ವಿಶ್ವ ಮಾನವ ಹಕ್ಕುಗಳ ದಿನವನ್ನು (World Human Rights Day) ಪ್ರತಿವರ್ಷ ಡಿಸೆಂಬರ್ 10ರಂದು ಜಗತ್ತಿನೆಲ್ಲೆಡೆ ಆಚರಿಸಲಾಗುತ್ತದೆ. ಮಾನವೀಯ ಸ್ವಾತಂತ್ರ್ಯಗಳನ್ನು ಉಳಿಸಿ, ಎತ್ತಿ ಹಿಡಿಯುವ ಉದ್ದೇಶವಿರುವ ಈ ದಿನ ಘನವಾದ ಮಹತ್ವವನ್ನು ಹೊಂದಿದೆ. ಪ್ರತಿಯೊಬ್ಬ ಮನುಷ್ಯನಿಗೂ ಮಾನವನಾಗಿ ಹುಟ್ಟಿದ ಕಾರಣಕ್ಕೆ ಲಭ್ಯವಾಗುವಂಥ ಸಾಮಾನ್ಯ ಹಕ್ಕುಗಳಿವು. ಆಹಾರ, ವಸ್ತ್ರ, ಸೂರು, ಸಮಾನತೆ ಮುಂತಾದ ಮೂಲಭೂತ ಅಗತ್ಯಗಳು ಪ್ರತಿಯೊಬ್ಬರಿಗೂ ಸಲ್ಲಲೇಬೇಕು. ಜತೆಗೆ, ಘನತೆಯ ಬದುಕು, ಹಿಂಸೆಯ ರಹಿತವಾದ ಜೀವನಗಳು ಎಲ್ಲರಿಗೂ ದೊರೆಯಬೇಕು ಎಂಬುದನ್ನು ಈ ದಿನ ಸಾರುತ್ತದೆ.

ಅಂದೇ ಏಕೆ?
ಅದಕ್ಕೂ ಕಾರಣವಿದೆ. 1948ರ ಹೊತ್ತಿಗೆ, ಎರಡು ಮಹಾಯುದ್ಧಗಳನ್ನು ಕಂಡಿದ್ದ ಜಗತ್ತು, ಹಿಂಸೆ, ದ್ವೇಷದ ಕುಣಿತಕ್ಕೆ ತತ್ತರಿಸಿತ್ತು. ಇವುಗಳಿಂದಾದ ಸಾವು, ನೋವು, ವಿನಾಶಗಳಿಗೆ ನಲುಗಿದ ಬದುಕುಗಳು ಲೆಕ್ಕವಿಲ್ಲದಷ್ಟಿದ್ದವು. 1948 ರ ಡಿಸೆಂಬರ್ 10 ರಂದು ಮಾನವ ಹಕ್ಕುಗಳ ಮಹತ್ವದ ಬಗ್ಗೆ ವಿಶ್ವಸಂಸ್ಥೆ ಘೋಷಣೆಯನ್ನು ಹೊರಡಿಸಿ, ನಿರ್ಣಯವನ್ನು ಅಂಗೀಕರಿಸಿತು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 10ರಂದು ಜಗತ್ತಿನೆಲ್ಲೆಡೆ ಮಾನವ ಹಕ್ಕುಗಳ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. 1950 ರ ಡಿಸೆಂಬರ್ 10 ರಂದು ಪ್ಯಾರಿಸ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಮಾನವ ಹಕ್ಕುಗಳ ಬಗ್ಗೆ ಉಲ್ಲೇಖಿಸಲಾಯಿತು. 1968ನೇ ವರ್ಷವನ್ನು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ವರ್ಷ ಎಂದೇ ಕರೆಯಲಾಗಿತ್ತು.
ಏನು ಹೀಗೆಂದರೆ?
ಮಾನವನಾಗಿ ಹುಟ್ಟಿದ ಕಾರಣದಿಂದಾಗಿ ಎಲ್ಲರೂ ಕೆಲವು ಹಕ್ಕುಗಳನ್ನು ಹೊಂದಿರುತ್ತಾರೆ. ಉದಾ, ಆಹಾರ, ವಸ್ತ್ರ ಮತ್ತು ಸೂರಿನ ಜತೆಗೆ ವೈಯಕ್ತಿಕ ಸ್ವಾತಂತ್ರ್ಯ ಇತ್ಯಾದಿಗಳು ಈ ಹಕ್ಕುಗಳ ಸಾಲಿಗೆ ಸೇರಿಕೊಂಡಿದೆ. ಅಂದರೆ ಬೇಕಾದ ಧರ್ಮವನ್ನು, ಆಹಾರ ಪದ್ಧತಿಯನ್ನು ಆಚರಿಸುವ ಸ್ವಾತಂತ್ರ್ಯ, ಹಿಂಸೆ, ದೌರ್ಜನ್ಯದ ವಿರುದ್ಧ ದನಿ ಎತ್ತುವ ಸ್ವಾತಂತ್ರ್ಯ ಮುಂತಾದವು ಈ ಸಾಲಿಗೆ ಸೇರುತ್ತವೆ. ಜತೆಗೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ, ಸುರಕ್ಷತೆ, ವಾಕ್ ಸ್ವಾತಂತ್ರ್ಯಗಳು ಇತ್ಯಾದಿಗಳೆಲ್ಲ ಮೂಲಭೂತ ಹಕ್ಕುಗಳ ಸಾಲಿಗೆ ಸೇರುತ್ತವೆ. ಇಂಥವು ಹತ್ತಿಕ್ಕಲ್ಪಡಬಾರದು ಎಂಬುದು ಈ ದಿನ ಆಶಯ.
“ನಮ್ಮ ಹಕ್ಕುಗಳು, ನಮ್ಮ ಭವಿಷ್ಯ, ಪ್ರಸಕ್ತ ಕಾಲದಲ್ಲಿ” ಎಂಬ ಧ್ಯೇಯವನ್ನು ಇರಿಸಿಕೊಳ್ಳುವ ಮೂಲಕ, ಭದ್ರ ಭವಿಷ್ಯಕ್ಕೆ ಮಾನವ ಹಕ್ಕುಗಳು ದೊರೆಯಬೇಕಾದ್ದು ಎಷ್ಟು ಮುಖ್ಯ ಎಂಬುದನ್ನು ಸಾರಲಾಗುತ್ತಿದೆ. ಈ ದಿನದಂದು ಜಾಗೃತಿಯ ಉದ್ದೇಶಕ್ಕಾಗಿ ಜಾಥಾ ಇಲ್ಲವೇ ಮೆರವಣಿಗೆಗಳು, ಸಮಾನತೆಯ ಆಶಯದ ನಡಿಗೆಗಳು, ಮಾನವ ಹಕ್ಕುಗಳ ಮಹತ್ವವನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಿನೆಮಾ ಅಥವಾ ಚಿತ್ರ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಜತೆಗೆ, ತಿಳಿವಳಿಕೆ ಹೆಚ್ಚಿಸುವಂಥ ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮುಂತಾದವನ್ನು ಈ ದಿನ ಕಾಣಬಹುದು.
ಈ ಸುದ್ದಿಯನ್ನೂ ಓದಿ | Fashion Pageant News: ಯುವ ಜನರ ಮನ ಗೆದ್ದ ಮಿಸ್ & ಮಿಸೆಸ್ ಇಂಡಿಯಾ ರೋಲ್ ಮಾಡೆಲ್ ಪೇಜೆಂಟ್ 2024
ಯಾವುದೇ ರಾಷ್ಟ್ರವೂ ತನ್ನ ಪ್ರಜೆಗಳಿಗೆ ಕೊಡಮಾಡುವ ಎಲ್ಲ ಮೂಲಭೂತ ಹಕ್ಕುಗಳನ್ನು ಮಾನವ ಹಕ್ಕುಗಳ ಸಾಲಿಗೆ ಸೇರಿಸಬಹುದು. ಜತೆಗೆ, ಮಹಿಳೆಯರಿಗೆ, ಮಕ್ಕಳಿಗೆ, ಅಲ್ಪಸಂಖ್ಯಾತರಿಗೆ ಮುಂತಾದ ಸಾಮಾಜಿಕವಾಗಿ ಸೂಕ್ಷ್ಮ ನೆಲೆಗಟ್ಟಿನಲ್ಲಿರುವವರಿಗೆ ಸಮಾನತೆ ಮತ್ತು ಘನತೆಯಿಂದ ಬದುಕುವ ಅವಕಾಶ ಇದರಲ್ಲಿ ಸೇರಿದೆ. ಜಾತಿ, ವಯಸ್ಸು, ಲಿಂಗ ಮುಂತಾದ ಯಾವುದೇ ಆಧಾರದ ಮೇಲಿನ ತಾರತಮ್ಯವನ್ನಿದು ಒಪ್ಪುವುದಿಲ್ಲ. ಜತೆಗೆ, ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ಯಾವುದೇ ಕ್ಷೇತ್ರದಲ್ಲೂ ತರತಮಗಳಿಲ್ಲದೆ ನಡೆಯುವಂತೆ ಪ್ರೇರೇಪಿಸುತ್ತದೆ.