ಪ್ಯಾರಿಸ್: ಮಡಗಾಸ್ಕರ್(Madagascar) ಬಳಿಯ ಫ್ರೆಂಚ್ ಸಾಗರೋತ್ತರ ದ್ವೀಪ(French Overseas Island Territory) ಪ್ರದೇಶವಾದ ಮಯೊಟ್ಟೆಯಲ್ಲಿ(Mayotte) ಚಿಡೋ ಚಂಡಮಾರುತದಿಂದ ಉಂಟಾದ ವಿನಾಶದಿಂದ(Cyclone Chido Devastation) ನಾನು ಅತೀವವಾಗಿ ದುಃಖಿತನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಸಾಧ್ಯವಿರುವ ಎಲ್ಲ ನೆರವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಅವರು ತಮ್ಮ ಎಕ್ಸ್ ಪೋಸ್ಟ್ ಮೂಲಕ ತಿಳಿಸಿದ್ದಾರೆ.
Deeply saddened by the devastation caused by Cyclone Chido in Mayotte. My thoughts and prayers are with the victims and their families. I am confident that under President @EmmanuelMacron’s leadership, France will overcome this tragedy with resilience and resolve. India stands in…
— Narendra Modi (@narendramodi) December 17, 2024
ಫ್ರೆಂಚ್ ಹಿಂದೂ ಮಹಾಸಾಗರದ ಪ್ರದೇಶವಾದ ಮಯಟ್ಟೊನಲ್ಲಿ ಅಪ್ಪಳಿಸಿದ ಚಿಡೋ ಚಂಡಮಾರುತಕ್ಕೆ ಅಲ್ಲಿನ ಇಡೀ ಪ್ರದೇಶ ತತ್ತರಿಸಿ ಹೋಗಿದೆ. ಚಂಡಮಾರುತದಿಂದಾದ ಭಾರೀ ವಿನಾಶಕ್ಕೆ ಪ್ರಧಾನಿ ಮೋದಿ ಮಿಡಿದಿದ್ದಾರೆ. ಅಷ್ಟೇ ಅಲ್ಲದೆ, ಭಾರತ ದೇಶದಿಂದ ಸಹಾಯ ನೀಡಲು ಮುಂದಾಗಿದ್ದಾರೆ.
ಚಂಡಮಾರುತದ ಹೊಡೆತಕ್ಕೆ ಕನಿಷ್ಠ 14 ಜನರು ಸಾವಿಗೀಡಾಗಿರುವ ಬಗ್ಗೆ ವರದಿಯಾಗಿತ್ತು. ಆದರೆ ನಿನ್ನೆ(ಡಿ.16) ಸೈಕ್ಲೋನ್ ಹಾವಳಿಗೆ 1000ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಫ್ರೆಂಚ್ ಆಂತರಿಕ ಸಚಿವಾಲಯ ಮಾಹಿತಿ ಹಂಚಿಕೊಂಡಿದ್ದು,ಈ ಹಂತದಲ್ಲಿ ಸಾವಿನ ಸಂಖ್ಯೆ ಇಷ್ಟೇ ಇದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಸುಮಾರು ಒಂದು ಶತಮಾನದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಇದಾಗಿದೆ ಎಂಬ ಮಾಹಿತಿಯಿದೆ. ಸಾವಿನ ಸಂಖ್ಯೆ ಪ್ರಾಯಶಃ ಸಾವಿರಾರು ಇರಬಹುದು ಎಂದು ಹೇಳಲಾಗಿದೆಯೇ ವಿನಾ ಅದೇ ನಿಖರವಾದ ಸಂಖ್ಯೆ ಎಂದು ಈ ಹಂತದಲ್ಲಿ ಹೇಳಲು ಸಾಧ್ಯವಿಲ್ಲ ಎಂದು ಫ್ರೆಂಚ್ ಆಂತರಿಕ ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ. ಚಿಡೋ ಚಂಡಮಾರುತವು ಮಾಯೊಟ್ಟೆಗೆ ರಾತ್ರಿಯಿಡೀ ಅಪ್ಪಳಿಸಿದ್ದು, 200 ಕಿಮೀಗಿಂತಲೂ (124 mph) ಹೆಚ್ಚಿನ ವೇಗದ ಗಾಳಿಯಲ್ಲಿ ಮೆಟಿಯೊ-ಫ್ರಾನ್ಸ್ನ ವಸತಿ, ಸರ್ಕಾರಿ ಕಟ್ಟಡಗಳು ಮತ್ತು ಆಸ್ಪತ್ರೆಗಳನ್ನು ಧ್ವಂಸಗೊಳಿಸಿದೆ.
“ಪ್ರಸ್ತುತ ನಾವು ಎದುರಿಸುತ್ತಿರುವ ಪರಿಸ್ಥಿತಿ ನಿಜಕ್ಕೂ ದುರಂತ. ನೀವು ಪರಮಾಣು ಯುದ್ಧದ ನಂತರದ ಸ್ಥಿತಿ ಹೇಗಿರುತ್ತದೆ ಎಂದು ನೋಡಿದ್ದೀರಿ. ಈಗ ನಾವಿರುವ ಸ್ಥಿತಿಯೂ ಹಾಗೆಯೇ ಇದೆ. ನಮ್ಮ ನೆರೆಹೊರೆಯು ಸಂಪೂರ್ಣವಾಗಿ ಕಣ್ಮರೆಯಾಗಿರುವುದನ್ನು ನಾನು ನೋಡುತ್ತಿದ್ದೇನೆ” ಎಂದು ಮಯೊಟ್ಟೆಯ ರಾಜಧಾನಿಯ ಮಾಮೌಡ್ಟೌ ನಿವಾಸಿ ಮೊಹಮ್ಮದ್ ಇಸ್ಮಾಯೆಲ್ ದೂರವಾಣಿ ಕರೆ ಮೂಲಕ ರಾಯಿಟರ್ಸ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಇಂದು ಕೂಡ ಸೈಕ್ಲೋನ್ ಹೊಡೆತಕ್ಕೆ ಸಾಕಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಸಾಕಷ್ಟು ರಾಷ್ಟ್ರಗಳು ಸಹಾಯ ನೀಡುವುದಾಗಿ ತಿಳಿಸಿವೆ.
ಈ ಸುದ್ದಿಯನ್ನೂ ಓದಿ:Karnataka Weather: ರಾಜ್ಯದಲ್ಲಿ ಮೈ ಕೊರೆಯುವ ಚಳಿ; ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 8 ಡಿಗ್ರಿ ಸೆ. ದಾಖಲು!