Monday, 19th May 2025

Nabha Natesh: ಪಟಾಕಾ ನಭಾ ನಟೇಶ್ ಮುಡಿಗೆ ಸ್ಟೈಲ್ ಐಕಾನ್ ಅವಾರ್ಡ್

Nabha Natesh

ಹೈದರಾಬಾದ್‌: ʼಪಟಾಕಾʼ (Pathaka) ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸ್ಯಾಂಡಲ್‌ವುಡ್‌ ನಟಿ ನಭಾ ನಟೇಶ್‌ (Nabha Natesh) ಸದ್ಯ ತೆಲುಗಿನಲ್ಲಿಯೂ ಸದ್ದು ಮಾಡುತ್ತಿದ್ದಾರೆ. ಅಭಿನಯದ ಜತೆಗೆ ಚೆಲುವಿನಿಂದ, ಗ್ಲಾಮರ್‌ನಿಂದ, ಫ್ಯಾಷನ್‌ನಿಂದ ಗಮನ ಸೆಳೆಯುವ ಅವರು ಇದೀಗ 2024ರ ಸ್ಟೈಲ್ ಐಕಾನ್ ಪ್ರಶಸ್ತಿ (Style Icon of The Year) ಪಡೆದಿದ್ದಾರೆ.

ಕನ್ನಡದಿಂದ ನಟನಾ ಜರ್ನಿ ಆರಂಭಿಸಿದ್ದ ನಭಾ ನಟೇಶ್ ಈಗ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಶೃಂಗೇರಿ ಮೂಲದ ಈ ನಟಿ ಸದ್ಯ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿರುವ ನಭಾ ಔಟ್ ಲುಕ್ ಇಂಡಿಯನ್ ಬ್ಯುಸಿನೆಸ್ ನೀಡುವ 2024ರ ಸ್ಟೈಲ್ ಐಕಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ʼಮಹಾನಟಿʼ ಖ್ಯಾತಿಯ ಕೀರ್ತಿ ಸುರೇಶ್ ನಭಾಗೆ ಈ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಸ್ಟೈಲಿಷ್‌ ಲುಕ್‌ನಲ್ಲಿ ಅವಾರ್ಡ್ ಸ್ವೀಕರಿಸಿ ಕ್ಯಾಮೆರಾಗೆ ಪಟಾಕಾ ಪಾರ್ವತಿ ಪೋಸ್ ಕೊಟ್ಟಿದ್ದಾರೆ.

ನಭಾ ನಟೇಶ್ ತೆಲುಗಿನಲ್ಲಿ ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿಖಿಲ್ ನಾಯಕನಾಗಿ ನಟಿಸುತ್ತಿರುವ ʼಸ್ವಯಂಭೂʼ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದರ ಜತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ ʼನಾಗಬಂಧಂʼನಯಲ್ಲಿಯೂ ಅಭಿನಯಿಸುತ್ತಿದ್ದಾರೆ. ಈ ಎರಡು ಚಿತ್ರಗಳೊಂದಿಗೆ ನಭಾ ನಟೇಶ್ ಮತ್ತೊಮ್ಮೆ ಎಲ್ಲರ ಗಮನವನ್ನು ಸೆಳೆಯುಲು ಸಜ್ಜಾಗಿದ್ದಾರೆ.

ಪಟಾಕಾ ಪಾರ್ವತಿ ಪಾತ್ರದ ಮೂಲಕ ಜನಪ್ರಿಯತೆ

2015ರಲ್ಲಿ ತೆರೆಕಂಡ ಶಿವರಾಜ್‌ ಕುಮಾರ್‌ ಅಭಿನಯದ ʼವಜ್ರಕಾಯʼ ಚಿತ್ರದ ಮೂಲಕ ನಭಾ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅದರಲ್ಲಿನ ಪಟಾಕಾ ಪಾರ್ವತಿ ಪಾತ್ರ ವೀಕ್ಷಕರ ಗಮನ ಸೆಳೆಯಿತು. ಅದು ಎಷ್ಟು ಜನಪ್ರಿಯವಾಗಿದೆ ಎಂದರೆ ಇಂದಿಗೂ ಫ್ಯಾನ್ಸ್‌ ಅವರನ್ನು ಅದೇ ಹೆಸರಿನಿಂದ ಗುರುತಿಸುತ್ತಿದ್ದಾರೆ. ಅದಾದ ಬಳಿಕ 2018ರಲ್ಲಿ ಟಾಲಿವುಡ್‌ಗೆ ಪಾದರ್ಪಣೆ ಮಾಡಿದರು. ಸುಧೀರ್‌ ಬಾಬು ಜತೆಗೆ ʼನನ್ನು ದೋಚುಕುಂಡುವಟೆʼ ಸಿನಿಮಾದಲ್ಲಿ ಅಭಿನಯಿಸಿದರು. ಮೊದಲ ಚಿತ್ರದಲ್ಲೇ ಟಾಲಿವುಡ್‌ ಪ್ರೇಕ್ಷಕರ ಗಮನ ಸೆಳೆದ ಅವರು ಬಳಿಕ ಸಾಲು ಸಾಲು ತೆಲುಗು ಸಿನಿಮಾದಲ್ಲಿ ನಟಿಸಿದರು.

ತೆಲುಗಿನಲ್ಲೂ ಮೋಡಿ

2019ರಲ್ಲಿ ರಿಲೀಸ್‌ ಆದ ʼಐಸ್ಮಾರ್ಟ್‌ ಶಂಕರ್‌ʼ ಸಿನಿಮಾದಲ್ಲಿ ಟಾಲಿವುಡ್‌ ಸೂಪರ್‌ ಸ್ಟಾರ್‌ ರಾಮ್‌ ಪೋತಿನೇನಿಗೆ ನಭಾ ಜೋಡಿಯಾಗಿ ಕಾಣಿಸಿಕೊಂಡರು. ಪುರಿ ಜಗನ್ನಾಥ್‌ ನಿರ್ದೇಶನದ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿತು. 15–20 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 75–85 ಕೋಟಿ ರೂ. 2021ರಿಂದ ಕೊಂಚ ಕಾಲ ಬ್ರೇಕ್‌ ಪಡೆದ ಅವರು ಈ ವರ್ಷ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಜುಲೈಯಲ್ಲಿ ತೆರೆಕಂಡ ʼಡಾರ್ಲಿಂಗ್‌ʼ ಸಿನಿಮಾದಲ್ಲಿ ಪ್ರಿಯದರ್ಶಿ ಪುಲಿಕೊಂಡ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ನಭಾ ಅವರ ಪ್ರಿಯಾ ರಾವ್‌ ಪಾತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈ ಸುದ್ದಿಯನ್ನೂ ಓದಿ: Pushpa 2: ಗನ್‌ ಹಿಡಿದು ‘ಪುಷ್ಪ 2’ ಲುಕ್‌ನಲ್ಲಿ ಮಿಂಚಿದ ಕ್ರಿಕೆಟಿಗ ವಾರ್ನರ್‌