ಅಡಿಲೇಡ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಡಿಲೇಡ್ ಟೆಸ್ಟ್ ಪಂದ್ಯದ (IND vs AUS) ವೇಳೆ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರೊಂದಿಗೆ ನಡೆದಿದ್ದ ಸ್ಲೆಡ್ಜಿಂಗ್ ಘಟನೆಯ ಬಗ್ಗೆ ಆಸೀಸ್ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ಸಿರಾಜ್ ತಪ್ಪು ಗ್ರಹಿಕೆಯನ್ನು ಹೊಂದಿದ್ದು, ಈ ಬಗ್ಗೆ ಅವರೇ ನನ್ನ ಬಳಿ ತಿಳಿಸಿದ್ದಾರೆಂದು ಎಡಗೈ ಬ್ಯಾಟ್ಸ್‌ಮನ್ ಹೇಳಿದ್ದಾರೆ.
ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಣದಲ್ಲಿ ನಡೆದಿದ್ದ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ದಿನ ಶತಕ ಸಿಡಿಸಿ ಬ್ಯಾಟ್ ಮಾಡುತ್ತಿದ್ದ ಟ್ರಾವಿಸ್ ಹೆಡ್ ಅವರನ್ನು ಮೊಹಮ್ಮದ್ ಸಿರಾಜ್ ಯಾರ್ಕರ್ ಹಾಕುವ ಮೂಲಕ ಕ್ಲೀನ್ ಬೌಲ್ಡ್ ಮಾಡಿದ್ದರು. ಈ ವೇಳೆ ಟ್ರಾವಿಸ್ ಹೆಡ್ ತನಗೆ ಏನೋ ಹೇಳಿದ್ದಾರೆಂದು ಅಂದುಕೊಂಡಿದ್ದ ಮೊಹಮ್ಮದ್ ಸಿರಾಜ್, ಆಕ್ರಮಣಕಾರಿಯಾಗಿ ವರ್ತಿಸಿದ್ದರು. ಈ ವೇಳೆ ಸಿರಾಜ್ ಮತ್ತು ಹೆಡ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಂತಿಮವಾಗಿ ಆಸೀಸ್ ಬ್ಯಾಟ್ಸ್‌ಮನ್ ಅಸಮಾಧಾನದೊಂದಿಗೆ ಪೆವಿಲಿಯನ್‌ಗೆ ಹೆಜ್ಜೆ ಹಾಕಿದ್ದರು.
Travis Head: "I swear I said well bowled."
— Sameer Allana (@HitmanCricket) December 8, 2024
Mohammed Siraj: "I also said well batted."
Travis Head: "Cool."pic.twitter.com/ODqRhHo2Eh
ಎರಡನೇ ದಿನದಾಟದ ಅಂತ್ಯಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಾವಿಸ್ ಹೆಡ್, ನಾನು ಸಿರಾಜ್‌ಗೆ ಬೌಲಿಂಗ್ ಚೆನ್ನಾಗಿದೆ ಎಂದಷ್ಟೇ ಹೇಳಿದ್ದೆ. ಆದರ, ಅವರು ನನ್ನ ಮಾತುಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದರು ಎಂದು ಸ್ಪಷ್ಟನೆ ನೀಡಿದ್ದರು. ಅದರಂತೆ ಮೂರನೇ ದಿನವಾದ ಭಾನುವಾರ ಮೊಹಮ್ಮದ್ ಸಿರಾಜ್ ಬ್ಯಾಟ್ ಮಾಡಲು ಕ್ರೀಸ್‌ಗೆ ಬಂದಾಗ, ಶಾರ್ಟ್ ಲೆಗ್‌ನಲ್ಲಿ ಟ್ರಾವಿಸ್ ಹೆಡ್ ಫೀಲ್ಡಿಂಗ್‌ಗೆ ನಿಂತಿದ್ದರು. ಈ ವೇಳೆ ಸಿರಾಜ್, ಅವರ (ಟ್ರಾವಿಸ್ ಹೆಡ್) ಬಳಿ ತೆರಳಿ ನಿಮ್ಮ ಮಾತನ್ನು ತಪ್ಪಾಗಿ ಗ್ರಹಿಸಿದ್ದೇನೆಂದು ಹೇಳಿದ್ದರು. ಈ ವಿಡಿಯೊ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಸಿರಾಜ್ ಸ್ಲೆಡ್ಜಿಂಗ್ ಘಟನೆಗೆ ಸ್ಪಷ್ಟನೆ ಕೊಟ್ಟ ಹೆಡ್
ಅಂದ ಹಾಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಪಡೆದಿತ್ತು. ಆ ಮೂಲಕ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಸಾಧಿಸಿತು. ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಟ್ರಾವಿಡ್ ಹೆಡ್, ಮೂರನೇ ದಿನ ಮೊಹಮ್ಮದ್ ಸಿರಾಜ್ ಅವರು ತಮ್ಮ ಬಳಿ ಹೇಳಿಕೊಂಡಿದ್ದ ಮಾತುಗಳನ್ನು ಬಹಿರಂಗಪಡಿಸಿದ್ದಾರೆ.
ಎಬಿಸಿ ನ್ಯೂಸ್ ಜತೆ ಮಾತನಾಡಿದ ಟ್ರಾವಿಸ್ ಹೆಡ್, “ಮೊಹಮ್ಮದ್ ಸಿರಾಜ್ ನನ್ನ ಬಳಿ ನಡೆದುಕೊಂಡು ಬಂದು ನಾನು ಸ್ವಲ್ಪ ತಪ್ಪಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದರು. ನಾವು ಇದರಿಂದ ಹೊರಗೆ ನಡೆಯಬೇಕೆಂದು ಭಾವಿಸುತ್ತೇನೆ. ನಮ್ಮ ಪಾಲಿಗೆ ಇದು ಅತ್ಯಂತ ಶ್ರೇಷ್ಠ ವಾರ. ಆದ್ದರಿಂದ ಇದನ್ನು ಹಾಳು ಮಾಡುವುದು ಬೇಡ,” ಎಂದು ಸ್ಪಷ್ಟನೆ ನೀಡಿದ್ದಾರೆ.
ಟ್ರಾವಿಸ್ ಹೆಡ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ
ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಟ್ರಾವಿಸ್ ಹೆಡ್ ನಿರ್ಣಾಯಕ ಶತಕವನ್ನು ಸಿಡಿಸಿದ್ದರು. ಆ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿಗೆ ನೆರವು ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇವರು ಪ್ರಥಮ ಇನಿಂಗ್ಸ್‌ನಲ್ಲಿ ಎದುರಿಸಿದ 141 ಎಸೆತಗಳಲ್ಲಿ 140 ರನ್‌ಗಳನ್ನು ಕಲೆ ಹಾಕಿದ್ದರು. ಇದರಲ್ಲಿ ನಾಲ್ಕು ಸಿಕ್ಸರ್ ಹಾಗೂ 17 ಬೌಂಡರಿಗಳಿವೆ. ಡಿಸೆಂಬರ್ 14 ರಂದು ಬ್ರಿಸ್ಬೇನ್‌ನ ದಿ ಗಬ್ಬಾ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮೂರನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ.
ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್ ಸಿರಾಜ್-ಟ್ರಾವಿಸ್ ಹೆಡ್ ನಡುವೆ ಮಾತಿನ ಚಕಮಕಿ! ವಿಡಿಯೊ