Sunday, 11th May 2025

Viral Video: ವಿಸಿ ಕಚೇರಿಯ ಮುಂದೆ ಡ್ಯಾನ್ಸ್‌ ಮಾಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿನಿಯರು; ಕಾರಣವೇನು?

Viral Video

ಢಾಕಾ: ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಆಡಳಿತದ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಅನುಸರಿಸಿದ ಮಾರ್ಗ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.ಇಲ್ಲಿ ಪ್ರತಿಭಟನೆ ನಡೆಸುವಾಗ ವಿದ್ಯಾರ್ಥಿಗಳು ಘೋಷಣೆ ಕೂಗುವುದಾಗಲಿ ಅಥವಾ ಇನ್ಯಾವುದೋ ವಸ್ತುಗಳನ್ನು ಬಿಸಾಡುವುದಾಗಲಿ ಮಾಡದೇ ವಿಭಿನ್ನ ರೀತಿಯಲ್ಲಿ ತಮ್ಮ ಪ್ರತಿಭಟನೆ ಮಾಡಿ ಜನರ ಗಮನ ಸೆಳೆದಿದ್ದಾರೆ.

ಈ ವೈರಲ್‌ ಆಗಿರುವ ವಿಡಿಯೊದಲ್ಲಿ ವಿದ್ಯಾರ್ಥಿಗಳ ಗುಂಪು ವಿಶ್ವವಿದ್ಯಾಲಯದ ಕಟ್ಟದ ಹೊರಗೆ ಒಟ್ಟಾಗಿ ಸೇರಿ ಜೋರಾಗಿ ಹಾಡು ಹಾಕಿ, ಅದಕ್ಕೆ ತಕ್ಕಂತೆ ಡ್ಯಾನ್ಸ್‌ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿರುವುದು ಕಂಡು ಬಂದಿದೆ. ಅಂದ ಹಾಗೇ ಈ ಪ್ರತಿಭಟನೆಗೆ ಅವರು ಆಯ್ಕೆ ಮಾಡಿಕೊಂಡ ಹಾಡು ಕೂಡ ಈಗ ಸೋಶಿಯಲ್‌ ಮೀಡಿಯಾದಲ್ಲಿ ಜನರ ಹುಬ್ಬೇರಿಸುವಂತೆ ಮಾಡಿದೆ.

ಹರಿಯಾಣದ ಪ್ರಸಿದ್ಧ ನರ್ತಕಿ ಸಪ್ನಾ ಚೌಧರಿ ಅವರ ಸೂಪರ್‌ ಹಿಟ್‌ ಹಾಡಾದ ʼತೇರಿ ಅಖ್ಯಾ ಕಾ ಯೊ ಕಾಜಲ್‌ʼ ಹಾಡಿಗೆ ವಿದ್ಯಾರ್ಥಿಗಳೆಲ್ಲರೂ ಚಪ್ಪಾಳೆ ತಟ್ಟಿ, ನಗುತ್ತಾ ಡಾನ್ಸ್‌ ಮಾಡಿದ್ದಾರೆ. ಸಂಗೀತದ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಗಾದರೆ ಈ ಸಂಗೀತದ ಪ್ರತಿಭಟನೆಯನ್ನು ಮಾಡಿದ್ದು ಯಾಕೆ ಎಂಬ ಪ್ರಶ್ನೆ ಕಾಡುತ್ತಿದೆಯಾ? ನೆಟ್ಟಿಗರ ಪ್ರಕಾರ, ಕ್ಯಾಂಪಸ್ ಹಾಸ್ಟೆಲ್‌ನಲ್ಲಿ ವಾಸಿಸುವ ಮಹಿಳಾ ವಿದ್ಯಾರ್ಥಿಗಳ ಕುಂದುಕೊರತೆಯ ಕಾರಣಕ್ಕಾಗಿ ಈ ಪ್ರತಿಭಟನೆ ನಡೆಸಲಾಗಿದೆಯಂತೆ. ವಿದ್ಯಾರ್ಥಿನಿಯರು ತಮ್ಮ ಹಾಸ್ಟೆಲ್‌ ಸುತ್ತಲೂ ಆಗುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ದೂರು ನೀಡಿದ್ದರು. ಆದರೆ ವಿಶ್ವವಿದ್ಯಾಲಯದ ಉಪಕುಲಪತಿಗಳು ಇದರ ಬಗ್ಗೆ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲವಂತೆ. ಇದರಿಂದ ನಿರಾಶೆಗೊಂಡ ವಿದ್ಯಾರ್ಥಿನಿಯರು ಗುರುವಿಗೆ ತಿರುಮಂತ್ರವನ್ನು ನೀಡಿದ್ದಾರೆ. ವಿಸಿ ಕಚೇರಿಯ ಹೊರಗೆ ಧ್ವನಿವರ್ಧಕಗಳನ್ನು ಅಳವಡಿಸಿ ಜೋರಾಗಿ ಸಂಗೀತವನ್ನು ಹಾಕಿ ಶಬ್ದ ಮಾಲಿನ್ಯದಿಂದಾಗುವ ಕಿರಿಕಿರಿ ಹೇಗಿರುತ್ತದೆ ಎಂದು ತೋರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:ಮುಂಬೈಯ ಭೀಕರ ಬಸ್‌ ದುರಂತ: ವೈರಲ್‌ ಆಯ್ತು ಅಪಘಾತದ ವಿಡಿಯೊ

ಈ ಪ್ರತಿಭಟನೆಯು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಎಲ್ಲರ ಮೊಗದಲ್ಲೂ ನಗು ಮೂಡಿಸಿದೆ. ವಿದ್ಯಾರ್ಥಿಗಳ ಈ ವಿಭಿನ್ನ ರೀತಿಯ ಪ್ರತಿಭಟನೆಯನ್ನು ಕೆಲವರು ತಮಾಷೆ ಮಾಡಿದ್ದಾರೆ. ನೆಟ್ಟಿಗರೊಬ್ಬರು “ಬಾಂಗ್ಲಾದೇಶದ ವಿದ್ಯಾರ್ಥಿಗಳು ಪ್ರತಿಭಟಿಸಲು ಹರ್ಯಾಣಿ ಹಾಡುಗಳನ್ನು ನುಡಿಸುವುದು ನನ್ನ ಬಿಂಗೊ ಕಾರ್ಡ್‌ನಲ್ಲಿ ಇರಲಿಲ್ಲ” ಎಂದು ಕಾಮೆಂಟ್ ಮಾಡಿದ್ದಾರೆ. ಪ್ರತಿಭಟನೆಯ ಸಮಯದಲ್ಲಿ ಬಳಸಲಾದ ಹೆಚ್ಚಿನ ಭಾರತೀಯ ಹಾಡುಗಳ ಕ್ಲಿಪ್ ಅನ್ನು ಇನ್ನೊಬ್ಬರು ಹಂಚಿಕೊಂಡಿದ್ದು,”ವಿಸಿ ಹೌಸ್ ಮುಂದೆ ಮುನ್ನಿ ಬದ್ನಾಮ್ ಹುಯಿ ಮತ್ತು ಚಿಕ್ನಿ ಚಮೇಲಿಯಲ್ಲಿ ಹುಡುಗಿಯರು ಮತ್ತು ಹುಡುಗರು ನೃತ್ಯ ಮಾಡುತ್ತಿದ್ದಾರೆ” ಎಂದು ಬರೆದಿದ್ದಾರೆ.