Thursday, 15th May 2025

Hanuman Chalisa Row: ನಮಾಜ್‌ ವೇಳೆ ಹನುಮಾನ್‌ ಚಾಲೀಸಾ ಪಠಣ; 7 ವಿದ್ಯಾರ್ಥಿಗಳು ಪೊಲೀಸ್‌ ವಶ‍ಕ್ಕೆ

ವಾರಣಾಸಿ: ವಾರಣಾಸಿಯ(Varanasi) ಕಾಲೇಜಿನ ಆವರಣದಲ್ಲಿರುವ ಮಸೀದಿಯೊಂದರಲ್ಲಿ ನಮಾಜ್(Namaz) ಮಾಡುತ್ತಿದ್ದ ವೇಳೆ ಹನುಮಾನ್ ಚಾಲೀಸಾ(Hanuman Chalisa Row) ಪಠಣ ಮಾಡಿದ ಆರೋಪದ ಮೇಲೆ ಏಳು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಉತ್ತರ ಪ್ರದೇಶದ ವಾರಣಾಸಿಯ ಕಾಲೇಜೊಂದರ ಆವರಣದಲ್ಲಿರುವ ಮಸೀದಿಗೆ ಬಂದು ಹೊರಗಿನವರು ನಮಾಜ್‌ ಮಾಡಿದ ಕಾರಣಕ್ಕಾಗಿ ಅಲ್ಲಿನ ವಿದ್ಯಾರ್ಥಿಗಳು ಸಿಟ್ಟಿಗೆದ್ದು ಜೋರಾಗಿ ಹನುಮಾನ್‌ ಚಾಲೀಸಾ ಪಠಣ ಮಾಡಿದ್ದು, ಏಳು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಇಂದು(ಡಿ.4) ತಿಳಿಸಿದ್ದಾರೆ.

ನಮಾಜ್‌ ಹೆಸರಿನಲ್ಲಿ ಹೊರಗಿನವರು ಮಸೀದಿ ಇರುವ ಕಾಲೇಜು ಆವರಣಕ್ಕೆ ಬರುವುದನ್ನು ಪ್ರತಿಭಟಿಸಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು ಎಂದು ಉದಯ ಪ್ರತಾಪ್ ಕಾಲೇಜಿನ ವಿದ್ಯಾರ್ಥಿ ನಾಯಕ ವಿವೇಕಾನಂದ ಸಿಂಗ್ ಹೇಳಿದ್ದಾರೆ. ಕಾಲೇಜು ಆವರಣದ ಮಸೀದಿ ಬಳಿ ಇಲ್ಲಿನ ವಿದ್ಯಾರ್ಥಿಗಳು ನಮಾಜ್ ಮಾಡಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ ನಮಾಜ್ ಹೆಸರಿನಲ್ಲಿ ಹೊರಗಿನವರು ಕಾಲೇಜು ಆವರಣ ಪ್ರವೇಶಿಸುವುದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ.

ಮಂಗಳವಾರ(ಡಿ.3) ಕಾಲೇಜು ಆವರಣದಲ್ಲಿರುವ ಮಸೀದಿ ಬಳಿ ಹನುಮಾನ್ ಚಾಲೀಸಾ ಪಠಿಸಲು ವಿದ್ಯಾರ್ಥಿಗಳು ಹಠ ಹಿಡಿದಿದ್ದರು ಎಂದು ವಾರಣಾಸಿ ಕ್ಯಾಂಟ್ ಪ್ರದೇಶದ ಹೆಚ್ಚುವರಿ ಪೊಲೀಸ್ ಆಯುಕ್ತರಾದ(ACP) ವಿದುಷ್ ಸಕ್ಸೇನಾ ತಿಳಿಸಿದ್ದಾರೆ.

ಕ್ಯಾಂಪಸ್‌ನಲ್ಲಿರುವ ಮಸೀದಿಯನ್ನು ಟೋಂಕ್ ನವಾಬ್ ಎಂಬ ವ್ಯಕ್ತಿ ವಕ್ಫ್ ಬೋರ್ಡ್‌ಗೆ ದಾನ ಮಾಡಿದ್ದರು. ಹಾಗಾಗಿ, ಈ ಭೂಮಿ ವಕ್ಫ್ ಆಸ್ತಿಯಾಗಿದೆ. 2018ರಲ್ಲೇ ಸಂಸ್ಥೆಗೆ ವಾರಣಾಸಿಯ ನಿವಾಸಿ ವಾಸಿಂ ಅಹ್ಮದ್ ಖಾನ್ ಎಂಬುವವರು ನೋಟಿಸ್ ಕಳುಹಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಡಿ ಕೆ ಸಿಂಗ್ ಹೇಳಿದ್ದಾರೆ. ಕಾಲೇಜು ಆಡಳಿತ ಮಂಡಳಿಯು ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿದೆ. ಕಾಲೇಜಿನ ಸಂಪೂರ್ಣ ಆಸ್ತಿ ಟ್ರಸ್ಟ್‌ಗೆ ಸೇರಿದೆ. ಅದನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ನೋಟಿಸ್‌ ಗೆ ಉತ್ತರ ಕಳುಹಿಸಿದ್ದೆವು ಎಂದು ಸಿಂಗ್‌ ತಿಳಿಸಿದ್ದಾರೆ.

ಜೈ ಶ್ರೀರಾಮ್‌ ಘೋಷಣೆ ಕೂಗಿದ್ದಕ್ಕೆ ಹಲ್ಲೆ

ಕೆಲ ತಿಂಗಳ ಹಿಂದೆಯಷ್ಟೇ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿಕೊಂಡು ತಮ್ಮ ಪಾಡಿಗೆ ಕಾರಿನಲ್ಲಿ ಹೋಗುತ್ತಿದ್ದ ಹಿಂದೂ ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ ಪ್ರಕರಣವೊಂದು ವರದಿಯಾಗಿತ್ತು. ಬೆಂಗಳೂರಿನ ವಿದ್ಯಾರಣ್ಯಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೈಕ್ ಖರೀದಿಸಲು ಯುವಕರು ಮಧ್ಯಾಹ್ನ 3.30ರ ವೇಳೆಗೆ ತಮ್ಮದೇ ಕಾರಿನಲ್ಲಿ ಕೆ.ಜಿ ಹಳ್ಳಿಯಿಂದ ಎಂ.ಎಸ್.ಪಾಳ್ಯಕ್ಕೆ ಹೋಗುತ್ತಿದ್ದರು. ತಮ್ಮ ಪಾಡಿಗೆ ತಾವು ಕಾರಿನಲ್ಲಿ ಶ್ರೀರಾಮನ ಭಾವಚಿತ್ರ ಹಾಕಿಕೊಂಡು ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದರು. ಆಗ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಕಾರನ್ನು ಅಡ್ಡಗಟ್ಟಿ ಈ ಘೋಷಣೆ ಕೂಗದಂತೆ ಬೆದರಿಕೆ ಹಾಕಿ ಅಲ್ಲಾ ಹು ಅಕ್ಬರ್‌ ಎಂದು ಕೂಗುವಂತೆ ಬಲವಂತ ಮಾಡಿದ್ದರು. ಅವರು ಈ ರೀತಿ ಕೂಗುವುದಿಲ್ಲ ಎಂದು ಹೇಳಿದಾಗ ಮತ್ತೊಬ್ಬರನ್ನು ಕರೆದು ಯುವಕರ ಮೇಲೆ ಹಲ್ಲೆ ನಡೆಸಿ ದೊಣ್ಣೆಯಿಂದ ಹೊಡೆದಿದ್ದರು ಎಂದು ಸ್ವತಃ ಯುವಕರು ತಮ್ಮ ದೂರಿನಲ್ಲಿ ವಿವರಿಸಿದ್ದರು.

ಯುವಕರ ಜೊತೆಗಿದ್ದ ರಾಹುಲ್‌ ಎಂಬುವವರ ತಲೆಗೆ ಪೆಟ್ಟು ಬಿದ್ದು, ಮೂಗಿನ ಮೂಳೆ ಮುರಿದಿತ್ತು. ಹಲ್ಲೆ ನಡೆಸಿದವರಿಂದ ಕಷ್ಟಪಟ್ಟು ತಪ್ಪಿಸಿಕೊಂಡು ಬಂದಿದ್ದೇವೆ ಎಂದು ಪವನ್ ಕುಮಾರ್ ಎಂಬ ಯುವಕ ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ವಿದ್ಯಾರಣ್ಯಪುರ ಪೋಲಿಸರು ಹೇಳಿದ್ದರು.

ಈ ಸುದ್ದಿಯನ್ನೂ ಓದಿ:Bangla Terrorists: ರಾಮ ಮಂದಿರ ಕೆಡವಿ ಅಲ್ಲೇ ಮಸೀದಿ ಕಟ್ಟುತ್ತೇವೆ…ಉಗ್ರರಿಂದ ಬಹಿರಂಗ ಬೆದರಿಕೆ- ವಿಡಿಯೊ ಇದೆ