾ ನಾಮ್ ಜೋಕರ್’ ಸಿನಿಮಾದ ‘ಜೀನಾ ಯಹಾ ಮರ್‌ನಾ ಯಹಾ’ ಹಾಡಿನ ಚಿತ್ರೀಕರಣವನ್ನು ವೀಕ್ಷಿಸಲು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಆಹ್ವಾನ ದೊರಕಿತ್ತು. ಹಾಗೆ ಅಲ್ಲಿಗೆ ಹೋದವ ರಲ್ಲಿ ನಾನೂ ಒಬ್ಬನಾಗಿದ್ದೆ. ಸಾಕಷ್ಟು ಸಮೀಪದಿಂದ ನನ್ನ ನೆಚ್ಚಿನ ನಟನನ್ನು ನೋಡಿ ಹೃದಯ ಖುಷಿಯಿಂದ ತುಂಬಿತ್ತು. ಆಗ ಅವರನ್ನು ಭೇಟಿಯಾಗಿ ಮಾತನಾಡಲು ಅವಕಾಶ ಲಭಿಸಿರಲಿಲ್ಲ.

ಆದರೆ ಕೆಲವೇ ವರ್ಷಗಳಲ್ಲಿ ಅವರನ್ನು ಭೇಟಿಯಾಗುವ ಅದೃಷ್ಟ ಹುಡುಕಿಕೊಂಡು ಬಂತು. ಆಗ ನಾನು ತರಬೇತಿ ನಿರತ ಪತ್ರಕರ್ತನಾಗಿದ್ದೆ. ‘ಮಾಧುರಿ’ ಎಂಬ ಪ್ರಸಿದ್ಧ ಸಿನಿಮಾ ನಿಯತಕಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಭೇಟಿಗೆ ಮನವಿ ಮಾಡಿ ರಾಜ್ ಸಾಹೇಬ್‌ಗೆ ಪತ್ರವೊಂದನ್ನು ಬರೆದಿದ್ದೆ. ನನಗೆ ಅಚ್ಚರಿಯಾಗುವಂತೆ ಅವರು ಒಪ್ಪಿಯೇ ಬಿಟ್ಟರು. ತಮ್ಮ ಮನೆಗೇ ಬರುವಂತೆ ಸೂಚನೆ ಕಳುಹಿಸಿದರು. ನಾನು ಹೋದಾಗ ಆತ್ಮೀಯವಾಗಿ ಬರಮಾಡಿ ಕೊಂಡರು. ಮನೆಯೊಳಗೆ ಪ್ರವೇಶಿಸಿದಾಗ ಅವರು ಬೆತ್ತದ ಚಾಪೆಯ ಮೇಲೆ ಕುಳಿತು, ಎದುರಿಗೆ ರೈಟಿಂಗ್ ಬೋರ್ಡ್ ಇರಿಸಿಕೊಂಡು, ಪೆನ್ನು ಹಿಡಿದು, ಪಕ್ಕದಲ್ಲಿ ಇಂಕ್ ಪಾಟ್ ಇಟ್ಟುಕೊಂಡಿದ್ದರು. ಲುಂಗಿ-ಕುರ್ತಾ ಧರಿಸಿದ್ದರು. ಅವರ ಹಿಂದೆ ನರ್ಗಿಸ್ ಜತೆಗಿರುವ ಸುಂದರವಾದ ಫೋಟೋ ಇತ್ತು. ಅದನ್ನು ನೋಡುತ್ತಾ ನಾನು ಕಳೆದುಹೋಗಿದ್ದೆ.

ಅವರೇ ನನ್ನನ್ನು ಎಚ್ಚರಿಸಿ ಈ ಲೋಕಕ್ಕೆ ಮರಳಿ ಕರೆಯುವಂತೆ, “ಏನಿದೆ ಆ ಚಿತ್ರದಲ್ಲಿ? ನನ್ನ ಕಡೆಗೆ ನೋಡಿ. ಯಾವತ್ತಾದರೂ ನಿಮಗೆ ಚಿತ್ರಗಳು ಮಾತನಾಡುವುದು ಕಾಣಿಸಿದೆಯಾ” ಎಂದು ಕೇಳಿದರು. ನಾನು ಅದಕ್ಕೆ, “ಚಿತ್ರಗಳು ಮಾತನಾಡದೆ ಇದ್ದರೆ ನಾವೇಕೆ ಅವುಗಳನ್ನು ಇಟ್ಟುಕೊಳ್ಳುತ್ತೇವೆ?” ಎಂದು ಕೇಳಿದ್ದೆ. ಹಾಗೆ ನಮ್ಮ ಮಾತುಕತೆ ಆರಂಭವಾಯಿತು. “ಹೇಗೆ ನೀವು ಅಷ್ಟೊಂದು ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಿದಿರಿ?” ಎಂದು ಕೇಳಿದೆ. ಥಟ್ಟನೆ ಬಂದ ಅವರ ಉತ್ತರ “ನೀವು ಹೇಗೆ ಸುದ್ದಿ ಬರೆಯುತ್ತೀರೋ ಹಾಗೆ ನಾವು ಸಿನಿಮಾ ಮಾಡುತ್ತೇವೆ”. ಆಗ ನಾನು, “ಸುದ್ದಿ ಯಾವತ್ತೂ ನೈಜ ಘಟನೆಗಳನ್ನು ಆಧರಿಸಿರುತ್ತದೆ” ಎಂದೆ. ಅದಕ್ಕೆ ಅವರು, “ನಾವು ಕೂಡ ಸಮಾಜದಲ್ಲಿ ಏನು ನಡೆಯುತ್ತದೆಯೋ ಅದನ್ನೇ ಸಿನಿಮಾದಲ್ಲಿ ತೋರಿಸುತ್ತೇವೆ. ‘ಆವಾರಾ’ ಸಿನಿಮಾವನ್ನೇ ನೋಡಿ. ಅದು ಸಮಾಜದಲ್ಲಿರುವ ಒಂದು ರೀತಿಯ ವಿಷಾದ ಅಥವಾ ನೋವಿನ ಕುರಿತಾಗಿದೆ. ‘ಜಿಸ್ ದೇಶ್ ಮೆ ಗಂಗಾ ಬೆಹತಿ ಹೈ’ ಸಿನಿಮಾದಲ್ಲಿ ಆ ಕಾಲದ ಘಟನೆಗಳೇ ಇವೆ.

ಸಿನಿಮಾಗಳು ಜನರ ಬದುಕಿನ ಜತೆಗೆ ಸಂವಾದ ನಡೆಸಬೇಕು. ನೀವು ನನ್ನ ಸಹೋದ್ಯೋಗಿ ಶೈಲೇಂದ್ರರನ್ನು ಭೇಟಿ ಯಾಗಿದ್ದೀರಾ? ಅವರಿಗೆ ಎಂಥ ಸಿನಿಮಾಗಳು ಯಶಸ್ವಿಯಾಗುತ್ತವೆ ಎಂಬುದು ತುಂಬಾ ಚೆನ್ನಾಗಿ ಗೊತ್ತು. ಯಾರಿಗೆ ನಿಮ್ಮ ದೃಷ್ಟಿಕೋನ ಅರ್ಥವಾಗುತ್ತದೆಯೋ ಅವರು ಮಾತ್ರ ನಿಮಗೆ ಸ್ನೇಹಿತರಾಗಲು ಸಾಧ್ಯ. ಹಾಗೆಯೇ ನನ್ನ ಟೀಮ್‌ನವರು ನನ್ನ ಚಿಂತನೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.

ಹಾಗಾಗಿ ಒಳ್ಳೆಯ ಸಿನಿಮಾಗಳು ಬರುತ್ತಿವೆ” ಎಂದು ಹೇಳಿದರು. ಮಾತಿನ ನಡುವೆ “ನೀವು ಎಲ್ಲಿ ವಾಸಿಸುತ್ತೀರಿ” ಎಂದು ಕೇಳಿದರು. ನಾನು ಚರ್ಚ್‌ಗೇಟ್ ಎಂದೆ. “ಹಾಗಿದ್ದರೆ ಒಟ್ಟಿಗೇ ಹೋಗೋಣ. ನಾನೂ ಆ ಕಡೆಯೇ ಹೋಗುತ್ತಿ
ದ್ದೇನೆ. ದಾರಿಯಲ್ಲಿ ಮಾತನಾಡುತ್ತಾ ಹೋಗಬಹುದು” ಅಂದರು. ನಂತರ ಇಬ್ಬರೂ ಹೊರಟೆವು. ದಾರಿಯಲ್ಲಿ
“ನನಗೆ ನಿಮ್ಮ ತಂದೆ ದರಡಾಜೀ ಗೊತ್ತು. ನನ್ನ ತಂದೆ ಪೃಥ್ವಿರಾಜ್ ಕಪೂರ್ ಹಾಗೂ ನಿಮ್ಮ ಕುಟುಂಬದ ಮಧ್ಯೆ
ಬಹಳ ದೀರ್ಘವಾದ ಒಡನಾಟವಿದೆ” ಅಂದರು. ಆಗ ನಾನು, “ಹೌದು. ನನ್ನ ತಂದೆಯವರು ಒಮ್ಮೆ ಪೃಥ್ವಿರಾಜ್
ಕಪೂರ್‌ರನ್ನು ಯವತ್ಮಾಲ್‌ನಲ್ಲಿ ಧ್ವಜಾರೋಹಣಕ್ಕೆ ಕರೆಸಿ

ದ್ದರು. ಅವರು ನಾಟಕದ ತಂಡದೊಂದಿಗೆ ಬಂದಿದ್ದರು. ನನ್ನಲ್ಲಿ ಅದರ ಫೋಟೋಗಳಿವೆ” ಎಂದೆ.

ಅದನ್ನು ಕೇಳಿ ರಾಜ್ ಸಾಹೇಬ್ ಖುಷಿಯಾದರು. ಬಹುಶಃ ನಮ್ಮ ಕುಟುಂಬಗಳ ನಡುವೆ ಇದ್ದ ಒಡನಾಟದ ಕಾರಣದಿಂದಲೇ ನನ್ನಂಥ ಯುವ ಪತ್ರಕರ್ತನಿಗೆ ಅವರು ಭೇಟಿಗೆ ಅವಕಾಶ ನೀಡಿದ್ದರು ಎಂಬುದು ಆಗ ನನಗೆ ಹೊಳೆಯಿತು. ಕಾರಿನಲ್ಲೂ ಅವರೊಂದು ನೋಟ್‌ಪ್ಯಾಡ್ ಹಿಡಿದುಕೊಂಡಿದ್ದರು. ಮಾತಿನ ನಡುವೆ ಒಮ್ಮೊಮ್ಮೆ ಮೌನವಾಗಿಬಿಡುತ್ತಿದ್ದರು. ಕೆಲ ಕ್ಷಣಗಳ ಬಳಿಕ ಏನನ್ನೋ ಬರೆದುಕೊಳ್ಳುತ್ತಿದ್ದರು. ಧ್ಯಾನ, ಬರವಣಿಗೆ ಮತ್ತು ಯೋಚನೆಯ ನಡುವೆ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು.

“ನೀವೊಂದು ಬಹುಮುಖ ಪ್ರತಿಭೆ. ನಿಮ್ಮ ಬದುಕು ವೈವಿಧ್ಯಮಯ ಸಂಗತಿಗಳಿಂದ ತುಂಬಿದೆ. ನಟನೆ, ಗಾಯನ,
ಸಂಗೀತ ಸಂಯೋಜನೆ ಹೀಗೆ ಬೇರೆ ಬೇರೆ ರೀತಿಯ ಕೆಲಸಗಳನ್ನೆಲ್ಲಾ ಅಚ್ಚುಕಟ್ಟಾಗಿ ಮಾಡುತ್ತೀರಿ. ಇದು ಹೇಗೆ
ಸಾಧ್ಯ?” ಎಂದು ನಾನು ಕೇಳಿದ್ದೆ. ಅದಕ್ಕೆ ಅವರು ತತ್ವಜ್ಞಾನಿಯಂತೆ ಉತ್ತರಿಸಿದ್ದರು.

“ನೀವು ನಿಮ್ಮ ಬದುಕಿಗೆ ಬಣ್ಣ ತುಂಬಿಕೊಳ್ಳುತ್ತೀರೋ ಅಥವಾ ದುಃಖದ ಹನಿಗಳನ್ನು ತುಂಬುತ್ತೀರೋ ಎಂಬುದು ನಿಮ್ಮ ಕೈಲಿದೆ. ಪ್ರತಿದಿನ ಊಟ ಮಾಡುವಾಗ ಮನಸ್ಸಿನಲ್ಲೇ ಹಾಡು ಗುನುಗುತ್ತಾ ಖುಷಿಯಿಂದ ತುತ್ತು ಬಾಯಿಗಿ ಡುತ್ತೀರೋ ಅಥವಾ ಅಳುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತೀರೋ ನಿಮಗೆ ಬಿಟ್ಟದ್ದು. ಊಟ ಮಾಡುವಾಗ ಕಣ್ಣೀರು ಹಾಕುವ ಶ್ರೀಮಂತರನ್ನು ನಾನು ನೋಡಿದ್ದೇನೆ. ಹಾಗೆಯೇ, ಬಹಳ ಖುಷಿಯಿಂದ ಊಟ ಮಾಡುವ ಕಡುಬಡವ ರನ್ನೂ ನೋಡಿದ್ದೇನೆ” ಎಂದು ಒಗಟಾಗಿ ಉತ್ತರಿಸಿದರು.

“ನಿಮ್ಮ ಕುಟುಂಬದಲ್ಲಿ ಮಹಿಳೆಯರು ಏಕೆ ನಟನೆಯ ವೃತ್ತಿಗೆ ಬಂದಿಲ್ಲ?” ಎಂದು ಕೇಳಿದೆ. ಅದಕ್ಕೆ ಅವರು, “ನಾನು ಚಿಕ್ಕವನಿದ್ದಾಗ ಚಿತ್ರರಂಗಕ್ಕೆ ಬರುವುದು ಒಳ್ಳೆಯ ವಿಷಯವಾಗಿರಲಿಲ್ಲ. ಹುಡುಗರು ಚಿತ್ರರಂಗಕ್ಕೆ ಬಂದರೆ ಕೆಟ್ಟು ಹೋಗುತ್ತಾರೆ ಎಂದೇ ಎಲ್ಲರೂ ಹೇಳುತ್ತಿದ್ದರು. ಹೀಗಾಗಿ ಹೆಣ್ಣುಮಕ್ಕಳು ಚಿತ್ರರಂಗಕ್ಕೆ ಹೋಗುವುದನ್ನಂತೂ
ಸಂಪ್ರದಾಯಸ್ಥ ಕುಟುಂಬದವರು ಒಪ್ಪುತ್ತಿರಲಿಲ್ಲ. ನಾವು ಸಿನಿಮಾಗಳಲ್ಲಿ ನಟಿಸುವುದು ನಮ್ಮ ತಾತನಿಗೆ ಇಷ್ಟವಿರಲಿಲ್ಲ” ಎಂದು ಹೇಳಿದರು.

ಮಾತಿನ ನಡುವೆ ನಾವು ‘ಲೋಕಮತ್’ ಪತ್ರಿಕೆಯ ನಾಗ್ಪುರ ಆವೃತ್ತಿಯ ಬಗ್ಗೆ ಚರ್ಚಿಸಿದೆವು. ರಾಜ್ ಕಪೂರ್ ಅವರು “ನನ್ನ ಸಹೋದರಿ ಊರ್ಮಿಳಾರನ್ನು ಸಿಯಾಲ್ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ದೇವೆ, ಹೀಗಾಗಿ ನಾಗ್ಪುರಕ್ಕೆ ಕೆಲ ಮದುವೆಗಳಿಗೆ ಹೋಗಿದ್ದೆ” ಎಂದರು. ಅವರ ಪತ್ನಿ ಕೃಷ್ಣಾ ಜಬಲ್‌ಪುರದವರಾದರೂ ನಾಗ್ಪುರದಲ್ಲಿ ಕೆಲ ಕಾಲ ನೆಲೆಸಿದ್ದರಂತೆ. “ನನ್ನ ತಂದೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜಬಲ್‌ಪುರದ ಜೈಲಿನಲ್ಲಿದ್ದರು” ಎಂದು ಹೇಳಿದೆ. ಅವರು ಜಬಲ್‌ಪುರದ ನ್ಯೂ ಎಂಪೈರ್ ಸಿನಿಮಾ ಹಾಲ್ ಬಗ್ಗೆ ಮಾತನಾಡಿದರು. ಅದು ಅವರ ಸಂಬಂಧಿ ಕರಿಗೆ ಸೇರಿದ್ದಂತೆ. ಪ್ರಸಿದ್ಧ ಚಿತ್ರನಟರಾದ ಪ್ರೇಮನಾಥ್, ರಾಜೇಂದ್ರನಾಥ್ ಮತ್ತು ನರೇಂದ್ರನಾಥ್ ಅವರು ರಾಜ್ ಕಪೂರ್‌ಗೆ ಭಾವಂದಿರು.

ಪ್ರಯಾಣದ ನಡುವೆ ಚೌಪಟ್ಟಿಯ ಭಾರತೀಯ ವಿದ್ಯಾಭವನದ ಸಮೀಪ ಪಾನ್ ಅಂಗಡಿಯೊಂದರ ಬಳಿ
ಕಾರು ನಿಂತಿತು. ತಕ್ಷಣ ಅಂಗಡಿಯವನು ರಾಜ್ ಕಪೂರ್ ಗಾಗಿ ಪಾನ್ ತಯಾರಿಸಿ ತಂದುಕೊಟ್ಟ. ಅದನ್ನಿವರು
ಬಾಯಿಗಿಟ್ಟುಕೊಂಡರು. ಕೆಲ ಪಾನ್‌ಗಳನ್ನು ಪಾರ್ಸೆಲ್ ಕಟ್ಟಿಸಿಕೊಂಡರು. ನಂತರ ಕಾರು ಚರ್ಚ್‌ಗೇಟ್ ಬಳಿ ಯಿರುವ ಗೇಲಾರ್ಡ್ ಹೋಟೆಲ್ ಬಳಿ ನಿಂತಿತು. ರಾಜ್ ಕಪೂರ್ ಇಳಿದು ಒಳಗೆ ಹೋದರು. ನಾನೂ ಅವರನ್ನು ಹಿಂಬಾಲಿಸಿದೆ. ಆ ಹೋಟೆಲ್ ಹೇಗಿದೆ ಎಂಬುದನ್ನು ನನಗೆ ನೋಡಬೇಕಿತ್ತು. ಮೂಲೆಯಲ್ಲೊಂದು ಟೇಬಲ್ ಮುಂದೆ ಜೈಕಿಶನ್ ಕುಳಿತಿದ್ದರು. ರಾಜ್ ಕಪೂರ್ ಆಗಾಗ ಇಲ್ಲಿಗೆ ಟೀ ಕುಡಿಯಲು ಬರುತ್ತಾರೆಂದು ಅಲ್ಲಿ ಗೊತ್ತಾಯಿತು. ಅಲ್ಲೇ ಅವರು ನನಗೆ ಆರ್‌ಕೆ ಸ್ಟುಡಿಯೋದ ಹೋಳಿ ಆಚರಣೆಗೆ ಆಹ್ವಾನ ನೀಡಿದರು. ಆದರೆ ಯಾವತ್ತೂ ನನಗೆ ಹೋಗಲು ಸಾಧ್ಯವಾಗಲಿಲ್ಲ.

ರಾಜ್ ಸಾಹೇಬ್ ಕುರಿತ ಇನ್ನೊಂದು ಘಟನೆ ನೆನಪಾಗುತ್ತದೆ. ನನ್ನ ತಂದೆಯವರು ಮಹಾರಾಷ್ಟ್ರದ ಔದ್ಯೋಗಿಕ ಸಚಿವರಾಗಿದ್ದಾಗ ರಾಜ್ ಸಾಹೇಬ್ ಒಮ್ಮೆ ಅವರಲ್ಲಿಗೆ ಬಂದು, ತಮಗೆ ಮನೆ ಕಟ್ಟಲು ಸಿಮೆಂಟ್ ಸಿಗುತ್ತಿಲ್ಲ ಎಂದು ಹೇಳಿದ್ದರಂತೆ. ಆ ಕಾಲದಲ್ಲಿ ಸಿಮೆಂಟ್‌ಗೆ ಅಭಾವವಿತ್ತು. ಎ.ಆರ್.ಅಂತುಳೆಯವರು ಸಿಮೆಂಟ್ ವ್ಯಾಪಾರಕ್ಕೆ ಕೆಲ ನಿರ್ಬಂಧಗಳನ್ನು ವಿಧಿಸಿದ್ದರು. ರಾಜ್ ಕಪೂರ್ ಅವರು ಭಾರತದ ಸಾಂಸ್ಕೃತಿಕ ರಾಯಭಾರಿ ಯಾಗಿದ್ದರಿಂದ ನನ್ನ ತಂದೆಯವರು ಮುತುವರ್ಜಿ ವಹಿಸಿ, ತಮ್ಮ ವ್ಯಾಪ್ತಿಗೆ ಬಾರದಿದ್ದರೂ, ಅವರಿಗೆ ಸಿಮೆಂಟ್ ದೊರಕಿಸಿಕೊಟ್ಟಿದ್ದರು.

ಇವತ್ತಿಗೂ ರಷ್ಯಾ, ಜಪಾನ್, ಇಸ್ರೇಲ್‌ನಂಥ ದೇಶಗಳಲ್ಲಿ ರಾಜ್ ಕಪೂರ್‌ರನ್ನು ನೆನಪಿಸಿಕೊಳ್ಳುವ ಅಭಿಮಾನಿ ಗಳಿದ್ದಾರೆ. ಅಲ್ಮಾಟಿಯಲ್ಲಿ ಹೋಟೆಲ್‌ನ ಒಂದಿಡೀ ಮಹಡಿಗೆ ರಾಜ್ ಕಪೂರ್‌ರ ಹೆಸರಿಡಲಾಗಿದೆ. ರಾಜ್ ಸಾಹೇಬ್‌ಗೆ ಯವತ್ಮಾಲ್‌ಗೆ ಭೇಟಿ ನೀಡಬೇಕೆಂಬ ಆಸೆಯಿತ್ತು. ಆದರೆ ಅದು ಕೈಗೂಡಲಿಲ್ಲ. ರಿಷಿ ಕಪೂರ್‌ಗೆ ಈ ವಿಷಯ ತಿಳಿದಿತ್ತು. ಹೀಗಾಗಿ ಅವರು ನಂತರದ ವರ್ಷಗಳಲ್ಲಿ ಯವತ್ಮಾಲ್‌ನ ಕಬಡ್ಡಿ ಕ್ರೀಡಾಕೂಟವೊಂದಕ್ಕೆ ಆಗಮಿಸಿ ಶುಭ
ಹಾರೈಸಿದ್ದರು. ರಣಬೀರ್ ಕಪೂರ್ ಕೂಡ ತಮ್ಮ ಕುಟುಂಬದ ಈ ಪರಂಪರೆಯನ್ನು ಮುಂದುವರಿಸಿ ಒಂದು ದಿನ
ಯವತ್ಮಾಲ್‌ಗೆ ಭೇಟಿ ನೀಡುತ್ತಾರೆಂಬ ನಂಬಿಕೆ ನನಗಿದೆ.

ರಣಬೀರ್ ಕಪೂರ್‌ರಲ್ಲಿ ನನಗೆ ರಾಜ್ ಸಾಹೇಬ್ ಕಾಣಿಸುತ್ತಾರೆ. ದೇಶ ಕಂಡ ಅತ್ಯದ್ಭುತ ನಟ ರಾಜ್ ಸಾಹೇಬರಿಗೆ ಇದೋ ನನ್ನ ಶ್ರದ್ಧಾಂಜಲಿ! ನಿಮ್ಮನ್ನು ನಾವು ಯಾವತ್ತೂ ಮರೆಯಲಾರೆವು!

(ಲೇಖಕರು ಹಿರಿಯ ಪತ್ರಿಕೋದ್ಯಮಿ)

ಇದನ್ನೂ ಓದಿ: Dr Vijay Darda Column: ವಿದೇಶಿ ಸಂಬಂಧದ ಹೊಸ ಸಮೀಕರಣಗಳು