Tuesday, 13th May 2025

H C Mahadevappa: ತಾಲೂಕು ಅಭಿವೃದ್ದಿ ಅಧಿಕಾರಿ ವಿಶ್ವನಾಥ್ ಮೇಲೆ ಕ್ರಮವಹಿಸಲು ಸಚಿವ ಮಹದೇವಪ್ಪ ಪತ್ರ

ಸಮಾಜಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ಪತ್ರಕ್ಕೂ ಕಿಮ್ಮತ್ತು ನೀಡದ ಅಂಬೇಡ್ಕರ್ ಅಭಿವೃದ್ದಿ ನಿಗಮದ ಎಂಡಿ

ಅಧಿಕಾರಿಯ ಕಿರುಕುಳದಿಂದ ಅರಣ್ಯರೋಧನವಾಗಿರುವ ಗಂಗಾಕಲ್ಯಾಣ ಯೋಜನೆ ಅರ್ಹ ಫಲಾನುಭವಿಗಳು

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲಾ ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ  ಶಿಡ್ಲಘಟ್ಟ ತಾಲೂಕು ಅಭಿವೃದ್ದಿ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ವಿಶ್ವನಾಥ್‌ರ ಹಂಗಮಿ ಡಿಎಂ ಆಗಿದ್ದಾಗ ಎಸಗಿರುವ ಕರ್ತವ್ಯ ಲೋಪದ ವಿರುದ್ದ ಬಾಗೇಪಲ್ಲಿ ಶಾಸಕ ಮಹದೇವಪ್ಪಗೆ ದೂರು ನೀಡಿದ್ದರು. ಈ ದೂರು ಆಧರಿಸಿ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ.ಮಹದೇವಪ್ಪ ವಜಾಮಾಡಲು ಅಭಿವೃದ್ಧಿ ನಿಗಮದ ಎಂಡಿಗೆ ಪತ್ರ ಬರೆದು ೬ ತಿಂಗಳಾ ದರೂ  ಕೂಡ ಕ್ರಮವಹಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಶಿಡ್ಲಘಟ್ಟ ತಾಲೂಕು ಅಭಿವೃದ್ದಿ ಅಧಿಕಾರಿಯಾಗಿರುವ ವಿಶ್ವನಾಥ್ ಇದೇ ನಿಗಮದಿಂದ ಸಾಂಸ್ಥಿಕ ಕೋಟಾ ಎಂಎಲ್‌ಎ ಕೋಟಾದಲ್ಲಿ ೨೦೧೬ರಿಂದ ೨೦೨೩ರವರೆಗೆ ಕೊಳವೆಬಾವಿ ಕೊರೆಸಲು ಕಾರ್ಯಾದೇಶ ಪಡೆದಿದ್ದರೂ ಈವರೆಗೂ ಕ್ರಮವಹಿಸದೆ ಕೂಡ ಈ ಅಧಿಕಾರಿಯ ಕರ್ತವ್ಯಲೋಪದಿಂದ ಈವರೆಗೆ ಕೊಳವೆಬಾವಿ ಕೊರೆಸಿ ಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ನಮ್ಮದು ದಿನದಲಿತರ ಪರವಾದ ಸರಕಾರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರಕಾರಕ್ಕೆ ಸವಾಲಾಗಿರುವ ಈಅಧಿಕಾರಿಯ ಎತ್ತಂಗಡಿ ಆಗುವುದೋ ಇಲ್ಲವೋ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಕರ್ತವ್ಯಲೋಪ
ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಹಾಲಿ ತಾಲೂಕು ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯದಲ್ಲಿರುವ ವಿಶ್ವನಾಥ್ ಪ್ರಭಾರಿ ಡಿ.ಎಂ ಆಗಿದ್ದ ಅವಧಿಯಲ್ಲಿ ಎಸಗಿರುವ ಕರ್ತವ್ಯಲೋಪ, ಅಧಿಕಾರ ದುರ್ಭಳಕೆ ವಿರುದ್ಧ ಕ್ರಮವಹಿಸಲು ಕೋರಿ ಸುಬ್ಬಾರೆಡ್ಡಿ ಸಮಾಜಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರಿಗೆ ಜೂನ್ ೧೦ ೨೦೨೪ ರಂದು ಲಿಖಿತ ದೂರು ನೀಡಿದ್ದರು.ಇದನ್ನು ಅನುರಿಸಿ ಸಚಿವ ಮಹದೇವಪ್ಪ ಜೂನ್ ೧೫,೨೦೨೪ರಂದು ಸದರಿ ಅಧಿಕಾರಿಯ ವಿರುದ್ಧ ಕ್ರಮವಹಿಸಲು ವ್ಯವಸ್ಥಾಪಕ ನಿರ್ದೇಶಕರು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ಕೇಂದ್ರ ಕಚೇರಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ.ಇದಾಗಿ ೬ ತಿಂಗಳು ಕಳೆದರೂ ಈವರೆಗೆ ಯಾವ ಕ್ರಮವೂ ಆಗದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಸಚಿವರ ಪತ್ರಕ್ಕೂ ಕಿಮ್ಮತ್ತಿಲ್ಲ !!!

ತಮ್ಮದೇ ಇಲಾಖೆಯ ಸಚಿವರೊಬ್ಬರು ಚಿಕ್ಕಬಳ್ಳಾಪುರ ಜಿಲ್ಲಾ ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ತಾಲೂಕು ಅಭಿವೃದ್ದಿ ಅಧಿಕಾರಿಯಾಗಿರುವ ವಿಶ್ವನಾಥ್ ವಿರುದ್ಧ ಕ್ರಮವಹಿಸಿ ಎಂದು ಎಂ.ಡಿ ಅವರಿಗೆ ನಿರ್ದೇಶನ ನೀಡಿ ೬ ತಿಂಗಳಾಗಿದ್ದರೂ ಈವರೆಗೆ ಯಾವುದೇ ಕ್ರಮವಹಿಸದೇ ಇರುವುದು ನಿಗಮದಲ್ಲಿ ಯಾವುದೂ ಸರಿಯಲ್ಲ ಎಂಬುದನ್ನು ಒತ್ತಿ ಹೇಳುತ್ತಿದೆ.ಮೇಲಾಗಿ ಕೊಳವೆಬಾವಿ ಕೊರೆಸುವಲ್ಲಿ ಕೇಂದ್ರ ಕಚೇರಿಯ ಎಂಡಿ ಜವಾಬ್ದಾರಿಯೂ ಇಲ್ಲವೆ? ಸರಿಯಾಗಿ ಕರ್ತವ್ಯ ಪಾಲನೆ ಮಾಡದೆ ಅಧಿಕಾರಿಗಳ ಮೇಲೆ ಕ್ರಮಜರುಗಿಸುವ ಅಧಿಕಾರ ಇದ್ದರೂ ಸುಮ್ಮನಿರುವುದರ ಮರ್ಮವೇನು ಎಂಬುದನ್ನು ಸಚಿವರೇ ಹೇಳಬೇಕಿದೆ.ಇವಲ್ಲಾ ನೋಡಿದರೆ ಈ ಸರಕಾರದಲ್ಲಿ ಸಚಿವರಿಗೂ ಕೂಡ ಅಧಿಕಾರಿಗಳ ಮೇಲೆ ಹಿಡಿತ ಇಲ್ಲದಂತಾಗಿದೆ ಎನ್ನದೆ ವಿಧಿಯಿಲ್ಲ.

ಅರಣ್ಯ ರೋಧನೆಗೆ ಕೊನೆಯೆಂದು….?

ಪರಿಶಿಷ್ಟ ಜಾತಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಉದ್ದೇಶದಿಂದ ಸ್ಥಾಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮವೂ ಕೂಡ ವಂಚನೆ ಮಾಡುತ್ತಿದ್ದರೆ ಫಲಾನುಭವಿಗಳು ಯಾರಿಗೆ ದೂರಬೇಕೋ ಎಂಬುದನ್ನು ಅರಿಯದೆ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.ಸಚಿವರ ಪತ್ರಕ್ಕೆ ಬದುಕಿಗೆ ಆಸರೆ ದೊರೆಯಲಿ ಎನ್ನುವ ಮಹದಾಸೆಯಿಂದ ಇಲಾಖೆ ಸ್ಥಾಪಿಸಿದ್ದಾರೆ. ಆದರೆ ಇಲ್ಲಿಗೆ ಅಧಿಕಾರಿಗಳಾಗಿ ಬರುವ ಜಾತಿಪ್ರಣೀತ ಭ್ರಷ್ಟ ಅಧಿಕಾರಿಗಳು ಸರಕಾರಿ ಸೌಲಭ್ಯವನ್ನು ತಲುಪಬೇಕಾದವರಿಗೆ ತಲುಪಿಸದೆ ವಂಚನೆ ಮಾಡುತ್ತಿರುವುದರಿಂದ ಫಲಾನುಭವಿಗಳ ಕೂಗು ಅರಣ್ಯರೋಧನದಂತಾಗಿದ್ದು ಸರಕಾರ ಕೂಡಲೇ ಈ ಬಗ್ಗೆ ಕ್ರಮವಹಿಸಿ ತಪ್ಪಿತಸ್ಥ ಅಧಿಕಾರಿಯನ್ನು ಎತ್ತಂಗಡಿ ಮಾಡುವ ಮೂಲಕ ಭ್ರಷ್ಟಾಚಾರ ಮತ್ತು ಶೋಷಣೆಗೆ ಅಂತ್ಯಹಾಡಬೇಕಿದೆ.

*

ಶಿಡ್ಲಘಟ್ಟ ತಾಲೂಕು ಒಂದರಲ್ಲಿಯೇ ೨೦೧೬ ರಿಂದ ೨೦೨೩ವರೆಗೆ ಸಾಂಸ್ಥಿಕ ಕೋಟಾ ,ಎಂಎಲ್‌ಎ ಕೋಟಾದಲ್ಲಿ ಮಂಜೂರಾಗಿರುವ ೨೧೦ ಗಂಗಾಕಲ್ಯಾಣ ಪ್ರಕರಣಗಳು  ಬಾಕಿಯಿವೆ.ಇವುಗಳಲ್ಲಿ ಒಂದನ್ನೂ ಕೂಡ ಕೊರೆಸದೆ ನಮಗೆ ಅನ್ಯಾಯ ಮಾಡಲಾಗುತ್ತಿದೆ.ಅಲ್ಲಿಂದ ಈವರೆಗೆ ಇಬ್ಬರು ಡಿಎಂಗಳು, ಇಬ್ಬರು ತಾಲೂಕು ಅಭಿವೃದ್ದಿ ಅಧಿಕಾರಿಗಳು ಬದಲಾಗಿದ್ದಾರೆ.ಯಾರೂ ಕೂಡ ಕ್ರಮವಹಿಸಿಲ್ಲ. ಹಾಲಿ ಇರುವ ಟಿಡಿಒ ವಿಶ್ವನಾಥ್ ಶಿಡ್ಲಘಟ್ಟ ತಾಲೂಕಿನವರೇ ಆಗಿರುವುದರಿಂದ ಫಲಾನುಭವಿಗಳಿಗೆ ನ್ಯಾಯ ನೀಡದೆ ಸಬೂಬುಗಳನ್ನು ಹೇಳಿ ಕಿರುಕುಳ ಹೆಚ್ಚು ನೀಡುತ್ತಿದಾರೆ.ಇವರ ವಿರುದ್ದ ಕ್ರಮವಹಿಸಿ ನಮಗೆ ನ್ಯಾಯ ನೀಡಬೇಕು.ಇಲ್ಲದಿದ್ದರೆ ಜಿಲ್ಲಾಡಳಿತ ಎದುರು ಹೋರಾಟ ಮಾಡುವುದು ಅನಿವಾರ್ಯ.
–ದ್ಯಾವಪ್ಪ ಫಲಾನುಭವಿ ದೊಡ್ಡತೇಕಹಳ್ಳಿ

ಈ ಅಧಿಕಾರಿಯ ವಿರುದ್ಧ ಸಂತ್ರಸ್ಥರು ಲಿಖಿತ ದೂರನ್ನು ನೀಡಿದರೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು.ಕೇವಲ ಚಿಕ್ಕಬಳ್ಳಾಪುರ ಕೋಲಾರದಲ್ಲಿ ಗಂಗಾಕಲ್ಯಾಣ ಯೋಜನೆಯ ಕೊಳವೆಬಾವಿ ಕೊರೆಸುವುದು ೨೦೧೫,೧೬ರಿಂದಲೇ ಕುಂಠಿತಗೊ೦ಡಿದೆ.ಇಷ್ಟೇ ಅಲ್ಲದೆ ರಾಜ್ಯದಲ್ಲಿ ಸುಮಾರು ೪ ರಿಂದ ೫ ಸಾವಿರ ಬೋರ್‌ವೆಲ್ ಕೊರೆಸುವುದು ಬಾಕಿಯಿವೆ.ಇವನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ.
-ಪ್ರತಿಭಾ ಡಿಜಿಎಂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ ಬೆಂಗಳೂರು ಉಪವಿಭಾಗ