ಬೆಂಗಳೂರು: ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರ ಮಾತು ಈಗ ನಿಜವಾಗಿದೆ. ಸಾಲು ಸಾಲು ಒಕ್ಕಲಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದ್ದರ ಫಲ ಈಗ ದೇವೇಗೌಡರು ನೋಡುವಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹಾಸನದಲ್ಲಿ ಗುರುವಾರ ನಡೆದ ಬೃಹತ್ ಜನ ಕಲ್ಯಾಣೋತ್ಸವ ಸಮಾವೇಶದಲ್ಲಿ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಚಿವ ಎಚ್.ಟಿ. ಕೃಷ್ಣಪ್ಪ ಅವರು 2010ರಲ್ಲಿ ಬರೆದಿದ್ದ ಕೈ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ರಾಜಕೀಯದಲ್ಲಿ ಒಕ್ಕಲಿಗ ನಾಯಕರು ಬೆಳೆಯಲು ದೇವೇಗೌಡರು ಹಾಗೂ ಕುಮಾರಸ್ವಾಮಿ ಬಿಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಸೇರಿ ವಿವಿಧ ಕಾಂಗ್ರೆಸ್ ನಾಯಕರು ಹಲವು ಬಾರಿ ಹೇಳಿದ್ದರು. ಇದೀಗ ಮತ್ತೊಮ್ಮೆ ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹರಿಹಾಯ್ದಿರುವ ಸಿಎಂ ಸಿದ್ದರಾಮಯ್ಯ ಅವರು, ಮಾಜಿ ಸಚಿವ ಎಚ್.ಟಿ. ಕೃಷ್ಣಪ್ಪ ಅವರು ಹೇಳಿದ್ದ ಭವಿಷ್ಯವಾಣಿಯನ್ನು ಸ್ಮರಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಅವರು ಅಷ್ಟೆ ಘನತೆಯಿಂದ ಮಾತಾಡಬೇಕಿತ್ತು. ಯಾವತ್ತೂ ಗರ್ವ ತೋರಿಸದ ನನಗೆ, “ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ” ಎಂದಿದ್ಧಾರೆ. ಹಾಸನದ ಹೆಣ್ಣು ಮಕ್ಕಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ರೈತರ ಪಾಲಿನ ಸಾಲದಲ್ಲಿ ಶೇ. 58 ರಷ್ಟನ್ನು ಕಡಿತಗೊಳಿಸಿದೆ. ಇದರಿಂದ ಹಾಸನದ ರೈತರು ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮಗ ಎಂದುಕೊಂಡಿರುವ ಕುಮಾರಸ್ವಾಮಿಯವರು ಏಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ. ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣ ಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು ಎಂದು ಸಿಎಂ ತಿಳಿಸಿದ್ದಾರೆ.
ಎಚ್.ಟಿ.ಕೃಷ್ಣಪ್ಪ ಯಾರು? ದೇವೇಗೌಡರ ಬಗ್ಗೆ ಏನು ಹೇಳಿದ್ದರು?
ಮಂಡ್ಯ ಜಿಲ್ಲೆಯ ಮಾಜಿ ಸಚಿವ ಎಚ್.ಟಿ. ಕೃಷ್ಣಪ್ಪ ಅವರು ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ಎರಡು ಬಾರಿ ಮಂತ್ರಿಗಳಾಗಿ ಸೇವಾ ಸಲ್ಲಿಸಿದ್ದರು. ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಕೃಷ್ಣಪ್ಪ 1973ರಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1978ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಅವರು ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ರೇಷ್ಮೆ ಸಚಿವರಾಗಿ ಕೆಲಸ ಮಾಡಿದ್ದರು.

1985ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದರಾದರೂ ಪ್ರಮಾಣ ವಚನ ಸ್ವೀಕರಿಸುವ ಮೊದಲೇ ರಾಮಕೃಷ್ಣ ಹೆಗಡೆ ಸರ್ಕಾರ ವಿಸರ್ಜನೆಗೊಂಡು ಸಾರ್ವತ್ರಿಕ ಚುನಾವಣೆ ಎದುರಾಯಿತು.
ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ರಾಮಕೃಷ್ಣ ಹೆಗಡೆ ಅವರ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದರು. ಹೆಗಡೆ ಅವರ ಸರ್ಕಾರದಲ್ಲಿ ಆರೋಗ್ಯ, ಅಬಕಾರಿ, ವೈದ್ಯಕೀಯ ಶಿಕ್ಷಣ ಸಚಿವರಾದರು. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಎಚ್.ಟಿ. ಕೃಷ್ಣಪ್ಪ ಅವರು ನಂತರ ರಾಜಕಾರಣ ಪ್ರವೇಶ ಮಾಡಿದ್ದರು. ತಾಲ್ಲೂಕಿಗೆ ಹೇಮಾವತಿ ನೀರು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಲಾ ಪ್ರೇಮಿಯೂ ಆಗಿದ್ದ ಅವರು ಮಾಜಿ ಸಚಿವ ಕೆ.ವಿ. ಶಂಕರಗೌಡರ ‘ಪಾದುಕಾ ಕಿರೀಟಿ’ ನಾಟಕದಲ್ಲಿ ಪಾತ್ರ ಮಾಡಿದ್ದರು. ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಕೂಡ ಆಗಿದ್ದರು. ಇವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ 2021ರ ಮಾರ್ಚ್ 19ರಂದು ನಿಧನರಾಗಿದ್ದರು.
ಈ ಸುದ್ದಿಯನ್ನೂ ಓದಿ | CM Siddaramaiah: ಕುಮಾರಸ್ವಾಮಿಗೆ ಮುಖ್ಯಮಂತ್ರಿ ಆಗುವಷ್ಟು ಬಹುಮತವನ್ನು ಈ ರಾಜ್ಯದ ಜನ ಎಂದೂ ಕೊಟ್ಟಿಲ್ಲ ಎಂದ ಸಿದ್ದರಾಮಯ್ಯ
2010ರಲ್ಲಿ ದೇವೇಗೌಡರ ಬಗ್ಗೆ ಭವಿಷ್ಯ ಹೇಳಿದ್ದ ಕೃಷ್ಣಪ್ಪ ಅವರು “ನಮಗೆಲ್ಲಾ ರಾಜಕೀಯ ವನವಾಸ ತಂದ ದೇವೇಗೌಡ, ತನ್ನ ದುರಂತಗಳನ್ನು ತಾನೇ ನೋಡುವ ಕಾಲ ಬರುತ್ತದೆ” ಎಂದು ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಇಂಬು ನೀಡುವಂತೆ 2019ರಲ್ಲಿ ತುಮಕೂರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು. ನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸೋಲು, 2023ರ ರಾಮನಗರ ವಿಧಾನಸಭಾ ಚುನಾವಣೆ ಹಾಗೂ 2024ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಸೋತು, ಜೆಡಿಎಸ್ ಭದ್ರಕೋಟೆಯಲ್ಲೇ ದಳಪತಿಗಳಿಗೆ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ದೇವೇಗೌಡರ ಕುಟುಂಬದ ಪ್ರಾಬಲ್ಯ ಕುಸಿದಿದೆ ಎಂಬರ್ಥದಲ್ಲಿ ಮಾಜಿ ಸಚಿವ ಕೃಷ್ಣಪ್ಪ ಅವರ ಹೇಳಿಕೆಯನ್ನು ಸ್ಮರಿಸಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.