ಅಡಿಲೇಡ್: ಆಸ್ಟ್ರೇಲಿಯಾ ವಿರುದ್ದ ಶುಕ್ರವಾರ ಆರಂಭವಾಗಲಿರುವ ಎರಡನೇ ಹಾಗೂ ಪಿಂಕ್ ಬಾಲ್ ಟೆಸ್ಟ್ ಪಂದ್ಯದ (ND vs AUS) ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಡಬೇಕೆಂದು ಮಾಜಿ ಕ್ರಿಕೆಟಿಗ ವಾಸೀಮ್ ಜಾಫರ್ ಮನವಿ ಮಾಡಿದ್ದಾರೆ. ಮೊದಲನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಅವರ ಬದಲು ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಗಿತ್ತು. ಆದರೆ, ಪಿಂಕ್ ಬಾಲ್ ಟಸ್ಟ್ನಲ್ಲಿ ಅಶ್ವಿನ್ ಆಡಬೇಕೆಂದು ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಡಿಲೇಡ್ನಲ್ಲಿ ಫಾಸ್ಟ್ ಬೌಲರ್ಗಳ ಜತೆಗೆ ಪಂದ್ಯ ಸಾಗುತ್ತಿದ್ದಂತೆ ಸ್ಪಿನ್ನರ್ಗಳು ಕೂಡ ಪ್ರಾಬಲ್ಯ ಸಾಧಿಸಲಿದ್ದಾರೆ. ಈ ಪಿಚ್ನಲ್ಲಿ ಸ್ಪಿನ್ನರ್ಗಳು ಕೂಡ ಯಶಸ್ವಿಯಾಗಬಲ್ಲರು ಎಂದು ಇಲ್ಲಿನ ಪಿಚ್ ಕ್ಯುರೇಟರ್ ಕೂಡ ತಿಳಿಸಿದ್ದಾರೆ. ಕಳೆದ ಪ್ರವಾಸದ ಫಿಂಕ್ ಬಾಲ್ ಟೆಸ್ಟ್ ಪಂದ್ಯ ಕೂಡ ಇದೇ ಅಂಗಣದಲ್ಲಿ ನಡೆದಿತ್ತು ಮತ್ತು ಆರ್ ಅಶ್ವಿನ್ ಐದು ವಿಕೆಟ್ಗಳನ್ನು ಕಬಳಿಸಿದ್ದರು.
ಅಡಿಲೇಡ್ ಪಿಚ್ ಬಗ್ಗೆ ಪಿಚ್ ಕ್ಯುರೇಟರ್ ಹೇಳಿದ್ದೇನು?
ಪಿಚ್ ಕ್ಯುರೇಟರ್ ಡ್ಯಾಮಿಯಾನ್ ಹಾಗ್ ಮಾತನಾಡಿ,”ಅಡಿಲೇಡ್ನಲ್ಲಿ ಸ್ಪಿನ್ ಯಾವಾಗಲೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ನೀವು ಮುಂಚೂಣಿ ಸ್ಪಿನ್ನರ್ ಅನ್ನು ಆಡಿಸಬೇಕಾಗುತ್ತದೆ. ನಿಮ್ಮ ಪ್ಲೇಯಿಂಗ್ XIನಲ್ಲಿ ಸ್ಪಿನ್ನರ್ ಇದ್ದಾರಾ? ಅಥವಾ ಇಲ್ಲವಾ? ಎಂಬುದು ಪ್ರಶ್ನೆ ಅಲ್ಲ. ನೀವು ಸ್ಪಿನ್ನರ್ ಅನ್ನು ಸದಾ ಇಟ್ಟುಕೊಳ್ಳಬೇಕಾಗುತ್ತದೆ,” ಎಂದು ಅವರು ತಿಳಿಸಿದ್ದಾರೆ.
ಆರ್ ಅಶ್ವಿನ್ ಪರ ಬ್ಯಾಟ್ ಬೀಸಿದ ವಾಸೀಮ್ ಜಾಫರ್
ಆರ್ ಅಶ್ವಿನ ಅವರು ಅಡಿಲೇಡ್ನಲ್ಲಿ ಆಡಿದ ಮೂರು ಟೆಸ್ಟ್ ಪಂದ್ಯಗಳಿಂದ 30.44ರ ಸರಾಸರಿಯಲ್ಲಿ 16 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಷ್ಟೇ ಅಲ್ಲದೆ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಕಬಳಿಸಿದ ಬೌಲರ್ ಎಂಬ ದಾಖಲೆ ಕೂಡ ಅಶ್ವಿನ್ ಅವರ ಹೆಸರಿನಲ್ಲಿದೆ. ಅವರು ಗುಲಾಬಿ ಚೆಂಡಿನಲ್ಲಿ ಅವರು 18 ವಿಕೆಟ್ಗಳನ್ನು ಕಬಳಿಸಿದ್ದರು.
“ಭಾರತ ತಂಡ ಆರ್ ಅಶ್ವಿನ್ ಅವರನ್ನು ಆಡಿಸಬೇಕು. ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಪ್ರಮುಖ ಪಾತ್ರವನ್ನು ವಹಿಸಲಿದೆ ಹಾಗೂ ಈ ಹಿಂದೆಯೂ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ವಾಷಿಂಗ್ಟನ್ ಸುಂದರ್ ಅವರು ಮೊದಲನೇ ಟೆಸ್ಟ್ನಲ್ಲಿ ಯಾವುದೇ ತಪ್ಪು ಮಾಡಲಿಲ್ಲ ಆದರೆ, ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಪ್ಲೇಯಿಂಗ್ XIಗೆ ಮರಳಲಿದ್ದಾರೆ. ಹಾಗಾಗಿ ನೀವು ಅತ್ಯುತ್ತಮ ಸ್ಪಿನ್ನರ್ ಅನ್ನು ಆಡಿಸಬೇಕಾಗುತ್ತದೆ. ಅದರಂತೆ ಆರ್ ಅಶ್ವಿನ್ ಅವರು ಬ್ಯಾಟಿಂಗ್ನಲ್ಲಿಯೂ ತಂಡಕ್ಕೆ ಆಸರೆಯಾಗಬಲ್ಲರು,” ಎಂದು ವಾಸೀಮ್ ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋಹಿತ್-ಗಿಲ್ ಆಗಮನ
ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರು ಆಗಮನದಿಂದ ಭಾರತ ತಂಡದ ಬ್ಯಾಟಿಂಗ್ ಡೆಪ್ತ್ ಹೆಚ್ಚಾಗಲಿದೆ. ಹಾಗಾಗಿ ಭಾರತ ತಂಡ ತನ್ನ ಪ್ರಮುಖ ಸ್ಪಿನ್ನರ್ ಅನ್ನು ಅಡಿಲೇಡ್ ಟೆಸ್ಟ್ನಲ್ಲಿ ಆಡಿಸಬಹುದು. ಆರ್ ಅಶ್ವಿನ್ ಕೂಡ ಪಿಂಕ್ ಬಾಲ್ ಟೆಸ್ಟ್ನಲ್ಲಿಯೂ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ತಂಡದ ಪರ ನೇಥನ್ ಲಯಾನ್ ಆಡುವುದು ಬಹುತೇಕ ಖಚಿತ. ಅವರು ಆಸ್ಟ್ರೇಲಿಯಾ ಪರ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್ನಲ್ಲಿ 63 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಅಡಿಲೇಡ್ ಟೆಸ್ಟ್ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಇರ್ಫಾನ್ ಪಠಾಣ್!