ನವದೆಹಲಿ: ಆಸ್ಟ್ರೇಲಿಯಾ ಎದುರು ಅಡಿಲೇಡ್ ಹಾಗೂ ಪಿಂಕ್ ಬಾಲ್ ಟೆಸ್ಟ್ (WTC final 2025) ಪಂದ್ಯದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ ಬಳಿಕ ಭಾರತ ತಂಡದ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಹಾದಿಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಮಂದಿನ ಮೂರು ಪಂದ್ಯಗಳಲ್ಲಿ ಭಾರತ ತಂಡಕ್ಕೆ ಮಾಡು ಇಲ್ಲವೆ ಮಡಿ ಪರಿಸ್ಥಿತಿಯನ್ನು ಎದುರಾಗಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಭಾರತ ತಂಡ 61.11 ರಿಂದ 57.29ರ ಗೆಲುವಿನ ಸರಾಸರಿಗೆ ಇಳಿದಿದೆ ಹಾಗೂ ಟೆಸ್ಟ್ ಚಾಂಪಿಯನ್‌ಷಿಪ್ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಎರಡನೇ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ ಅಗ್ರ ಸ್ಥಾನವನ್ನುಅಲಂಕರಿಸಿದ್ದರೆ, ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಲ್ಲಿದೆ.
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತ ತಂಡಕ್ಕೆ ಇನ್ನು ಕೇವಲ ಮೂರು ಟೆಸ್ಟ್ ಪಂದ್ಯಗಳು ಮಾತ್ರ ಬಾಕಿ ಇವೆ. ಪ್ರಸಕ್ತ ಋತುವಿನಲ್ಲಿ ಭಾರತ ತಂಡ ಆರು ಟೆಸ್ಟ್ ಪಂದ್ಯಗಳನ್ನು ಸೋತಿದೆ ಹಾಗೂ ಕಳೆದ ಎರಡು ತಿಂಗಳಿಂದ ಟೀಮ್ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಕಳೆದ ತವರು ಟೆಸ್ಟ್ ಸರಣಿಯಲ್ಲಿ ಕಿವೀಸ್ ವಿರುದ್ಧ ಭಾರತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು.
IND vs AUS: ಭಾರತದ ಪಿಂಕ್ ಬಾಲ್ ಟೆಸ್ಟ್ ಸೋಲಿಗೆ ಪ್ರಮುಖ 4 ಕಾರಣಗಳು!
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಸ್ಟ್ರೇಲಿಯಾ ತಂಡ 9 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಆ ಮೂಲಕ 57.69 ರಿಂದ 60.71ರ ಗೆಲುವಿನ ಸರಾಸರಿಯನ್ನು ತಲುಪುವ ಮೂಲಕ ಕಾಂಗರೂ ಪಡೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡ 59.26ರ ಗೆಲುವಿನ ಸರಾಸರಿಯ ಮೂಲಕ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಯನ್ನು ಸೋತ ನ್ಯೂಜಿಲೆಂಡ್ ತಂಡ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ರೇಸ್‌ನಿಂದ ಹೊರ ಬಿದ್ದಿದೆ.

ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸದೆ ಭಾರತ ತಂಡ ಫೈನಲ್‌ಗೆ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ. ಮುಂದಿನ ಮೂರು ಪಂದ್ಯಗಳ ಪೈಕಿ ಒಂದು ಡ್ರಾ ಹಾಗೂ ಎರಡು ಪಂದ್ಯಗಳಲ್ಲಿ ಗೆಲುವು ಪಡೆದರೂ ಟೀಮ್ ಇಂಡಿಯಾ 60.52ರ ಗೆಲುವಿನ ಸರಾಸರಿ ಮೂಲಕ ಪ್ರಾಬಲ್ಯ ಮೆರೆಯಲಿದೆ. ಇನ್ನುಳಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದರೆ ಭಾರತ 146 ಅಂಕಗಳೊಂದಿಗೆ 64.05ರ ಗೆಲುವಿನ ಸರಾಸರಿಯನ್ನು ಪಡೆಯಲಿದೆ. ಆ ಮೂಲಕ ಆಸ್ಟ್ರೇಲಿಯಾ ತಂಡವನ್ನು ಹಿಂದಿಕ್ಕಲಿದೆ.
ಭಾರತ ತಂಡದ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಲೆಕ್ಕಾಚಾರ
ಭಾರತ ತಂಡ 3-2 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದರೆ: ಭಾರತ ತಂಡ 3-2 ಅಂತರದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ಆಗ 134 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 58.77ರ ಗೆಲುವಿನ ಸರಾಸರಿಯನ್ನು ಪಡೆಯಲಿದೆ. ಇನ್ನು ಆಸ್ಟ್ರೇಲಿಯಾ ತಂಡಕ್ಕೆ ಈ ಸರಣಿಯ ಬಳಿಕ ಶ್ರೀಲಂಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳು ಆಡುವುದು ಬಾಕಿ ಇದೆ. ಆ ಮೂಲಕ ಪ್ಯಾಟ್ ಕಮಿನ್ಸ್ ಪಡೆಗೆ 126 ಅಂಕಗಳು ಹಾಗೂ 55.26ರ ಗೆಲುವಿನ ಸರಾಸರಿಯನ್ನು ಪೆಡಯಲು ಅವಕಾಶವಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧ ಮೂರು ತವರು ಟೆಸ್ಟ್ ಪಂದ್ಯಗಳನ್ನು ಗೆದ್ದರೆ ದಕ್ಷಿಣ ಆಫ್ರಿಕಾ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ 69.44ರ ಗೆಲುವಿನ ಸರಾಸರಿಯನ್ನು ಪಡೆಯುವ ಅವಕಾಶವಿದೆ.
ಭಾರತ ತಂಡ 3-1 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದರೆ: ಒಂದು ವೇಳೆ ಭಾರತ ತಂಡ 3-1 ಅಂತರದಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದರೆ, ಆಗ ರೋಹಿತ್ ಶರ್ಮಾ ಪಡೆ ಪಾಯಿಂಟ್ಸ್ ಟೇಬಲ್‌ನಲ್ಲಿ 60.52ರ ಗೆಲುವಿನ ಸರಾಸರಿಯನ್ನು ಪಡೆಯಬಹುದು. ಆನಂತರ ಆಸ್ಟ್ರೇಲಿಯಾ ತಂಡ ತನ್ನ ಇನ್ನುಳಿದ ಪಂದ್ಯಗಳನ್ನು ಗೆದ್ದರೂ ಪಾಯಿಂಟ್ಸ್ ಟೇಬಲ್‌ನಲ್ಲಿ ಗರಿಷ್ಠ 57ರ ಗೆಲುವಿನ ಸರಾಸರಿಯನ್ನು ಪಡೆಯಬಹುದು. ಆ ಮೂಲಕ ಆಸ್ಟ್ರೇಲಿಯಾ ಫೈನಲ್ ರೇಸ್‌ನಿಂದ ಹೊರಬೀಳುವ ಸಾಧ್ಯತೆ ಇರುತ್ತದೆ.
2-2 ಅಂತರದಲ್ಲಿ ಟಸ್ಟ್ ಸರಣಿ ಡ್ರಾನಲ್ಲಿ ಮುಗಿದರೆ: ಇನ್ನು ಭಾರತ ತಂಡ 2-2 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಂಡರೆ, ಆಗ 126 ಅಂಕಗಳು ಹಾಗೂ 57.01ರ ಗೆಲುವಿನ ಸರಾಸರಿಯನ್ನು ಪಡೆಯಲಿದೆ. ಇದರೊಂದಿಗೆ ಆಸ್ಟ್ರೇಲಿಯಾ ತಂಡ, 130 ಅಂಕಗಳನ್ನು ಕಲೆ ಹಾಕಲಿದೆ ಹಾಗೂ ಫೈನಲ್ ರೇಸ್‌ನಲ್ಲಿ ಉಳಿಯಲಿದೆ. ಆದರೆ, ಈ ಸರಣಿಯ ಬಳಿಕ ಭಾರತ ತಂಡ ಫೈನಲ್ ರೇಸ್‌ನಿಂದ ಹೊರಬೀಳಲಿದೆ.
ಈ ಸುದ್ದಿಯನ್ನು ಓದಿ: WTC Standings: ಪಿಂಕ್ ಟೆಸ್ಟ್ ಸೋಲಿನ ಬೆನ್ನಲ್ಲೆ ಮೂರನೇ ಸ್ಥಾನಕ್ಕೆ ಕುಸಿದ ಭಾರತ!