ತಿರುವನಂತಪುರಂ: ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2(Pushpa 2): ದಿ ರೂಲ್ʼ ಚಿತ್ರದಲ್ಲಿ ಕಾಣಿಸಿಕೊಂಡ ಗಂಗಮ್ಮ ಥಲ್ಲಿ ವೇಷವನ್ನು ಕೇರಳದ ವ್ಯಕ್ತಿಯೊಬ್ಬರು ಧರಿಸಿದ್ದು, ಅವರು ತಮ್ಮ ಹೊಟ್ಟೆಯ ಮೇಲೆ ಬಣ್ಣ ಹಚ್ಚಿರುವ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದೆ. ಕೇರಳ ಮೂಲದ ಬ್ಲಾಗರ್ ಮುಖೇಶ್ ಮೋಹನ್ ಹಂಚಿಕೊಂಡಿರುವ ಈ ಕ್ಲಿಪ್ ಈಗಾಗಲೇ ಐದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರನ್ನು ಆಕರ್ಷಿಸುತ್ತಿದೆ.
ತ್ರಿಶೂರ್‌ನ ಚಿತ್ರಮಂದಿರದ ಹೊರಗೆ ವೈರಲ್ ಆಗಿರುವ ವಿಡಿಯೊವನ್ನು ಚಿತ್ರೀಕರಿಸಲಾಗಿದೆ. ಅಲ್ಲಿ ವ್ಯಕ್ತಿಯು ನೀಲಿ ಬಣ್ಣವನ್ನು ದೇಹಕ್ಕೆ, ಮುಖಕ್ಕೆ ಕೆಂಪು ಬಣ್ಣ ಬಳಿಯುವ ಮೂಲಕ ಗಂಗಮ್ಮ ಥಲ್ಲಿ ಗೆಟಪ್ ಸಾಕಾರಗೊಳಿಸಲು ಡ್ರಮ್ ಬೀಟ್‍ಗಳಿಗೆ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ʼಪುಷ್ಪ 2: ದಿ ರೂಲ್ʼ ಚಿತ್ರದಲ್ಲಿನ ಅಲ್ಲು ಅರ್ಜುನ್ ಅವರ ಅವತಾರದ ಫೋಟೊವನ್ನು ಅವರ ಹೊಟ್ಟೆಯ ಮೇಲೆ ಚಿತ್ರಿಸಲಾಗಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಡ್ಯಾನ್ಸ್ ಮಾಡಿದಂತೆ ಆ ವ್ಯಕ್ತಿ ಕುಣಿಯುವುದನ್ನು ಅಲ್ಲಿನ ಜನ ಸಮೂಹ ನಿಬ್ಬೆರಗಾಗಿ ನೋಡಿದೆ. ನೋಡುಗರು ಮಂತ್ರಮುಗ್ಧರಾಗಿ, ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ನಿರತರಾಗಿದ್ದಾರೆ.
ಕಾಮೆಂಟ್ ವಿಭಾಗದಲ್ಲಿ, ವಿಡಿಯೊದಲ್ಲಿರುವ ವ್ಯಕ್ತಿ ದಾಸನ್ ಎಂಬ ಸ್ಥಳೀಯ ಕಲಾವಿದ ಎಂದು ಮುಖೇಶ್ ಬಹಿರಂಗಪಡಿಸಿದ್ದಾರೆ. ದಾಸನ್ ಅವರು ಕೇವಲ 12 ವರ್ಷದವರಿದ್ದಾಗಿನಿಂದ ಹುಲಿ ವೇಷಭೂಷಣಗಳನ್ನು ಧರಿಸುತ್ತಿದ್ದಾರೆ ಮತ್ತು ಚಲನಚಿತ್ರ ಸಂಬಂಧಿತ ಮತ್ತು ಇತರ ವಿವಿಧ ಪ್ರಚಾರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಡಿಸೆಂಬರ್ 5 ರಂದು ಬಿಡುಗಡೆಯಾದಾಗಿನಿಂದ ʼಪುಷ್ಪ 2: ದಿ ರೂಲ್ʼ ಜನರನ್ನು ಆಕರ್ಷಿಸುತ್ತಿದೆ. ಈ ಚಿತ್ರದಲ್ಲಿನ ʼಗಂಗಮ್ಮ ಜಾತ್ರಾʼ ದೃಶ್ಯ ಇದೀಗ ಜನಪ್ರಿಯವಾಗಿದೆ. ಇದರಲ್ಲಿ ಪುಷ್ಪರಾಜ್ ಪಾತ್ರದಲ್ಲಿರುವ ಅಲ್ಲು ಅರ್ಜುನ್ ಅವರು ಸೀರೆಯನ್ನು ಧರಿಸಿ, ಉಗ್ರರೂಪದಲ್ಲಿ ಅತ್ಯುತ್ತಮ ಅಭಿನಯ ಪ್ರದರ್ಸಿಸಿದ್ದಾರೆ. ಸದ್ಯ ಈ ದೃಸ್ಯದ ಬಗ್ಗೆಯೇ ಚರ್ಚೆ ನಡೆಯುತ್ತಿದೆ.
ಈ ಸುದ್ದಿಯನ್ನೂ ಓದಿ: ಆಗಸದಲ್ಲಿ ಮೂಡಿಬಂದ ಸಾಂತಾಕ್ಲಾಸ್! ಬರೋಬ್ಬರಿ 5,000 ಡ್ರೋನ್‍ಗಳ ಅದ್ಬುತ ವಿಡಿಯೊ ವೈರಲ್
ಈ ದೃಶ್ಯವು ಆಂಧ್ರಪ್ರದೇಶದ ʼಗಂಗಮ್ಮ ಜಾತ್ರೆʼಯಿಂದ ಸ್ಫೂರ್ತಿ ಪಡೆದಿದೆ. ಇದು ಗಂಗಮ್ಮ ಥಲ್ಲಿಯನ್ನು ಗೌರವಿಸಲು ಪುರುಷರು ಮಹಿಳೆಯರಂತೆ ವೇಷ ಧರಿಸುವ ವಿಶೇಷ ಆಚರಣೆಯಾಗಿದ್ದು, ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಕ್ಷಣೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾದ ಈ ಸಂಪ್ರದಾಯವನ್ನು ಮತ್ತು ಈ ಪ್ರದೇಶದ ಶ್ರೀಮಂತ ಪದ್ಧತಿಗಳನ್ನು ಈ ಚಿತ್ರದಲ್ಲಿ ಸೆರೆಹಿಡಿಯಲಾಗಿದೆ.