Sunday, 18th May 2025

SA vs PAK: ಪಾಕಿಸ್ತಾನ ವಿರುದ್ದದ ಟಿ20ಐ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ!

SA vs PAK: Heinrich Klaasen to captain South Africa for T20I series vs Pakistan

ನವದೆಹಲಿ: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ (SA vs PAK) 15 ಸದಸ್ಯರ ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಹೆನ್ರಿಚ್‌ ಕ್ಲಾಸೆನ್‌ಗೆ ನಾಯಕತ್ವವನ್ನು ನೀಡಲಾಗಿದೆ. 2024ರ ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ಇದೇ ಮೊದಲ ಬಾರಿ ದಕ್ಷಿಣ ಆಫ್ರಿಕಾ ಟಿ20 ತಂಡಕ್ಕೆ ವೇಗಿ ಎನ್ರಿಕ್‌ ನೋರ್ಕಿಯಾ ಹಾಗೂ ಸ್ಪಿನ್ನರ್‌ ತಬ್ರೈಝ್‌ ಶಾಮ್ಸಿಗೆ ಸ್ಥಾನ ನೀಡಲಾಗಿದೆ.

ಭಾರತ ವಿರುದ್ಧದ ಟಿ20 ಸರಣಿಯನ್ನು 1-3 ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ಹೊಸ ರೂಪ ಪಡೆದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಚ್ ಕ್ಲಾಸೆನ್ ನಾಯಕತ್ವ ವಹಿಸಲಿದ್ದಾರೆ. ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಸಲುವಾಗಿ ನಾಯಕ ಏಡೆನ್ ಮಾರ್ಕ್ರಮ್, ಮಾರ್ಕೊ ಯೆನ್ಸನ್, ಕೇಶವ್ ಮಹಾರಾಜ್, ಕಗಿಸೊ ರಬಾಡ ಮತ್ತು ಟ್ರಿಸ್ಟನ್ ಸ್ಟಬ್ಸ್ ಈ ಟಿ20 ಸರಣಿಯಲ್ಲಿ ಆಡದೆ ವಿಶ್ರಾಂತಿ ಪಡೆಯಲಿದ್ದಾರೆ ಕ್ರಿಕೆಟ್‌ ದಕ್ಷಿಣ ಆಫ್ರಿಕಾ ತಿಳಿಸಿದೆ.

ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ತಯಾರಿಯಲ್ಲಿ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಗೆ ಈ ಮೇಲಿನ ಆಟಗಾರರು ಮರಳಲಿದ್ದಾರೆಂದು ಸಿಎಸ್‌ಎ ತಿಳಿಸಿದೆ. 2021ರ ಜುಲೈನಲ್ಲಿ ಐರ್ಲೆಂಡ್ ವಿರುದ್ಧ ಕೊನೆಯ ಬಾರಿ ಟಿ20 ತಂಡದ ಪರ ಆಡಿದ್ದ ಬಳಿಕ ಇದೇ ಮೊದಲ ಬಾರಿ ಆಲ್‌ರೌಂಡರ್ ಜಾರ್ಜ್ ಲಿಂಡೆ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ.

33 ವರ್ಷದ ಲಿಂಡೆ 14 ಟಿ20ಐ ಪಂದ್ಯಗಳನ್ನು ಆಡಿದ್ದಾರೆ. ಪ್ರಸಕ್ತ ಆವೃತ್ತಿಯ ದಕ್ಷಿಣ ಆಫ್ರಿಕಾ ಟಿ20 ಚಾಲೆಂಜ್‌ನಲ್ಲಿ ಅವರು ಪ್ರಭಾವಶಾಲಿ ಪ್ರದರ್ಶನವನ್ನು ತೋರಿದ್ದರು. ಅವರು, 178.12 ಸ್ಟ್ರೈಕ್-ರೇಟ್‌ನಲ್ಲಿ 171 ರನ್ ಸಿಡಿಸಿದ್ದಾರೆ ಹಾಗೂ ಬೌಲಿಂಗ್‌ನಲ್ಲಿ ಅವರು 18.33 ಸರಾಸರಿಯಲ್ಲಿ ಒಂಬತ್ತು ವಿಕೆಟ್‌ಗಳನ್ನು ಪಡೆದಿದ್ದಾರೆ. ಕ್ರಿಕೆಟ್‌ ದಕ್ಷಿಣ ಆಫ್ರಿಕಾದ ಕೇಂದ್ರ ಗುತ್ತಿಗೆಯನ್ನು ಕಳೆದುಕೊಂಡಿರುವ ಎನ್ರಿಕ್‌ ನೊರ್ಕಿಯಾ ಹಾಗೂ ತಬ್ರೇಝ್‌ ಶಾಮ್ಸಿ ಅವರು ವಿಶ್ವದಾದ್ಯಂತ ಫ್ರಾಂಚೈಸಿ ಲೀಗ್‌ಗಳಲ್ಲಿ ಆಡುತ್ತಿದ್ದಾರೆ. ಆದರೂ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.

ಟಿ20 ತಂಡವು ಡಿಸೆಂಬರ್ 6 ರಿಂದ 8ರವರೆಗೆ ಪ್ರೆಟೋರಿಯಾದ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಎರಡು ದಿನಗಳ ಶಿಬಿರದೊಂದಿಗೆ ಸಿದ್ಧತೆಗಳನ್ನು ಪ್ರಾರಂಭಿಸಲಿದೆ. ನಂತರ ಡರ್ಬನ್‌ಗೆ ತೆರಳುತ್ತದೆ, ಅಲ್ಲಿ ಮೊದಲ ಪಂದ್ಯವನ್ನು ಡಿಸೆಂಬರ್ 10 ರಂದು ಕಿಂಗ್ಸ್‌ಮೀಡ್ ಸ್ಟೇಡಿಯಂನಲ್ಲಿ ಆಡಲಿದೆ. ಡಿಸೆಂಬರ್‌ 13 ರಂದು ಸೆಂಚೂರಿಯನ್‌ನಲ್ಲಿ ಎರಡನೇ ಪಂದ್ಯ ಹಾಗೂ ಡಿಸೆಂಬರ್‌ 14 ರಂದು ಜೋಹನ್ಸ್‌ಬರ್ಗ್‌ನಲ್ಲಿ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ನಡೆಯಲಿದೆ.

ಪಾಕಿಸ್ತಾನ ವಿರುದ್ಧದ ಟಿ20ಐ ಸರಣಿಗೆ ದಕ್ಷಿಣ ಆಫ್ರಿಕಾ ತಂಡ

ಹೆನ್ರಿಚ್‌ ಕ್ಲಾಸೆನ್‌ (ನಾಯಕ), ಒಟ್ಟಿನೀಲ್‌ ಬಾರ್ಟಮನ್‌, ಮ್ಯಾಥ್ಯೂ ಬ್ರೀಕ್‌, ಡೊನೊವಾನ್‌ ಫೆರೆರಾ, ರೀಝಾ ಹೆಂಡ್ರಿಕ್ಸ್‌, ಪ್ಯಾಟ್ರಿಕ್‌ ಕ್ರಗರ್‌, ಜಾರ್ಜ್‌ ಲಿಂಡೆ, ಕ್ವೇನಾ ಎಂಪಾಕ, ಡೇವಿಡ್‌ ಮಿಲ್ಲರ್‌, ಎನ್ರಿಕ್‌ ನೋರ್ಕಿಯಾ, ಎನ್‌ಖಾಬಾ ಪೀಟರ್‌, ರಿಯಾನ್‌ ರಿಕಲ್ಟನ್‌, ತಬ್ರೇಝ್‌ ಶಾಮ್ಸಿ, ಆಂಡಿಲೆ ಸಿಮೆಲೇನ್‌, ರಾಸಿ ವ್ಯಾನ್‌ ಡೆರ್‌ ಡುಸೆನ್‌

ಈ ಸುದ್ದಿಯನ್ನು ಓದಿ-ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ