Thursday, 15th May 2025

Tumkur News: ಅದ್ದೂರಿಯಾಗಿ ಜರುಗಿದ ಶ್ರೀ ಕಟ್ಟಿನ ಚೌಡೇಶ್ವರಿ ವಾರ್ಷಿಕೋತ್ಸವ

ಗುಬ್ಬಿ: ನಾಲ್ಕು ಶತಮಾನದ ಇತಿಹಾಸ ಹೊಂದಿರುವ ಸೋಮಲಾಪುರ ಮಜರೆ ತೋಟದಪಾಳ್ಯ ಶ್ರೀ ಕಟ್ಟಿನ ಚೌಡೇ ಶ್ವರಿ ದೇವಾಲಯ ಜೀರ್ಣೋದ್ದಾರ ಕೈಗೊಂಡು 9 ವರ್ಷದ ವಾರ್ಷಿಕೋತ್ಸವ ಹಾಗೂ ದೇವಿಯ ನೂತನ ಚರಬಿಂಬ ಪ್ರತಿಷ್ಠಾಪನಾ ಮಹೋತ್ಸವ ಅದ್ದೂರಿಯಾಗಿ ನಡೆಸಲಾಯಿತು.

ಅರಿಶಿಣಪುಡಿ ಮೇಲೆ ಬರವಣಿಗೆ ಮೂಲಕ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಅಮ್ಮನವರ ಅನುಮತಿಗೆ ಬರುವ ಭಕ್ತರು ಚರಬಿಂಬ ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಹರಕೆ ಕಟ್ಟಿಕೊಳ್ಳುವ ಭಕ್ತರು ತಮ್ಮ ಕೋರಿಕೆ ಸಿದ್ಧಿ ಆಗಿರುವ ಹಿನ್ನಲೆ ದಿನ ಕಳೆದಂತೆ ಭಕ್ತರ ಸಂಖ್ಯೆ ಸಾವಿರಾರು ಗಣತಿಯಲ್ಲಿ ಹೆಚ್ಚಳವಾಗಿದೆ. ತಾಲ್ಲೂಕಿನಲ್ಲೇ ಶ್ರೀ ಚೌಡೇಶ್ವರಿ ದೇವಿ ಸಿದ್ಧಿ ಸ್ಥಾನ ಇದಾಗಿದೆ ಎಂಬುದು ಅಲ್ಲಿನ ಭಕ್ತರ ಮಾತಾಗಿದೆ.

ಗೊಲ್ಲಹಳ್ಳಿ ಮಠದ ಶ್ರೀ ವಿಭವ ವಿದ್ಯಾಶಂಕರ ಸ್ವಾಮೀಜಿ ಹಾಗೂ ಶಿಡ್ಲೆಕೋಣ ವಾಲ್ಮೀಕಿ ಸಂಸ್ಥಾನದ ಶ್ರೀ ಸಂಜಯ ಕುಮಾರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ನಡೆದ ಎಲ್ಲಾ ಧಾರ್ಮಿಕ ವಿಧಿಗಳು ನಡೆದು ಹೋಮ ಹವನಗಳು ಜರುಗಿದವು. ಈ ಮೊದಲು ದೇವಿಯ ಪ್ರತಿಷ್ಠಾಪನೆಯಾಗಿರುವ ದೇವಾಲಯ ಶಿಥಿಲಗೊಂಡ ಹಿನ್ನಲೆ ನೂತನ ದೇವಾಲಯ ನಿರ್ಮಿಸಿ ಒಂಬತ್ತು ವರ್ಷ ಕಳೆದಿದೆ. ಚೌಡೇಶ್ವರಿ ಅಮ್ಮನವರ ಏಕೈಕ ದೇವಾಲಯ ತಾಲ್ಲೂಕಿನಲ್ಲಿರು ವುದು ಭಕ್ತರಲ್ಲಿ ಸಂತಸ ತಂದಿದೆ. ಈ ನಿಟ್ಟಿನಲ್ಲಿ ದೇವಾಲಯ ಅಭಿವೃದ್ಧಿಗೆ ದೇಣಿಗೆ ಕಾಣಿಕೆ ಸರಾಗವಾಗಿ ನೀಡುತ್ತಿದ್ದಾರೆ. 

ಐದು ತಲೆಮಾರಿನ ಕುಟುಂಬ ವಂಶಪಾರಂಪರ್ಯವಾಗಿ ನಡೆಸಿದ ಶ್ರೀ ಚೌಡೇಶ್ವರಿ ದೇವಿ ಸಿದ್ಧಿ ದೇವಾಲಯ ಇಂದು ಶಕ್ತಿಪೀಠವಾಗಿ ಭಕ್ತರನ್ನು ಸೆಳೆಯುತ್ತಿದೆ. ಸುತ್ತಲಿನ ಭಕ್ತರು ತೋಟದ ಕೃಷಿಗೆ ಕೊಳವೆ ಬಾವಿ ತೋಡಲು ಹರಕೆ ಕಟ್ಟುವುದರಿಂದ ಆರಂಭವಾಗಿ ಕುಟುಂಬ ಸಮಸ್ಯೆ, ವ್ಯಾಜ್ಯ, ಭೂ ವಿವಾದ, ಸಂಸಾರ ಕಲಹ ಎಲ್ಲದಕ್ಕೂ ದೇವಿಯೇ ಅಪ್ಪಣೆ ನೀಡಿ ಬರವಣಿಗೆ ಮೂಲಕ ಮಾರ್ಗ ಸೂಚಿಸುತ್ತಾಳೆ. ಸಮಸ್ಯೆಗೆ ಪರಿಹಾರ ಪಡೆದ ಭಕ್ತರು ಇಷ್ಟಾರ್ಥ ಸಿದ್ಧಿಯಾದ ಬಳಿಕ ನೀಡುವ ದೇಣಿಗೆ ಮೂಲಕವೇ ಚರಬಿಂಬ ಸ್ಥಾಪಿಸಲಾಗಿದೆ.

ಕಲ್ಲತ್ತಿಗಿರಿ ಮೂಲಕ ತಂದ ಶಕ್ತಿ ಬಿಂಬ ಆಶೀರ್ವಾದಕ್ಕೆ ಭಕ್ತರು ಹರಿದು ಬರುತ್ತಿದ್ದಾರೆ. ಇಂತಹ ಶಕ್ತಿಪೀಠಕ್ಕೆ ಭಕ್ತರ ಮತ್ತಷ್ಟು ಸಹಕಾರ ಅಗತ್ಯವಿದೆ ಎಂದು ದೇವಾಲಯದ ಸಮಿತಿಯ ಸೋಮಲಾಪುರ ಕೃಷ್ಣಮೂರ್ತಿ ಮನವಿ ಮಾಡಿದ್ದಾರೆ.