Saturday, 17th May 2025

IND vs AUS: ರೋಹಿತ್‌ ಶರ್ಮಾಗಿಂತ ಜಸ್‌ಪ್ರೀತ್‌ ಬುಮ್ರಾ ನಾಯಕತ್ವ ಬೆಸ್ಟ್‌ ಎಂದ ಸೈಮನ್‌ ಕ್ಯಾಟಿಚ್‌!

IND vs AUS: Jasprit Bumrah used the bowlers far better than Rohit Sharma: Simon Katich

ನವದೆಹಲಿ: ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ (IND vs AUS) ಭಾರತ ತಂಡವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದ ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಸೈಮನ್‌ ಕ್ಯಾಟಿಚ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಅಡಿಲೇಡ್‌ನಲ್ಲಿ ರೋಹಿತ್‌ ಶರ್ಮಾ ಅವರಿಗಿಂತ ಪರ್ತ್‌ನಲ್ಲಿ ಬೌಲರ್‌ಗಳನ್ನು ಜಸ್‌ಪ್ರೀತ್‌ ಬುಮ್ರಾ ಅತ್ಯುತ್ತಮವಾಗಿ ಬಳಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಎರಡನೇ ಮಗುವಿನ ಕಾರಣ ರೋಹಿತ್‌ ಶರ್ಮಾ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡವನ್ನು ಹಿರಿಯ ವೇಗಿ ಜಸ್‌ಪ್ರೀತ್‌ ಬುಮ್ರಾ ಮುನ್ನಡೆಸಿದ್ದರು ಹಾಗೂ ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದಲ್ಲಿ ಬುಮ್ರಾ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರುವುದರ ಜೊತೆಗೆ ಬೌಲರ್‌ಗಳನ್ನು ಅತ್ಯುತ್ತಮವಾಗಿ ಬಳಿಸಿಕೊಂಡಿದ್ದರು.

ಆದರೆ, ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ಗೆ ಮರಳಿದ್ದ ರೋಹಿತ್‌ ಶರ್ಮಾ ಬ್ಯಾಟಿಂಗ್‌ ವೈಫಲ್ಯ ಅನುಭವಿಸುವುದರ ಜೊತೆಗೆ ನಾಯಕತ್ವದಲ್ಲಿಯೂ ಎಡವಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಸದ್ಯ ಎರಡೂ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ.

ಜಸ್‌ಪ್ರೀತ್‌ ಬುಮ್ರಾ ನಾಯಕತ್ವಕ್ಕೆ ಕ್ಯಾಟಿಚ್‌ ಗುಣಗಾನ

ಪಾಡ್‌ ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ಸೈಮನ್‌ ಕಾಟಿಚ್‌, ರೋಹಿತ್‌ ಶರ್ಮಾ ಅವರಿಗಿಂತ ಜಸ್‌ಪ್ರೀತ್‌ ಬುಮ್ರಾ ಭಾರತ ತಂಡದ ಬೌಲರ್‌ಗಳನ್ನು ಅತ್ಯುತ್ತಮವಾಗಿ ಬಳಸಿಕೊಂಡಿದ್ದಾರೆಂದು ಗುಣಗಾಣ ಮಾಡಿದ್ದಾರೆ. ಮೊದಲನೇ ಟೆಸ್ಟ್‌ ಬಳಿಕ ಜಸ್‌ಪ್ರೀತ್‌ ಬುಮ್ರಾ ನಾಯಕತ್ವವನ್ನು ಹಲವು ಮಾಜಿ ಕ್ರಿಕೆಟಿಗರು ಗುಣಗಾನ ಮಾಡಿದ್ದರು. ಆದರೆ, ಅಡಿಲೇಡ್‌ ಟೆಸ್ಟ್‌ ಸೋಲಿನ ಬಳಿಕ ಎಲ್ಲರೂ ರೋಹಿತ್‌ ಶರ್ಮಾ ನಾಯಕತ್ವವನ್ನು ಪ್ರಶ್ನೆ ಮಾಡುತ್ತಿದ್ದಾರೆ.

“ಎರಡೂ ಫಲಿತಾಂಶಗಳನ್ನು ನೀವು ಹೋಲಿಕೆ ಮಾಡುವುದಾದರೆ, ಪರ್ತ್‌ನಲ್ಲಿ ರೋಹಿತ್‌ ಶರ್ಮಾ ಗೈರಾಗಿದ್ದರು. ಪರ್ತ್‌ನಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರು ಬೌಲರ್‌ಗಳನ್ನು ಸಮರ್ಥವಾಗಿ ಬಳಿಸಿಕೊಂಡಿದ್ದರು ಹಾಗೂ ಬೌಲರ್‌ಗಳಿಗೆ ದೀರ್ಘಾವಧಿ ಸ್ಪೆಲ್‌ ನೀಡಿದ್ದರು. ಆದರೆ, ರೋಹಿತ್‌ ಶರ್ಮಾ ಈ ವಿಷಯದಲ್ಲಿ ಎಡವಿದ್ದಾರೆ. ಪರ್ತ್‌ ಟೆಸ್ಟ್‌ ಮೊದಲನೇ ದಿನ ಆಸ್ಟ್ರೇಲಿಯಾ ತಂಡ 67 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬೌಲರ್‌ಗಳು ಕೂಡ ಸ್ಟಂಪ್ಸ್‌ ಮೇಲೆ ದಾಳಿ ನಡೆಸಿದ್ದರು,” ಎಂದು ಸೈಮನ್‌ ಕ್ಯಾಟಿಚ್‌ ತಿಳಿಸಿದ್ದಾರೆ.

ರೋಹಿತ್‌ ಶರ್ಮಾ ಸ್ಲಿಪ್‌ನಲ್ಲಿ ಸಕ್ರಿಯರಾಗಿರಬೇಕು

“ಅಡಿಲೇಡ್‌ ಟೆಸ್ಟ್‌ ಪಂದ್ಯದ ಮೊದಲನೇ ದಿನ ರಾತ್ರಿ ನೀವು ಪಿಚ್‌ ಮ್ಯಾಪ್‌ ನೋಡಬಹುದು ಹಾಗೂ 7-8 ಮೀಟರ್‌ನಲ್ಲಿ ಬೌಲರ್‌ಗಳು ಹೆಚ್ಚು ಶಾರ್ಟ್‌ ಹಾಗೂ ವೈಡರ್‌ ಎಸೆತಗಳನ್ನು ಹಾಕಿದ್ದರು. ಇಲ್ಲಿ ಬೌಲರ್‌ಗಳು ಎಡವಿದ್ದರು. ಈ ವೇಳೆ ಮೊದಲನೇ ಸ್ಲಿಪ್‌ನಲ್ಲಿದ್ದ ರೋಹಿತ್‌ ಶರ್ಮಾ ಇದೆಲ್ಲವನ್ನೂ ನೋಡಿದ್ದರು. ಅದರಂತೆ ಬೌಲರ್‌ಗಳು ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬ ಸಂಗತಿಗಳನ್ನು ಅವರು ತಿಳಿಸಬೇಕಿತ್ತು. ಏಕೆಂದರೆ, ಒಂದೇ ಒಂದು ವಿಕೆಟ್‌ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿತ್ತು. ತಡವಾಗಿ ಆಸೀಸ್‌ ಪಂದ್ಯವನ್ನು ಗೆದ್ದುಕೊಂಡಿತ್ತು,” ಎಂದು ಆಸೀಸ್‌ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ಭಾರತದ ಪಿಂಕ್‌ ಬಾಲ್‌ ಟೆಸ್ಟ್‌ ಸೋಲಿಗೆ ಪ್ರಮುಖ 4 ಕಾರಣಗಳು!