ಲಾಸ್ ಏಂಜಲೀಸ್: ಕೆಲವೊಮ್ಮೆ ಅದೃಷ್ಟದ ಬಾಗಿಲು ಯಾರಿಗೆ ಯಾವಾಗ ತೆರೆಯುತ್ತದೆ ಎಂಬುದು ತಿಳಿಯುವುದೇ ಇಲ್ಲ. ಅದೃಷ್ಟ ಕೈ ಹಿಡಿದ್ರೆ ಕಣ್ಣು ಮುಚ್ಚಿ ಕಣ್ಣು ಬಿಡೋದ್ರಲ್ಲಿ ಸಿರಿವಂತರಾದವರ ಕಥೆ ಹಲವಿದೆ. ಇದೀಗ ಅಂತಹದ್ದೇ ಒಂದು ಘಟನೆ ಲಾಸ್ ಏಂಜಲೀಸ್‌ನಲ್ಲಿ ನಡೆದಿದೆ. ರಜಾದಿನ ಆಫೀಸ್‌ಗೆ ಕೆಲಸದ ಮೇಲೆ ಬಂದಿದ್ದ ಆಕೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗಿರುವ ಘಟನೆ ವರದಿಯಾಗಿದೆ. ಇದೀಗ ಈ ಸುದ್ದಿ ಭಾರೀ ವೈರಲ್(Viral News) ಆಗುತ್ತಿದೆ.
ಏನಿದು ಘಟನೆ?
ಕೌಂಟಿಯ ರೆಬೆಕಾ ಗೊನ್ಜಾಲೆಜ್ ಅವರು ಆಕಸ್ಮಿಕವಾಗಿ ಲಾಟರಿ ಖರೀದಿಸಿ ಅದರಿಂದ 1 ಮಿಲಿಯನ್ ಡಾಲರ್ ಹಣವನ್ನು ಗೆದ್ದಿದ್ದಾರೆ. ಇದು ಅವರ ಜೀವನವನ್ನೇ ಬದಲಾಯಿಸಿದೆಯಂತೆ. ಲಾಸ್ ಏಂಜಲೀಸ್ ಕೌಂಟಿಯ ರೆಬೆಕಾ ಗೊನ್ಜಾಲೆಜ್ ಅವರು ಈಗ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.
ವಾಲ್ಮಾರ್ಟ್ ಉದ್ಯೋಗಿಯಾದ ರೆಬೆಕಾ ಗೊನ್ಜಾಲೆಜ್ ಅವರನ್ನು ಕಾರ್ಮಿಕ ದಿನದಂದು ಸಿಬ್ಬಂದಿಗಳ ಕೊರತೆಯನ್ನು ನೀಗಿಸಲು ಮೂರು ಗಂಟೆಗಳ ಶಿಫ್ಟ್‌ಗೆ ಕರೆಸಲಾಗಿತ್ತು. ಊಟದ ವಿರಾಮದ ಸಮಯದಲ್ಲಿ, ಅವರ ಗಮನ ಸೆಳೆದಿದ್ದು ಕ್ಯಾಲಿಫೋರ್ನಿಯಾ ಲಾಟರಿ. ಹೋದರೆ ಹೋಗಲಿ ಬಂದ್ರೆ ಬರಲಿ ಎಂದು ಸುಮ್ಮನ್ನೊಂದು ಟಿಕೆಟ್ ಖರೀದಿಸಲು ನಿರ್ಧರಿಸಿದ್ದಾರೆ. ಆದರೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಅದು ಸಾಧ್ಯವಾಗಲಿಲ್ಲ.
ಆದರೆ ಅವರ ಶಿಫ್ಟ್ ಮುಗಿದ ನಂತರ, ಅವರು ವೆಂಡಿಂಗ್ ಮೆಷಿನ್‍ನಿಂದ $ 10 ಸ್ಕ್ರ್ಯಾಚರ್ಸ್ ಸಿಂಗಲ್ ಡಬಲ್ ಟ್ರಿಪಲ್ ಆಟವನ್ನು ತೆಗೆದುಕೊಂಡರಂತೆ. ಇದು ಅವರ ಜೀವನವನ್ನೇ ಬದಲಾಯಿಸಿಬಿಟ್ಟಿದೆಯಂತೆ. ಆಶ್ಚರ್ಯವೆನೆಂದರೆ ಅವರ ಸ್ಕ್ರ್ಯಾಚ್-ಆಫ್ ಟಿಕೆಟ್ 1 ಮಿಲಿಯನ್ ಡಾಲರ್ ಗೆದ್ದಿರುವುದಾಗಿ ಬಹಿರಂಗಪಡಿಸಿತು. ತಿಂಗಳಿಗೆ ಎರಡು ಬಾರಿ ಟಿಕೆಟ್ ಖರೀದಿಸುವ ಅಭ್ಯಾಸವಿರುವ ರೆಬೆಕಾ ಈ ಹಿಂದೆ ಕೇವಲ $ 50ವರೆಗೆ ಗೆದ್ದಿದ್ದರು. ಆದರೆ ಈ ಬಾರಿ ಮಿಲಿಯನ್ ಡಾಲರ್ ಗೆದ್ದಿರುವುದನ್ನು ಕೇಳಿ ದಿಗ್ಭ್ರಮೆಗೊಂಡಿದ್ದಾರೆ. ಹಾಗಾಗಿ ಅವರು ಮೊದಲು ಅವರ ಮ್ಯಾನೇಜರ್‌ಗೆ ಕರೆ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಯಾಕೆಂದರೆ ಅದೇ ವ್ಯಕ್ತಿ ಅವರನ್ನು ರಜೆಯ ದಿನದಂದು ಬರಲು ಕೇಳಿದ್ದರಂತೆ.
ರೆಬೆಕಾ ತನ್ನ ಗೆದ್ದ ಹಣದಿಂದ ತನ್ನ ಕುಟುಂಬದ ಜೀವನವನ್ನು ಸುಧಾರಿಸಲು ಮತ್ತು ತಮ್ಮ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯೋಜಿಸಿದ್ದಾರೆ. ಅವರು ಈಗಾಗಲೇ ಐದು ಬೆಡ್ ರೂಂ ಮನೆಯನ್ನು ಖರೀದಿಸಿದ್ದಾರೆ. ಮತ್ತು ತಮ್ಮ ಸಾಲಗಳನ್ನು ತೀರಿಸಿದ್ದಾರೆ. ಅದರ ಜೊತೆಗೆ ಅವರು ತನ್ನ ಬಾಲ್ಯದ ಜೀವನವನ್ನು ನೆನಪಿಸಿಕೊಳ್ಳುತ್ತಾ ತನ್ನ ಕುಟುಂಬವು ಅನುಭವಿಸಿದ ಆರ್ಥಿಕ ಹೋರಾಟಗಳು ಮತ್ತು ಅವರು ಬದುಕಲು ಮಾಡಿದ ತ್ಯಾಗಗಳನ್ನು ಒಮ್ಮೆ ಮೆಲುಕು ಹಾಕಿದ್ದಾರೆ.
ಈ ವಿಚಾರವನ್ನು ಅವರು ತನ್ನ ಕುಟುಂಬದವರಿಗೆ ತಿಳಿಸಿದ್ದಾಗ ಅವರ ಕುಟುಂಬದವರು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ ಎಂಬ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ ಮತ್ತು ತಮ್ಮ ಪ್ರೀತಿಪಾತ್ರರಿಗೆ ಉತ್ತಮ ಭವಿಷ್ಯವನ್ನು ಒದಗಿಸಲು ಸಾಧ್ಯವಾಗಿದ್ದಕ್ಕಾಗಿ ಅವರು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಜೀವನವನ್ನು ಬದಲಾಯಿಸುವ ಈ ಕ್ಷಣವು ಅದೃಷ್ಟದ ಬೆಂಬಲವನ್ನು ಎತ್ತಿ ತೋರಿಸುತ್ತದೆ ಮತ್ತು ಕೆಲಸದ ಬಗ್ಗೆ ತೋರಿಸುವ ಸರಳ ನಿರ್ಧಾರವು ಊಹಿಸಲಾಗದ ಪ್ರತಿಫಲಗಳಿಗೆ ಹೇಗೆ ಕಾರಣವಾಗಬಹುದು ಎಂಬುದನ್ನು ಈ ಘಟನೆ ತಿಳಿಸುತ್ತದೆ.