Saturday, 10th May 2025

Tumkur News: ಕಾಮಗಾರಿ ಹಸ್ತಾಂತರಿಸಿಕೊಳ್ಳು ವಂತೆ ಶಾಸಕರಿಂದ ಪಿಡಿಓಗಳಿಗೆ ಸೂಚನೆ

ಚಿಕ್ಕನಾಯಕನಹಳ್ಳಿ : ಜಲಜೀವನ್ ಮಿಷನ್ ಯೋಜನೆಯಡಿ ಆಗಿರುವ ಕಾಮಾಗಾರಿಗಳನ್ನು ಪರಿಶೀಲಿಸಿ, ಎಲ್ಲಾ ಮನೆಗಳಿಗೂ ನೀರು ಸರಬರಾಜು ಆಗುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಂಡು ನಂತರ ಕಾಮಗಾರಿ ಹಸ್ತಾಂತರಿಸಿ ಕೊಳ್ಳುವಂತೆ ಶಾಸಕ ಸಿ.ಬಿ. ಸುರೇಶಬಾಬು ಪಿಡಿಓಗಳಿಗೆ ಸೂಚಿಸಿದರು.

ತಾಪಂ ಸಭಾಂಗಣದಲ್ಲಿ ಜೆಜೆಎಂ ಯೋಜನೆ, ಸ್ವಚ್ಚ ಭಾರತ್ ಮಿಷನ್ ಯೋಜನೆಯಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ, ಪಿಡಿಓ ಹಾಗು ಗುತ್ತಿಗೆದಾರರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ದಲ್ಲಿ ಅವರು ಮಾತನಾಡಿದರು.

ಹಸ್ತಾಂತರಕ್ಕೂ ಮುನ್ನ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳು ಗ್ರಾಮ ಸಭೆ ಕರೆದು ಹರಘರ್ ಜಲ್ ಘೋಷಿಸಬೇಕು ಎಂದು ತಿಳಿಸಿದರು. ಜಲಜೀವನ್ ಮಿಷನ್ ಯೋಜನೆಯಡಿ ನಿರ್ವಹಿಸಿರುವ ಪೈಪ್‌ಲೈನ್ ಕಾಮಾಗಾರಿ ಗುಣಮಟ್ಟದಿಂದ ಕೂಡಿರಬೇಕು. ರಸ್ತೆಗಳನ್ನು ಅಡ್ಡಾದಿಡ್ಡಿಯಾಗಿ ಅಗೆಯದೆ ಒಂದು ರಸ್ತೆಯಲ್ಲಿ ಕಾಮಾಗಾರಿ ಮುಗಿದ ನಂತರ ಮತ್ತೊಂದು ರಸ್ತೆಗೆ ತೆರಳಬೇಕು. ಅದನ್ನು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಿ ಸರಿಪಡಿಸಿಕೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗದ ಎಇಇ ಮಾರುತಿ ಅವರಿಗೆ ಸೂಚಿಸಿದರು.

ಗಂಡ ಹೆಂಡತಿಯಂತೆ ಚಾಡಿ ಹೇಳಬೇಡಿ
ಜಲ ಜೀವನ್ ಮಿಷನ್ ಮಹತ್ವದ ಯೋಜನೆಯಾಗಿದೆ ಪಂಚಾಯಿತಿ ಪ್ರತಿನಿಧಿಗಳು, ಅಧ್ಯಕ್ಷರು, ಪಿಡಿಓ ಹಾಗು ಗುತ್ತಿಗೆದಾರರು ಹಾಗು ಗ್ರಾಮಸ್ಥರು ಸಮನ್ವಯತೆಯಿಂದ ಕೆಲಸ ಮಾಡಿ ಯೋಜನೆಯ ಯಶಸ್ಸಿಗೆ ಕೈ ಜೋಡಿಸ ಬೇಕು. ಒಬ್ಬರ ಮೇಲೋಬ್ಬರು ಗಂಡ, ಹೆಂಡತಿಯಂತೆ ದೂರು ಹೇಳುತ್ತಾ ಕೂರಬೇಡಿ. ಗ್ರಾಮಗಳಲ್ಲಿ ಗುಣಮಟ್ಟದೊಂದಿಗೆ ಕಾಲ ಮಿತಿಯೊಳಗೆ ಕಾಮಾಗಾರಿ ಪೂರ್ಣಗೊಳಿಸಬೇಕು. ಪ್ರತಿ ಕುಟುಂಬಕ್ಕೂ ಯೋಜನೆಯ ಲಾಭ ದೊರಕುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಸಿ.ಬಿ. ಸುರೇಶಬಾಬು ತಿಳಿಸಿದರು.

ಬೆಳಗುಲಿ ಗ್ರಾ.ಪಂ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಪೈಪ್‌ಲೈನ್ ಕಾಮಾಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಪಿಡಿಓ ರಮೇಶ್ ದೂರಿದರು. ಪೈಪ್‌ಲೈನ್ ಅಳವಡಿಕೆ ಇತರೆ ರಿಪೇರಿಯ ಬಗ್ಗೆ ತಾಲ್ಲೂಕಿನ ಎಲ್ಲಾ ನೀರುಗಂಟಿಗಳಿಗೆ ಕಾರ್ಯಾಗಾರ ನಡೆಸುವಂತೆ ಪಿಡಿಓ ನಾಗೇಶ್ ಸಭೆಯಲ್ಲಿ ಒತ್ತಾಯಿಸಿದರು.

ಜೆಜೆಎಂ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅರುಣ್ ಕುಮಾರ್ ಮಾತನಾಡಿ ಜಲ ಜೀವನ್ ಮಿಷನ್ ಯೋಜನೆ ತಾಲ್ಲೂಕಿನಲ್ಲಿ ೨೦೨೧-೨೨ ಸಾಲಿನಿಂದ ಅನುಷ್ಠಾನದಲ್ಲಿದೆ. ೨೨೫ ಕಾಮಾಗಾರಿಗಳು ಈ ಯೋಜನೆಯಡಿ ಮನೆ ಮನೆಗೆ ನಲ್ಲಿ ಸಂಪರ್ಕ ವಿವಿಧ ಕಾಮಾಗಾರಿಗಳು ಪ್ರಗತಿಯಲ್ಲಿವೆ. ೧೨೫ ಕಾಮಾಗಾರಿಗಳು ಪೂರ್ಣಗೊಂಡು ಪ್ರತಿ ಮನೆಗೂ ಶುದ್ದ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಇಓ ಡಾ. ದೊಡ್ಡಸಿದ್ದಯ್ಯ, ಗ್ರಾ.ಪಂ ಅಧ್ಯಕ್ಷರುಗಳು, ಪಿಡಿಓಗಳು ಯೋಜನೆಯ ಅಧಿಕಾರಿಗಳು ಹಾಜರಿದ್ದರು.