-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಮೆನ್ಸ್ ಜ್ಯುವೆಲ್ ಫ್ಯಾಷನ್‌ನಲ್ಲಿ, ಅತಿ ಸುಲಭವಾಗಿ ಧರಿಸಬಹುದಾದ ನಾನಾ ಬಗೆಯ ಮ್ಯಾಗ್ನೆಟಿಕ್ ಇಯರಿಂಗ್ಸ್ (Mens Earrings Fashion) ಕಾಲಿಟ್ಟಿವೆ. ಹೌದು, ಇವುಗಳನ್ನು ಧರಿಸಲು ಕಿವಿ ಚುಚ್ಚಿಸಿಕೊಳ್ಳಬೇಕಾಗಿಲ್ಲ. ಬೇಕೆಂದಾಗ ಕಿವಿಗೆ ಅಂಟಿಸಿದರಾಯಿತು. ಸದ್ಯ ಇವು ಫಂಕಿ ಸ್ಟೈಲಿಂಗ್ ಇಷ್ಟಪಡುವ ಹುಡುಗರ ಹಾಗೂ ಪುರುಷರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಮತ್ತಷ್ಟು ಪಂಚ್ ನೀಡಿವೆ.

ರೆಕ್ಟಾಂಗಲ್, ತ್ರೀಕೋನ, ಓವಲ್ ಸೇರಿದಂತೆ ನಾನಾ ಬಗೆಯ ಜೆಮೆಟ್ರಿಕಲ್ ಡಿಸೈನ್‌ನ ಸ್ಟಡ್ಸ್, ಕ್ರಾಸ್, ರೌಂಡ್, ಚಿಕ್ಕ ಹೂಪ್ ರಿಂಗ್ಸ್, ಫಂಕಿ ಲುಕ್ ನೀಡುವ ಕಲರ್‌ಫುಲ್ ಮ್ಯಾಗ್ನೆಟಿಕ್ ಇಯರಿಂಗ್ಸ್ , ಕಾಲೇಜು ಹುಡುಗರು ಮಾತ್ರವಲ್ಲ, ಇತರೆ ವರ್ಗದ ಪುರುಷರನ್ನು ತನ್ನತ್ತ ಸೆಳೆಯುತ್ತಿವೆ ಎನ್ನುತ್ತಾರೆ ಮೆನ್ಸ್ ಜ್ಯುವೆಲ್ ಸ್ಟೈಲಿಸ್ಟ್ ಜನಕ್.
ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸಾಥ್ ನೀಡುವ ಇಯರಿಂಗ್ಸ್
ಫ್ಯಾಷನ್ ಲೋಕದ ಮಾಡೆಲ್‌ಗಳು, ಪೇಜ್3 ಸೆಲೆಬ್ರೆಟಿಗಳು, ಎಂಟರ್‌ಟೈನ್‌ಮೆಂಟ್ ಕ್ಷೇತ್ರದವರು, ನಟರು ಮಾತ್ರವಲ್ಲ, ಕಾಲೇಜು ಹುಡುಗರು ಅಷ್ಟೇಕೆ? ವೀಕೆಂಡ್‌ನಲ್ಲಿ ಟೆಕ್ಕಿಗಳು ಕೂಡ ಈ ತಾತ್ಕಾಲಿಕ ಮ್ಯಾಗ್ನೆಟಿಕ್ ಸ್ಟಡ್ಸ್ ಅಥವಾ ಇಯರಿಂಗ್ಸ್ ಸ್ಟೈಲ್ ಅಳವಡಿಸಿಕೊಳ್ಳ ತೊಡಗಿದ್ದಾರೆ.

ಬದಲಾದ ಜಮಾನಾಗೆ ತಕ್ಕಂತೆ ಇಯರಿಂಗ್ಸ್
ಜ್ಯುವೆಲ್ ಡಿಸೈನರ್ ರಾಧಿಕಾ ಹೇಳುವಂತೆ, ಪುರುಷರು ಕಿವಿಗೆ ಓಲೆ, ರಿಂಗ್ ಹಾಕುವ ರಿವಾಜು ಇಂದು-ನಿನ್ನೆಯದ್ದಲ್ಲ, ರಜಪೂತರು, ಮಹಾರಾಜರ ವಂಶಸ್ಥರು ಸೇರಿದಂತೆ ರಾಯಲ್ ಫ್ಯಾಮಿಲಿಯ ಪ್ರತಿಷ್ಠೆಯ ಸಂಕೇತವಾಗಿದೆ. ಇದೀಗ ಬದಲಾಗುತ್ತಿರುವ ಜಮಾನಗೆ ತಕ್ಕಂತೆ, ಕಿವಿ ಚುಚ್ಚಿಸದೇ ಧರಿಸುವ ಈ ಇಯರಿಂಗ್ಸ್ ಫ್ಯಾಷನ್ ಎಲ್ಲರಿಗೂ ಪ್ರಿಯವಾಗತೊಡಗಿದೆ ಎನ್ನುತ್ತಾರೆ.

ಇನ್ನು, ಮಾಡೆಲ್ ವಿನಯ್ ಸಿಂಧ್ಯಾ ಪ್ರಕಾರ, ಮ್ಯಾಗ್ನೆಟಿಕ್ ಸ್ಟಡ್ಸ್ ಸ್ಟೈಲ್, ಕಿವಿಗೆ ಓಲೆ ಧರಿಸಲು ಕಿವಿ ಚುಚ್ಚಿಸಿಕೊಳ್ಳಬೇಕಾ? ಎಂದು ಹಿಂದೆ ಮುಂದೆ ನೋಡುವ ಫ್ಯಾಷೆನಬಲ್ ಹುಡುಗರಿಗೂ ಪ್ರಿಯವಾಗಿದೆ. ಇನ್ನು, ಇದರ ಕೈಗೆಟಕುವ ಬೆಲೆ ಹಾಗೂ ಆರಾಮವಾಗಿ ಸುಲಭವಾಗಿ ಧರಿಸಬಹುದಾದ ಡಿಸೈನ್ನಿಂದಾಗಿ ಸ್ಟೈಲಿಶ್ ಜ್ಯುವೆಲ್ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದೆ ಎನ್ನುತ್ತಾರೆ.

ಮ್ಯಾಗ್ನೆಟಿಕ್ ಇಯರಿಂಗ್ಸ್ ಎಲ್ಲೆಲ್ಲಿ ಲಭ್ಯ?
ಆನ್‌ಲೈನ್‌ನಲ್ಲಿ ಇದೀಗ ಸಾಕಷ್ಟು ಅಪ್ಷನ್‌ಗಳಲ್ಲಿ ಇವು ದೊರೆಯುತ್ತಿವೆ. ಇನ್ನು, ಟ್ರಯಲ್ ನೋಡಿ ಧರಿಸಬೇಕಿದ್ದಲ್ಲಿ, ಹುಡುಗರು ಬೆಂಗಳೂರಿನ ಬ್ರಿಗೇಡ್, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ಜ್ಯುವೆಲ್ ಶಾಪ್‌ಗಳಿಗೆ ಭೇಟಿ ನೀಡಿದರೇ ಸಾಕು! ಅಲ್ಲದೇ, ಕೆಲವು ಮಾಲ್‌ಗಳಲ್ಲೂ ಕೂಡ ದೊರೆಯಲಾರಂಭಿಸಿವೆ. ಸುಮಾರು 100 ರೂ. ಗಳಿಂದ ಸಾವಿರ ರೂ.ಗಳವರೆಗೂ ಇವುಗಳಿಗೆ ಬೆಲೆಯಿದೆ ಎನ್ನುತ್ತಾರೆ ಜ್ಯುವೆಲ್ ವಿನ್ಯಾಸಕರು.
ಈ ಸುದ್ದಿಯನ್ನೂ ಓದಿ | Trench Coat Fashion: ಚಳಿ-ಮಳೆ-ಗಾಳಿಗೆ ಕಾಲಿಟ್ಟ ಟ್ರೆಂಚ್ ಕೋಟ್ ಫ್ಯಾಷನ್
ಮ್ಯಾಗ್ನೆಟಿಕ್ ಇಯರಿಂಗ್ಸ್ ಸೆಲೆಕ್ಷನ್
- ಫಿನಿಶಿಂಗ್ ಇರುವಂತದ್ದನ್ನು ಚೂಸ್ ಮಾಡಿ.
- ಟ್ರೆಂಡಿ ಡಿಸೈನ್‌ನವನ್ನು ಔಟ್‌ಫಿಟ್‌ಗೆ ಮ್ಯಾಚ್ ಮಾಡಿ.
- ಮುಖದ ಆಕಾರಕ್ಕೆ ಹೊಂದುವಂತದ್ದನ್ನು ಆಯ್ಕೆ ಮಾಡಿ.
- ಫಂಕಿ ಇಯರಿಂಗ್ಸ್ ಠಪೋರಿ ಲುಕ್ ನೀಡಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)