ನವದೆಹಲಿ: ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿರುವ ಭಾರತದ ಯುವ ಆರಂಭಿಕ ಬ್ಯಾಟ್ಸ್‌ಮನ್ ಪೃಥ್ವಿ ಶಾಗೆ (Prithvi Shaw) ನೆರವು ನೀಡಲು ತಾನು ಸಿದ್ದ ಎಂದು ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಸೆಲೆಕ್ಟರ್ ಜತಿನ್ ಪರಂಜಾಪೆ ತಿಳಿಸಿದ್ದಾರೆ. ಪೃಥ್ವಿ ಶಾ ಮಾನಸಿಕ ಮತ್ತು ದೈಹಿಕವಾಗಿ ಸರಿಯಾದ ಹಾದಿಯಲ್ಲಿ ತಯಾರಿ ನಡೆಸಿದರೆ, ಅವರು ತಮ್ಮ ವೃತ್ತಿ ಜೀವನದ ಸರಿಯಾದ ಹಾದಿಗೆ ಮರಳಬಹುದೆಂದು ಅವರು ತಿಳಿಸಿದ್ದಾರೆ.
ಅಂಡರ್-19 ಭಾರತ ತಂಡದ ಹಲವು ಸ್ಟಾರ್ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಸ್ಟಾರ್‌ಗಳಾಗಿ ಬೆಳೆದಿದ್ದಾರೆ. ಈ ಸಾಲಿನಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಶುಭಮನ್ ಗಿಲ್ ಅವರು ಮುಂಚೂಣಿಯಲ್ಲಿದ್ದಾರೆ. ಅದರಂತೆ 2018ರ ಅಂಡರ್ 19 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಪೃಥ್ವಿ ಶಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನವನ್ನು ಅದ್ದೂರಿಯಾಗಿ ಆರಂಭಿಸಿದರೂ ಫಿಟ್ನೆಸ್ ಹಾಗೂ ಸ್ಥಿರ ಪ್ರದರ್ಶನದ ಕೊರತೆಯಿಂದ ರಾಷ್ಟ್ರೀಯ ತಂಡ, ಐಪಿಎಲ್ ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್ ಹಾಗೂ ಮುಂಬೈ ರಣಜಿ ತಂಡದಿಂದಲೂ ಕೈ ಬಿಡಲಾಯಿತು.
ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿಯೂ ಸ್ಪೋಟಕ ಬ್ಯಾಟ್ಸ್‌ಮನ್ ವೈಫಲ್ಯ ಅನುಭವಿಸುತ್ತಿದ್ದಾರೆ. ಇದರ ನಡುವೆ ಪೃಥ್ವಿ ಶಾ ಅವರು ಭವಿಷ್ಯದಲ್ಲಿ ವಿನೋದ್ ಕಾಂಬ್ಳಿ ರೀತಿ ಆಗಲಿದ್ದಾರೆಂದು ಹಲವು ಮಾಜಿ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ. ಇದರ ನಡುವೆ ಮಾಜಿ ಸೆಲೆಕ್ಟರ್ ಜತಿನ್ ಪರಂಜಾಪೆ, ಪೃಥ್ವಿ ಶಾ ಗೆ ನೆರವು ನೀಡಲು ಸಿದ್ದ ಎಂದು ಹೇಳಿಕೊಂಡಿದ್ದಾರೆ.
“ಮೊದಲನೇಯದಾಗಿ ಪೃಥ್ವಿ ಶಾ ಅವರು ತಮ್ಮ ಮನಸನ್ನು ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಎರಡನೇಯದಾಗಿ ಸ್ಪಿನ್‌ಗೆ ಆಡಲು ತಮ್ಮ ಮನಸನ್ನು ಸಮಯೋಜಿತವಾಗಿರುವಂತೆ ನೋಡಿಕೊಳ್ಳಬೇಕು. ಮೂರನೇಯದಾಗಿ ತಮ್ಮ ಫಿಟ್ನೆಸ್ ಅನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಪೃಥ್ವಿ ಶಾ ಪಾಲಿಗೆ ಇದೀಗ ಟರ್ನಿಂಗ್ ಪಾಯಿಂಟ್ ಆಗಿದೆ. ಅವರಿಗಿನ್ನೂ 25 ವರ್ಷ ವಯಸ್ಸು ಹಾಗಾಗಿ ಕಮ್‌ಬ್ಯಾಕ್ ಮಾಡಲು ಅತ್ಯುತ್ತಮ ಅವಕಾಶವಿದೆ,” ಎಂದು ಜತಿನ್ ಪರಂಜಾಪೆ ತಿಳಿಸಿದ್ದಾರೆ.
ಚೆನ್ನೈನಲ್ಲಿ ತರೆಬೇತಿ ಪಡೆಯಬೇಕು
“ನಾನು ಅವರ ಜೊತೆ ಇದ್ದರೆ ಮೊದಲಿಗೆ ಯುವ ಬ್ಯಾಟ್ಸ್‌ಮನ್‌ಗೆ ಫಿಟ್ನೆಸ್ ಅನ್ನು ವೃದ್ದಿಸಲು ಗಮನ ಕೊಡಿತ್ತೇನೆ. ಫಿಟ್ನೆಸ್ ಇಲ್ಲದ ಹೊರತಾಗಿ ಅವರ ಕ್ರಿಕೆಟ್ ಭವಿಷ್ಯ ಅನಿಶ್ಚಿತವಾಗಿದೆ. ಅವರು ತಮ್ಮ ಸ್ಟ್ರೆನ್ತ್ ಅನ್ನು ಕಾಪಾಡಿಕೊಂಡು ತಮ್ಮ ದೇಹದ ತೂಕವನ್ನು 7 ರಿಂದ 8 ಕೆಜಿ ಇಳಿಸಿಕೊಳ್ಳಬೇಕು. ಇದು ಇವರ ಪಾಲಿಗೆ ಅತ್ಯಂತ ನಿರ್ಣಾಯಕ ಆರಂಭವಾಗಲಿದೆ. ನಾನು ಅವರ ಜಾಗದಲ್ಲಿ ಇದ್ದರೆ, ಅವರನ್ನು ಚೆನ್ನೈನ ರಾಮ್‌ಜೀ ಶ್ರೀನಿವಾಸನ್ ಬಳಿ 10 ದಿನಗಳ ಕಾಲ ಉಳಿಯುವಂತೆ ಸೂಚಿಸುತ್ತೇನೆ. ಅಲ್ಲದೆ ಮುಂದಿನ 2-3 ವರ್ಷಗಳ ಕಾಲ ಬದಲಾವಣೆಗೆ ಸಮಯವನ್ನು ನೀಡುತ್ತೇನೆ. ಇದರ ಫಲಿತಾಂಶ ಮುಂದಿನ 45 ರಿಂದ 60 ದಿನಗಳಲ್ಲಿ ಸಿಗಲು ಆರಂಭವಾಗುತ್ತದೆ,” ಎಂದು ಜತಿನ್ ಪರಂಜಾಪೆ ಹೇಳಿದ್ದಾರೆ.
ಸಚಿನ್-ಕೊಹ್ಲಿಯ ಹಾದಿಯನ್ನು ಅನುಸರಿಸಬೇಕು
“ಪೃಥ್ವಿ ಶಾ ನನಗೆ ದೀರ್ಘಾವಧಿಯಿಂದ ಗೊತ್ತಿದೆ, ಅವರು ಬ್ಯಾಟಿಂಗ್ ಅನ್ನು ಇಷ್ಟಪಡಲಿದ್ದಾರೆಂದು ನಾನು ಭಾವಿಸುತ್ತೇನೆ. ತಮ್ಮ ವೃತ್ತಿ ಜೀವನದ ಅಪಾರ ಯಶಸ್ಸಿನ ಹೊರತಾಗಿಯೂ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರು ತಮ್ಮ ಕ್ರಿಕೆಟ್ ಮೇಲಿನ ಪ್ರೀತಿಯಿಂದಾಗಿ ಆಟವನ್ನು ಮುಂದುವರಿಸಿದ್ದಾರೆ. ಈ ಇಬ್ಬರು ದಿಗ್ಗಜರ ಹಾದಿಯನ್ನು ಪೃಥ್ವಿ ಶಾ ಅನುಸರಿಸಬೇಕು,” ಎಂದು ಅವರು ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನು ಓದಿ: Prithvi Shaw: ʻಅದ್ಭುತ ಪ್ರತಿಭಾವಂತʼ-ಪೃಥ್ವಿ ಶಾ ಕಮ್‌ಬ್ಯಾಕ್ ಮಾಡಬೇಕೆಂದ ಶೇನ್ ವಾಟ್ಸನ್!