Thursday, 15th May 2025

Pushpa 2: ಪುಷ್ಪ 2 ಕಾಲ್ತುಳಿತ ‍ಕೇಸ್‌… ಥಿಯೇಟರ್‌ ಮಾಲೀಕ ಸೇರಿ ಮೂವರು ಅರೆಸ್ಟ್!

ಹೈದರಾಬಾದ್‌ : ಖ್ಯಾತ ನಟ ಅಲ್ಲು ಅರ್ಜುನ್‌ (Allu Arjun) ನಟನೆಯ ಪುಷ್ಪ 2(Pushpa 2) ಸಿನಿಮಾ ಸದ್ಯ ಚಲನಚಿತ್ರ ರಂಗದಲ್ಲಿ ದಾಖಲೆ ಬರೆದಿದ್ದು, ಇದು ಈ ವರ್ಷದ ಸೂಪರ್‌ ಹಿಟ್‌(Super hit) ಮೂವಿಯಾಗಲಿದೆ ಎಂದು ಕೆಲ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಈ ಸಿನಿಮಾ ತಂಡವು ಚಿತ್ರ ಬಿಡುಗಡೆಗೆ ಮುಂಚೆಯಿಂದಲೂ ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತಾ ಬಂದಿದೆ. ಈಗ ಚಿತ್ರತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಪುಷ್ಪ 2 ಸಿನಿಮಾದ ಪ್ರೀಮಿಯರ್‌ ಶೋ(Premiere Show) ವೇಳೆ ಕಾಲ್ತುಳಿತಕ್ಕೊಳಗಾಗಿ ಓರ್ವ ಮಹಿಳೆ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ. ಭಾನುವಾರ(ಡಿ. 8) ಚಿತ್ರಮಂದಿರದಲ್ಲಿ ಮಹಿಳೆಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಲ್ಲಿ ಸಂಧ್ಯಾ ಥಿಯೇಟರ್(Sandhya Theatre) ಮಾಲೀಕ, ಥಿಯೇಟರ್ ಮ್ಯಾನೇಜರ್ ಹಾಗೂ ಲೋವರ್ ಬಾಲ್ಕನಿ-ಅಪ್ಪರ್ ಬಾಲ್ಕನಿಯ ಮ್ಯಾನೇಜರ್ ಸೇರಿದ್ದಾರೆ ಎನ್ನಲಾಗಿದೆ.

ಬಂಧಿತ ಮೂವರು ಆರೋಪಿಗಳು ಸರಿಯಾದ ಭದ್ರತಾ ಕ್ರಮಗಳ ವಿಷಯದಲ್ಲಿ ತೀರಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಟನನ್ನು ನೋಡಲು ನೂಕು-ನುಗ್ಗಲು

ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದಾಗ ಭಾರೀ ನೂಕು-ನುಗ್ಗಲು ಸಂಭವಿಸಿದೆ ಎನ್ನಲಾಗಿದೆ. ಇದರಿಂದಾಗಿ ಗುಂಪನ್ನು ನಿಯಂತ್ರಿಸಲು ಸಾಧ್ಯವಾಗದೆ ಗೊಂದಲ ಉಂಟಾಗಿದೆ. ಈ ವೇಳೆ ಭದ್ರತಾ ತಂಡವು ಎಡವಿದೆ ಎಂದು ಹೇಳಲಾಗಿದೆ. ಚಿಕ್ಕಡಪಲ್ಲಿ ಎಸಿಪಿ ಎಲ್ ರಮೇಶ್ ಕುಮಾರ್ ಪ್ರಕರಣ ಕುರಿತು ಮಾಹಿತಿ ನೀಡಿದ್ದಾರೆ. ತನಿಖೆಯ ಸಮಯದಲ್ಲಿ, ಘಟನೆಗೆ ಸಂಬಂಧಿಸಿದ ಮೂವರನ್ನು ನಾವು ಬಂಧಿಸಿದ್ದೇವೆ. ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಗಾಯಗೊಂಡ ಮಗು ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದಿದ್ದಾರೆ.

ಅಲ್ಲು ಅರ್ಜುನ್ ಅವರ ಭದ್ರತಾ ತಂಡವನ್ನೂ ಆರೋಪಿಯನ್ನಾಗಿ ಮಾಡಲಾಗಿದೆ. ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ ರೇವತಿ ಎಂಬುವವರ ಪತಿ ಭಾಸ್ಕರ್ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ. ಭಾರತೀಯ ನ್ಯಾಯಾಂಗ ಸಂಹಿತೆಯ 3 (5) ಜೊತೆಗೆ ಸೆಕ್ಷನ್ 105 ಮತ್ತು 118 (1) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಇನ್ನು ಮೂಲಗಳ ಪ್ರಕಾರ, ಥಿಯೇಟರ್ ಮ್ಯಾನೇಜರ್, ನಟ ಅಲ್ಲು ಅರ್ಜುನ್ ಮತ್ತು ಅವರ ಭದ್ರತಾ ತಂಡದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕೇಂದ್ರ ವಲಯ ಡಿಸಿಪಿ ಅಕ್ಷಾಂಶ್ ಯಾದವ್ ಹೇಳಿದ್ದಾರೆ.‌

ಮೃತ ಮಹಿಳೆ ಕುಟುಂಬಕ್ಕೆ 25 ಲಕ್ಷ ರೂಪಾಯಿ ನೆರವು

ಪುಷ್ಪಾ 2: ದಿ ರೂಲ್‌’ ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ನಟ ಅಲ್ಲು ಅರ್ಜುನ್‌ ಶುಕ್ರವಾರ(ಡಿ.6) 25 ಲಕ್ಷ ರೂಪಾಯಿ ನೆರವು ಘೋಷಿಸಿದ್ದಾರೆ. ಈ ಕುರಿತ ವಿಡಿಯೊವನ್ನು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅಲ್ಲು, ‘ಈ ದುರ್ಘಟನೆ ನನಗೆ ಬಹಳ ಬೇಸರ ತರಿಸಿದೆ. ಮೃತರ ಕುಟುಂಬದವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ’ ಎಂದು ಅವರು ಹೇಳಿದ್ದಾರೆ.

ಸಂಧ್ಯಾ ಚಿತ್ರಮಂದಿರದಲ್ಲಿ ಬುಧವಾರ ಪ್ರೀಮಿಯರ್‌ ಶೋ ವೇಳೆ ಜನರ ನೂಕು ನುಗ್ಗಲು ಕಾರಣ ಸಂಭವಿಸಿದ ಕಾಲ್ತುಳಿತದಿಂದಾಗಿ ರೇವತಿ (35) ಎಂಬುವವರು ಮೃತಪಟ್ಟಿದ್ದರು. ಅವರ ಮಗ ಶ್ರೀತೇಜ್‌ (8) ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಚಿಕಿತ್ಸೆಗೆ ತಗುಲುವ ವೆಚ್ಚವನ್ನೂ ಭರಿಸುವುದಾಗಿ ನಟ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Mamta Kulkarni: 24 ವರ್ಷಗಳ ಬಳಿಕ ಭಾರತಕ್ಕೆ ಮರಳಿದ ಖ್ಯಾತ ನಟಿ ಮಮತಾ ಕುಲಕರ್ಣಿ ; ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಬಿಗ್‌ ರಿಲೀಫ್!‌