Sunday, 11th May 2025

Maha Kumbh Mela: ಮಹಾಕುಂಭ ಮೇಳ ನಡೆಯುವ ಪ್ರದೇಶ ಇನ್ಮುಂದೆ ಹೊಸ ಜಿಲ್ಲೆ; ಉತ್ತರ ಪ್ರದೇಶ ಸರ್ಕಾರದಿಂದ ಮಹತ್ವದ ಘೋಷಣೆ

Maha Kumbh Mela

ಲಖನೌ: ಯೋಗಿ ಆದಿತ್ಯನಾಥ್‌ (Yogi Adityanath) ನೇತೃತ್ವದ ಉತ್ತರ ಪ್ರದೇಶ (Uttar Pradesh)ದ ಬಿಜೆಪಿ ಸರ್ಕಾರ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ (Maha Kumbh Mela) ನಡೆಯುವ ಸ್ಥಳವನ್ನು ಹೊಸ ಜಿಲ್ಲೆಯಾಗಿ ಘೋಷಿಸಿ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಈ ಪ್ರದೇಶ ಮಹಾಕುಂಭ ಮೇಳ ಜಿಲ್ಲೆ ಎಂದು ಗುರುತಿಸ್ಪಡಲಿದೆ. ಮುಂದಿನ ವರ್ಷಾರಂಭದಲ್ಲಿ ಇಲ್ಲಿ ಮಹಾಕುಂಭ ಮೇಳ ನಡೆಯಲಿದೆ.

ಬೃಹತ್‌ ಧಾರ್ಮಿಕ ಸಮಾವೇಶವಾದ ಮಹಾಕುಂಭ ಮೇಳವನ್ನು ಉತ್ತಮವಾಗಿ ನಿರ್ವಹಿಸಲು ಈ ಮಹತ್ವದ ಆಡಳಿತಾತ್ಮಕ ಕ್ರಮವನ್ನು ಘೋಷಿಸಲಾಗಿದೆ. ಈ ಕ್ರಮವು ಯಾತ್ರಾರ್ಥಿಗಳಿಗೆ ಲಾಜಿಸ್ಟಿಕ್ಸ್, ಕಾನೂನು ಜಾರಿ ಮತ್ತು ಸೌಲಭ್ಯಗಳ ತಡೆರಹಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಮಹಾಕುಂಭ ಮೇಳ ಜಿಲ್ಲೆಯು ಸದರ್, ಸೊಹ್ರಾ, ಫೂಲ್ಪುರ್ ಮತ್ತು ಕರಾಚ್‌ನ ತಹಸಿಲ್‌ಗಳನ್ನು ಒಳಗೊಂಡಿದೆ. ಈ 4 ತಹಸಿಲ್‌ಗಳಿಂದ 67 ಗ್ರಾಮಗಳನ್ನು ಹೊಸ ಜಿಲ್ಲೆಗೆ ಸೇರಿಸಲಾಗುತ್ತದೆ. ಮಹಾಕುಂಭ ಮೇಳಕ್ಕೂ ಮುನ್ನ ಹೊಸ ಜಿಲ್ಲೆಯ ಅಧಿಸೂಚನೆಯನ್ನು ಹೊರಡಿಸುವ ಸಂಪ್ರದಾಯ ಉತ್ತರ ಪ್ರದೇಶದಲ್ಲಿದೆ. ಈ ಮೂಲಕ ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದ ಜಿಲ್ಲೆಗಳ ಸಂಖ್ಯೆ 76ಕ್ಕೆ ಏರಿದೆ.

ಮಹಾಕುಂಭ ಮೇಳದ ಸಿದ್ದತೆಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಡಿ. 13ರಂದು ಪ್ರಯಾಗ್‌ರಾಜ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಈ ಬಾರಿಯ ಕುಂಭಮೇಳ 2025ರ ಜನವರಿ 13ರಿಂದ ಫೆಬ್ರವರಿ 26ರ ತನಕ ನಡೆಯಲಿದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಕುಂಭಮೇಳ ಕೋಟ್ಯಂತರ ಭಕ್ತರನ್ನು ಸೆಳೆಯುತ್ತದೆ.

40 ಕೋಟಿ ಭಕ್ತರು ಆಗಮಿಸುವ ನಿರೀಕ್ಷೆ

ಈ ಬಾರಿಯ ಮಹಾಕುಂಭ ಮೇಳದಲ್ಲಿ ಸುಮಾರು 40 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಸಂಗಮ ಸ್ಥಳದಲ್ಲಿ ಮತ್ತು ನಗರದಲ್ಲಿ ಮೂಲ ಸೌಕರ್ಯ ಒದಗಿಸಲು ಸಿದ್ದತೆ ನಡೆಸಲಾಗುತ್ತಿದೆ. ಬಹುತೇಕ ಭಕ್ತರು ತಮ್ಮದೇ ವಾಹನಗಳಲ್ಲಿ ಆಗಮಿಸುವ ನಿರೀಕ್ಷೆ ಇರುವುದರಿಂದ ಟೋಲ್‌ ಅನ್ನು ತೆರಿಗೆಯಿಂದ ಮುಕ್ತಗೊಳಿಸುವುದಾಗಿ ಘೋಷಿಸಲಾಗಿದೆ. ಮೇಳ ಆಯೋಜಕರ ಪ್ರಕಾರ ಸುಮಾರು ಶೇ. 55ರಷ್ಟು ಭಕ್ತರು ಕಾರು, ಜೀಪು, ಬಸ್‌, ಟ್ರಕ್‌ ಮತ್ತು ಟ್ರ್ಯಾಕ್ಟರ್‌ ಮೂಲಕ ಆಗಮಿಸಲಿದ್ದಾರೆ. ಇನ್ನುಳಿದ ಶೇ. 45ರಷ್ಟು ಭಕ್ತರು ರೈಲು, ವಿಮಾನಗಳಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಳಸಲಿದ್ದಾರೆ. ಈ ವೇಳೆ ಸುಮಾರು 1,200 ವಿಶೇಷ ರೈಲುಗಳ ವ್ಯವಸ್ಥೆ ಮಾಡಲೂ ಸರ್ಕಾರ ಚಿಂತನೆ ನಡೆಸಿದೆ. ಜತೆಗೆ 7,000 ಹೆಚ್ಚುವರಿ ಬಸ್‌ ಓಡಾಟ ನಡೆಸಲಿದೆ.

ಏನಿದು ಕುಂಭಮೇಳ?

ಹರಿದ್ವಾರ, ಉಜ್ಜೈನಿ, ಪ್ರಯಾಗರಾಜ್‌ ಮತ್ತು ನಾಸಿಕ್‌ನಲ್ಲಿ ಪ್ರತಿ 3 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಯನ್ನು ಕುಂಭ ಎಂದು ಕರೆಯಲಾಗುತ್ತದೆ. ಹರಿದ್ವಾರ ಮತ್ತು ಪ್ರಯಾಗ್ರಾಜ್‌ನಲ್ಲಿ ಪ್ರತಿ 6 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಅರ್ಧ ಕುಂಭ ಎಂದು ಕರೆಯಲಾಗುತ್ತದೆ. ಅದೇ ಸಮಯದಲ್ಲಿ, ಪ್ರಯಾಗರಾಜ್‌ಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಕುಂಭವನ್ನು ಪೂರ್ಣ ಕುಂಭಮೇಳ / ಮಹಾ ಕುಂಭಮೇಳ ಎಂದು ಕರೆಯಲಾಗುತ್ತದೆ.

ಈ ಸುದ್ದಿಯನ್ನೂ ಓದಿ: No Toll Tax: ವಾಹನ ಮಾಲಕರಿಗೆ ಗುಡ್‌ನ್ಯೂಸ್‌; 45 ದಿನಗಳ ಕಾಲ ಟೋಲ್‌ ಕಟ್ಟಬೇಕಾಗಿಲ್ಲ: ಯಾವಾಗಿನಿಂದ ಈ ಯೋಜನೆ? ಇಲ್ಲಿದೆ ವಿವರ