ನವದೆಹಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ (IND vs AUS) ಸರಣಿಯ ಇನ್ನುಳಿದ ಭಾಗದಲ್ಲಿ ಆಪ್ ಸ್ಟಂಪ್ ಲೈನ್ ಸಮಸ್ಯೆಯನ್ನು ಮೆಟ್ಟಿ ನಿಂತು ವಿರಾಟ್ ಕೊಹ್ಲಿ ಸಾಧ್ಯವಾದಷ್ಟು ಹೆಚ್ಚಿನ ಶತಕಗಳನ್ನು ಸಿಡಿಸಲಿದ್ದಾರೆಂದು ಭಾರತೀಯ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ. ಡಿಸೆಂಬರ್ 14 ರಂದು ಬ್ರಿಸ್ಬೇನ್ನ ದಿ ಗಬ್ಬಾದಲ್ಲಿ ನಡೆಯುವ ಪಂದ್ಯದಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ ಅವರ ವಿಶ್ವಾಸ ಹೆಚ್ಚಲಿದೆ ಎಂದು ಹೇಳಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದ 30ನೇ ಶತಕವನ್ನು ಸಿಡಿಸಿದ್ದರು ಹಾಗೂ ಆಸ್ಟ್ರೇಲಿಯಾದಲ್ಲಿ ಏಳನೇ ಶತಕವನ್ನು ಬಾರಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಪ್ರವಾಸಿ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ.
ಆಸ್ಟ್ರೇಲಿಯಾದ ಪ್ರಮುಖ ಐದು ಸ್ಥಳಗಳಲ್ಲಿ ಶತಕ ಸಿಡಿಸಿದ ಸುನೀಲ್ ಗವಾಸ್ಕರ್ ಹಾಗೂ ಆಲ್ಸ್ಟೈರ್ ಕುಕ್ ಅವರ ದಾಖಲೆ ಪಟ್ಟಿಗೆ ವಿರಾಟ್ ಕೊಹ್ಲಿ ಸೇರ್ಪಡೆಯಾಗುವ ಸಾಧ್ಯತೆ ಇದೆ. ಪರ್ತ್, ಅಡಿಲೇಡ್, ಸಿಡ್ನಿ, ಮೆಲ್ಬೋರ್ನ್ನಲ್ಲಿ ಈಗಾಗಲೇ ಟೆಸ್ಟ್ ಶತಕಗಳನ್ನು ಸಿಡಿಸಿರುವ ವಿರಾಟ್ ಕೊಹ್ಲಿ, ಅಡಿಲೇಡ್ನಲ್ಲಿ ಶತಕ ಸಿಡಿಸಿದರೆ ಆಸ್ಟ್ರೇಲಿಯಾದ ಪ್ರಮುಖ ಸ್ಥಳಗಳಲ್ಲಿ ಶತಕ ಸಿಡಿಸಿದ ಮೂರನೇ ಪ್ರವಾಸಿ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಸುನೀಲ್ ಗವಾಸ್ಕರ್ ವಿಶ್ವಾಸವನ್ನು ಹೊಂದಿದ್ದಾರೆ.
ಬ್ರಿಸ್ಬೇನ್ನಲ್ಲಿ ಕೊಹ್ಲಿ ಶತಕ ಸಿಡಿಸಲಿದ್ದಾರೆ: ಗವಾಸ್ಕರ್
“ಬ್ರಿಸ್ಬೇನ್ನಲ್ಲಿ ಇವರು ಶತಕ ಸಿಡಿಸಿದರೆ, ಇದು ನಿಜಕ್ಕೂ ಅದ್ಭುತವಾಗಲಿದೆ. ಒಂದು ವೇಳೆ ಅವರು ಅಡಿಲೇಡ್ನಲ್ಲಿ ಶತಕ ಸಿಡಿಸಿದರೆ, ಆಸ್ಟ್ರೇಲಿಯಾದ ಎಲ್ಲಾ ಸ್ಥಳಗಳಲ್ಲಿ ಶತಕ ಸಿಡಿಸಿದ ಬ್ಯಾಟ್ಸ್ಮನ್ಗಳ ಎಲೈಟ್ ಲಿಸ್ಟ್ಗೆ ಸೇರ್ಪಡೆಯಾಗಲಿದ್ದಾರೆ,” ಎಂದು ಸ್ಟಾರ್ ಸ್ಪೋರ್ಟ್ಸ್ಗೆ ಸುನೀಲ್ ಗವಾಸ್ಕರ್ ತಿಳಿಸಿದ್ದಾರೆ.
“ಬ್ರಿಸ್ಬೇನ್ನಲ್ಲಿ ಶತಕ ಸಿಡಿಸಿದರೆ ವಿರಾಟ್ ಕೊಹ್ಲಿ ಅವರಲ್ಲಿ ವಿಶ್ವಾಸ ಹೆಚ್ಚಾಗಲಿದೆ. ಆ ಮೂಲಕ ಈಗಾಗಲೇ ಶತಕಗಳನ್ನು ಸಿಡಿಸಿರುವ ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿಯೂ ಅವರು ಶತಕಗಳನ್ನು ಸಿಡಿಸಬಹುದು. ಆ ಮೂಲಕ ಈ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ನಾಲ್ಕು ಶತಕಗಳನ್ನು ಸಿಡಿಸಿದಂತಾಗುತ್ತದೆ,” ಎಂದು ಬ್ಯಾಟಿಂಗ್ ದಿಗ್ಗಜ ಭವಿಷ್ಯ ನುಡಿದಿದ್ದಾರೆ.
ವಿರಾಟ್ ಕೊಹ್ಲಿ ಮೇಲೆ ಗವಾಸ್ಕರ್ ವಿಶ್ವಾಸ
“ಡಾನ್ ಬ್ರಾಡ್ಮನ್ ಕೂಡ ಪ್ರತಿಯೊಂದು ಟೆಸ್ಟ್ ಪಂದ್ಯದಲ್ಲಿ ರನ್ ಗಳಿಸಿದ ಉದಾಹರಣೆ ಇಲ್ಲ.ಕೆಲವೊಂದು ಟೆಸ್ಟ್ ಪಂದ್ಯಗಳಲ್ಲಿ ವೈಫಲ್ಯ ಎಂಬುದು ಇದ್ದೇ ಇರುತ್ತದೆ. ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿನ ವೈಫಲ್ಯ ಎಲ್ಲರಿಗೂ ಬೇಸರವನ್ನು ಉಂಟು ಮಾಡಿದೆ. ಆದರೆ, ಟೆಸ್ಟ್ ಸರಣಿಯ ಇನ್ನುಳಿದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ತೋರಲಿದ್ದಾರೆ,” ಎಂದು ಸುನೀಲ್ ಗವಾಸ್ಕರ್ ಭವಿಷ್ಯ ನುಡಿದಿದ್ದಾರೆ.
ಈ ಸುದ್ದಿಯನ್ನು ಓದಿ: Virat Kohli: ಆಸ್ಟ್ರೇಲಿಯಾದಲ್ಲಿ ವಿಶೇಷ ದಾಖಲೆಯ ಮೇಲೆ ವಿರಾಟ್ ಕೊಹ್ಲಿ ಕಣ್ಣು!