ನವದೆಹಲಿ: ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ಕಿರಿಯರ ತಂಡ ಅಂಡರ್-19 ಏಷ್ಯಾ ಕಪ್ ಫೈನಲ್ (IND vs BAN) ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 59 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಏಷ್ಯಾ ಕಪ್ ಗೆಲ್ಲುವ ಮೊಹಮ್ಮದ್ ಅಮಾನ್ ನಾಯಕತ್ವದ ಭಾರತಕ್ಕೆ ಭಾರಿ ನಿರಾಶೆಯಾಯಿತು. ಆದರೆ, ಇಕ್ಬಾಲ್ ಹುಸೇನ್ ಎಮಾನ್ ಅವರ ಮಾರಕ ಬೌಲಿಂಗ್ ಸಹಾಯದಿಂದ ಫೈನಲ್ ಗೆದ್ದ ಬಾಂಗ್ಲಾದೇಶ ತಂಡ ಕಿರಿಯರ ಏಷ್ಯಾ ಕಪ್ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿತು.
ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ ಫೈನಲ್ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕೆ ಇಳಿದಿದ್ದ ಭಾರತ ತಂಡಕ್ಕೆ ಬಾಂಗ್ಲಾದೇಶ ತಂಡದ ಬೌಲರ್‌ಗಳು ಆಘಾತ ನೀಡಿದರು. ಬಾಂಗ್ಲಾದೇಶ ನೀಡಿದ್ದ 199 ರನ್‌ಗಳ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಸುಲಭವಾಗಿ ಗೆಲುವು ಪಡೆಯಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಬಾಂಗ್ಲಾ ಬೌಲರ್‌ಗಳು ಇದಕ್ಕೆ ಅವಕಾಶ ನೀಡಲಿಲ್ಲ.
ಭಾರತದ ಪರ ಎಂದಿನಂತೆ ಇನಿಂಗ್ಸ್ ಆರಂಭಿಸಿದ ಆಯುಷ್ ಮಾತ್ರೆ ಹಾಗೂ ವೈಭವ್ ಸೂರ್ಯವಂಶಿ ಅವರು ತಂಡಕ್ಕೆ ಉತ್ತಮ ಆರಂಭ ತಂದುಕೊಡುವಲ್ಲಿ ವಿಫಲರಾದರು. ಆಯುಷ್ ಹಾಗೂ ವೈಭವ್ ಇಬ್ಬರೂ ಕ್ರಮವಾಗಿ ಒಂದು ಮತ್ತು 9 ರನ್‌ಗೆ ವಿಕೆಟ್ ಒಪ್ಪಿಸಿದರು. ನಂತರದ ಕ್ರಮಾಂಕಗಳಲ್ಲಿ ಕ್ರೀಸ್‌ಗೆ ಬಂದಿದ್ದ ಆಂಡ್ರೆ ಸಿದ್ದಾರ್ಥ್ (20 ರನ್), ಕೆಪಿ ಕಾರ್ತಿಕೇಯ (21 ರನ್) ಹಾಗೂ ನಾಯಕ ಮೊಹಮ್ಮದ್ ಅಮಾನ್ (26 ರನ್) ಅವರು ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತವನ್ನು ಕಲೆ ಹಾಕುವಲ್ಲಿ ವಿಫಲರಾದರು. ನಿಖಿಲ್ ಕುಮಾರ್ ಹಾಗೂ ಹಾರ್ವಿಂಶಿ ಸಿಂಗ್ ಕೂಡ ಮಧ್ಯಮ ಕ್ರಮಾಂಕದಲ್ಲಿ ವಿಫಲರಾದರು.
India U19 came close to the target but it's Bangladesh U19 who win the #Final
— BCCI (@BCCI) December 8, 2024
Scorecard ▶️ https://t.co/L3DyqoSp4E#TeamIndia | #ACC | #ACCMensU19AsiaCup pic.twitter.com/rcqf93J3TX
ಇಕ್ಬಾಲ್ ಹುಸೇನ್ ಎಮಾನ್ (24 ಕ್ಕೆ 3) ಹಾಗೂ ಅಝಿಝುಲ್ ಅಕಿಮ್ ತಮಿಮ್ (8 ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫಲರಾದರು. ಅಂತಿಮವಾಗಿ ಭಾರತದ ಕಿರಿಯರು 35.2 ಓವರ್‌ಗಳಿಗೆ 139 ರನ್‌ಗಳಿಗೆ ಆಲ್‌ಔಟ್ ಆಯಿತು ಹಾಗೂ 59 ರನ್‌ಗಳಿಂದ ಸೋಲು ಅನುಭವಿಸಿತು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ತಂಡ, 49.1 ಓವರ್‌ಗಳಿಗೆ 198 ರನ್‌ಗಳಿಗೆ ಆಲ್‌ಔಟ್ ಆಯಿತು. ಬಾಂಗ್ಲಾದೇಶ ತಂಡದ ಪರ ಮೊಹಮ್ಮದ್ ಶಾಹಿಬ್ ಜೇಮ್ಸ್ ಅವರು 67ಎಸೆತಗಳಲ್ಲಿ 40 ರನ್ ಗಳಿಸಿದರೆ, ರಿಝನ್ ಹುಸನ್ 65 ಎಸೆತಗಳಲ್ಲಿ 47 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಫಾರಿದ್ ಹಸನ್ ಫಾಯ್ಸಲ್ ಅವರು 49 ಎಸೆತಗಳಲ್ಲಿ 39 ರನ್‌ಗಳನ್ನು ಗಳಿಸಿದರು. ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಉಧಾಜಿತ್ ಗುಹಾ, ಚೇತನ್ ಶರ್ಮಾ ಹಾಗೂ ಹಾರ್ದಿಕ್ ರಾಜ್ ಅವರು ತಲಾ ಎರಡೆರಡು ವಿಕೆಟ್‌ಗಳನ್ನು ಪಡೆದರು.
ಸ್ಕೋರ್ ವಿವರ
ಬಾಂಗ್ಲಾದೇಶ: 49.1 ಓವರ್‌ಗಳಿಗೆ 198-10 (ಫಾರಿದ್ ಹಸನ್ ಫಾಯ್ಸಲ್ 39 ರನ್, ರಿಝನ್ ಹುಸನ್ 47 ರನ್, ಮೊಹಮ್ಮದ್ ಶಾಹಿಬ್ ಜೇಮ್ಸ್ 40 ರನ್;
ಉಧಾಜಿತ್ ಗುಹಾ 29 ಕ್ಕೆ2, ಹಾರ್ದಿಕ್ ರಾಜ್ 41ಕ್ಕೆ2)
ಭಾರತ: 35.2 ಓವರ್‌ಗಳಿಗೆ 139-10 (ಆಂಡ್ರೆ ಸಿದ್ದಾರ್ಥ್ 20 ರನ್, ಕೆಪಿ ಕಾರ್ತಿಕೇಯ 21 ರನ್, ಮೊಹಮ್ಮದ್ ಅಮಾನ್ 26 ರನ್ ; ಇಕ್ಬಾಲ್ ಹುಸೇನ್ ಎಮಾನ್ 24 ಕ್ಕೆ 3 ಹಾಗೂ ಅಝಿಝುಲ್ ಅಕಿಮ್ ತಮಿಮ್ 8 ಕ್ಕೆ 3)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಇಕ್ಬಾಲ್ ಹುಸೇನ್ ಎಮಾನ್
ಟೂರ್ನಿ ಶ್ರೇಷ್ಠ ಪ್ರಶಸ್ತಿ: ಇಕ್ಬಾಲ್ ಹುಸೇನ್ ಎಮಾನ್
ಈ ಸುದ್ದಿಯನ್ನು ಓದಿ: ACC U-19 Asia Cup: ಅಂಡರ್-19 ಏಷ್ಯಾ ಕಪ್ ತಂಡದಲ್ಲಿ ಮೂವರು ಕನ್ನಡಿಗರು