ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ (IND vs AUS) ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಬೇಕೆಂದು ಭಾರತೀಯ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಸಲಹೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ನ ಭವಿಷ್ಯದ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ತ್ಯಾಗ ಮಾಡಬೇಕೆಂದು ಬಲಗೈ ಬ್ಯಾಟ್ಸ್‌ಮನ್ ಆಗ್ರಹಿಸಿದ್ದಾರೆ.
ಎರಡನೇ ಮಗುವಿನ ಜನನದ ಕಾರಣ ರೋಹಿತ್ ಶರ್ಮಾ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ನಂತರ ಅಡಿಲೇಡ್ ಟೆಸ್ಟ್ ಪಂದ್ಯಲ್ಲಿ ಆಡಿದ್ದ ರೋಹಿತ್ ಶರ್ಮಾ ಪ್ರಥಮ ಇನಿಂಗ್ಸ್‌ನಲ್ಲಿ ಮೂರು ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ಆರು ರನ್ ಸೇರಿ ಒಟ್ಟು 9 ರನ್‌ಗಳಿಗೆ ಸೀಮಿತರಾಗಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮಿಡೆಲ್ ಸ್ಟಂಪ್ ಮೇಲೆ ಬರುವ ಎಸೆತಗಳನ್ನು ಆಡಲು ತಿಣುಕಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಅವರು ಸ್ಕಾಟ್ ಬೋಲೆಂಡ್ ಮತ್ತು ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದ್ದರು.
ಇಎಸ್‌ಪಿಎನ್ ಕ್ರಿಕ್‌ಇನ್ಪೊ ಜೊತೆ ಮಾತನಾಡಿದ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮಾ ಅವರು ಫ್ರಂಟ್ ಫುಟ್ ತಂತ್ರದ ಮೇಲೆ ಹೆಚ್ಚಿನ ಕೆಲಸ ಮಾಡಬೇಕೆಂದು ಆಗ್ರಹಿಸಿದ್ದಾರೆ. ಇದನ್ನು ಅವರು ಪಾಲಿಸಿದರೆ ಆಸ್ಟ್ರೇಲಿಯಾದಲ್ಲಿ ಇದು ನೆರವು ನೀಡಲಿದೆ. ಅಲ್ಲದೆ ತಮ್ಮ ಓಪನಿಂಗ್ ಬ್ಯಾಟಿಂಗ್ ಕ್ರಮಾಂಕವನ್ನು ಯುವ ಆಟಗಾರರಿಗೆ ತ್ಯಾಗ ಮಾಡಬೇಕೆಂದು ತಿಳಿಸಿದ್ದಾರೆ.
IND vs AUS: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೂಡಿಬಂದ ಟಾಪ್ 3 ವಿವಾದಗಳು!
ರೋಹಿತ್ ಶರ್ಮಾಗೆ ಪೂಜಾರ ಮಹತ್ವದ ಸಲಹೆ
“ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಅಷ್ಟೊಂದು ರನ್ ಗಳಿಸಿರಲಿಲ್ಲ ಹಾಗೂ ಆಸ್ಟ್ರೇಲಿಯಾದಲ್ಲಿಯೂ ಉತ್ತಮ ಆರಂಭ ಪಡೆದಿಲ್ಲ. ಈ ಕಾರಣ ಅವರ ಮೇಲೆ ಸ್ವಲ್ಪ ಒತ್ತಡವಿದೆ. ತಮ್ಮ ಸಾಮರ್ಥ್ಯದ ಬಗ್ಗೆ ಚೆನ್ನಾಗಿ ಗೊತ್ತಿರುವ ಅವರು ತಮ್ಮ ಫುಟ್‌ವರ್ಕ್ ಮೇಲೆ ಸ್ವಲ್ಪ ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ. ಅವರು ತಮ್ಮ ಮುಂದಿನ ಪಾದವನ್ನು ಸ್ವಲ್ಪ ಜಾಸ್ತಿ ಚಾಚಿದರೆ, ಇದು ಆಸ್ಟ್ರೇಲಿಯಾದಲ್ಲಿ ಸಹಾಯವಾಗಲಿದೆ,” ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಪೋ ಹಂಚಿಕೊಂಡಿರುವ ವಿಡಿಯೊದಲ್ಲಿ ಪೂಜಾರ ಹೇಳಿದ್ದಾರೆ.
ರೋಹಿತ್ ಶರ್ಮಾ ಆರನೇ ಕ್ರಮಾಂಕದಲ್ಲಿ ಆಡಬೇಕು
“ಸ್ಟಂಪ್ ಲೈನ್ ಮೇಲೆ ರೋಹಿತ್ ಶರ್ಮಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅವರು ಬೌಲ್ಡ್ ಹಾಗೂ ಎಲ್‌ಬಿಡಬ್ಲ್ಯುಗೆ ವಿಕೆಟ್ ಒಪ್ಪಿಸಿದ್ದಾರೆ. ಈ ಕಾರಣದಿಂದ ಅವರ ಮೇಲೆ ನನಗೆ ಸ್ವಲ್ಪ ಕಾಳಜಿ ಇದೆ. ನೆಟ್ಸ್‌ನಲ್ಲಿ ಇವರು ಸ್ಟಂಪ್ ಲೈನ್ ಮೇಲೆ ಬರುವ ಎಸೆತಗಳನ್ನು ಆಡಿ ಅಭ್ಯಾಸವನ್ನು ಮಾಡಬೇಕಾಗಿದೆ. ಏಕೆಂದರೆ ಆಫ್ ಸೈಡ್ ಹೊರಗಡೆ ಬರುವ ಎಸೆತಗಳಿಗೆ ಇವರು ಹೆಚ್ಚು ಆರಾಮದಾಯಕವಾಗಿ ಕಾಣುತ್ತಿದ್ದಾರೆ. ಅವರು ಆರನೇ ಕ್ರಮಾಂಕದಲ್ಲಿಯೇ ಬ್ಯಾಟಿಂಗ್ ಮುಂದುವರಿಸಬೇಕು. ಕೆಎಲ್ ರಾಹುಲ್ ಮತ್ತು ಯಶಸ್ವಿ ಜೈಸ್ವಾಲ್ ಮೂಲಕ ನಾವು ಭಾರತದ ಭವಿಷ್ಯವನ್ನು ನೋಡುತ್ತಿದ್ದೇವೆ. ಈ ಜೋಡಿ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿತ್ತು. ಮೂರನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಆಡಬೇಕು. ನಾವು ದೀರ್ಘಾವಧಿಗೆ ನೋಡಬೇಕಾಗಿದೆ. ಹೀಗಾಗಿ ರೋಹಿತ್ ಶರ್ಮಾ ಆರನೇ ಕ್ರಮಾಂಕದಲ್ಲಿ ಮುಂದುವರಿಯಬೇಕು,” ಎಂದು ಚೇತೇಶ್ವರ್ ಪೂಜಾರ ತಿಳಿಸಿದ್ದಾರೆ.
ಮೂರನೇ ಟೆಸ್ಟ್ ಯಾವಾಗ?
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಡಿಸೆಂಬರ್ 14 ರಂದು ಬ್ರಿಸ್ಬೇನ್‌ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಮುಂಜಾನೆ 05:50 ಕ್ಕೆ ಆರಂಭವಾಗಲಿದೆ. ಈ ಅಂಗಣದಲ್ಲಿ ತನ್ನ ಕೊನೆಯ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಭಾರತ ಮಣಿಸಿತ್ತು.
ಈ ಸುದ್ದಿಯನ್ನು ಓದಿ: IND vs AUS: ರೋಹಿತ್ ಶರ್ಮಾ ವೈಫಲ್ಯಕ್ಕೆ ಕಾರಣ ತಿಳಿಸಿದ ಸುನೀಲ್ ಗವಾಸ್ಕರ್!