ವಾತಾವರಣ ಬದಲಾದಂತೆ ಆಯಾ ಸಮಯಕ್ಕನುಗುಣವಾಗಿ ಕೆಲವೊಂದು ಆರೋಗ್ಯ ಸಮಸ್ಯೆಗಳು (Health problem) ಕಾಣಿಸಿಕೊಳ್ಳುವುದು ಸಹಜ. ಅದರಂತೆ ಬೇಸಿಗೆ ಬಂತೆಂದರೆ ಆ ರಣಬಿಸಿಲಿಗೆ ಗ್ಯಾಸ್ಟ್ರೋಎಂಟರೈಟಿಸ್ (Stomach Flu) ಸಮಸ್ಯೆ (Gastroenteritis In Children) ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಕೊರೆಯುವ ಚಳಿಯ ನಡುವೆಯೂ ಮಕ್ಕಳಲ್ಲಿ ಗ್ಯಾಸ್ಟ್ರೋಎಂಟರೈಟಿಸ್ ಸಮಸ್ಯೆ ದಿಢೀರ್ ಆಗಿ ಕಾಣಿಸಿಕೊಳ್ಳುತ್ತಿದೆ ಎಂಬ ಅಚ್ಚರಿಯ ಸಂಗತಿಯೊಂದನ್ನು ಮಕ್ಕಳ ತಜ್ಞರು ಹಂಚಿಕೊಂಡಿದ್ದಾರೆ.
ಮಕ್ಕಳಲ್ಲಿ ದಿಢೀರ್ ಎಂದು ಕಾಣಿಸಿಕೊಂಡಿರುವ ಈ ಗ್ಯಾಸ್ಟ್ರೋಎಂಟರೈಟಿಸ್ ಗೆ ಕಾರಣಗಳೇನು.. ಪೋಷಕರು ಈ ವೇಳೆ ಮಕ್ಕಳ ಬಗೆಗೆ ಯಾವ ರೀತಿಯ ಕಾಳಜಿ ವಹಿಸುವ ಅಗತ್ಯವಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಡಾ. ಅಶೋಕ್ ಎಂ.ವಿ.
ಏನಿದು ಗ್ಯಾಸ್ಟ್ರೋಎಂಟರೈಟಿಸ್?
ಇದೊಂದು ಜಠರ ಕರುಳಿನ ಕಾಯಿಲೆಯಾಗಿದ್ದು, ವಿವಿಧ ಕಾರಣಗಳಿಂದ ಮಕ್ಕಳಲ್ಲಿ ಈ ಸಮಸ್ಯೆಯು ಕಾಣಿಸಿಕೊಳ್ಳುತ್ತದೆ. ನಗರದಲ್ಲಿ ನವೆಂಬರ್ ನಲ್ಲಿ ಇಂತಹ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದು ಆಶ್ಚರ್ಯಕರ. ಈ ವೇಳೆ ಮಕ್ಕಳು ಮಲ, ವಾಂತಿ, ಹೊಟ್ಟೆ ನೋವು ಸೋಂಕಿಗೆ ತುತ್ತಾಗುತ್ತಿರುವುದು ನಮಗೂ ಒಂದು ರೀತಿಯ ಪ್ರಶ್ನೆಯಾಗಿದೆ ಎನ್ನುತ್ತಾರೆ ತಜ್ಞರು.
ಕಳೆದ ಒಂದು ತಿಂಗಳಲ್ಲಿ ಮಕ್ಕಳಲ್ಲಿ ಗ್ಯಾಸ್ಟ್ರೋಎಂಟರೈಟಿಸ್ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಅಲ್ಲದೆ ಕೆಲವು ಮಕ್ಕಳಲ್ಲಿ ಕೈ, ಕಾಲು ಮತ್ತು ಬಾಯಿಯಲ್ಲಿ ದದ್ದುಗಳಾಗುವ ಸಮಸ್ಯೆಗಳು ಕಂಡುಬರುತ್ತಿವೆ. ಈ ರೀತಿಯ ಪ್ರಕರಣಗಳು ದಿನಕ್ಕೆ 3 ರಿಂದ 4 ವರದಿಯಾಗುತ್ತಿದ್ದು, ಕೆಲವೊಮ್ಮೆ ದಿನಕ್ಕೆ 6 ಪ್ರಕರಣಗಳು ವರದಿಯಾಗುತ್ತಿರುವುದು ಗಮನಿಸಬೇಕಾದ ಸಂಗತಿ.
ತಿಳಿಯಬೇಕಾದ ವಿಷಯವೆಂದರೆ ಬಹುತೇಕ 5 ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿರುವುದು. ಈ ರೀತಿಯ ಸೋಂಕುಗಳು ಜ್ವರ, ಅನಂತರ ಕೈ, ಕಾಲು ಹಾಗೂ ಬಾಯಿಯಲ್ಲಿ ದದ್ದುಗಳ ಮೂಲಕ ಕಾಣಿಸಿಕೊಳ್ಳುತ್ತಿದೆ.
ಬೇಸಿಗೆಯಲ್ಲಿ ವರದಿಯಾಗುತ್ತಿದ್ದ ಈ ರೀತಿಯ ಪ್ರಕರಣಗಳು ನವೆಂಬರ್ ನಲ್ಲಿ ವರದಿಯಾಗುತ್ತಿದೆ. ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ವರದಿಯಾಗುತ್ತಿದ್ದ ಕೈ, ಕಾಲು, ಬಾಯಿಯ ದದ್ದು ಸಮಸ್ಯೆಗಳು ಇದೀಗ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ವೈದ್ಯರು, ಕಳೆದ ಒಂದು ತಿಂಗಳಿನಿಂದ ಮಕ್ಕಳಲ್ಲಿ ವೈರಲ್ ಸೋಂಕುಗಳು ಉಲ್ಬಣವಾಗುತ್ತಿರುವುದನ್ನು ನೋಡುತ್ತಿದ್ದೇವೆ. ವಿಶೇಷವಾಗಿ ಶೀತ, ಕೆಮ್ಮು ಮತ್ತು ಜ್ವರದ ಸಮಸ್ಯೆಯುಳ್ಳ ಮಕ್ಕಳು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ.
ಅಡೆನೊವೈರಸ್ ಸೋಂಕುಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಸಹ ನೋಡುತ್ತಿದ್ದೇವೆ. ಇದು ಸಾಮಾನ್ಯವಾಗಿ ಉಸಿರಾಟದ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಜ್ವರ, ಶೀತ, ಹೆಚ್1ಎನ್1 ಹಾಗೂ ಸೋಂಕಿನ ಲಕ್ಷಣಗಳನ್ನು ಹೊಂದಿರುತ್ತದೆ ಎಂದು ಹೇಳುತ್ತಾರೆ ವೈದ್ಯರು.
ಈ ಸುದ್ದಿಯನ್ನೂ ಓದಿ | Almond Side Effects: ಮೆದುಳಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಬಾದಾಮಿ ತಿನ್ನುವವರೇ ಎಚ್ಚರ!
ಪೋಷಕರಿಗೆ ಸಲಹೆ
ಒಂದು ವೇಳೆ ನಿಮ್ಮ ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದರೆ ಶಾಲೆಗೆ ಕಳುಹಿಸದಿರುವುದು ಉತ್ತಮ. ಯಾಕೆಂದರೆ ಅದು ಇತರ ಮಕ್ಕಳಿಗೂ ಹರಡುವ ಸಾಧ್ಯತೆಯಿರುತ್ತದೆ.
ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಪೋಷಕರು ಮನೆಮದ್ದುಗಳಿಗೆ ಮೊರೆ ಹೋಗುವುದನ್ನು ನಿಲ್ಲಿಸಿ, ಅದರ ಬದಲಿಗೆ ಹತ್ತಿರದ ಮಕ್ಕಳ ತಜ್ಞರನ್ನು ಭೇಟಿ ಮಾಡುವುದು ಒಳಿತು. ವೈದ್ಯರ ಸಹಾಯದಿಂದ ಮಗುವಿನ ಆರೋಗ್ಯ ಚೇತರಿಕೆ ಕಾಣಲಿದೆ ಎಂದು ವಾಸವಿ ಆಸ್ಪತ್ರೆ ಮಕ್ಕಳ ತಜ್ಞರಾದ ಡಾ. ಅಶೋಕ್ ಎಂ.ವಿ ಸಲಹೆ ನೀಡಿದ್ದಾರೆ.