Saturday, 17th May 2025

Viral Video: ಬ್ಯಾಂಕ್ ಮ್ಯಾನೇಜರ್‌ ಮೇಲೆ ಹಲ್ಲೆ ನಡೆಸಿದ ಗ್ರಾಹಕ; ಭಯಾನಕ ವಿಡಿಯೊ ನೋಡಿ

Viral Video

ಅಹ್ಮದಾಬಾದ್: ಎಫ್‍ಡಿ ಮೇಲಿನ ಟಿಡಿಎಸ್ ಬಡ್ಡಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಬ್ಯಾಂಕ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ ಎಂದು ಪೊಲೀಸರು  ತಿಳಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಇಬ್ಬರು ಪುರುಷರು ಪರಸ್ಪರ ಕಾಲರ್‌ಗಳನ್ನು ಹಿಡಿದು ಕಿತ್ತಾಡುತ್ತಿರುವುದು ಮತ್ತು ಮಹಿಳೆಯೊಬ್ಬರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಕೋಪಗೊಂಡ ಗ್ರಾಹಕ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಇಬ್ಬರು ಸೇರಿ ತಮ್ಮ ಬಟ್ಟೆಗಳನ್ನು ಹಿಡಿದುಕೊಂಡು ಎಳೆದಾಡಿದ್ದಾರೆ. ಅಲ್ಲಿದ್ದ ಕೆಲವು ಜನರು ಮಧ್ಯಪ್ರವೇಶಿಸಿ ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ನಂತರ ಗ್ರಾಹಕನನ್ನು ಸಮಾಧಾನಪಡಿಸಿ ಅಲ್ಲಿದ್ದ ಸೋಫಾ ಮೇಲೆ ಕೂರಿಸಿದ್ದಾರೆ.

ಡಿ. 5ರಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಸ್ತ್ರಾಪುರ ಶಾಖೆಯಲ್ಲಿ ಈ ಘಟನೆ ನಡೆದಿದೆ. ಮ್ಯಾನೇಜರ್‌ನೊಂದಿಗೆ ಗ್ರಾಹಕರೊಬ್ಬರು ವಾಗ್ವಾದ ನಡೆಸಿದಾಗ ಇದು ತೀವ್ರ ಸ್ವರೂಪಕ್ಕೆ ಹೋಗಿ ಕೊನೆಗೆ ದೈಹಿಕ ಹಲ್ಲೆಗೆ ಕಾರಣವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವಾಗ ಹಣವನ್ನು ಕ್ಲೈಮ್ ಮಾಡಬಹುದು ಎಂದು ವಿವರಿಸಿದ ನಂತರವೂ ಆರೋಪಿ ತನ್ನ ಎಫ್‍ಡಿ ಮೇಲಿನ ಬಡ್ಡಿಗಿಂತ ಹೆಚ್ಚಿನ ತೆರಿಗೆ ಕಡಿತಕ್ಕಾಗಿ (ಟಿಡಿಎಸ್) ಬ್ಯಾಂಕ್ ಅನ್ನು ದೂಷಿಸಲು ಶುರು ಮಾಡಿದ್ದಾನೆ ಎಂದು ಮ್ಯಾನೇಜರ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಜೈಮಿನ್ ರಾವಲ್ ಎಂದು ಗುರುತಿಸಲಾಗಿದೆ. ಆತನನ್ನು ಬಂಧಿಸಲಾಗಿದೆ ಎಂದು ವಸ್ತ್ರಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ ಎಲ್ಎಲ್ ಚಾವ್ಡಾ ತಿಳಿಸಿದ್ದಾರೆ. ಜೈಮಿನ್ ರಾವಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 115-2 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 221 (ಸರ್ಕಾರಿ ನೌಕರನನ್ನು ಕರ್ತವ್ಯಕ್ಕೆ ಅಡ್ಡಿಪಡಿಸುವುದು) ಮತ್ತು 296 (ಅಶ್ಲೀಲ ಪದಗಳನ್ನು ಬಳಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಮಹಿಳಾ ಮ್ಯಾನೇಜರ್‌ಗೆ ಥಳಿಸಿ ಮೊಬೈಲ್ ಒಡೆದು ಹಾಕಿದ ವ್ಯಕ್ತಿಯ ಬಂಧನ: ವೈರಲ್ ಆಯ್ತು ವಿಡಿಯೊ

ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಈ ಘಟನೆಗೆ ಪ್ರತಿಕ್ರಿಯಿಸಿ, ಇದು ತುಂಬಾ ಭಯಾನಕವಾಗಿದೆ ಎಂದು ಕರೆದಿದ್ದು, ಸರ್ಕಾರದ ಮಧ್ಯಪ್ರವೇಶವನ್ನು ಕೋರಿದೆ. “ಗುಜರಾತ್‍ನ ಅಹಮದಾಬಾದ್‍ನಿಂದ ಬಹಳ ಭಯಾನಕ ಸುದ್ದಿ. ಟಿಡಿಎಸ್ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಹಕರೊಬ್ಬರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಬ್ಯಾಂಕರ್‌ಗಳ ಮೇಲಿನ ಇಂತಹ ದಾಳಿಗಳು ರಾಷ್ಟ್ರವ್ಯಾಪಿ ಹೆಚ್ಚುತ್ತಿವೆ. ಆದರೂ ಆಡಳಿತ ಸಚಿವಾಲಯವು ಮೂಕ ಪ್ರೇಕ್ಷಕನಾಗಿ ಉಳಿದಿದೆ. ತುರ್ತು ಕ್ರಮದ ಅಗತ್ಯವಿದೆ” ಎಂದು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.