Saturday, 10th May 2025

International Anti-Corruption Day 2024: ಇಂದು ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ದಿನ: ನಮ್ಮ ಪಾತ್ರವೇನು?

International Anti-Corruption Day 2024

ಸಮಾಜವನ್ನು ಗೆದ್ದಲಿನಂತೆ ಕಾಡುತ್ತಿರುವ ಭ್ರಷ್ಟಾಚಾರವನ್ನು (Corruption) ತೊಡೆಯಬೇಕು ಎನ್ನುವ ನಿಟ್ಟಿನಲ್ಲಿ, ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ದಿನವನ್ನು (International Anti-Corruption Day 2024) ಡಿಸೆಂಬರ್‌ ತಿಂಗಳ 9ನೇ ತಾರೀಖಿನಂದು ಆಚರಿಸಲಾಗುತ್ತದೆ.

ಭ್ರಷ್ಟಾಚಾರ- ಮುಕ್ತ ಸಮಾಜ ನಿರ್ಮಾಣದ ಕನಸನ್ನು ಇರಿಸಿಕೊಂಡು 2003ರ ಅಕ್ಟೋಬರ್‌ನಲ್ಲಿ ಈ ಕುರಿತ ನಿರ್ಣಯವನ್ನು ವಿಶ್ವಸಂಸ್ಥೆ ತೆಗೆದುಕೊಂಡಿತು. ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ.

ಹಿನ್ನೆಲೆಯೇನು?

ಸಮಾಜಗಳ ಭದ್ರತೆ ಮತ್ತು ಸ್ಥಿರತೆಗೆ ಭ್ರಷ್ಟಾಚಾರದಿಂದ ಬೀಳುತ್ತಿರುವ ಹೊಡೆತದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆ, ಪ್ರಜಾಸತ್ತೆಯ ಮೌಲ್ಯಗಳು ಮತ್ತು ನ್ಯಾಯಯುತ ಪ್ರಕ್ರಿಯೆಗೆ ಧಕ್ಕೆ ಬಾರದಂತೆ ಕಾಪಾಡುವುದು ಅಗತ್ಯ ಭಾವಿಸಿತ್ತು. ಆಗ ಮಾತ್ರವೇ ದೇಶಗಳು ನಿಜವಾದ ಅಭಿವೃದ್ಧಿ ಸಾಧಿಸಿ, ಸಮಾಜಗಳಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಈ ಜಾಗತಿಕ ಸಂಸ್ಥೆ ಅಭಿಪ್ರಾಯಪಟ್ಟಿತ್ತು.

ಈ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ ನಿರ್ಮೂಲನೆಯ ಬಗೆಗೆ ಸಮಾಜಗಳಲ್ಲಿ ಜಾಗೃತಿ ಮೂಡಿಸಬೇಕೆನ್ನುವ ಉದ್ದೇಶದಿಂದ ಡಿಸೆಂಬರ್‌ 9ನೇ ದಿನವನ್ನು ಭ್ರಷ್ಟಾಚಾರ ನಿರ್ಮೂಲನಾ ದಿನವನ್ನಾಗಿ ಘೋಷಿಸಲಾಯಿತು.

International Anti-Corruption Day 2024

ಭ್ರಷ್ಟಾಚಾರ ವಿರೋಧಿ ಒಪ್ಪಂದಕ್ಕೆ 140 ದೇಶಗಳು ಸಹಿ ಹಾಕಿದ್ದು, ಈ ದಿನವನ್ನು 2005ರಲ್ಲಿ ಎಲ್ಲೆಡೆ ಜಾರಿಗೆ ತರಲಾಯಿತು. ವಿಪರ್ಯಾಸವೆಂದರೆ, ಈ ದಿನ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಿರುವುದು, ಇದರಿಂದಾಗಿ ಭ್ರಷ್ಟತೆ ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕಲ್ಲ; ಯಾರೇನೇ ಆಚರಿಸಿಕೊಂಡರೂ ಭ್ರಷ್ಟಾಚಾರ ತಂತಾನೇ ಸಮಾಜದಲ್ಲಿ ಬಲವಾಗುತ್ತಿದೆ ಎಂಬ ಆತಂಕಕ್ಕೆ; ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕೆಂಬ ಕಾರಣಕ್ಕೆ.

ಅಧಿಕಾರದಲ್ಲಿರುವ ಜನರ ಭ್ರಷ್ಟಾಚಾರದಿಂದಾಗಿ ಸಾಮಾನ್ಯರ ಸ್ವಾತಂತ್ರ್ಯ, ಆರೋಗ್ಯ, ಶಿಕ್ಷಣ, ಬದುಕು ಮತ್ತು ಭವಿಷ್ಯಗಳು ಸಂಕಷ್ಟಕ್ಕೆ ಸಿಲುಕುತ್ತಿರುವುದು ವಿಶೇಷವೇ ಅಲ್ಲ ಎಂಬಂತಾಗಿದೆ. ಪ್ರಜಾಸತ್ತೆಯ ಅಡಿಗಲ್ಲು ಎನಿಸಿರುವ ಚುನಾವಣೆಗಳನ್ನು ಕಲುಷಿತಗೊಳಿಸಿ, ಇಡೀ ವ್ಯವಸ್ಥೆಯನ್ನು ಲಂಚಮಯವಾಗಿಸಿದೆ.

ಭ್ರಷ್ಟತೆ ಎಂಬುದು ಯಾವುದೇ ದೇಶ, ರಾಜ್ಯ, ಪ್ರಾಂತ್ಯಕ್ಕೆ ಸೀಮಿತವಲ್ಲದಂತೆ ವಿಶ್ವವ್ಯಾಪಿಯಾಗಿರುವುದು ಆತಂಕದ ಸಂಗತಿ. ಇದರ ಮುಂದೆ ಯಾವುದೇ ಅಭಿವೃದ್ಧಿ ಕೆಲಸಗಳು ಮತ್ತು ಸುಸ್ಥಿರ ಗುರಿಗಳು ಮಂಕಾಗುತ್ತಿವೆ. ಮಾಡಲೇಬೇಕಾದ ಕೆಲಸಗಳು ಹಿಂದಾಗುತ್ತಿವೆ.

2020ರ ವೇಳೆಗೆ ಯಾವುದೆಲ್ಲ ಅಭಿವೃದ್ಧಿ ಕೆಲಸಗಳು ಆಗಬೇಕೆಂಬ ಜಾಗತಿಕ ಗುರಿಯನ್ನು ಹೊಂದಲಾಗಿದೆಯೋ ಅದನ್ನು ಗಮನದಲ್ಲಿ ಇರಿಸಿಕೊಂಡು, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂಬುದು ವಿಶ್ವಸಂಸ್ಥೆಯ ಕರೆ.

ಇಡೀ ವಿಶ್ವದಲ್ಲಿನ ಸಮಾಜಗಳೆಲ್ಲ ಅಭಿವೃದ್ಧಿಯತ್ತ ಮುಖ ಮಾಡುವಂತೆ ಭ್ರಷ್ಟತೆಯನ್ನು ತೊಡೆದು, ಬದುಕು ಹಸನಾಗಿಸಿಕೊಳ್ಳುವ ಮಾರ್ಗವಾಗಿ ಯುವಜನತೆಯನ್ನು ಈ ಪ್ರಚಾರಾಂದೋಳನದಲ್ಲಿ ತೊಡಗಿಸಿಕೊಳ್ಳಲು ಅದು ಪ್ರೇರೇಪಿಸಿದೆ. ಹಾಗೆಂದೇ, “ಭ್ರಷ್ಟಾಚಾರದ ವಿರುದ್ಧ ಯುವಜನತೆಯನ್ನು ಒಗ್ಗೂಡಿಸಿ: ನಾಳಿನ ನೈತಿಕತೆಯನ್ನು ರೂಪಿಸಿ” ಎಂಬ ಧ್ಯೇಯವನ್ನು ಮುಂದಿರಿಸಿದೆ.

ಟ್ರಾನ್ಸ್‌ಪೇರೆನ್ಸಿ ಇಂಟರ್‌ನ್ಯಾಷನಲ್‌ ಎಂಬ ಸಂಸ್ಥೆಯು ಪ್ರತಿವರ್ಷ ಭ್ರಷ್ಟಾಚಾರದ ಜಾಗತಿಕ ಸೂಚ್ಯಂಕವನ್ನು ಪ್ರಕಟಿಸುತ್ತದೆ. ಅತೀ ಕಡಿಮೆ ಭ್ರಷ್ಟಾಚಾರ ಇರುವ ದೇಶವನ್ನು ಶೂನ್ಯದಿಂದ ಪ್ರಾರಂಭಿಸಿ, ಹೆಚ್ಚು ಭ್ರಷ್ಟ ದೇಶಗಳ ಸೂಚಿಸಂಖ್ಯೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ.

ಈ ಸುದ್ದಿಯನ್ನು ಓದಿ:  Pope Francis: 2025ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಪೋಪ್ ಫ್ರಾನ್ಸಿಸ್

ವಿಶ್ವದ 180 ದೇಶಗಳನ್ನು ಪರಿಗಣಿಸಿದ ಈ ಸೂಚ್ಯಂಕದಲ್ಲಿ ಭಾರತಕ್ಕೆ 93ನೇ ಸ್ಥಾನವು 2023ರಲ್ಲಿ ಪ್ರಾಪ್ತವಾಗಿದೆ. ಕಾನೂನುಗಳು ಎಷ್ಟೇ ಬಿಗಿಯಾಗಿದ್ದರೂ ಒಳನುಸಿಯುವ ಚೋರರೇ ಹೆಚ್ಚಿದ್ದಾರೆ ಎಂಬುದನ್ನು ಈ ಸೂಚ್ಯಂಕವು ಸೂಚಿಸುತ್ತಿದೆ.