Sunday, 11th May 2025

Sambhal Violence: ಸಂಭಾಲ್‌ ಗಲಭೆಯ 400ಕ್ಕೂ ಅಧಿಕ ಆರೋಪಿಗಳ ಪೋಸ್ಟರ್‌ ರೆಡಿ; ಜಿಲ್ಲಾಧಿಕಾರಿಯಿಂದ ಮಹತ್ವದ ಆದೇಶ

Sambhal violence

ಲಖನೌ: ನವೆಂಬರ್ 24 ರಂದು ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal violence) ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ಫೋಟೋವನ್ನು ಪ್ರಕಟಿಸಲಾಗುವುದು ಎಂದು ಸಂಭಾಲ್‌ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದರ್ ಪೆನ್ಸಿಯಾ ಹೇಳಿದ್ದಾರೆ.

ಹಿಂಸಾಚರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈಗಾಗಲೇ ಗಲಭೆಗೆ ಸಂಬಂಧಿಸಿದಂತೆ 400 ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದ್ದು, ಅವರ ಫೋಟೋ ಇರುವ ಪೋಸ್ಟರ್‌ಗಳ ವಿನ್ಯಾಸ ಮಾಡಲಾಗುತ್ತಿದೆ. ಪೋಸ್ಟರ್‌ ತಯಾರಾದ ನಂತರ ಗೋಡೆ ಮೇಲೆ ಅಂಟಿಸಲಾಗುವುದು ಎಂದು ಹೇಳಿದ್ದಾರೆ. ಹಿಂಸಾಚಾರದಲ್ಲಿ ಭಾಗವಹಿಸಿದ್ದ 32 ಜನರನ್ನು ಈ ವರೆಗೆ ಬಂಧಿಸಲಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ಶಾಂತಿ ಸಮಿತಿ ಸಭೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸರ್ಕಾರ ನವೆಂಬರ್ 27 ರಂದು ಸಂಭಾಲ್ ಹಿಂಸಾಚಾರದಲ್ಲಿ ಭಾಗಿಯಾಗಿರುವವರು ಸಾರ್ವಜನಿಕ ಆಸ್ತಿಗೆ ಹಾನಿಯನ್ನು ಪಾವತಿಸುವಂತೆ ಮತ್ತು ಸಾರ್ವಜನಿಕ ಗೋಡೆಗಳ ಮೇಲೆ ಅವರ ಚಿತ್ರಗಳನ್ನು ಪ್ರದರ್ಶಿಸುವಂತೆ ಹೇಳಿತ್ತು.

ಸಂಭಾಲ್ ಪೊಲೀಸರು ಈಗಾಗಲೇ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವು ‌ವ್ಯಕ್ತಿಗಳ ಫೋಟೋ ಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಈಗಾಗಲೇ , ಒಂಬತ್ತು ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಉಳಿದ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ. ಮೊಘಲರ ಕಾಲದ ಮಸೀದಿಯೊಂದರ ಮಸೀದಿಯೊಂದರ ಸಮೀಕ್ಷೆ ವೇಳೆ  ಸಂಭಾಲ್‌ನಲ್ಲಿ ಭಾರೀ ಹಿಂಸಾಚಾರ ಸಂಭವಿಸಿತ್ತು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರೆ ಹಲವು ಪೊಲೀಸರು ಸೇರಿ ಅನೇಕರು ಗಾಯಗೊಂಡಿದ್ದರು.

ಮಸೀದಿಯನ್ನು ಮೂಲತಃ ಹರಿಹರ ದೇವಸ್ಥಾನದ ಸ್ಥಳದಲ್ಲಿ ನಿರ್ಮಿಸಲಾಗಿದೆ ಎಂದು ವಕೀಲರೊಬ್ಬರು ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ನ್ಯಾಯಾಲಯ ಭಾರತೀಯ ಪುರಾತತ್ವ ಇಲಾಖೆಗೆ ಮಸೀದಿಯ ಸಮೀಕ್ಷೆಗೆ ಆದೇಶ ಹೊರಡಿಸಿತ್ತು. ಆ ಆದೇಶದ ನಂತರ ಸಂಭಾಲ್‌ನಲ್ಲಿ ಹಿಂಸಾಚಾರ ಪ್ರಾರಂಭವಾಗಿತ್ತು. ಬುಧವಾರ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ವಯನಾಡಿನ ನೂತನ ಸಂಸದೆ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಂಭಾಲ್‌ಗೆ ಭೇಟಿ ನೀಡುವ ಸಂದರ್ಭದಲ್ಲಿ ಪೊಲೀಸರು ಅವರನ್ನು ತಡೆದ ಘಟನೆ ನಡೆದಿದೆ.

ಈ ಸುದ್ದಿಯನ್ನೂ ಓದಿ : Sambhal Violence: ಸಂಭಾಲ್‌ ಮಸೀದಿ ಸರ್ವೆಗೆ ಸುಪ್ರೀಂ ಕೋರ್ಟ್‌ ತಡೆ