Thursday, 15th May 2025

ಸರಿ-ತಪ್ಪು ನಿರ್ಧರಿಸಲು ಆಗದ ಸಂದರ್ಭದಲ್ಲಿ ಏನೆನ್ನಬೇಕು?

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

ಇಂಗ್ಲಿಷ್ ಪತ್ರಿಕೆಗಳ ಸುದ್ದಿಮನೆಗಳಲ್ಲಿ ಒಂದು ಹೆಡ್‌ಲೈನ್ ಆಗಾಗ ಚರ್ಚೆಯಾಗುವುದುಂಟು. ಅದ್ಯಾವುದೆಂದರೆ, Elvis Presley’s
Teeth Visit Malvern. ಈ ಒಂದು ಹೆಡ್ ಲೈನ್ ಸುದ್ದಿಮನೆಯನ್ನು ಎರಡು ಭಾಗಗಳನ್ನಾಗಿ ಮಾಡಿದೆ.

ಇದನ್ನು ಅತ್ಯುತ್ತಮ ಶೀರ್ಷಿಕೆ ಮತ್ತು ಅತ್ಯಂತ ಕೆಟ್ಟ ಶೀರ್ಷಿಕೆ ಎಂದು ವಾದಿಸುವವರು ಸಮ ಸಮ ಪ್ರಮಾಣದಲ್ಲಿದ್ದಾರೆ. ಈ ಶೀರ್ಷಿಕೆಯನ್ನು ಓದಿದವರಿಗೆ, ಯಾವುದೂ ಸ್ಪಷ್ಟವಾಗುವುದಿಲ್ಲ. ಕೆಲವರಿಗೆ ಎಲ್ವಿಸ್ ಪ್ರೆಸ್ಲಿ ಯಾರು ಅಥವಾ ಏನು ಎಂಬುದು ಗೊತ್ತಿರುವುದಿಲ್ಲ. ಒಂದು ವೇಳೆ ಅವನ ಹೆಸರು ಕೇಳಿದವರಿಗೆ, ಅವನ ಹಲ್ಲು ಮಾಲ್ವರ್ನ್‌ಗೆ ಭೇಟಿ ಕೊಟ್ಟಿತು ಅಂದರೆ ಅದರ ಅರ್ಥವೇನು ಎಂದು ಅನಿಸದೇ ಇರದು.

ಹೀಗಾಗಿ ಇದೊಂದು ಕೆಟ್ಟ ಹೆಡ್ ಲೈನ್ ಎಂದು ವಾದಿಸುತ್ತಾರೆ. ಇನ್ನು ಹೆಡ್ ಲೈನ್ ಉತ್ತಮ ಎಂದು ಹೇಳುವವರ ವಾದವೇ ನೆಂದರೆ, ಈ ಶೀರ್ಷಿಕೆ ಇಡೀ ಸುದ್ದಿಯನ್ನು ಓದುವಂತೆ ಪ್ರೇರೇಪಿಸುತ್ತದೆ, ಎಲ್ಲವನ್ನೂ ಹೆಡ್‌ಲೈನ್ ಹೇಳಿದರೆ, ಎಲ್ಲರೂ ಹೆಡ್ ಲೈನ್ ಓದಿ, ಸುದ್ದಿಯನ್ನು ಓದದೇ ಮುಂದಕ್ಕೆ ಹೋಗುತ್ತಾರೆ, ಹೀಗಾಗಿ ಹೆಡ್ ಲೈನ್ ಆಸಕ್ತಿ ಕೆರಳಿಸಿ, ಇಡೀ ಸುದ್ದಿ ಓದಲು ಹಚ್ಚಬೇಕು. ಆ ಕೆಲಸವನ್ನು ಈ ಹೆಡ್ ಲೈನ್ ಪರಿಣಾಮಕಾರಿಯಾಗಿ ಮಾಡಿದೆ.

ನೀವು ಈ ಹೆಡ್ ಲೈನ್ ಯಾವ ಕಡೆಯವರು – ಒಳ್ಳೆಯ ಶೀರ್ಷಿಕೆ ಅಥವಾ ಕೆಟ್ಟ ಶೀರ್ಷಿಕೆ – ಎಂಬುದನ್ನು ನೀವೇ ನಿರ್ಧರಿಸಬೇಕು. ವಿಚಿತ್ರವೆಂದರೆ, ನೀವು ಯಾವ ಗುಂಪಿನಲ್ಲಿದ್ದರೂ, ನೀವು ಸರಿಯೇ. ಇಬ್ಬರೂ ಭಾಗವಹಿಸಿದ ಪಂದ್ಯದಲ್ಲಿ ಇಬ್ಬರೂ ಜಯಶಾಲಿ ಗಳು ಎಂದು ಘೋಷಿಸುವ ವಿಚಿತ್ರ ಸಂದರ್ಭ ಎದುರಾದಾಗ, Elvis Presley’s Teeth Visit Malvern ಎಂದು ಹೇಳುತ್ತಾರೆ.

ಒಂದು ವಿಷಯದ ಬಗ್ಗೆ ಪರ – ವಿರೋಧ ವಾದಗಳು ಸಮ – ಸಮ ಆದಾಗಲೂ ಈ ಮಾತನ್ನು ಪ್ರಸ್ತಾಪಿಸುತ್ತಾರೆ. ಕೆಲವು ಸಲ ನಮಗೆ ಯಾವ ವಾದ ಸರಿ – ತಪ್ಪು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದಾಗಲೂ ಈ ಶೀರ್ಷಿಕೆಯನ್ನು ಉದ್ಧರಿಸುತ್ತಾರೆ.
‘ಕಿಂಗ್ ಆ- ರಾಕ್ ಅಂಡ್ ರೋಲ’ ಎಂದೇ ಜಗದ್ವಿಖ್ಯಾತನಾದ ಎಲ್ವಿಸ್ ಪ್ರೆಸ್ಲಿ ಅಮೆರಿಕದ ಗಾಯಕ, ಸಂಗೀತಗಾರ ಮತ್ತು ನಟ. ಇಪ್ಪತ್ತನೇ ಶತಮಾನದ ಸಾಂಸ್ಕೃತಿಕ ಮುಕುಟಮಣಿ ಎಂದೂ ಈತನನ್ನು ಬಣ್ಣಿಸುತ್ತಾರೆ.

(ಬೆಂಗಳೂರಿನ ಶಿವಾನಂದ ಸ್ಟೋರ್ಸ್ ವೃತ್ತದ ಸಮೀಪವಿರುವ ಪ್ರಸಿದ್ಧ ‘ರಿಚಿ ರಿಚ್’ ಫಾಸ್ಟ್ ಫುಡ್ ಮತ್ತು ಐಸ್ ಕ್ರೀಮ್
ಪಾರ್ಲರ್‌ನಲ್ಲಿ ಎಲ್ವಿಸ್ ಪ್ರೆಸ್ಲಿ ಹೆಸರಿನ ದುಬಾರಿ ಮತ್ತು ಜನಪ್ರಿಯ ಐಸ್ ಕ್ರೀಮ್ ಇದೆ.) ೧೯೭೭ರ ಆಗಸ್ಟ್‌ನಲ್ಲಿ ಎಲ್ವಿಸ್ ಪ್ರೆಸ್ಲಿ ನಿಧನನಾಗುವ ಹಿಂದಿನ ದಿನ ಹಲ್ಲುನೋವು ತಾಳಲಾರದೇ ದಂತವೈದ್ಯರನ್ನು ಕಾಣಲು ಹೋದನಂತೆ. ವೈದ್ಯರು ಅವನ ಹಲ್ಲಿಗೆ ಕವಚ (crown) ಕಟ್ಟಿದರಂತೆ. ಆದರೂ ಅವನ ಹಲ್ಲುನೋವು ಕಡಿಮೆಯಾಗಲಿಲ್ಲವಂತೆ. ಮರುದಿನ ಆತ ನಿಧನನಾದ.

೨೦೧೨ರಲ್ಲಿ ಕೆನಡಾದ ಲೇಖಕ ಮತ್ತು ದಂತವೈದ್ಯನಾದ ಮೈಕೆಲ್ ಝುಕ್ ಎಂಬಾತ ಎಲ್ವಿಸ್ ಪ್ರೆಸ್ಲಿಯ ಈ ಹಲ್ಲನ್ನು ಹರಾಜಿ ನಲ್ಲಿ ಹನ್ನೊಂದು ಸಾವಿರ ಡಾಲರ್ ಕೊಟ್ಟು ಖರೀದಿಸಿದ. ಝುಕ್‌ಗೆ ಗಣ್ಯವ್ಯಕ್ತಿಗಳು ಸತ್ತ ನಂತರ ಅವರ ಹಲ್ಲುಗಳನ್ನು ಸಂಗ್ರಹಿಸುವ ಹವ್ಯಾಸವುಳ್ಳವ. ಆತ ಎಲ್ವಿಸ್ ಪ್ರೆಸ್ಲಿಯ ಹಲ್ಲನ್ನೂ ಖರೀದಿಸಿದ. ೨೦೧೪ರಲ್ಲಿ ಬಾಯಿ ಕ್ಯಾನ್ಸರ್ ಬಗ್ಗೆ ಜಾಗೃತಿ
ಮೂಡಿಸಲು, ಎಲ್ವಿಸ್ ಪ್ರೆಸ್ಲಿಯ ಹಲ್ಲನ್ನು ಬ್ರಿಟನ್‌ಗೆ ತೆಗೆದುಕೊಂಡು ಹೋಗಲಾಯಿತು. ಆ ಸಂದರ್ಭದಲ್ಲಿ ಈ ಹಲ್ಲನ್ನು ಬರ್ಮಿಂಗ್ ಹ್ಯಾಮ್ ಸಮೀಪದ ಮಾಲ್ವರ್ನ್ ಎಂಬ ಊರಿನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಈ ಸುದ್ದಿಯನ್ನು ಸ್ಥಳೀಯ ‘ಮಾಲ್ವರ್ನ್ ಗೆಜೆಟ್’ ಎಂಬ ಪತ್ರಿಕೆ ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ Elvis Presley’s Teeth Visit Malvern ಎಂಬ ಶೀರ್ಷಿಕೆ ಕೊಟ್ಟು ಪ್ರಕಟಿಸಿತ್ತು. ಇದನ್ನು ಓದಿದವರಿಗೆ ಎಲ್ವಿಸ್ ಪ್ರೆಸ್ಲಿ ಹಲ್ಲು ಮಾಲ್ವರ್ನ್‌ಗೆ ಹೇಗೆ ಭೇಟಿ ಕೊಟ್ಟಿತು ಎಂದು ತಟ್ಟನೆ ಅನಿಸದೇ ಹೋಗುವುದಿಲ್ಲ.

ಕೆಲವರು ಯಾವ ಬುದ್ಧಿಗೇಡಿ ಈ ಹೆಡ್ ಲೈನ್ ಕೊಟ್ಟವನು ಎಂದು ಪ್ರತಿಕ್ರಿಯಿಸಿದರು. ಇನ್ನು ಕೆಲವರು ‘ಬ್ರಿಲಿಯಂಟ್
ಹೆಡ್ ಲೈನ್’ ಅಂದರು. ಒಂದೇ ಏಟಿಗೆ ‘ಅಭಿಪ್ರಾಯ ವಿಭಜನೆ’ ಆಯಿತು. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು
ನಿರ್ಧರಿಸಲು ಸಾಧ್ಯವಾಗದ ಸಂದರ್ಭದಲ್ಲಿ ಅಥವಾ ಎರಡೂ ವಾದವನ್ನು ಒಪ್ಪುವ ಸನ್ನಿವೇಶದಲ್ಲಿ Elvis Presley’s
Teeth Visit Malvern ಅಂತಾರೆ.

ಬದುಕಿಗೆ ಮಾರ್ಗವಾದ ಸಂಘ ಸುಮಾರು ಇಪ್ಪತ್ತೈದು – ಮೂವತ್ತು ವರ್ಷಗಳ ಹಿಂದೆ, ಯಾರೂ ಕೂಡ ನಾನು ಆರೆಸ್ಸೆಸ್ ಕಾರ್ಯಕರ್ತ ಅಥವಾ ಸಂಘ ಪರಿವಾರದವ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಿರಲಿಲ್ಲ. ಹಾಗೆ ಹೇಳಿಕೊಳ್ಳುವುದರಲ್ಲಿ ಹೆಮ್ಮೆ ಪಡುತ್ತಿರಲಿಲ್ಲ. ಯಾರಾದರೂ ತಮ್ಮನ್ನು ‘ಚೆಡ್ಡಿ’ ಎಂದು ಕರೆದುಬಿಟ್ಟಾರು ಎಂದು ಹಿಂದೇಟು ಹಾಕುತ್ತಿದ್ದರು. ‘ನಾನು ಚಿಕ್ಕವನಿದ್ದಾಗ ಶಾಖೆಗೆ ಹೋಗುತ್ತಿದ್ದೆ. ಈಗ ಅವರ ಸಂಪರ್ಕ ಇಲ್ಲ’ ಎಂದು ಜಾರಿಕೊಳ್ಳುತ್ತಿದ್ದರು.

ಕಟ್ಟರ್ ಆರೆಸ್ಸೆಸ್ ಕಾರ್ಯಕರ್ತ ಅಥವಾ ಸ್ವಯಂಸೇವಕರನ್ನು ಬಿಟ್ಟರೆ, ಬೇರೆ ಯಾರೂ ಹಾಗೆ ತಮ್ಮನ್ನು ಕರೆದುಕೊಳ್ಳಲು ಇಷ್ಟಪಡುತ್ತಿರಲಿಲ್ಲ. ಬಾಲ್ಯದಲ್ಲಿ ಶಾಖೆಗೆ ಹೋಗಿ ಆನಂತರ ಆರೆಸ್ಸೆಸ್ ಸಂಪರ್ಕ ಇಟ್ಟುಕೊಳ್ಳದವರು ಸಮಯ, ಸಂದರ್ಭ ನೋಡಿ, ತಮಗೆ ಲಾಭವಾಗುವುದಾದರೆ ಮಾತ್ರ ಸಂಘ ಪರಿವಾರದ ಸಂಬಂಧವನ್ನು ಬಹಿರಂಗವಾಗಿ ಘೋಷಿಸಿಕೊಳ್ಳುತ್ತಿದ್ದರು.
ಕಾಲಚಕ್ರ ಬದಲಾಗಿದೆ. ಚೆಡ್ಡಿ ಹೋಗಿ ಪ್ಯಾಂಟು ಬಂದಿದೆ. ಈಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ  ಅಧಿಕಾರಕ್ಕೆ ಬಂದಿದೆ. ಸೀಟು, ಟಿಕೆಟ್ ಮತ್ತು ಅಧಿಕಾರ ಗಿಟ್ಟಿಸಿಕೊಳ್ಳಲು ಸಂಘ ಪರಿವಾರದ ಸಂಬಂಧ ಅನಿವಾರ್ಯ ಎಂಬ ಭಾವನೆ ಬೇರೂರಲಾರಂಭಿಸಿದೆ.

ಬಿಜೆಪಿ ನಾಯಕರನ್ನು  ಎಡತಾಕುವುದಕ್ಕಿಂತ ಆರೆಸ್ಸೆಸ್ ನಾಯಕರನ್ನು ಭೇಟಿ ಮಾಡುವವರ ಸಂಖ್ಯೆ ಹೆಚ್ಚಿದೆ. ಅಧಿಕಾರಕ್ಕೇರಲು ಅದು ಶಾರ್ಟ್ ಕಟ್ ಎಂದು ಹಲವರು ಭಾವಿಸಿzರೆ. ಏಕಾಏಕಿ ಎಲ್ಲರೂ ತಾವು ಆರೆಸ್ಸೆಸ್ ಸ್ವಯಂಸೇವಕರು ಎಂದು ಎದೆಯುಬ್ಬಿಸಿ
ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಮೂಲ ಆರೆಸ್ಸೆಸ್ಸಿನ ಶಾಖೆಗಳಲ್ಲಿದೆ ಎಂಬುದನ್ನು ಉತ್ಖನನ ಮಾಡಿ ತೋರಿಸುತ್ತಿದ್ದಾರೆ.

ಕೆಲವು ದಿನಗಳ ಹಿಂದೆ, ಕಾಂಗ್ರೆಸ್ಸಿನಿಂದ ಬಿಜೆಪಿಗೆ ವಲಸೆ ಬಂದು, ಈಗ ರಾಜ್ಯ ಸರಕಾರದಲ್ಲಿ ಮಂತ್ರಿಯಾಗಿರುವ ಒಬ್ಬರು
ಸಿಕ್ಕಿದ್ದರು. ಅವರು ತಾವು ಎಂಥ ಕಟ್ಟರ್ ಆರೆಸ್ಸೆಸ್ ಎಂಬುದನ್ನು ಬಣ್ಣಿಸಿದರು. ‘ನಿಮಗೆ ಗೊತ್ತಲ್ಲ, ನಾನು ದಿನ ತಪ್ಪದೇ ಶಾಖೆಗೆ
ಹೋಗುತ್ತಿದ್ದೆ, ನನ್ನಲ್ಲಿ ದೇಶಾಭಿಮಾನ, ರಾಷ್ಟ್ರಪ್ರೇಮವನ್ನು ತುಂಬಿದವರೇ ಆರೆಸ್ಸೆಸ್ಸಿನವರು. ನಾನು ಯಾಕೆ ಇಷ್ಟು ವರ್ಷ
ಕಾಂಗ್ರೆಸ್ಸಿನಲ್ಲಿ ಇದ್ದೆ ಎಂಬುದೇ ಅರ್ಥವಾಗುವುದಿಲ್ಲ.

ಕಾಂಗ್ರೆಸ್ಸಿನಲ್ಲಿದ್ದಾಗ, ನನಗೆ ಒಂಥರಾ ಅಪರಾಧಿ ಭಾವ ಕಾಡುತ್ತಿತ್ತು. ಈಗ ಮರಳಿ ನನ್ನ ಮನೆಗೆ ಬಂದಿದ್ದೇನೆ. ಈಗ ನನಗೆ
ಮಾನಸಿಕ ಸ್ವಾತಂತ್ರ್ಯ ಸಿಕ್ಕಿದೆ. ಇದಕ್ಕೆ ಕಾರಣ ಸಂಘದ ಸಿದ್ಧಾಂತ’ ಎಂಬ ಧಾಟಿಯಲ್ಲಿ ಮಾತಾಡಿದರು. ನಾನು ಅವರ ‘ಬೌದ್ಧಿಕ್’ ಕೇಳಿ ಸುಸ್ತಾಗಿ ಹೋದೆ. ಕೊನೆಯಲ್ಲಿ ಬರುವಾಗ ತಮಗರಿವಿಲ್ಲದಂತೆ, ‘ಬಿಜೆಪಿಯಲ್ಲಿ ನೆಮ್ಮದಿಯಾಗಿ ಅಧಿಕಾರದಲ್ಲಿರಬೇಕು ಅಂದ್ರೆ ಆರೆಸ್ಸೆಸ್ ನಾಯಕರನ್ನು ಸರಿಯಾಗಿಟ್ಟುಕೊಳ್ಳಬೇಕು ನೋಡ್ರಿ. ಇದನ್ನು ನಾನು ಬಿಜೆಪಿ ಸೇರಿದ ಈ ಹದಿನಾರು ತಿಂಗಳಲ್ಲಿ ಅರ್ಥ ಮಾಡಿಕೊಂಡಿದ್ದೇನೆ’ ಎಂದರು.

ಪರವಾಗಿಲ್ವೇ ಅಂದುಕೊಂಡೆ. ಈಗ ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದವರಲ್ಲಿ ಅನೇಕರು ಮೂಲನಿವಾಸಿಗಳಿಗಿಂತ ಹೆಚ್ಚು ‘ಸಂಘಪ್ರಿಯ’ರಾಗಿದ್ದಾರೆ. ಆರೆಸ್ಸೆಸ್ ನಾಯಕರ ಪದವಿಗಳೆಲ್ಲ ಇವರ ಬಾಯಲ್ಲಿ ಸುಲಲಿತ. ಇವರೆಲ್ಲ ಬಹಳ ಬೇಗ ಯಾವ ದೇವರಿಗೆ ಯಾವ ಜಾಗಟೆ ಬಡಿಯಬೇಕು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಈಗ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗ ಬಯಸು ವವರು, ಸಿಂಡಿಕೇಟ್ ಸದಸ್ಯರಾಗಬಯಸುವವರು ಸಹ ಕೈಯಂದು ಬಯೋಡಾಟಾ ಹಿಡಿದುಕೊಂಡು ತಾವೂ ಬಾಲ್ಯ ದಿಂದಲೂ ಸ್ವಯಂ ಸೇವಕರು, ಸು.ರಾಮಣ್ಣ ಅವರ ಬೌದ್ಧಿಕ್ ಕೇಳಿಯೇ ದೊಡ್ಡವರಾಗಿದ್ದು ಎಂದು ಹೇಳುವುದನ್ನು ಕೇಳಲು ಬಹಳ ಇಂಪಾಗಿರುತ್ತವೆ. ಈ ಮಾತುಗಳನ್ನು ಕೇಳಿಸಿಕೊಳ್ಳಲು ಸಂಘ ಸಂಸ್ಥಾಪಕರಾದ ಹೆಡಗೇವಾರರು ಬದುಕಿರಬೇಕಿತ್ತು.

ಅದೆಷ್ಟು ಆನಂದಪಡುತ್ತಿದ್ದರೋ. ಅವರು ಕಟ್ಟಿದ ಸಂಘ ಇಷ್ಟೊಂದು ವ್ಯಾಪಕವಾಗಿ ಬೆಳೆಯಬಹುದು ಎಂದು ಅವರೂ ಅಂದುಕೊಂಡಿರಲಿಲ್ಲ. ಮೊನ್ನೆ ಆಸ್ಪತ್ರೆಯಲ್ಲಿ ವೈದ್ಯರೊಬ್ಬರು ತಮ್ಮನ್ನು ಪರಿಚಯ ಮಾಡಿಕೊಳ್ಳುವಾಗ, ಎಲ್ಲಾ ವಿವರಗಳನ್ನು ಹೇಳಿ, ಮಾತಿನ ಮಧ್ಯದಲ್ಲಿ, ‘ನಾನು ಸಂಘ ಪರಿವಾರದವನು, ಗೊತ್ತಾ?’ ಎಂದು ಕೇಳಿದರು.

ಸಂಘದ ಜತೆಗಿರುವ ತಮ್ಮ ಸಂಬಂಧವನ್ನು ಇಷ್ಟು ಮುಕ್ತವಾಗಿ ಹೇಳಿಕೊಂಡಿದ್ದೇಕೆ ಎಂಬುದು ಅರ್ಥ ವಾಗಲಿಲ್ಲ. ಅವರ ಜತೆ ಮಾತಾಡುವಾಗ, ಒಂದು ಸಂದರ್ಭದಲ್ಲಿ, ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಲು ಪ್ರಯತ್ನಿಸುತ್ತಿರುವುದನ್ನು ಪ್ರಸ್ತಾಪಿಸಿದರು. ಈ ಮೂಲಕವಾದರೂ ಅನೇಕರಿಗೆ ಸಂಘ ಬದುಕುವ ಮಾರ್ಗವಾಗಿದೆ.

ಕಾಂಟ್ರಡಿಕ್ಷನರಿ ಎಂಬ ಡಿಕ್ಷನರಿ ಇಂಗ್ಲಿಷ್ ಬಹಳ ವಿಚಿತ್ರ ಭಾಷೆ. ನಿಯಮ (rules) ಗಳಿಗಿಂತ ಅಪವಾದ (exception)ಗಳೇ ಹೆಚ್ಚು. ಯಾಕೆ ಹೀಗೆ ಎಂದು ಕೇಳಿದರೆ, ಅದು ಹಾಗೆ ಎಂದು ಹೇಳುತ್ತಾರೆಯೇ ಹೊರತು, ಅದೇಕೆ ಹಾಗೆ ಎಂದು ಹೇಳುವುದು ಕಷ್ಟ. ಇಂಗ್ಲಿಷ್ ಭಾಷೆಯ ಬಂಧವೇ ಹಾಗಿದೆ. ಕೇಳಲು ಒಂದೇ ರೀತಿಯಾಗಿರುತ್ತದೆ, ಆದರೆ ಸ್ಪೆಲ್ಲಿಂಗ್ ಮಾತ್ರ ವ್ಯತ್ಯಾಸವಿರುತ್ತದೆ.
ಉದಾಹರಣೆಗೆ, acetic ಮತ್ತು ascetic, burgers ಮತ್ತು burghers, complacent ಮತ್ತು complaisant, cassock ಮತ್ತು cossack,
miniscule ಮತ್ತು minuscule, minks ಮತ್ತು minx, heel ಮತ್ತುheal… ಇತ್ಯಾದಿ.

ಇವುಗಳಿಗೆ lookalikes ಮತ್ತು soundalikes (ನೋಡಲು ಮತ್ತು ಕೇಳಲು ಒಂದೇ ರೀತಿಯಾಗಿರುವ ಪದಗಳು) ಎಂದು ಹೇಳುತ್ತಾರೆ.
ಇಂಗ್ಲೀಷಿನಲ್ಲಿ ಇಂಥ ಎರಡು ಸಾವಿರಕ್ಕೂ ಹೆಚ್ಚು ಪದಗಳನ್ನು ಸಂಗ್ರಹಿಸಿ, Contradictionary (ಕಾಂಟ್ರಡಿಕ್ಷನರಿ) ಎಂಬ
ಪದ ಕೋಶ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪ್ರಕಟವಾಯಿತು. ಈ ಪದಕೋಶವನ್ನು ರೂಪಿಸಿದವನು ಫ್ರಿಟ್ಜ್ ಸ್ಪಿಎU. ಇಲ್ಲಿಯವರೆಗೆ ಈ ಪದಕೋಶದ ಇಪ್ಪತ್ತು ಲಕ್ಷ ಪ್ರತಿಗಳು ಮಾರಾಟವಾಗಿವೆ.

ಮೂಲತಃ ಸ್ಪಿಎಗ್ಲ್‌ ಜರ್ಮನಿಯವ. ಸಣ್ಣ ವಯಸಿನಲ್ಲಿ ಬ್ರಿಟನ್ ಗೆ ಬಂದು, ಇಂಗ್ಲಿಷ್ ಭಾಷೆ ಕಲಿತ. ಅಲ್ಲಿಗೆ ಬಂದಾಗ ಆತನಿಗೆ ಇಂಗ್ಲಿಷಿನ ಒಂದು ಪದವೂ ಗೊತ್ತಿರಲಿಲ್ಲ, ಅರ್ಥವಾಗುತ್ತಿರಲಿಲ್ಲ. ಭಾಷೆಯ ಗಂಧ – ಗಾಳಿಯೂ ಇರಲಿಲ್ಲ. ಆದರೆ ಅತಿ ಶ್ರದ್ಧೆ ಯಿಂದ ಆ ಭಾಷೆಯನ್ನು ಕಲಿಯಾರಂಭಿಸಿದ. ಇಂಗ್ಲಿಷ್ ಕಲಿಯುವಾಗ ಅವನಿಗೆ ಈ ಪದಗಳು ಗೊಂದಲ ಮೂಡಿಸುತ್ತಿದ್ದವು. ಅಂದಿನಿಂದಲೇ ಈ ರೀತಿ ನೋಡಲು ಮತ್ತು ಕೇಳಲು ಒಂದೇ ರೀತಿಯ ಪದಗಳನ್ನು ಸಂಗ್ರಹಿಸಲಾರಂಭಿಸಿದ.

ಅರವತ್ತು ವರ್ಷಗಳವರೆಗೆ ಈ ಬಗ್ಗೆ ಸಂಗ್ರಹ, ಅಧ್ಯಯನ ಮಾಡಿದ. ತಾನು ಸಂಗ್ರಹಿಸಿದ ಪದಗಳು, ಅವುಗಳ ಅರ್ಥಗಳನ್ನೆಲ್ಲ ಹತ್ತಾರು ಭಾಷಾ ಪಂಡಿತರಿಗೆ ತೋರಿಸಿ, ಅವರ ಒಪ್ಪಿಗೆ ಪಡೆದು, ಕೊನೆಯಲ್ಲಿ ಈ ಪದಕೋಶವನ್ನು ಪ್ರಕಟಿಸಿದ. ಇನ್ನೇನು ಈ ಪದಕೋಶ ಪ್ರಕಟವಾಗಬೇಕು ಎನ್ನುವಾಗ ನಿಧನನಾದ. ಅಂದು ಪುಸ್ತಕ ಬಿಡುಗಡೆ ಅವನ ಅನುಪಸ್ಥಿತಿಯ ನಡೆಯಿತು.

ಇಂಗ್ಲಿಷ್ ಭಾಷೆಗೆ ಮಹದುಪಕಾರ ಮಾಡಿದ ಪುಣ್ಯಾತ್ಮ, ಇಂಗ್ಲಿಷಿನ ಮಾನ ಕಾಪಾಡಿದವ, ಇಂಗ್ಲಿಷ್ ಕಲಿಕೆಗೆ ನೆರವಾದವ ಎಂದೆ ಸ್ಪಿಎಗ್ಲ್‌ ನನ್ನು ನೆನೆಯುತ್ತಾರೆ. ನಿಮ್ಮಲ್ಲಿ ಎಷ್ಟಾದರೂ ಇಂಗ್ಲಿಷ್ ಡಿಕ್ಷನರಿಗಳಿರಬಹುದು, ಆದರೆ Contradictionary ಇರಲೇಬೇಕು. ಇಲ್ಲದಿದ್ದರೆ ಗೊಂದಲ ತಪ್ಪಿದ್ದಲ್ಲ.

Leave a Reply

Your email address will not be published. Required fields are marked *