Saturday, 17th May 2025

Viral Video: 60 ಅಡಿ ಎತ್ತರದಲ್ಲಿರುವ ಫೆರಿಸ್ ವೀಲ್‍ನಲ್ಲಿ ನೇತಾಡಿದ ಬಾಲಕಿ! ಬೆಚ್ಚಿ ಬೀಳಿಸುವ ವಿಡಿಯೊ

Viral Video

ಜಾತ್ರೆಯಲ್ಲಿ ಮೋಜು ಮಸ್ತಿ ಮಾಡುವುದೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಮಕ್ಕಳು ಜಾತ್ರೆಯಲ್ಲಿ ಬರುವಂತಹ ವಿವಿಧ ರೀತಿಯ ಆಟಗಳನ್ನು ಆಡುತ್ತಾರೆ. ಆದರೆ ಅದರಿಂದ ಏನು ಅಪಾಯ ಸಂಭವಿಸುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇಂತಹದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದ ಜಾತ್ರೆಯಲ್ಲಿ ಸಂಭವಿಸಿದೆ. ಹದಿಹರೆಯದ ಬಾಲಕಿಯೊಬ್ಬಳು ತನ್ನ ಹಳ್ಳಿಯ ಜಾತ್ರೆಯಲ್ಲಿ  ಮೋಜು ಮಸ್ತಿ ಮಾಡಲು ಹೋಗಿ ಆಪತ್ತಿಗೆ ಸಿಲುಕಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಲಖಿಂಪುರ್ ಖೇರಿಯ ನಿಘಾಸನ್ ಪ್ರದೇಶದ ರಾಕೆಹ್ತಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಫೆರಿಸ್ ವೀಲ್‍ ಆಟ ಆಡುತ್ತಿದ್ದಾಗ ಆಕೆ  60 ಅಡಿ ಎತ್ತರದ ಫೆರಿಸ್ ವೀಲ್‍ನಲ್ಲಿ ಸಿಲುಕಿಕೊಂಡು  ಕಿರುಚುತ್ತಾ ನೇತಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಫೆರಿಸ್ ವೀಲ್‍ನಲ್ಲಿ ಆಟವಾಡುವಾಗ ಹೆದರಿದ 13 ವರ್ಷದ ಬಾಲಕಿ ತನ್ನ ಸಮತೋಲನವನ್ನು ಕಳೆದುಕೊಂಡು ತಾನು ಕುಳಿತಿದ್ದ ಗೊಂಡೋಲಾದಿಂದ ಕೆಳಗೆ ಜಾರಿದ್ದಾಳೆ. ಆಗ ಆಕೆ ವೀಲ್‍ನ ರಾಡ್‍ಗಳನ್ನು ಗಟ್ಟಿಯಾಗಿ ಹಿಡಿದುಕೊಂಡು  ನೇತಾಡಿದ್ದಾಳೆ.  ಮತ್ತು ಸಹಾಯಕ್ಕಾಗಿ ಜೋರಾಗಿ ಕಿರುಚಾಡಿದ್ದಾಳೆ.  ಖೇರಿ ಜಿಲ್ಲೆಯ ಗ್ರಾಮದ ಜಾತ್ರೆಯಲ್ಲಿ ನಡೆದ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಈ ವಿಡಿಯೊದಲ್ಲಿ ಎತ್ತರಲ್ಲಿದ್ದ ಕಬ್ಬಿಣದ ರಾಡ್‍ನಲ್ಲಿ ಬಾಲಕಿ ನೇತಾಡಿದ್ದಾಳೆ.

ನಂತರ ವೀಲ್‍ಅನ್ನು ತಿರುಗಿಸಿ  ಕೆಳಗೆ ತಂದು ಆಕೆಯನ್ನು  ರಕ್ಷಿಸಲಾಗಿದೆ. ಬಾಲಕಿ ಸುರಕ್ಷಿತವಾಗಿದ್ದಾಳೆ ಎಂದು ಉಪ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ನಿಗಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮೇಳದಲ್ಲಿ ಈ ದೈತ್ಯ ವೀಲ್ ಆಟಕ್ಕೆ  ಅನುಮತಿ ಇರಲಿಲ್ಲ ಎಂದು ವರದಿಯಾಗಿದೆ. ಆದರೂ ನಡೆದ ಈ ಘಟನೆಯನ್ನು ಗಮನಿಸಿ, ಸರಿಯಾದ ಅನುಮತಿ ಇಲ್ಲದಿದ್ದರೂ ಸ್ವಿಂಗ್ ಅನ್ನು ಹೇಗೆ ನಡೆಸಲಾಯಿತು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ:ನ್ಯೂಸ್ ಪೇಪರ್‌ ಉಟ್ಟುಕೊಂಡು ನ್ಯೂಸಾದ ಬೆಡಗಿ; ವೈರಲ್ ವಿಡಿಯೊ ನೀವೂ ನೋಡಿ

ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಉತ್ತರ ಪ್ರದೇಶದ ಕನೌಜ್ ಪ್ರದೇಶದಿಂದ ಸುಮಾರು 160 ಕಿ.ಮೀ ದೂರದಲ್ಲಿ ಇಂತಹದೊಂದು ಘಟನೆ ಈ ವರ್ಷದ ಆರಂಭದಲ್ಲಿ ನಡೆದಿರುವುದಾಗಿ  ವರದಿಯಾಗಿತ್ತು. ಈ ನವೆಂಬರ್‌ನಲ್ಲಿ, ಇನ್ನೊಬ್ಬ ಹದಿಹರೆಯದ ಬಾಲಕಿ ಸ್ಥಳೀಯ ಜಾತ್ರೆಗೆ ಭೇಟಿ ನೀಡಿದಾಗ ಇದೇ ರೀತಿಯ ದುರಂತವನ್ನು ಅನುಭವಿಸಿದ್ದಳು.  14 ವರ್ಷದ ಬಾಲಕಿಯ ಕೂದಲು ಫೆರಿಸ್ ಚಕ್ರದ ರಾಡ್‍ಗಳಲ್ಲಿ ಸಿಲುಕಿಕೊಂಡಿದ್ದು, ಅದರಿಂದ ಅವಳ ನೆತ್ತಿಯ ಕೂದಲು ಕಿತ್ತು ಹೋಗಿ ತೀವ್ರವಾಗಿ ಗಾಯಗೊಂಡಿದ್ದಳು. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.