Sunday, 18th May 2025

Viral Video: ಎರಡು ಬಸ್‍ಗಳ ಮುಖಾಮುಖಿ ಡಿಕ್ಕಿ; 34 ಪ್ರಯಾಣಿಕರಿಗೆ ಗಾಯ

Viral Video

ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ಪೆರವೂರ್ ಬಳಿ ಎರಡು ಸರ್ಕಾರಿ ಸ್ವಾಮ್ಯದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಬಸ್‍ಗಳು ಒಂದಕ್ಕೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದಾರೆ. ಒಂದು ಬಸ್ ಮನಂತವಾಡಿಯಿಂದ ಪಯ್ಯನೂರಿಗೆ ಮತ್ತು ಇನ್ನೊಂದು ಬಸ್ ಮನಂತವಾಡಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತದ ಘೋರ ದೃಶ್ಯದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ.

ಈ ಅಪಘಾತದಲ್ಲಿ ಓರ್ವ ಪ್ರಯಾಣಿಕನ ಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಮುಖ್ಯ ರಸ್ತೆಯ ಕಿರಿದಾದ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಈ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ ಎಂದು ವರದಿಯಾಗಿದೆ. ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣಾ ಕಾರ್ಯಾಚರಣೆಯನ್ನು ಶುರು ಮಾಡಿದ್ದಾರೆ. ನಂತರ ಶೀಘ್ರದಲ್ಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆ ಮತ್ತು ಪೊಲೀಸರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ.

ಮಳೆಯಿಂದಾಗಿ ರಸ್ತೆ ಸ್ಪಷ್ಟವಾಗಿ ಕಾಣದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದಲ್ಲಿ  ಬಸ್ ಒಂದರ ಮುಂಭಾಗಕ್ಕೆ ತೀವ್ರವಾಗಿ ಹಾನಿಯಾಗಿದೆ. ಅದೇ ರೀತಿ ಇತ್ತೀಚೆಗೆ ಕೇರಳದಲ್ಲಿ ಇನ್ನೊಂದು ಅಪಘಾತದ ಘಟನೆ ವರದಿಯಾಗಿದೆ. ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಪ್ರಯಾಣಿಕರ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಮೊಹಮ್ಮದ್, ಮುಹಸಿನ್, ಇಬ್ರಾಹಿಂ, ದೇವಾನಂದ್ ಮತ್ತು ಶ್ರೀದೀಪ್ ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರಾತ್ರಿ 9 ಗಂಟೆಯ ನಂತರ ಅತಿ ವೇಗದಲ್ಲಿ ಪ್ರಯಾಣಿಸುತ್ತಿದ್ದ ಟವೇರಾ ಕಾರು ಸ್ಕಿಡ್ ಆಗಿ ಗುರುವಾಯೂರಿನಿಂದ ಕಾಯಂಕುಲಂಗೆ ಪ್ರಯಾಣಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತ ಎಷ್ಟು ಭೀಕರವಾಗಿತೆಂದರೆ ಕಾರಿನಲ್ಲಿದ್ದ  ವೈದ್ಯಕೀಯ ವಿದ್ಯಾರ್ಥಿಗಳು ಹೊರಗೆ ಹಾರಿ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಕಾರಿನಲ್ಲಿ 10 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ವರದಿಗಳು ಸೂಚಿಸುತ್ತವೆ. ಈ ಘಟನೆಯಲ್ಲಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ಅಲಪ್ಪುಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇತರ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳನ್ನು ಈಗ ಅದೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ: ಅದೃಷ್ಟ ಖುಲಾಯಿಸಿದ್ರೆ ಹೀಗೂ ಆಗುತ್ತೆ! ರಜಾ ದಿನದಂದು ಕೆಲಸಕ್ಕೆ ಬಂದು ರಾತ್ರೋರಾತ್ರಿ ಮಿಲಿಯನೇರ್‌ ಆದ ಉದ್ಯೋಗಿ

ವೈದ್ಯಕೀಯ ವಿದ್ಯಾರ್ಥಿಗಳು ಕೊಚ್ಚಿಗೆ ತೆರಳುತ್ತಿದ್ದರು ಎಂದು ವರದಿಯಾಗಿದೆ. ಘಟನೆಯಲ್ಲಿ ಟವೇರಾ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತದ ನಂತರ ರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಅಪಘಾತದ ಹಿಂದಿನ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ಮೋಟಾರು ವಾಹನ ಇಲಾಖೆ ಅಪಘಾತದ ಬಗ್ಗೆ ತನಿಖೆಯನ್ನು ಶುರುಮಾಡಿದೆ ಎನ್ನಲಾಗಿದೆ.