Thursday, 15th May 2025

Pushpa 2: ‘ಪುಷ್ಪ 2’ ಸ್ಕ್ರೀನಿಂಗ್‌ ವೇಳೆ ಚಿತ್ರ ಮಂದಿರದಲ್ಲಿ ರಾಸಾಯನಿಕ ಸಿಂಪಡಣೆ; ಮೂಗು ಮುಚ್ಚಿಕೊಂಡು ಆಚೆಗೆ ಓಡಿದ ಪ್ರೇಕ್ಷಕರು

ಮುಂಬೈ: ಅಲ್ಲು ಅರ್ಜುನ್‌(Allu Arjun) ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ನಟನೆಯ ‘ಪುಷ್ಪ 2’ (Pushpa 2) ಸಿನಿಮಾ ಡಿ. 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ದೊಡ್ಡ ಮಟ್ಟದಲ್ಲಿ ತೆರೆಕಂಡ ಈ ಸಿನಿಮಾ ಕಲೆಕ್ಷನ್‌ನಲ್ಲೂ ಮುಂದಿದೆ. ಮೊದಲ ದಿನದ ಗಳಿಕೆಯಲ್ಲಿ ಈ ಹಿಂದಿನ ಹಲವು ಸಿನಿಮಾಗಳ ದಾಖಲೆಗಳನ್ನು ಮುರಿದಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ನಿನ್ನೆ(ಡಿ. 5) ರಾತ್ರಿ ಮುಂಬೈನ ಗೈಟಿ ಗ್ಯಾಲಕ್ಸಿ(Gaiety Galaxy) ಥಿಯೇಟರ್‌ನಲ್ಲಿ ‘ಪುಷ್ಪ 2: ದಿ ರೂಲ್’ ಚಿತ್ರ ಪ್ರದರ್ಶನದ ವೇಳೆ ಅಪರಿಚಿತ ವ್ಯಕ್ತಿ ರಾಸಾಯನಿಕ ವಸ್ತುವನ್ನು ಸಿಂಪಡಿಸಿದ್ದು, ಚಿತ್ರ ವೀಕ್ಷಣೆಗೆ ಅಡ್ಡಿಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ರಾಸಾಯನಿಕ ವಸ್ತು ಸಿಂಪಡಣೆಯಿಂದಾಗಿ ಪ್ರೇಕ್ಷಕರು ವಿಪರೀತ ಕೆಮ್ಮಿದ್ದಾರೆ. ಗಂಟಲಿಗೆ ಕಿರಿಕಿರಿಯಾದಂತಾಗಿ ಮೂಗು ಮುಚ್ಚಿಕೊಂಡು ಆಚೆಗೆ ಓಡಿದ್ದಾರೆ. ಈ ಘಟನೆಯಿಂದಾಗಿ ಪ್ರದರ್ಶನವನ್ನು ನಿಲ್ಲಿಸಲಾಗಿದೆ ಎಂಬ ಮಾಹಿತಿಯಿದೆ.

ಬಾಂದ್ರಾದಲ್ಲಿನ ಸಿನಿಮಾ ಹಾಲ್‌ನಲ್ಲಿ ನಡೆದ ಈ ಘಟನೆಯಿಂದಾಗಿ ಭಯಭೀತರಾದ ಪ್ರೇಕ್ಷಕರು ತಮ್ಮ ಮುಖಗಳನ್ನು ಮುಚ್ಚಿಕೊಂಡಿದ್ದಾರೆ. “ಯಾರೋ ಏನೋ ಸ್ಪ್ರೇ ಮಾಡಿದ್ದಾರೆ. ಎಲ್ಲರೂ ಕೆಮ್ಮುತ್ತಿದ್ದಾರೆ” ಎಂದು ವ್ಯಕ್ತಿಯೊಬ್ಬರು ವಿಡಿಯೊವೊಂದರಲ್ಲಿ ಹೇಳಿದ್ದಾರೆ. ವಿಷಯ ತಿಳಿದ ಕೂಡಲೇ ಪೊಲೀಸರು ತನಿಖೆಗಾಗಿ ಚಲನಚಿತ್ರ ಮಂದಿರಕ್ಕೆ ತೆರಳಿದ್ದು, ಪ್ರಕರಣವನ್ನು ದಾಖಲು ಮಾಡಿಲ್ಲ ಎನ್ನಲಾಗಿದೆ.

ಮೊನ್ನೆ ‘ಪುಷ್ಪ 2 ‘ ಪ್ರೀಮಿಯರ್ ಸಮಯದಲ್ಲಿ ಹೈದರಾಬಾದ್ ಸಿನಿಮಾ ಹಾಲ್‌ನಲ್ಲಿ ಕಾಲ್ತುಳಿತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತ ಸಂಭವಿಸಿದ್ದು,ಯಾವುದೇ ಸೂಚನೆಯಿಲ್ಲದೆ ಪ್ರೀಮಿಯರ್‌ ಶೋಗೆ ಆಗಮಿಸಿದ್ದ ನಟ ಅಲ್ಲು ಅರ್ಜುನ್ ಅವರನ್ನು ನೋಡಲು ನೂಕುನುಗ್ಗಲು ಉಂಟಾಯಿತು ಎಂದು ತಿಳಿದು ಬಂದಿದೆ. 35 ವರ್ಷದ ಮಹಿಳೆ ಸಾವನ್ನಪ್ಪಿದ್ದರೆ, ಆಕೆಯ ಒಂಬತ್ತು ವರ್ಷದ ಮಗನಿಗೆ ಉಸಿರುಗಟ್ಟಿತ್ತು. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನಲ್ಲಿ ಯುವಕನ ದಾರುಣ ಸಾವು

ʼಪುಷ್ಪ-2′ ನೋಡಲು ತೀರಾ ಕಾತುರನಾಗಿದ್ದ 19 ವರ್ಷದ ಪ್ರವೀಣ್ ತಮಾಚಲಂ ಎಂಬ ಯುವಕ ವೇಗವಾಗಿ ಓಡಿದ್ದರಿಂದ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಯುವಕ ಆಂಧ್ರ ಪ್ರದೇಶದ ಶ್ರೀಕಾಕುಳಂ ಮೂಲದವನಾಗಿದ್ದು, ದೊಡ್ಡಬಳ್ಳಾಪುರ ಬಳಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಐಟಿಐ, ಡಿಪ್ಲೊಮಾ ಓದಿದ್ದ ಮೃತ ಪ್ರವೀಣ್, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಾ ಸ್ನೇಹಿತರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದನು ಎಂಬ ಮಾಹಿತಿ ಸಿಕ್ಕಿದೆ.

ರಾಜ್ಯದ‌ ಹಲವು ಚಿತ್ರಮಂದಿರಗಳಲ್ಲಿ ತೆಲುಗಿನ ʼಪುಷ್ಪ-2ʼ ಸಿನಿಮಾದ ಗುರುವಾರದ(ಡಿ. 5) ಮುಂಜಾನೆಯ 4 ಗಂಟೆಯ ಪ್ರದರ್ಶನಗಳು ರದ್ದುಗೊಂಡಿದ್ದವು. ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆಯಡಿ ಬೆಳಗ್ಗೆ 6.30ರ ಮೊದಲು ಹಾಗೂ ರಾತ್ರಿ 10.30ರ ಸಿನಿಮಾ ಪ್ರದರ್ಶನಕ್ಕೆ ಅವಕಾಶವಿರಲಿಲ್ಲ. ಈ ವಿಷಯವನ್ನು ಪ್ರಸ್ತಾಪಿಸಿ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಬೆಂಗಳೂರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ನಿಯಮ ಉಲ್ಲಂಘಿಸುವ ಚಿತ್ರಮಂದಿರಗಳ ಮಾಲೀಕರ ವಿರುದ್ಧ‌ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು. ಮುಂಜಾನೆ 6ಕ್ಕೂ ಮೊದಲು ಸಿನಿಮಾ ಪ್ರದರ್ಶನ ನೀಡುತ್ತಿರುವ 40ಕ್ಕೂ ಅಧಿಕ ಚಿತ್ರಮಂದಿರಗಳ ಹೆಸರನ್ನೂ ಪತ್ರದಲ್ಲಿ ಜಿಲ್ಲಾಧಿಕಾರಿ ಉಲ್ಲೇಖಿಸಿದ್ದರು.

ಈ ದೂರಿನ ಬೆನ್ನಲ್ಲೇ ಕರ್ನಾಟಕದಲ್ಲಿ ‘ಪುಷ್ಪ-2’ ಸಿನಿಮಾದ ಬುಧವಾರ(ಡಿ. 4) ಮಧ್ಯರಾತ್ರಿ ಹಾಗೂ ಗುರುವಾರ ಬೆಳಗಿನ (ಡಿ. 5) ಪ್ರದರ್ಶನಗಳನ್ನು ರದ್ದುಗೊಳಿಸಲಾಗಿತ್ತು. ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಿ ಜಿಲ್ಲಾಧಿಕಾರಿ ಆದೇಶದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು.

ಈ ಸುದ್ದಿಯನ್ನೂ ಓದಿ:Pushpa 2: ಪುಷ್ಪ-2 ರಿಲೀಸ್‌ನಿಂದ ಪಿವಿಆರ್‌ ಐನಾಕ್ಸ್‌ ಷೇರು ಹೈ ಜಂಪ್?‌