ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ (IND vs AUS) ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯುವ ಆಲ್‌ರೌಂಡರ್ ನಿತೀಶ್ ರೆಡ್ಡಿ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಪರ್ತ್ ಟೆಸ್ಟ್ ಪ್ರಥಮ ಇನಿಂಗ್ಸ್‌ನಲಿ 40ಕ್ಕೂ ಹೆಚ್ಚು ರನ್ ಗಳಿಸಿದ್ದ ಅವರು, ಇದೀಗ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿಯೂ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದಿದ್ದಾರೆ.
ಶುಕ್ರವಾರ ಇಲ್ಲಿನ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ಆರಂಭವಾದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಕೆಎಲ್ ರಾಹುಲ್ 37 ರನ್ ಹಾಗೂ ಶುಭಮನ್ ಗಿಲ್ 31 ರನ್ ಗಳಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ರಿಷಭ್ ಪಂತ್ ಹಾಗೂ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಆದರೆ, ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಿತೀಶ್ ಕುಮಾರ್ ರೆಡ್ಡಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ತನ್ನ ಮನ ಮೋಹಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದರು. ಅವರು ಆಡಿದ 54 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿಗಳೊಂದಿಗೆ 42 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಉತ್ತಮ ಆರಂಭವನ್ನು ಪಡೆದಿದ್ದರು.
Nitish Kumar Reddy Remember this name this guy is going to rule world cricket for next 15 years it's to early to say but we have find better all rounder then Hardik Pandya #INDvsAUS #AUSvsIND pic.twitter.com/yf0kTYF3v7
— Aditya Soni (@imAdsoni) December 6, 2024
ರಿವರ್ಸ್ ಸ್ಕೂಪ್‌ನಲ್ಲಿ ಸಿಕ್ಸ್ ಹೊಡೆದ ನಿತೀಶ್ ರೆಡ್ಡಿ
ಬ್ಯಾಟಿಂಗ್‌ಗೆ ಕಠಿಣವಾಗಿದ್ದ ಪಿಚ್‌ನಲ್ಲಿಯೂ ನಿತೀಶ್ ರೆಡ್ಡಿ ಸೊಗಸಾದ ಬ್ಯಾಟಿಂಗ್ ಮೂಲಕ ಮಿಚೆಲ್ ಸ್ಟಾರ್ಕ್ ಮತ್ತು ಸ್ಕಾಟ್ ಬೋಲೆಂಡ್ ಅವರನ್ನು ಎದುರಿಸಿದರು. ಅದರಲ್ಲಿಯೂ ವಿಶೇಷವಾಗಿ ಸ್ಕಾಟ್ ಬೋಲೆಂಡ್‌ಗೆ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್ ಹೊಡೆಯುವ ಮೂಲಕ ಸ್ಕಾಟ್ ಬೋಲೆಂಡ್ ಆಸೀಸ್ ಆಟಗಾರರಿಗೆ ಶಾಕ್ ನೀಡಿದರು. ಸ್ಕಾಟ್ ಬೋಲೆಂಡ್ ಆಫ್ ಸ್ಟಂಪ್ ಮೇಲೆ ಎಸೆದ ಚೆಂಡನ್ನು ಅರಿತ ನಿತೀಶ್ ರೆಡ್ಡಿ, ಸುಲಭವಾಗಿ ರಿವರ್ಸ್‌ಸ್ಕೂಪ್ ಮೂಲಕ ಥರ್ಡ್ ಮ್ಯಾನ್ ಜಾಗದಲ್ಲಿ ಸಿಕ್ಸರ್ ಬಾರಿಸಿದರು.
ಅತ್ಯುತ್ತಮ ಆರಂಭ ಪಡೆದು ಬ್ಯಾಟ್ ಮಾಡುತ್ತಿದ್ದ ನಿತೀಶ್ ರೆಡ್ಡಿಗೆ ಮತ್ತೊಂದು ತುದಿಯಲ್ಲಿ ಯಾರೂ ಕೂಡ ಸರಿಯಾಗಿ ಸಾಥ್ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ರನ್ ಗಳಿಸುವ ಭರದಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡದ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
180ಕ್ಕೆ ಆಲ್‌ಔಟ್ ಆದ ಭಾರತ ತಂಡ
ಮಿಚೆಲ್ ಸ್ಟಾರ್ಕ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಭಾರತ ತಂಡ, ಪ್ರಥಮ ಇನಿಂಗ್ಸ್‌ನಲ್ಲಿ 44.1 ಓವರ್‌ಗಳಿಗೆ 180 ರನ್‌ಗಳಿಗೆ ಆಲ್‌ಔಟ್ ಆಯಿತು. ನಿತೀಶ್ ಕುಮಾರ್ ಬಿಟ್ಟರೆ, ಕೆಎಲ್ ರಾಹುಲ್ (37 ರನ್) ಹಾಗೂ ಶುಭಮನ್ ಗಿಲ್ (31) ಅವರು ಉತ್ತಮ ಪ್ರದರ್ಶನ ತೋರಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು.
ಈ ಸುದ್ದಿಯನ್ನು ಓದಿ: IND vs AUS: ʻಅಪ್ಪನ ಕಣ್ಣೀರು ನೋಡಿದ್ದೇನೆʼ- ತಂದೆಯ ತ್ಯಾಗವನ್ನು ನೆನೆದ ನಿತೀಶ್ ರೆಡ್ಡಿ!