Sunday, 18th May 2025

IND vs AUS: ʻಸಚಿನ್‌ರ ಸಿಡ್ನಿ ಇನಿಂಗ್ಸ್‌ ನೋಡಿʼ-ಫಾರ್ಮ್‌ ಕಂಡುಕೊಳ್ಳಲು ಕೊಹ್ಲಿಗೆ ಗಿಲ್‌ಕ್ರಿಸ್ಟ್‌ ಸಲಹೆ!

IND vs AUS: ʻVirat Kohli should take a leaf out of Sachin Tendulkar's SCG knockʼ says Adam Gilchrist

ನವದೆಹಲಿ: ಎರಡನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ(IND vs AUS) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿಗೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಡಮ್‌ ಗಿಲ್‌ಕ್ರಿಸ್ಟ್‌ ಮಹತ್ವದ ಸಲಹೆ ನೀಡಿದ್ದಾರೆ. ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 7 ಮತ್ತು 11 ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು.

ಕ್ರಿಕ್‌ಬಝ್‌ ಜೊತೆ ಮಾತನಾಡಿದ ಆಡಮ್‌ ಗಿಲ್‌ಕ್ರಿಸ್ಟ್‌, 2004ರ ಸಿಡ್ನಿ ಟೆಸ್ಟ್‌ನಲ್ಲಿನ ಸಚಿನ್‌ ತೆಂಡೂಲ್ಕರ್‌ ಅವರ ಇನಿಂಗ್ಸ್‌ ಅನ್ನು ಒಮ್ಮೆ ವಿರಾಟ್‌ ಕೊಹ್ಲಿ ನೋಡಬೇಕು. ಏಕೆಂದರೆ ಆ ಇನಿಂಗ್ಸ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಕವರ್‌ ಡ್ರೈವ್‌ ಹೊಡೆದಿರಲಿಲ್ಲ ಹಾಗೂ ಆಫ್‌ ಸ್ಟಂಪ್‌ ಹೊರಗಡೆಯ ಎಸೆತಗಳನ್ನು ಆಡದೆ ದ್ವಿಶತಕವನ್ನು ಬಾರಿಸಿದ್ದರು ಎಂದಿದ್ದಾರೆ.

ವಿರಾಟ್‌ ಕೊಹ್ಲಿಗೆ ಮಹತ್ವದ ಸಲಹೆ ನೀಡಿದ ಗಿಲ್‌ಕ್ರಿಸ್ಟ್‌

“ಬೌಲರ್‌ ಅಥವಾ ಎದುರಾಳಿ ಕೌಶಲದ ವಿರುದ್ದದ ಹೋರಾಟ ಇದಲ್ಲ ಆದರೆ, ನಿಮ್ಮ ನಡುವಣ ಹೋರಟವಿದು. ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ನಲ್ಲಿ ತಿಣುಕಾಡುತ್ತಿದ್ದಾರೆಂದು ನಾನು ಹೇಳುತ್ತಿಲ್ಲ. ಈ ಹಿಂದೆ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ ಆಡಿದ್ದ ರೀತಿಯನ್ನು ಕೊಹ್ಲಿ ಇದೀಗ ಪ್ರಯತ್ನಿಸಬೇಕಾಗಿದೆ. ಆಫ್‌ ಸ್ಟಂಪ್‌ ಹೊರಗಡೆ ಚೆಂಡನ್ನು ಸಚಿನ್‌ ಅಂದು ಆಡಿರಲಿಲ್ಲ ಹಾಗೂ ಸಾಕಷ್ಟು ತಾಳ್ಮೆಯಿಂದ ಬ್ಯಾಟ್‌ ಮಾಡಿದ್ದರು,” ಎಂದು ಗಿಲ್‌ಕ್ರಿಸ್ಟ್‌ 2004ರ ಕ್ರಿಕೆಟ್‌ ದಿಗ್ಗಜ ಇನಿಂಗ್ಸ್‌ ಅನ್ನು ನೆನಪಿಸಿಕೊಂಡರು.

“ತಾನು ಮಾನಸಿಕವಾಗಿ ಎಷ್ಟು ಬಲಿಷ್ಟನಾಗಿದ್ದೇನೆಂಬುದನ್ನು ತಿಳಿಯುವಷ್ಟು ವಿರಾಟ್‌ ಕೊಹ್ಲಿ ಅನುಭವಿಯಾಗಿದ್ದಾರೆ. 19ರ ವಯೋಮಿತಿಯಿಂದ ವಿರಾಟ್‌ ಕೊಹ್ಲಿ ನಿರೀಕ್ಷೆಯ ಭಾರವನ್ನು ಹೊತ್ತಿದ್ದಾರೆ, ಐಪಿಎಲ್‌ ಟೂರ್ನಿಗೆ ಪ್ರವೇಶಿಸಿದ ಬಳಿಕ ಅವರು ಐಕಾನ್‌ ಆಗಿದ್ದಾರೆ. ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ತಂಡಕ್ಕಾಗಿ ಏನು ಮಾಡಬಹುದು ಅಥವಾ ಏನು ಮಾಡಬಾರದು ಎಂಬುದು ಕೊಹ್ಲಿಗೆ ಗೊತ್ತಿದೆ. ಒಂದು ವೇಳೆ ಸನ್ನಿವೇಶಕ್ಕೆ ತಕ್ಕಂತೆ ತಾಳ್ಮೆಯ ಆಟದ ಅಗತ್ಯವಿದ್ದರೆ, ಅವರು ಅದನ್ನೇ ಮಾಡಬಹುದು. ಕೆಲವೊಮ್ಮ ನೀವು ವಿಭಿನ್ನವಾಗಿ ವಿಕಸನಗೊಳ್ಳಬೇಕಾಗುತ್ತದೆ. ಇದೀಗ ವಿರಾಟ್‌ ಕೊಹ್ಲಿಗೆ ಉತ್ತಮ ಅವಕಾಶ ಬಂದಿದೆ,” ಎಂದು ಆಡಮ್‌ ಗಿಲ್‌ಕ್ರಿಸ್ಟ್‌ ತಿಳಿಸಿದ್ದಾರೆ.

ಸಚಿನ್‌ ತೆಂಡೂಲ್ಕರ್‌ರ ಎಸ್‌ಸಿಜಿ ಇನಿಂಗ್ಸ್‌

2003-04ರ ಸಾಲಿನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಆಫ್‌ ಸ್ಟಂಪ್‌ ಹೊರಗಡೆ ಎಸೆತಗಳನ್ನು ಆಡಲು ಪ್ರಯತ್ನಿಸಿ ವಿಕೆಟ್‌ ಒಪ್ಪಿಸುತ್ತಿದ್ದರು. ಬ್ರೆಟ್‌ ಲೀ, ಜೇಸನ್‌ ಗಿಲೆಸ್ಪಿ ಹಾಗೂ ನೇಥನ್‌ ಬ್ರೇಕನ್‌ ಅವರು ಸಚಿನ್‌ ತೆಂಡೂಲ್ಕರ್‌ ಅವರ ವೀಕ್ನೆಸ್‌ ಅನ್ನು ಅರಿತುಕೊಂಡು ಆಫ್‌ ಸ್ಟಂಪ್‌ ಹೊರಗಡೆ ಚೆಂಡನ್ನು ಹಾಕಿ ಔಟ್‌ ಮಾಡುತ್ತಿದ್ದರು. ಇದರಿಂದ ಸಚಿನ್‌ ತೆಂಡೂಲ್ಕರ್‌ ಅವರು ಮಾನಸಿಕವಾಗಿ ಹಿನ್ನಡೆಯನ್ನು ಅನುಭವಿಸಿದ್ದರು.

ಈ ವೇಳೆ ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು ಒಂದು ಫಾರ್ಮುಲಾವನ್ನು ಕಂಡಕೊಂಡಿದ್ದರು. ಆಫ್‌ ಸ್ಟಂಪ್‌ ಹೊರಗಡೆಯ ಎಸೆತಗಳನ್ನು ಆಡದಿರಲು ನಿರ್ಧರಿಸಿದ್ದರು. ಬೌಲರ್‌ಗಳು ಎಷ್ಟು ಬಾರಿ ಆಫ್‌ ಸ್ಟಂಪ್‌ ಹೊರಗಡೆ ಹಾಕಿದರೂ ಸಚಿನ್‌, ಕವರ್‌ ಡ್ರೈವ್‌ ಸೇರಿದಂತೆ ಆಫ್‌ ಸೈಡ್‌ ಶಾಟ್‌ಗಳನ್ನು ಆಡಿರಲಿಲ್ಲ. ಲೆಗ್‌ ಫ್ಲಿಕ್‌, ಲೆಗ್‌ ಗ್ಲ್ಯಾನ್ಸ್‌, ಆನ್ ಡ್ರೈವ್‌ ಸೇರಿದಂತೆ ಕೇವಲ ಲೆಗ್‌ ಸೈಡ್‌ ಮಾತ್ರ ಬ್ಯಾಟ್‌ ಮಾಡಿ ತೆಂಡೂಲ್ಕರ್‌ ದ್ವಿಶತಕವನ್ನು ಸಿಡಿಸಿದ್ದರು. ಅಂದು ಒಂದೇ ಒಂದು ಕವರ್‌ ಡ್ರೈವ್‌ ಆಡದೆ ಸಚಿನ್‌ ತೆಂಡೂಲ್ಕರ್‌ ಲೆಗ್‌ ಸೈಡ್‌ ಕಡೆ ಆಡಿದ್ದ 436 ಎಸೆತಗಳಲ್ಲಿ 33 ಬೌಂಡರಿಗಳೊಂದಿಗೆ 241 ರನ್‌ಗಳನ್ನು ದಾಖಲಿಸಿದ್ದರು. ಇದರೊಂದಿಗೆ ತಮ್ಮ ಆಟದಲ್ಲಿನ ಶಿಸ್ತು ಮತ್ತು ಧೃಡ ಸಂಕಲ್ಪವನ್ನು ಎತ್ತಿ ತೋರಿಸಿದ್ದರು. ಅಂತಿಮವಾಗಿ ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು ಹಾಗೂ ಸಚಿನ್‌ ತೆಂಡೂಲ್ಕರ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ಈ ಸುದ್ದಿಯನ್ನು ಓದಿ:IND vs AUS: ಭಾರತದ ಪಿಂಕ್‌ ಬಾಲ್‌ ಟೆಸ್ಟ್‌ ಸೋಲಿಗೆ ಪ್ರಮುಖ 4 ಕಾರಣಗಳು!