Wednesday, 14th May 2025

Reading Habit: ಕೇರಳ ಮತ್ತು ಕ್ಯೂಬಾ ನಡುವೆ ಇದೆ ಈ ವಿಚಾರದಲ್ಲಿ ಸಾಮ್ಯತೆ; ಅಪರೂಪದ ಮಾಹಿತಿ ಇಲ್ಲಿದೆ

Reading Habit

ತಿರುವನಂತಪುರಂ: ಕೇರಳ ಮತ್ತು ದೂರದ ಕ್ಯೂಬಾದ ನಡುವೆ ಕೆಲವೊಂದು ವಿಚಾರದಲ್ಲಿ ಸಾಮ್ಯತೆ ಇದೆ. ಈ ವಿಚಾರದ ಮೇಲೆ ಉಲ್ಲೇಖ್‌ ಎನ್‌.ಪಿ. ಎನ್ನುವವರು ತಮ್ಮ ಕೃತಿ Mad About Cuba: A Malayali Revisits the Revolutionನಲ್ಲಿ ಬೆಳಕು ಚೆಲ್ಲಿದ್ದಾರೆ. ಬಹಳ ಹಿಂದೆಯೇ ಕೇರಳ ಮತ್ತು ಕ್ಯೂಬಾದ ತಂಬಾಕು ಕಾರ್ಖಾನೆಗಳಲ್ಲಿನ ಕಾರ್ಮಿಕರು ತಾವು ಕೆಲಸ ಮಾಡುವಾಗ ಓದುತ್ತಿದ್ದರು (Reading Habit) ಎಂದು ಲೇಖಕರು ತಿಳಿಸಿದ್ದಾರೆ. 1990ರ ದಶಕದಲ್ಲಿ ಕೇರಳದಲ್ಲಿ ಬೀಡಿ ಕಾರ್ಖಾನೆಯ ಕಾರ್ಮಿಕರು ಬೀಡಿ ಕಟ್ಟುವಾಗ ಪತ್ರಿಕೆಗಳನ್ನು ಗಟ್ಟಿಯಾಗಿ ಓದಲು “ಯುವ ವಿದ್ಯಾರ್ಥಿಗಳನ್ನು ಅಥವಾ ಸಾಕ್ಷರರನ್ನು ನೇಮಿಸಿಕೊಳ್ಳುತ್ತಿದ್ದರು” ಎಂದು ತಿಳಿಸಿದ್ದಾರೆ. ಹಾಗೆಯೇ ಕ್ಯೂಬಾದಲ್ಲಿ 1865ರಿಂದ ಕಾರ್ಮಿಕರಿಗಾಗಿ ಪುಸ್ತಕಗಳು, ಸುದ್ದಿ ಮತ್ತು ಭಾಷಣಗಳನ್ನು ಓದುವ ವೃತ್ತಿಪರ ಓದುಗರನ್ನು ನೇಮಿಸಲಾಗುತ್ತಿತ್ತು ಎನ್ನುವ ಅಪರೂಪದ ಮಾಹಿತಿಯನ್ನು ಈ ಕೃತಿಯಲ್ಲಿ ಉಲ್ಲೇಖಿಸಲಾಗಿದೆ.

ಬೀಡಿ ಕಾರ್ಖಾನೆಯಲ್ಲಿ ವಿದ್ಯಾರ್ಥಿ ಓದುಗರು

ಲೇಖಕರು ತಮ್ಮ ಪುಸ್ತಕದಲ್ಲಿ, “ನಾನು ಒಮ್ಮೆ ತಂಬಾಕು ಮತ್ತು ಓದುವ ಅಭ್ಯಾಸದ ನಡುವಿನ ಆಸಕ್ತಿದಾಯಕ ಸಂಬಂಧದ ಬಗ್ಗೆ ಕೇಳಿದ್ದೆ. ಸಂಶೋಧನಾ ಪ್ರಬಂಧಕ್ಕಾಗಿ ಅಧ್ಯಯನ ನಡೆಸುವಾಗ ಮಾರ್ಕ್ಸ್‌ವಾದಿ ಪತ್ರಿಕೆಯೊಂದು ಕೇರಳದ ಬೀಡಿ ಕಾರ್ಮಿಕರಲ್ಲಿ ಮಾಹಿತಿಯನ್ನು ಹರಡುವಲ್ಲಿ ಹೇಗೆ ಪಾತ್ರ ವಹಿಸುತ್ತಿದೆ ಎಂಬುದನ್ನು ನಾನು ಪರಿಶೀಲಿಸಿದೆ. 1990ರ ದಶಕದಲ್ಲಿ ಸಂಶೋಧನೆ ನಡೆಸುತ್ತಿರುವಾಗ, ನನ್ನ ಹುಟ್ಟೂರಾದ ಕಣ್ಣೂರಿನಲ್ಲಿ ಬೀಡಿ ತಯಾರಿಕೆ ಹೇಗೆ ನೂರಾರು ಕೌಶಲ್ಯರಹಿತ ಕಾರ್ಮಿಕರಿಗೆ ನೆರವಾಗಿದೆ, ಅವರ ಜೀವನೋಪಾಯಕ್ಕೆ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಕಂಡುಕೊಂಡೆ. ಆ ಸಮಯದಲ್ಲಿ ಬೀಡಿ ಕಟ್ಟುವ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಸುದ್ದಿ ತಿಳಿಯಲು ಯುವ ವಿದ್ಯಾರ್ಥಿಗಳನ್ನು ಅಥವಾ ಸಾಕ್ಷರರನ್ನು ಪತ್ರಿಕೆಗಳನ್ನು ಗಟ್ಟಿಯಾಗಿ ಓದಲು ನೇಮಿಸಿಕೊಳ್ಳುತ್ತಿದ್ದರು ಎಂಬುದನ್ನು ತಿಳಿದುಕೊಂಡೆ ಎಂದಿದ್ದಾರೆ.

ಕೆಲವು ಬೀಡಿ ಕಾರ್ಖಾನೆಗಳಲ್ಲಿ ಕಾರ್ಮಿಕರು ಪತ್ರಿಕೆ ಓದುಗರಿಗೆ ಸಂಭಾವನೆಯಾಗಿ ಒಂದು ಪ್ಯಾಕೆಟ್ ಬೀಡಿ ಮತ್ತು ಒಂದು ಕಪ್ ಚಹಾವನ್ನು ನೀಡುತ್ತಿದ್ದರು. ಓದುಗನೂ ಬೀಡಿ ಕೆಲಸಗಾರನಾಗಿದ್ದರೆ, ಇತರ ಕಾರ್ಮಿಕರು ಆತನಿಗೆ ದೈನಂದಿನ ಗುರಿಯನ್ನು ತಲುಪಲು ತಾವು ರೋಲ್‌ ಮಾಡಿದ ಬೀಡಿಯನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು. ವಿಶೇಷ ಎಂದರೆ ಕೆಲವು ಬೀಡಿ ಘಟಕಗಳಲ್ಲಿ ಕಾರ್ಮಿಕರು ಇಎಂಎಸ್ ನಂಬೂದಿರಿಪಾಡ್ ಅವರಂತಹ ಪ್ರಸಿದ್ಧ ರಾಜಕಾರಣಿಗಳು ಮತ್ತು ಫ್ರಾನ್ಸ್‌ನ ಆಲ್ಬರ್ಟ್ ಕ್ಯಾಮಸ್ ಮತ್ತು ಮೆಕ್ಸಿಕೊದ ಜುವಾನ್ ರುಲ್ಫೋ ಅವರಂತಹ ಇತರ ಪ್ರಸಿದ್ಧ ಲೇಖಕರ ಕೃತಿಗಳನ್ನು ಒಳಗೊಂಡಂತೆ ಕಾದಂಬರಿಗಳು ಮತ್ತು ಪುಸ್ತಕಗಳನ್ನು ಗಟ್ಟಿಯಾಗಿ ಓದಿ ಹೇಳುವವರೂ ಇದ್ದರು.

Reading Habit

ಕ್ಯೂಬಾದಲ್ಲಿಯೂ ವೃತ್ತಿಪರ ಓದುಗರ ನೇಮಕ
ಲೇಖಕರು ಕ್ಯೂಬಾದಲ್ಲಿಯೂ ಇದೇ ರೀತಿಯ ಉತ್ತಮ ಅಭ್ಯಾಸವಿದ್ದುದನ್ನು ಹಂಚಿಕೊಂಡಿದ್ದಾರೆ. ಕ್ಯೂಬಾದಲ್ಲಿ ಸಿಗಾರ್ ಕಾರ್ಖಾನೆಗಳಲ್ಲಿ ಉದ್ಯೋಗಿಗಳು ಪುಸ್ತಕಗಳನ್ನು ಓದುವ ವೃತ್ತಿಪರ ಓದುಗರನ್ನು ನೇಮಿಸುತ್ತಿದ್ದ ಬಗ್ಗೆ ತಿಳಿಸಿದ್ದಾರೆ. ಇದು ಕ್ಯೂಬಾದ ಸಿಗಾರ್ ಕಾರ್ಖಾನೆಗಳಲ್ಲಿ ಕಂಡುಬಂದ ಉತ್ತಮ ಅಂಶ ಎಂದಿದ್ದಾರೆ. 1865ರಲ್ಲಿ ಹವಾನಾದ ಎಲ್ ಫಿಗಾರೊ ಕಾರ್ಖಾನೆಯ ಕಾರ್ಮಿಕರು ತಮ್ಮ ಸಹೋದ್ಯೋಗಿಯನ್ನು ಪತ್ರಿಕೆ ಓದಿ ಹೇಳಲು ಆಯ್ಕೆ ಮಾಡಿದಾಗಿನಿಂದ ಈ ಅಭ್ಯಾಸ ಮುಂದುವರಿದಿದೆ. ಅವನು ಪತ್ರಿಕೆ ಓದುತ್ತಿದ್ದುದರಿಂದ ಕಾರ್ಮಿಕರು ತಮ್ಮ ಸಿಗಾರ್‌ಗಳನ್ನು ಆತನಿಗೆ ನೀಡಿ ಸಹಕರಿಸುತ್ತಿದ್ದರಂತೆ. ಸಮಯವನ್ನು ಸರಿದೂಗಿಸಲು ಓದುಗರಿಗೆ ಹೆಚ್ಚಿನ ಸಿಗಾರ್‌ಗಳ ಭರವಸೆಯನ್ನೂ ನೀಡಲಾಗುತ್ತಿತ್ತು. ನಂತರ ಓದುಗರಿಗೆ ಇತರರು ಸಂಬಳವನ್ನು ಪಾವತಿಸಲು ಮುಂದಾದ ಬಗ್ಗೆಯೂ ಪುಸ್ತಕದಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಚಳಿಯಿಂದ ನಡುಗುತ್ತಿದ್ದ ಬೆಕ್ಕಿನ ಮರಿಗೆ ಚೀನಾದ ಹುಡುಗಿ ಮಾಡಿದ್ದೇನು? ವಿಡಿಯೊ ನೋಡಿ

ಕಾರ್ಖಾನೆ ಮಾಲೀಕರು ಆರಂಭದಲ್ಲಿ ಇದನ್ನು ವಿರೋಧಿಸುತ್ತಿದ್ದರೂ ಬಳಿಕ ಇದು ಜನಪ್ರಿಯವಾಯಿತು. ಕ್ಯೂಬಾದ ಸ್ವಾತಂತ್ರ್ಯ ಹೋರಾಟಗಾರ ಜೋಸ್ ಮಾರ್ಟಿ ಒಮ್ಮೆ ಫ್ಲೋರಿಡಾದ ಕಾರ್ಖಾನೆಯೊಂದರಲ್ಲಿ ಓದುಗರ ಕುರ್ಚಿಯ ಮೇಲೆ ಕುಳಿತು ಕ್ಯೂಬಾದ ತಂಬಾಕು ಕಾರ್ಮಿಕರನ್ನುದ್ದೇಶಿಸಿ ಭಾಷಣ ಮಾಡಿದರು ಎಂದು ಹೇಳಲಾಗಿದೆ. ಓದುಗರ ಪಾತ್ರವು ಎಷ್ಟು ಪ್ರಮುಖವಾಗಿತ್ತು ಎಂದರೆ ಕ್ಯೂಬಾ ಸರ್ಕಾರಕ್ಕೆ ಇದನ್ನು ದೇಶದ ಸಾಂಸ್ಕೃತಿಕ ಪರಂಪರೆಯ ಭಾಗವೆಂದು ಅಧಿಕೃತವಾಗಿ ಗುರುತಿಸಬೇಕು ಎಂಬ ಆಗ್ರಹವೂ ಕೇಳಿ ಬಂದಿತ್ತು.