ನವದೆಹಲಿ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್ (Punjab) ಮತ್ತು ಹರಿಯಾಣದ (Haryana) ರೈತರು ಮತ್ತೆ ಪ್ರತಿಭಟನೆಗೆ ಇಳಿದಿದ್ದಾರೆ. ಈ ನಡುವೆ ಖನೌರಿ ಗಡಿಯಲ್ಲಿ (Khanauri border) ಆಮರಣಾಂತ ಉಪವಾಸ ಸತ್ಯಾಗ್ರಹ (fast-unto-death protest) ನಡೆಸುತ್ತಿರುವ ಪಂಜಾಬಿನ ರೈತ ನಾಯಕ ಜಗ್ಜಿತ್ ಸಿಂಗ್ ದಲ್ಲೇವಾಲ (Jagjit Singh Dallewal) ಅವರ ಬಿಗಡಾಯಿಸುತ್ತಿರುವ ಆರೋಗ್ಯ ಸ್ಥಿತಿಯ ಕುರಿತಾಗಿ ಸುಪ್ರೀಂ ಕೋರ್ಟ್ (Supreme Court) ಕಳವಳ ವ್ಯಕ್ತಪಡಿಸಿದೆ. ಜಗ್ಜಿತ್ ಅವರು ಕಳೆದ 17 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಉಜ್ಜಲ್ ಭೂಯನ್ ಅವರಿದ್ದ ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠವು ಕೇಂದ್ರ ಮತ್ತು ಪಂಜಾಬ್ ಸರಕಾರ ಪ್ರತಿನಿಧಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದು, ಸತ್ಯಾಗ್ರಹ ನಿರತ ದಲ್ಲೇವಾಲ ಅವರನ್ನು ತಕ್ಷಣವೇ ಭೇಟಿಯಾಗಿ ಅವರಿಗೆ ಅಗತ್ಯ ವೈದ್ಯಕೀಯ ಸಹಾಯ ಒದಗಿಸಬೇಕು ಹಾಗೂ ಅವರು ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನ ಒಲಿಸುವಂತೆಯೂ ಈ ವಿಭಾಗಿಯ ಪೀಠ ತಾಕೀತು ಮಾಡಿದೆ. ಇದೇ ಸಂದರ್ಭದಲ್ಲಿ ಜಗ್ಜಿತ್ ಸಿಂಗ್ ದಲ್ಲೇವಾಲ ಅವರ ಪ್ರಾಣ ಅಮೂಲ್ಯವಾದುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ದಲ್ಲೇವಾಲ ಅವರ ಉಪವಾಸವನ್ನು ಮುರಿಯಲು ಯಾವುದೇ ಬಲ ಪ್ರಯೋಗವನ್ನು ಬಳಸದಂತೆಯೂ ನ್ಯಾಯಪೀಠ ಇದೇ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಪಂಜಾಬ್ ಸರಕಾರದ ಪರ ವಕೀಲ ಗುರ್ಮಿಂದರ್ ಸಿಂಗ್ ಅವರಿಗೆ ಸೂಚನೆಯನ್ನು ನೀಡಿದೆ.
‘ನೀವಿಬ್ಬರೂ (ಕೇಂದ್ರ ಹಾಗೂ ಪಂಜಾಬ್ ಸರಕಾರ) ಈ ಸಮಸ್ಯೆ ಅತೀ ಶೀಘ್ರ ಪರಿಸಹರಿಸಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು. ದಲ್ಲೇವಾಲ ಅವರನ್ನು ಅಗತ್ಯಬಿದ್ದಲ್ಲಿ, ಚಂಢೀಗಢದ ಪಿಜಿಐಗೆ ಅಥವಾ ಪಾಟಿಯಾಲ ನಗರಕ್ಕೆ ತುರ್ತು ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವಂತೆಯೂ ನ್ಯಾಯಪೀಠ ಸಲಹೆ ನೀಡಿದೆ.
ಇನ್ನು, ಸತ್ಯಾಗ್ರಹ ನಿರತ ರೈತರಿಗೆ ಗಾಂಧೀಜಿವರ ಸತ್ಯಾಗ್ರಹ ಮಾದರಿಯನ್ನು ಅನುಸರಿಸುವಂತೆ ಸಲಹೆ ನೀಡಿರುವ ನ್ಯಾಯಪೀಠ, ಹೆದ್ದಾರಿಯಲ್ಲಿ ನಡೆಸುತ್ತಿರುವ ಸತ್ಯಾಗ್ರಹವನ್ನು ಸದ್ಯದ ಮಟ್ಟಿಗೆ ಕೈಬಿಡುವಂತೆ ಅಥವಾ ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವಂತೆಯು ನ್ಯಾಯಪೀಠ ಇದೇ ಸಂದರ್ಭದಲ್ಲಿ ಸಲಹೆ ನೀಡಿದೆ. ತಾನು ರೂಪಿಸುವ ಉನ್ನತ-ಅಧಿಕಾರವುಳ್ಳ ನಿಯೋಗವೊಂದು ರೈತರನ್ನು ಭೇಟಿಯಾಗಲಿದೆ ಎಂದೂ ನ್ಯಾಯಪೀಠ ಹೇಳಿದೆ.
ಇದನ್ನೂ ಓದಿ: ISRO: ಇಸ್ರೋದ ಮಾನವ ಸಹಿತ ಗಗನ ಯಾನಕ್ಕೆ ಇನ್ನಷ್ಟು ಬಲ – CE20 ಕ್ರಯೋಜನಿಕ್ ಇಂಜಿನ್ ಪರೀಕ್ಷೆ ಯಶಸ್ವಿ
ರೈತ ನಾಯಕ ದಲ್ಲೇವಾಲ ಅವರು ಪಂಜಾಬ್ ಹಾಗೂ ಹರಿಯಾಣ ನಡುವೆ ಇರುವ ಖನೌರಿ ಗಡಿಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಕೇಂದ್ರ ಸರಕಾರವು ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ತಾವು ಉಪವಾಸ ಕೈಬಿಡುವುದಿಲ್ಲ ಎಂದು ಅವರು ನ.26ಕ್ಕೆ ಈ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ರೈತರ ಬೇಡಿಕೆಗಳಲ್ಲಿ ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತತೆ ಕೊಡುವುದು ಪ್ರಮುಖವಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯ ರಹಿತ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದಡಿಯಲ್ಲಿ ರೈತರು ಪಂಜಾಬ್ ಹಾಗೂ ಹರ್ಯಾಣ ಗಡಿಯಲ್ಲಿರುವ ಶಂಭು (Shambhu ) ಮತ್ತು ಖನೌರಿ ಗಡಿಯಲ್ಲಿ (Khanauri border) ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ಇವರ ಈ ಸತ್ಯಾಗ್ರಹವು ಇವರ ದೆಹಲಿ ಚಲೋವನ್ನು ಭದ್ರತಾ ಪಡೆಗಳು ತಡೆದಂದಿನಿಂದ ಅಂದರೆ ಕಳೆದ ಫೆ.13ರಿಂದ ನಡೆಯುತ್ತಿದೆ.