ಅಭಿಮತ
ಪರಿಣಿತ ರವಿ
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ(ರಿ), ಕಾಸರಗೋಡು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ, ಕಾಸರಗೋಡು, ಭಾರತ್ ಭವನ, ತಿರುವನಂತಪುರಂ, ಕೇರಳ ಸರಕಾರ ಇವುಗಳು ಸಹಯೋಗದಲ್ಲಿ ದಿನಾಂಕ ನವೆಂಬರ್ ೨೭ ರಂದು ‘ಅನಂತಪುರ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 2024’ ಅನ್ನುವ ಸಮಾರಂಭವು ಬಹಳ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಇದರಲ್ಲಿ ಹಲವು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು. ‘ಕಾಸರಗೋಡು ಕನ್ನಡಿಗರ ಸಮಸ್ಯೆಗಳು ಮತ್ತು ಪರಿಹಾರಗಳು’ ಅನ್ನುವ ವಿಷಯದ ಕುರಿತು ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸುವಂತೆ ನನ್ನಲ್ಲಿ ಕೇಳಿಕೊಂಡಿದ್ದರು. ನಾನು ಕಾಸರಗೋಡಿನವಳೇ ಆದ ಕಾರಣ ಹಾಗೂ ಅಲ್ಲಿಯ ಸಮಸ್ಯೆಗಳು ಗೊತ್ತಿರುವ ವಿಚಾರವೇ ಆದ ಕಾರಣ ಒಪ್ಪಿಕೊಂಡೆ. ಕಾಸರ
ಗೋಡು ಸರಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಹಾಗೂ ಕಣ್ಣೂರು ವಿಶ್ವವಿದ್ಯಾನಿಲಯದ ಮೊದಲ ಕನ್ನಡಿಗ ಸೆನೆಟ್ ಸದಸ್ಯ ಆಗಿರುವ ಡಾ.ರತ್ನಾಕರ ಮಲ್ಲಮೂಲೆಯವರು ಕಾಸರಗೋಡಿನ ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತು ವಿಷಯ ಮಂಡನೆ ಮಾಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಪರಿಷತ್ತಿನ ಮಾಜಿ ಸದಸ್ಯರಾದ ಆಯಿಷಾ ಪೆರ್ಲ ಇವರು ಕಾಸರಗೋಡಿನ ಸಾಮಜಿಕ ಸಮಸ್ಯೆಗಳು ಹಾಗೂ
ಪರಿಹಾರಗಳ ಕುರಿತು ಮಾತನಾಡಿದರು. ಕಾಸರಗೋಡಿನ ಹಿರಿಯ ಸಾಹಿತಿಗಳಾದ ರಾಧಾಕೃಷ್ಣ ಉಳಿಯತ್ತಡ್ಕ ಇವರು ಕಾಸರಗೋಡಿನ ಸಾಂಸ್ಕೃತಿಕ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಬಹಳ ಅರ್ಥಪೂರ್ಣವಾಗಿ ತಮ್ಮ ವಿಷಯವನ್ನು ಮಂಡನೆ ಮಾಡಿದರು. ಅಧ್ಯಕ್ಷತೆ ವಹಿಸಿದ ನಾನು ಎಲ್ಲ ಕ್ಷೇತ್ರಗಳ ಬಗ್ಗೆಯೂ ಸಮಗ್ರವಾಗಿ ಹಾಗೂ ಅಷ್ಟೇ ಚುಟುಕಾಗಿ ಮಾತನಾಡಿದೆ. ಈ ಅಧ್ಯಕ್ಷೀಯ ಭಾಷಣ ಲೇಖನವಾಗಿ ಹೊರಬರಲಿ ಎಂದು ರಾಧಾಕೃಷ್ಣ ಉಳಿಯತ್ತಡ್ಕರು ಹಾಗೂ ಇನ್ನೂ ಹಲವು ಆತ್ಮೀಯರು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗಾಗಿ ಈ ಲೇಖನ.
ಕನ್ನಡಕ್ಕಾಗಿ ಕೈಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡ ಕ್ಕಾಗಿ ಕೊರಳೆತ್ತು, ಅಲ್ಲಿ ಪಾಂಚಜನ್ಯ ಮೊಳಗುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತಿ ದರೂ ಸಾಕು. ಅದು ಗೋವರ್ಧನ ಗಿರಿಯಾಗುತ್ತದೆ ಅನ್ನುವ ರಾಷ್ಟ್ರಕವಿ ಕುವೆಂಪುರವರ ಈ ಸಾಲುಗಳು ಕಾಸರಗೋಡು ಕನ್ನಡಿಗರಿಗೆ ಅಕ್ಷರಶಃ ಅನ್ವಯವಾಗುತ್ತದೆ. ಏಕೆಂದರೆ ಕಾಸರಗೋಡಿನಲ್ಲಿ ನಡೆಯುವಂತಹ ಕನ್ನಡಪರ ಕಾರ್ಯಕ್ರಮಗಳು ಅಷ್ಟೊಂದು ವೈವಿಧ್ಯಮಯ ವಾದದ್ದು. ಇಂತಹ ಕಾಸರಗೋಡು ಕನ್ನಡಿಗರ ಪಾಲಿಗೆ 1956 ನವೆಂಬರ್ ಒಂದು ಅನ್ನುವುದು ಅವಿಸ್ಮರಣೀಯ ಕಹಿ ದಿನ. ಏಕೆಂದರೆ ಅಂದು ಭಾಷಾವಾರು ಪ್ರಾಂತ್ಯ ರಚನೆಯಾದಾಗ ಅಚ್ಚ ಕನ್ನಡದ ನೆಲವಾದ ಕಾಸರಗೋಡನ್ನು ಕಡಿದು ಮಲಯಾಳದ ನಾಡಾದ ಕೇರಳಕ್ಕೆ ಸೇರಿಸಲಾಯಿತು. ಅಂದಿನಿಂದ ಇಂದಿನವರೆಗೂ ಕಡಿದ ಭಾಗದಲ್ಲಿ ರಕ್ತ ಜಿನುಗುತ್ತಲೇ ಇದ್ದು, ಸಾಕಷ್ಟು ಹೋರಾಟಗಳ ಮೂಲಕ ಕನ್ನಡದ ಈ ಭೂಮಿಯಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೇರನ್ನು ನೀರೆರೆದು ಪೋಷಿಸುತ್ತಾ ಜೀವಂತವಿರಿಸುವ ಭಗೀರಥ ಪ್ರಯತ್ನ ನಡೆಯುತ್ತಲೇ ಇದೆ.
ಇಂದಿಲ್ಲಿ ಮೂವರೂ ಗಣ್ಯರು ಕಾಸರಗೋಡಿನ ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಮಸ್ಯೆ ಹಾಗೂ ಪರಿಹಾರಗಳ
ಕುರಿತು ವಿಷಾದವಾಗಿ ತಮ್ಮ ವಿಷಯವನ್ನು ಮಂಡಿಸಿದರು. ಇದೆಲ್ಲದರ ಕುರಿತು ಒಟ್ಟಾರೆಯಾಗಿ ನಾನು ಹೇಳುವುದೇನೆಂದರೆ, ಕಾಸರಗೋಡು ಭವ್ಯವಾದ ಕನ್ನಡ ಸಂಸ್ಕೃತಿಯ ತವರೂರು. ಇದು ಕೇವಲ ಸಪ್ತ ಭಾಷೆಗಳಲ್ಲ ಬಹು ಭಾಷೆಗಳ ಸಂಗಮ ಭೂಮಿ. ಕಲೆ ಸಾಹಿತ್ಯದ ಶ್ರೀಮಂತ ನಾಡು. ತೆಂಕುತಿಟ್ಟು ಯಕ್ಷಗಾನದ ಪಿತಾಮಹ ಕುಂಬಳೆ ಪಾರ್ತಿಸುಬ್ಬ, ನಾಡೋಜ ಕಯ್ಯಾರ ಕಿಞಣ್ಣ ರೈ, ರಾಷ್ಟ್ರಕವಿ ಗೋವಿಂದ ಪೈ, ಽಮಂತ ಕನ್ನಡ ಹೋರಾಟಗಾರರಾದ ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ ಕುಣಿಕುಳ್ಳಾಯರು ಮೊದಲಾದ ಮಹಾನುಭಾವರು ಕಾಸರಗೋಡಿನ ಕೀರ್ತಿಯನ್ನು ಜಗದಗಲ ಪಸರಿಸಿದವರು.
ಇಲ್ಲಿರುವಷ್ಟು ಕವಿಗಳು, ಸಾಹಿತಿಗಳು, ಕಲಾವಿದರು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಶತಮಾನ ಗಳಿಂದಲೂ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನೇ ಉಸಿರಾಡುತ್ತಿದೆ ನಮ್ಮ ಕಾಸರಗೋಡು. ಇಲ್ಲಿನ ಜನರ ಆಚಾರ-ವಿಚಾರ, ಜೀವನ ಪದ್ಧತಿ ಎಲ್ಲವೂ ಕನ್ನಡ ಹಾಗೂ ತುಳು ಸಂಸ್ಕೃತಿಗಳ ಪ್ರತೀಕವಾಗಿದೆ. ಒಟ್ಟಾರೆ ಕನ್ನಡಾಂಭೆಯ ಪಾದಾಂಬುಽಗೆ ಕಾಸರಗೋಡು ಕನ್ನಡಿಗರ ನಿಸ್ವಾರ್ಥ ಸೇವೆ ಅನನ್ಯವಾದುದು.
ಹಾಗಾಗಿಯೇ ಕಾಸರಗೋಡು ಕೇರಳದಲ್ಲಿ ಲೀನವಾದರೂ ತನ್ನ ಭಾಷೆ, ಸಂಸ್ಕೃತಿ ಹಾಗೂ ಭಾವನಾತ್ಮಕವಾಗಿ ಇನ್ನೂ ಕನ್ನಡವಾಗಿಯೇ ಉಳಿದಿದೆ ಅನ್ನುವುದು ಬೆಳಕಿನಷ್ಟೇ ಸತ್ಯ.
ಸರಿ.. ಕಾಸರಗೋಡನ್ನು ಕೇರಳಕ್ಕೆ ಸೇರಿಸಿದ ಬಳಿಕ ಆದzದರೂ ಏನು? ಪ್ರತಿ ಹೆಜ್ಜೆ ಹೆಜ್ಜೆಯಲ್ಲಿಯೂ ಕನ್ನಡಿಗರಿಗೆ ಅನ್ಯಾಯ, ಹಾಗೂ ಅವಕಾಶ ವಂಚಿತರನ್ನಾಗಿ ಮಾಡಲಾಯಿತು. ಶಿಕ್ಷಣ, ಉದ್ಯೋಗ, ವಾಣಿಜ್ಯ, ವ್ಯವಹಾರ, ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಹೀಗೆ ಎಲ್ಲ ರಂಗಗಳಲ್ಲಿಯೂ ಮಲತಾಯಿ ಧೋರಣೆಯನ್ನು ಕಾಣಲಾಗುತ್ತಿದೆ.
ನಿಸ್ಸಹಾಯಕರಾದ ಕನ್ನಡಿಗರು ಇತಿಹಾಸದ ದುರಂತದ ಮೂಕಸಾಕ್ಷಿಗಳಾಗಿ ಬದುಕು ಸಾಗಿಸುವಂತಾಗಿದೆ. ಶೈಕ್ಷಣಿಕವಾಗಿ ಹೇಳುವಾದಾದರೆ, ಕಾಸರಗೋಡಿನಲ್ಲಿ ಸುಮಾರು 185 ಕ್ಕಿಂತಲೂ ಅಧಿಕ ಕನ್ನಡ ಮಾಧ್ಯಮ ಶಾಲೆಗಳು, ಸುಮಾರು 25 ಸಾವಿರ ಕ್ಕಿಂತಲೂ ಅಽಕ ಕನ್ನಡ ವಿದ್ಯಾರ್ಥಿಗಳು ಹಾಗೂ 1500 ಕ್ಕಿಂತಲೂ ಹೆಚ್ಚು ಕನ್ನಡಿಗ ಅಧ್ಯಾಪಕರಿದ್ದಾರೆ.
ಆದರೆ ಈ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡದ ಗಂಧಗಾಳಿಯಿಲ್ಲದ ಮಲಯಾಳಿ ಅಧ್ಯಾಪಕರನ್ನು ನೇಮಿಸಲಾಗುತ್ತಿದೆ. ಹೀಗೆ ನೇಮಕಾತಿ ಆಗಿ ಬಂದವರಲ್ಲಿ ‘ಕನ್ನಡ ಗೊತ್ತಿದೆ’ ಎಂಬ ಪ್ರಮಾಣಪತ್ರ ಇರುವುದಂತೂ ಹಾಸ್ಯಾಸ್ಪದವೇ ಸರಿ. ೨೦೦೪ ರಲ್ಲಿ ನಾನೇ ಸ್ವತಃ ಇದಕ್ಕೆ ಬಲಿಪಶುವಾದ ಜ್ವಲಂತ ಸಾಕ್ಷಿ. ಕನ್ನಡ ಗೊತ್ತಿಲ್ಲದ ಶಿಕ್ಷಕರು ಮಲಯಾಳಂನಲ್ಲಿ ಪಾಠ ಮಾಡುವುದರಿಂದ ಕನ್ನಡ ಮಕ್ಕಳಿಗೆ ಏನು
ಅರ್ಥವಾಗದ ಶೋಚನೀಯ ಪರಿಸ್ಥಿತಿ ಮಕ್ಕಳ ಕಲಿಯುವಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿಯೂ ಹಲವಾರು ಸಮಸ್ಯೆಗಳಿವೆ. ಉತ್ತಮ ಗ್ರಂಥಾಲಯಗಳ ಕೊರತೆ, ಸರಕಾರದ ಪ್ರೋತ್ಸಾಹ ಇಲ್ಲದಿರುವುದು, ಪ್ರತಿಭೆಯಿದ್ದರೂ ಸಹಕಾರವಿಲ್ಲದ ಕಾರಣ ಕೃತಿಗಳನ್ನು ಪ್ರಕಟಿಸಲಾಗದೇ ಇರುವುದು, ಪ್ರಕಟಿಸಿದ ಕೃತಿಗಳಿಗೆ ಸರಿಯಾದ ಮಾನ್ಯತೆ ಸಿಗದಿರುವುದು, ಸರಕಾರದ ಕನ್ನಡ
ಸಾಹಿತ್ಯ ಪುಸ್ತಕ ಪ್ರಕಾಶನ ಸಂಸ್ಥೆ ಇಲ್ಲದಿರುವುದು ಮೊದಲಾದ ತೊಡರುಗಳನ್ನು ಕಾಸರಗೋಡಿನ ಸಾಹಿತ್ಯ ಕ್ಷೇತ್ರವು ಅನುಭವಿಸುತ್ತಿದೆ.
ರಾಜಕೀಯವಾಗಿ ನೋಡುವುದಾದರೆ ಮಂಜೇಶ್ವರ, ಕಾಸರಗೋಡು ಕ್ಷೇತ್ರಗಳಿಂದ ಬೇರೆ ಬೇರೆ ರಾಜಕೀಯ ಪಕ್ಷಗಳ ನೇತಾರರು ಸ್ಪರ್ಧಿಸಿ
ಚುನಾಚಣೆಗಳಲ್ಲಿ ಗೆಲ್ಲುತ್ತಾರೆ. ಗೆದ್ದ ಬಳಿಕ ಕನ್ನಡದ ನೆಲವಾದ ಕಾಸರಗೋಡನ್ನು ಕೇರಳ ಸರಕಾರವು ಭಾಷಾ ಅಲ್ಪಸಂಖ್ಯಾತರ ಪ್ರದೇಶವೆಂದು ಘೋಷಿಸಿ ದ್ದರೂ ಇವರಿಗೆ ಸಂವಿಧಾನಬದ್ಧ ಹಕ್ಕು ಸಂರಕ್ಷಣೆ ಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಆರೋಗ್ಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಪಡೆಯುವಲ್ಲಿಯೂ ಕಾಸರಗೋಡು ಕನ್ನಡಿಗರ ಪಾಡು ಹೇಳತೀರದು. ಎಲ್ಲ ಮೌಖಿಕ ಹಾಗೂ ಲಿಖಿತ ವ್ಯವಹಾರಗಳು ಮಲಯಾಳದಲ್ಲಿರುವ ಕಾರಣ ಭಾಷೆಯ ಅeನದಿಂದ ಆಗುವ ತೊಂದರೆಗಳು ಹಲವಾರು.
ಹೆಚ್ಚಿನ ವೈದ್ಯಕೀಯ ಸೌಲಭ್ಯಗಳಿಗಾಗಿ ನೆರೆಯ ಮಂಗಳೂರನ್ನೇ ಆಶ್ರಯಿಸಬೇಕಾದ ಪರಿಸ್ಥಿತಿ. ಕರೋನಾ ಕಾಲದಲ್ಲಿ ಗಡಿ ಮುಚ್ಚಿದ್ದರಿಂದ
ಮಂಗಳೂರಿಗೆ ಹೋಗಲು ಸಾಧ್ಯವಾಗದೇ ಜನರು ಬಹಳಷ್ಟು ತೊಂದರೆಗಳನ್ನು ಅನುಭವಿಸದ್ದನ್ನು ಕಣ್ಣಾರೆ ಕಂಡಿದ್ದೇವೆ. ಔದ್ಯೋಗಿಕವಾಗಿ
ನೋಡುವುದಾದರೆ ಕಾಸರಗೋ ಡಿನ ಕನ್ನಡಿಗರ ಹಿತರಕ್ಷಣೆಯ ದೃಷ್ಟಿಯಿಂದ ಅನೇಕ ಸರಕಾರಿ ಹುದ್ದೆಗಳಿಗೆ ಕನ್ನಡ ಗೊತ್ತಿರುವವರನ್ನೇ
ನೇಮಿಸಬೇಕೆಂಬ ಆದೇಶವಿದ್ದರೂ ಹಾಗೂ ಸುತ್ತೋಲೆಗಳನ್ನು ಕನ್ನಡದಲ್ಲಿಯೇ ಮುದ್ರಿಸಬೇಕೆಂಬ ನಿಯಮವಿದ್ದರೂ ಇದನ್ನು ಪಾಲಿಸಲಾಗು
ತ್ತಿಲ್ಲ. ಹಾಗಾಗಿ ಇಲ್ಲಿ ಬರುವ ನೋಟಿಸುಗಳು, ವರದಿಗಳು, ಸುತ್ತೋಲೆಗಳು ಮಲಯಾಳ ಭಾಷೆಯಲ್ಲಿರುವ ಕಾರಣ ಆರೋಗ್ಯ, ಶಿಕ್ಷಣ, ಕೃಷಿ,ಮೊದಲಾದ ಸರಕಾರಿ ಇಲಾಖೆಗಳಲ್ಲಿ ಕನ್ನಡ ಹುದ್ದೆಗಳು ಗುರುತಿಸಲ್ಪಡದೆ ಕನ್ನಡಿಗರ ಕೈತಪ್ಪಿ ಹೋಗುತ್ತಿವೆ.
ಸಾಂಸ್ಕೃತಿಕವಾಗಿ ನೋಡುವಾಗ ಹೆಚ್ಚು ಅಪಾಯ ಕಾರಿಯಾದುದೆಂದರೆ ಕಾಸರಗೋಡಿನ ಸ್ಥಳಪುರಾಣ ಹಾಗೂ ಚರಿತ್ರೆಗಳನ್ನು ತಿರುಚಿ ಅದೊಂದು ಶುದ್ಧ ಮಲಯಾಳಂ ಸಂಸ್ಕೃತಿಯ ನಾಡೆಂದು ಸಾಬೀತು ಪಡಿಸುವ ಯತ್ನ ಪ್ರಬಲವಾಗಿದೆ.
ಉದಾ: ಬೇಕಲ ಕೋಟೆಯನ್ನು ಸ್ಥಾಪಿಸಿದ್ದು ಮಲಯಾಳ ರಾಜನಾದ ಕೋಲತ್ತಿರಿ ಅನ್ನುವ ವಾದ, ಹಾಗೂ ಊರಿನ ಹೆಸರುಗಳು ಬದಲಾದದ್ದನ್ನು ಗಮನಿಸಬಹುದು. ಕಾಸರಗೋಡು-ಕಾರ್ಸಕೋಟ ಆದದ್ದು, ಮಂಜೇಶ್ವರ- ಮಂಜೇಶ್ವರಂ ಆದದ್ದು, ಕುಂಬಳೆ- ಕುಂಬಳ ಆದದ್ದು, ಪಿಲಿಕುಂಜೆ- ಪುಲಿಕುನ್ನು ಆದದ್ದು ಇತ್ಯಾದಿ. ಈ ಸಮಸ್ಯೆಗಳಿಗೆ ಪರಿಹಾರಗಳೇನು ಎಂದು ಯೋಚಿಸಿದಾಗ ಹಲವಾರು ಬೆಳಕಿನ ಸೆಲೆಗಳು ಅಲ್ಲಲ್ಲಿ ಮೂಡಿ ಮರೆಯಾಗುತ್ತವೆ. ಅವುಗಳೆಂದರೆ ಮಹಾಜನ ಆಯೋಗವು ಕಾಸರಗೋಡನ್ನು ಅಚ್ಚಕನ್ನಡದ ನೆಲವೆಂದು ಸಾಬೀತು ಪಡಿಸಿತ್ತು.
ಹಾಗಾಗಿ ಕನ್ನಡಿಗರ ಹಿತದೃಷ್ಟಿಯಿಂದ ಹಾಗೂ ಕನ್ನಡ ಭಾಷೆ- ಸಂಸ್ಕೃತಿಯ ಉಳಿವಿಗಾಗಿ ಇಂದಿನ ನವ ಯುವ ಪೀಳಿಗೆಗೆ ಮಹಾಜನ ಆಯೋಗದ ವರದಿಯನ್ನು ಮನದಟ್ಟು ಮಾಡಿ ಅವರಲ್ಲಿ ಅರಿವು ಮೂಡಿಸಬೇಕು.
ಕಾಸರಗೋಡಿನ ಸ್ಥಳ ಪುರಾಣ, ಸಂಸ್ಕೃತಿ, ಚರಿತ್ರೆಯ ಕುರಿತಾಗಿ ದಾಖಲೀಕರಣದ ಕೃತಿಗಳು ಕನ್ನಡ, ಇಂಗ್ಲೀಷ್, ಮಲಯಾಳಂ ಈ ಮೂರು
ಭಾಷೆಗಳಲ್ಲಿಯೂ ಪ್ರಕಟವಾಗಬೇಕು. ಕಾಸರಗೋಡು ಕನ್ನಡಿಗರ ಭಾಷಾಭಿಮಾನವು ಆತ್ಮಾಭಿಮಾನವಾಗಿ ಪುಟಿದೆದ್ದು ನಮ್ಮಭಾಷೆ-
ಸಂಸ್ಕೃತಿಯನ್ನು ಉಳಿಸಲು ಪಕ್ಷ-ಪಂಗಡ, ಜಾತಿ
- ಮತ ಬೇಧಗಳನ್ನು ತೊರೆದು ಒಂದಾಗಬೇಕು. ಭಾಷಾ ಅಲ್ಪಸಂಖ್ಯಾತರ ಪ್ರದೇಶ ಎಂದು ಸರಕಾರ ಘೋಷಿಸಿದಲ್ಲಿ ಭಾಷಾ ಅಲ್ಪಸಂಖ್ಯಾತನೇ ಚುನಾವಣೆಯಲ್ಲಿ ಸ್ಪರ್ಧಿಸಿ ಜನಪ್ರತಿನಿಧಿಯಾಗಿ ಬರುವಂತಾಗಬೇಕು. ಕಾಸರಗೋಡಿನಲ್ಲಿ ಕನ್ನಡ, ಮಲಯಾಳಂ,
ಇಂಗ್ಲೀಷ್ ತ್ರಿಭಾಷಾ ಪರಿಣತರು ವಿಜೇತರಾಗಿ ರಾಜ್ಯ, ಕೇಂದ್ರ ಸರಕಾರಗಳ ಮುಂದೆ ನಮ್ಮ ಸಮಸ್ಯೆಗಳನ್ನು ಸಮರ್ಥವಾಗಿ ಮನದಟ್ಟುಮಾಡಬೇಕು. - ಕಾಸರಗೋಡಿನಲ್ಲಿ ಕನ್ನಡದ ಹೆಸರಲ್ಲಿರುವ ವಿವಿಧ ಸಂಘ, ಸಂಘಟನೆಗಳು ‘ಕನ್ನಡವೇ ಉಸಿರು’ ಎಂದು ಒಂದೇ ಮುಖ್ಯ ಸಮಿತಿಯನ್ನು ಮಾಡಿ ಹರಿದು ಹಂಚಿ ಹೋಗಿರುವ ಕನ್ನಡ ಮನಗಳನ್ನು ಒಗ್ಗೂಡಿಸಬೇಕು. ಕನ್ನಡವನ್ನು ಪ್ರತಿಷ್ಠೆಯ ಸರಕಾಗಿಸದೆ, ಹೆಸರಿಗಾಗಿ, ಪ್ರಚಾರಕ್ಕಾಗಿ ಕಾರ್ಯ ಮಾಡದೆ ಕನ್ನಡ ಸೇವೆ ಕರ್ತವ್ಯವೆಂದು ತಿಳಿದು ಪರಸ್ಪರ ಸಹಕರಿಸಬೇಕು.
- ತುಳು ಮತ್ತು ಕನ್ನಡ ಎರಡು ಪರಸ್ಪರ ಸ್ಪರ್ಧೆಗಿಳಿದು ಒಂದರ ಅಭಿವೃದ್ಧಿ ಇನ್ನೊಂದರ ಅವಗಣನೆ ಎಂದು ತಿಳಿಯದೆ, ಇವರಿಬ್ಬರ ಮಧ್ಯೆ
ಒಡೆದು ಆಳುವ ನೀತಿಯ ಕುಟಿಲತೆಯನ್ನು ಅರ್ಥೈಸಿಕೊಂಡು ಎಲ್ಲರೂ ಪರಸ್ಪರ ಒಗ್ಗಟ್ಟು, ಪ್ರೀತಿ, ವಿಶ್ವಾಸಗಳಿಂದ ಜೊತೆಯಾಗಿ ನಿಲ್ಲಬೇಕು. - ಕನ್ನಡ ಮಾದ್ಯಮ ಮಕ್ಕಳಿಗೆ ಕನ್ನಡ ಶಿಕ್ಷಕರನ್ನೇ ನೇಮಿಸಬೇಕು ಹಾಗೂ ಪಠ್ಯಪುಸ್ತಕ ಇನ್ನಿತರ ಸೌಲಭ್ಯಗಳು ಕನ್ನಡದಲ್ಲಿಯೇ ದೊರೆಯು
ವಂತಾಗಬೇಕು. - ಕೇರಳ, ಕರ್ನಾಟಕ ಎರಡೂ ಸರಕಾರಗಳು ಮುಕ್ತ ವಾಗಿ ಚರ್ಚಿಸಿ ಕಾಸರಗೋಡಿನ ಕನ್ನಡಿಗರನ್ನು ಪ್ರಸ್ತುತ ತ್ರಿಶಂಕು ಸ್ವರ್ಗದಿಂದ ಪಾರು ಮಾಡಬೇಕು.
- ಕೊನೆಯದಾಗಿ ಹೇಳುವುದೇನೆಂದರೆ ಎದರು ಇರು ಎಂತಾದಾರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಅನ್ನುವ ಕುವೆಂಪುರವರ ಸಾಲುಗಳು ಸದಾ ನಮಗೆ ಸ್ಪೂರ್ತಿಯಾಗಲಿ. ಡಿವಿಜಿಯವರು ಹೇಳಿದಂತೆ ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು| ಹೊಸಯುಕ್ತಿ ಹಳೆತತ್ವದೊಡಗೂಡೆ ಧರ್ಮ || ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ |ಜಸವು ಜನಜೀವನಕೆ – ಮಂಕುತಿಮ್ಮ ||
ಎಂಬುದನ್ನು ಸದಾ ನೆನಪಿನಲ್ಲಿಡೋಣ. - (ಲೇಖಕರು: ಹವ್ಯಾಸಿ ಬರಹಗಾರ್ತಿ)
ಇದನ್ನೂ ಓದಿ: Parinita Ravi Column: ನಮ್ಮ ಪ್ರತಿಚ್ಛಾಯೆಯನ್ನು ನಿರ್ಮಿಸುವವರು ಯಾರು ?