Sunday, 11th May 2025

Earthquake: ಅಮೆರಿಕದಲ್ಲಿ 7.0 ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ

Earthquake

ವಾಷಿಂಗ್ಟನ್‌: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾ (Northern California)ದಲ್ಲಿ ಗುರುವಾರ (ಡಿ. 5) 7.0 ತೀವ್ರತೆಯ ಶಕ್ತವಾದ ಭೂಕಂಪ ಸಂಭವಿಸಿದೆ (Earthquake). ಈ ಹಿನ್ನೆಲೆಯಲ್ಲಿ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ಸುನಾಮಿ (Tsunami) ಎಚ್ಚರಿಕೆ ನೀಡಲಾಗಿದೆ. ಸಾವು-ನೋವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

ಒರೆಗಾನ್ ಗಡಿಯಿಂದ ಸುಮಾರು 130 ಮೈಲಿ (209 ಕಿ.ಮೀ.) ದೂರದಲ್ಲಿರುವ ಕರಾವಳಿಯ ಹಂಬೋಲ್ಟ್ ಕೌಂಟಿಯ ಸಣ್ಣ ನಗರವಾದ ಫರ್ಂಡೇಲ್‌ನ ಪಶ್ಚಿಮಕ್ಕೆ ಬೆಳಗ್ಗೆ 10:44ಕ್ಕೆ ಭೂಕಂಪ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಇದರ ತೀವ್ರತೆ ಎಷ್ಟಿತ್ತೆಂದರೆ ಸುಮಾರು 270 ಮೈಲಿ (435 ಕಿ.ಮೀ.) ದೂರದಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೋದವರೆಗೂ ಬಲವಾದ ಭೂಕಂಪನದ ಅನುಭವವಾಗಿದೆ. ಹಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದ್ದಾರೆ. ಇದರ ನಂತರ ಅನೇಕ ಸಣ್ಣ ಭೂಕಂಪಗಳು ಸಂಭವಿಸಿದವು.

ಯಾವುದೇ ಹಾನಿ ಸಂಭವಿಸಿಲ್ಲ

2019ರಲ್ಲಿ ರಿಡ್ಜೆಕ್ರೆಸ್ಟ್‌ನಲ್ಲಿ 7.1 ತೀವ್ರತೆಯ ಭೂಕಂಪನದ ನಂತರ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಅತ್ಯಂತ ಪ್ರಬಲ ಭೂಕಂಪಗಳಲ್ಲಿ ಒಂದಾದ ಇದರಿಂದ ಹೆಚ್ಚಿನ ಹಾನಿ ಅಥವಾ ಗಾಯಗಳಾದ ಬಗ್ಗೆ ವರದಿ ಬಂದಿಲ್ಲ.

ಸುನಾಮಿ ಎಚ್ಚರಿಕೆ

ಸುನಾಮಿ ಎಚ್ಚರಿಕೆ ಸುಮಾರು ಒಂದು ಗಂಟೆ ಕಾಲ ಜಾರಿಯಲ್ಲಿತ್ತು. ಭೂಕಂಪ ಸಂಭವಿಸಿದ ಕೆಲವೇ ಹೊತ್ತಲ್ಲಿ ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯ ಉತ್ತರದಿಂದ ಒರೆಗಾನ್‌ವರೆಗೆ ಸುಮಾರು 500 ಮೈಲಿ (805 ಕಿ.ಮೀ.) ಕರಾವಳಿಗೆ ಸುನಾಮಿ ಎಚ್ಚರಿಕೆ ನೀಡಲಾಯಿತು. “ಶಕ್ತಿಯುತ ಸಮುದ್ರದ ಅಲೆಗಳು ಮತ್ತು ಬಲವಾದ ಪ್ರವಾಹಗಳ ಸರಣಿಯು ನಿಮ್ಮ ಹತ್ತಿರದ ಕರಾವಳಿಗಳ ಮೇಲೆ ಪರಿಣಾಮ ಬೀರಬಹುದು. ನೀವು ಅಪಾಯದಲ್ಲಿದ್ದೀರಿ. ಕರಾವಳಿ ಪ್ರದೇಶದಿಂದ ಸಾಧ್ಯವಾದಷ್ಟು ದೂರವಿರಿ. ಈಗ ಎತ್ತರದ ಮೈದಾನ ಅಥವಾ ಒಳನಾಡಿಗೆ ತೆರಳಿ. ಮರಳುವುದು ಸುರಕ್ಷಿತ ಎಂದು ಸ್ಥಳೀಯ ಅಧಿಕಾರಿಗಳು ಹೇಳುವವರೆಗೂ ಕರಾವಳಿಯಿಂದ ದೂರವಿರಿʼʼ ಎನ್ನುವ ಸಂದೇಶ ಮೊಬೈಲ್‌ ಫೋನ್‌ಗೆ ಬಂದಿತ್ತು ಎಂದು ಹಲವರು ತಿಳಿಸಿದ್ದಾರೆ.

ಕಟ್ಟಡ ಅಲುಗಾಡಿದ ಅನುಭವ

ʼʼನಾವಿದ್ದ ಕಟ್ಟಡ ಅಲುಗಾಡಿದೆ. ಆದರೆ ನಮಗೆ ಯಾವುದೇ ಹಾನಿಯಾಗಿಲ್ಲʼʼ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ. ಕ್ಯಾಲಿಫೋರ್ನಿಯಾದ ವಾಯುವ್ಯ ಭಾಗವು ಆಗಾಗ ಭೂಕಂಪಕ್ಕೆ ತುತ್ತಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಕ್ಯಾಲಿಫೋರ್ನಿಯಾ ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ 1800ರಿಂದ ರಾಜ್ಯದ ಕರಾವಳಿ ತೀರಗಳು 150ಕ್ಕೂ ಹೆಚ್ಚು ಸುನಾಮಿಗಳಿಗೆ ತುತ್ತಾಗಿವೆ.

ಹಿಂದೆಯೂ ಆಗಿತ್ತು

1964ರ ಮಾರ್ಚ್ 28ರಂದು ಅಲಾಸ್ಕಾದಲ್ಲಿ ಉಂಟಾದ ಪ್ರಬಲ ಭೂಕಂಪದಿಂದ ಸಂಭವಿಸಿದ ಸುನಾಮಿ ಕೆಲವೇ ಗಂಟೆಗಳ ನಂತರ ಕ್ರೆಸೆಂಟ್ ಸಿಟಿಗೆ ಅಪ್ಪಳಿಸಿತು. ಹಲವು ಮಂದಿ ಸಾವನ್ನಪ್ಪಿದ್ದರು, ಕಟ್ಟಡಗಳಿಗೆ ಹಾನಿ ಸಂಭವಿಸಿತ್ತು. ಜಪಾನ್‌ನಲ್ಲಿ 2011ರ ಭೂಕಂಪದಿಂದ ಉಂಟಾದ ಸುನಾಮಿ ಕ್ಯಾಲಿಫೋರ್ನಿಯಾ ಕರಾವಳಿಯುದ್ದಕ್ಕೂ ಸುಮಾರು 100 ಮಿಲಿಯನ್ ಡಾಲರ್‌ ನಷ್ಟಕ್ಕೆ ಕಾರಣವಾಗಿತ್ತು. ಈ ಪೈಕಿ ಹೆಚ್ಚಿನ ಹಾನಿ ಕ್ರೆಸೆಂಟ್ ಸಿಟಿಯಲ್ಲಿ ಕಂಡು ಬಂದಿತ್ತು.