ನವದೆಹಲಿ: ಕಾಂಗ್ರೆಸ್ ಸರ್ಕಾರ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡಿಕೊಂಡು ಬರುತ್ತಿದೆ. ಆದರೆ, ನಾವು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ (Amit Shah) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾಕಷ್ಟು ವರ್ಷಗಳಿಂದ ಮುಸ್ಲಿಂ ಸಹೋದರಿಯರಿಗೆ ಕಾಂಗ್ರೆಸ್ ಪಕ್ಷ ಅನ್ಯಾಯವನ್ನು ಮಾಡುತ್ತಾ ಬರುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಭಾರತದ ಶ್ರೇಷ್ಠ ಗ್ರಂಥವಾದ ಸಂವಿಧಾನ ಅಂಗೀಕಾರದ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸಭೆಯಲ್ಲಿ ಸುದೀರ್ಘವಾಗಿ ಮಾತನಾಡಿದ ಅಮಿತ್ ಶಾ, “ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಮಾಡುತ್ತಾ ಬರುತ್ತಿದೆ ಆದರೆ, ನಾವು ಎಂದಿಗೂ ಈ ರೀತಿ ಮಾಡಿಲ್ಲ. ಕಳೆದ ಸಾಕಷ್ಟು ವರ್ಷಗಳಿಂದ ವೋಟ್ ಬ್ಯಾಂಕ್ ರಾಜಕೀಯದ ಮೂಲಕ ಮುಸ್ಲಿಂ ತಾಯಂದಿರು ಹಾಗೂ ಸಹೋದರಿಯರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಆದರೆ, ನಾವು ಟ್ರಿಬಲ್ ತಲಾಖ್ ಅನ್ನು ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ನ್ಯಾಯವನ್ನು ದೊರಕಿಸಿಕೊಟ್ಟಿದ್ದೇವೆ,” ಎಂದು ಹೇಳಿದ್ದಾರೆ.
ಇದೇ ವೇಳೆ ಅಮಿತ್ ಶಾ ಪ್ರತಿ ಪಕ್ಷ ಕಾಂಗ್ರೆಸ್ ಅನ್ನು ಟೀಕಿಸಿದರು. ಅದರಲ್ಲಿಯೂ ವಿಶೇಷವಾಗಿ ನಾವು ಸಂವಿಧಾನವನ್ನು ಬದಲಾಯಿಸುತ್ತಿದ್ದೇವೆಂದು ಯುವ ಜನರ ಮುಂದೆ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.
“ನಮ್ಮ ಸಂವಿಧಾನದಲ್ಲಿ ಸಂವಿಧಾನವನ್ನು ಎಂದಿಗೂ ಬದಲಾಯಿಸಲಾಗದು. 368ನೇ ವಿಧಿಯು ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶವನ್ನು ಹೊಂದಿದೆ . ಆದರೆ, 54ರ ವಯಸ್ಸಿನ ನಾಯಕರೊಬ್ಬರು ನಾವು ಸಂವಿಧಾನವನ್ನು ಬದಲಾಯಿಸುತ್ತಿದ್ದೇವೆಂದು ಪದೇ-ಪದೆ ನಮ್ಮ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಸಂವಿಧಾನದ ಅಡಿಯಲ್ಲಿ ನಾವು 16 ವರ್ಷಗಳಲ್ಲಿ 22 ಬದಲಾವಣೆಗಳನ್ನು ಮಾಡಿದ್ದೇವೆ. ಆದರೆ, ಕಾಂಗ್ರೆಸ್ ತನ್ನ 55 ವರ್ಷಗಳ ಅಧಿಕಾರಾವಧಿಯಲ್ಲಿ 77 ಬದಲಾವಣೆಗಳನ್ನು ಮಾಡಿದೆ,” ಎಂದು ಅಮಿತ್ ಶಾ ಆರೋಪ ಮಾಡಿದ್ದಾರೆ.
ನಮ್ಮ ಪ್ರಜಾಪ್ರಭುತ್ವವು ಆಳವಾಗಿ ಬೇರೂರಿದೆ
“ಕಳೆದ 75 ವರ್ಷಗಳಲ್ಲಿ, ಅನೇಕ ರಾಷ್ಟ್ರಗಳು ಸ್ವತಂತ್ರವಾದ ಮತ್ತು ಹೊಸ ಆರಂಭಗಳನ್ನು ಹೊಂದಿದ್ದವು ಆದರೆ ಅಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲಿಲ್ಲ. ಆದರೆ ನಮ್ಮ ಪ್ರಜಾಪ್ರಭುತ್ವವು ಆಳವಾಗಿ ಬೇರೂರಿದೆ. ನಾವು ಒಂದು ಹನಿ ರಕ್ತವನ್ನು ಚೆಲ್ಲದೆ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ. ಬಹು ಸರ್ವಾಧಿಕಾರಿಗಳ ದುರಂಹಕಾರದಿಂದ ಈ ದೇಶದ ಜನರು ಪ್ರಜಾಸತ್ತಾತ್ಮಕವಾಗಿ ಒಡೆದು ಹೋಗಿದ್ದಾರೆ,” ಎಂದು ಅಮಿತ್ ಶಾ ಗುಡುಗಿದ್ದಾರೆ.
“ನಾವು ಎಂದಿಗೂ ಆರ್ಥಿಕವಾಗಿ ಸ್ವತಂತ್ರರಾಗಲು ಸಾಧ್ಯವಿಲ್ಲ ಎಂದು ಹೇಳಿದವರಿಗೆ ನಮ್ಮ ದೇಶದ ಜನರು ಮತ್ತು ನಮ್ಮ ಸಂವಿಧಾನವು ತಕ್ಕ ಉತ್ತರವನ್ನು ನೀಡಿದೆ. ಇಂದು ನಾವು 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಆ ಮೂಲಕ ನಾವು ಬ್ರಿಟನ್ನನ್ನು ಹಿಂದಿಕ್ಕಿದ್ದೇವೆ,” ಎಂದು ಅಮಿತ್ ಶಾ ತಿಳಿಸಿದ್ದಾರೆ.
ಯುವಕರಿಗೆ ಜ್ಞಾನವನ್ನು ಹೆಚ್ಚಿಸುತ್ತದೆ
“ಸಂಸತ್ತಿನ ಉಭಯ ಸದನಗಳಲ್ಲಿ ನಡೆದ ಚರ್ಚೆಗಳಿಂದ ದೇಶದ ಯುವಕರು ಶಿಕ್ಷಿತರಾಗಲು ನೆರವು ನೀಡುತ್ತದೆ. ಯಾವ ಪಕ್ಷವು ಸಂವಿಧಾನವನ್ನು ಗೌರವಿಸಿದೆ ಹಾಗೂ ಯಾವ ಪಕ್ಷ ಸಂವಿಧಾನಕ್ಕೆ ಗೌರವಿಸಿಲ್ಲ ಎಂಬುದು ಈ ಚರ್ಚೆಗಳಿಂದ ತಿಳಿಯಲಿದೆ. ಅಲ್ಲದೆ ವಿಶ್ವದ ಮುಂದೆ ಭಾರತ ಗಟ್ಟಿಯಾಗಿ ನಿಲ್ಲಲು ಅತ್ಯಂತ ಕಠಿಣ ಪರಿಶ್ರಮ ಪಟ್ಟಿರುವ ಸರ್ದಾರ್ ಪಟೇಲ್‌ಗೆ ಯಾವ ಪಕ್ಷ ಧನ್ಯವಾದ ಅರ್ಪಿಸಿಲ್ಲ ಎಂಬುದು ಕೂಡ ಇದರ ಮೂಲದ ದೇಶದ ಜನರಿಗೆ ತಿಳಿಯಲಿದೆ,” ಎಂದು ಅಮಿತ್ ಶಾ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: One Nation One Election: ʼಒಂದು ರಾಷ್ಟ್ರ ಒಂದು ಚುನಾವಣೆʼ ಪ್ರಸ್ತಾವನೆಯ ಮುಂದಿದೆ ಹಲವು ಸವಾಲು!