Sunday, 11th May 2025

Allu Arjun: ಅಲ್ಲು ಅರ್ಜುನ್‌ಗೆ ಮತ್ತೆ ಬಂಧನದ ಭೀತಿ! ಸುಪ್ರೀಂ ಕೋರ್ಟ್‌ ಮೊರೆ ಹೋಗ್ತಾರಾ ಪೊಲೀಸರು ?

Allu Arjun

ಹೈದರಾಬಾದ್‌: ʼಪುಷ್ಪ 2ʼ ಚಿತ್ರದ ಪ್ರೀಮಿಯರ್‌ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ ಬಳಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಟಾಲಿವುಡ್‌ ನಟ ಅಲ್ಲು ಅರ್ಜುನ್‌ (Allu Arjun) ಅವರನ್ನು ಡಿಸೆಂಬರ್ 13ರಂದು ಬಂಧಿಸಲಾಗಿತ್ತು. ನಂತರ ಹೈಕೋರ್ಟ್‌ ಆದೇಶದ ಮೇಲೆ ಮಧ್ಯಂತರ ಜಾಮೀನು ನೀಡಲಾಗಿದೆ. ಇದೀಗ ಅಲ್ಲು ಅರ್ಜುನ್‌ಗೆ ಮತ್ತೆ ಬಂಧನದ ಭೀತಿ ಎದುರಾಗಲಿದೆ ಎಂದು ಹೇಳಲಾಗುತ್ತಿದ್ದು ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಹೈದರಾಬಾದ್‌ (Hyderabad Police) ಪೊಲೀಸರು ಸುಪ್ರೀಂ ಕೋರ್ಟ್‌ (Supreme Court) ಮೊರೆ ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿ. 4ರಂದು ‘ಪುಷ್ಪ 2’ ಸಿನಿಮಾದ ಪ್ರೀಮಿಯರ್‌ ಶೋ ವೇಳೆ ಅಲ್ಲು ಅರ್ಜುನ್ ಸಂಧ್ಯಾ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಓರ್ವ ಮಹಿಳೆ ನಿಧನ ಹೊಂದಿದ್ದರು. ಜತೆಗೆ ಅವರ ಪುತ್ರ ತೀವ್ರವಾಗಿ ಗಾಯಗೊಂಡಿದ್ದರು. ಈ ಘಟನೆ ಕುರಿತಂತೆ ನಟ ಅಲ್ಲು ಅರ್ಜುನ್ ಹಾಗೂ ಇನ್ನೂ ಇತರರ ವಿರುದ್ಧ ದೂರು ದಾಖಲಾಗಿತ್ತು. ನಂತರ ನಟ ಅಲ್ಲು ಅರ್ಜುನ್ ಹಾಗೂ ಅವರ ಬಾಡಿಗಾರ್ಡ್​ ಇನ್ನಿತರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದ ನಾಂಪಲ್ಲಿ ನ್ಯಾಯಾಲಯ ಅಲ್ಲು ಅರ್ಜುನ್​ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ನಂತರ ಅದೇ ದಿನ ಹೈಕೋರ್ಟ್‌ ​ ಮಧ್ಯಂತರ ಜಾಮೀನ ನೀಡಿತ್ತು. 

ಇದೀಗ ಹೈಕೋರ್ಟ್‌ ನೀಡಿರುವ ಮಧ್ಯಂತರ ಜಾಮೀನನ್ನು ಪ್ರಶ್ನೆ ಮಾಡಿ ಹೈದರಾಬಾದ್‌ ಪೊಲೀಸರು ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದ್ದು, ನಟನಿಗೆ ನೀಡಿದ್ದ ಜಾಮೀನು ರದ್ದುಪಡಿಸುವಂತೆ ಮನವಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

ತೆಲಂಗಾಣ ಸಿಎಂ ಹೇಳಿದ್ದೇನು?

ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಈ ಬಗ್ಗೆ ತೆಲಂಗಾಣದ ಸಿಎಂ ರೇವಂತ್‌ ರೆಡ್ಡಿ ಮಾತನಾಡಿದ್ದಾರೆ. ನಾನು ಯಾವತ್ತಿದ್ದರೂ ಸಂತ್ರಸ್ತೆ ಮತ್ತವರ ಕುಟುಂಬದ ಪರವಾಗಿದ್ದೇನೆ. ಯಾರೇ ತಪ್ಪು ಮಾಡಿದ್ದರೂ, ಕಾನೂನು ಅವರನ್ನು ಬಂಧಿಸುತ್ತದೆ. ಅಷ್ಟಕ್ಕೂ ಅಲ್ಲು ಅರ್ಜುನ್‌ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಅಷ್ಟೇ. ಭಾರತಕ್ಕಾಗಿ ಅವರು ಯುದ್ಧ ಮಾಡಿ ಗೆದ್ದು ಬಂದಿಲ್ಲ. ಸಿನಿಮಾ ಅನ್ನೋದು ನಟರಿಗೆ ಬಿಜಿನೆಸ್‌ ಇದ್ದ ಹಾಗೆ. ಅವರು ಲಾಭ ಮಾಡಿಕೊಂಡರೆ, ನಮಗೇನು ಲಾಭ? ರಿಯಲ್‌ ಎಸ್ಟೇಟ್‌ ಥರ ದುಡ್ಡು ಹಾಕಿ ದುಡ್ಡು ಗಳಿಸ್ತಾರೆ ಎಂದು ರೇವಂತ್‌ ರೆಡ್ಡಿ ಹೇಳಿದ್ದರು.

ಅಲ್ಲು ಅರ್ಜುನ್‌ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಚಿತ್ರರಂಗದ ಹಲವಾರು ಗಣ್ಯರು ಅವರ ಮನೆಗೆ ತೆರಳಿ ಭೇಟಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ : Mukesh Khanna : ಶಕ್ತಿಮಾನ್‌ ಪಾತ್ರದಲ್ಲಿ ಅಲ್ಲು ಅರ್ಜುನ್‌ ನಟಿಸಲಿ ಎಂದ ಮುಖೇಶ್‌ ಖನ್ನಾ !