ಬೆಂಗಳೂರು: ವಂಶ ರಾಜಕಾರಣದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ, ರಾಜ್ಯ ಬಿಜೆಪಿಯ ಸ್ಥಿತಿಯ ಬಗ್ಗೆ ಹೈಕಮಾಂಡ್ಗೆ ವಿವರ ಸಲ್ಲಿಸುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದ್ದಾರೆ. ʼಪಕ್ಷವಿರೋಧಿ ಚಟುವಟಕೆʼಗಾಗಿ ಬಿಜೆಪಿ (BJP) ಶಿಸ್ತು ಸಮಿತಿ ನೀಡಿರುವ ಶೋಕಾಸ್ ನೋಟೀಸ್ಗೆ (Show cause notice) ಪ್ರತಿಕ್ರಿಯೆಯಾಗಿ ಸೋಶಿಯಲ್ ಮೀಡಿಯಾ (Social media) ಎಕ್ಸ್ನಲ್ಲಿ ಒಂದು ಪೋಸ್ಟ್ ಮಾಡಿರುವ ಅವರು, ಅದರಲ್ಲಿ ಹೀಗೆ ಹೇಳಿದ್ದಾರೆ.
ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಯತ್ನಾಳ್, ರಾಜ್ಯ ಬಿಜೆಪಿಯ ಸ್ಥಿತಿಯ ಬಗ್ಗೆ ಹೈಕಮಾಂಡ್ಗೆ ವಿವರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ನೋಟಿಸ್ಗೆ ಉತ್ತರ ನೀಡುತ್ತೇನೆ. ಕರ್ನಾಟಕದಲ್ಲಿ ಬಿಜೆಪಿಯ ಪ್ರಸ್ತುತ ಸ್ಥಿತಿಯ ಬಗ್ಗೆ ವಾಸ್ತವಾಂಶವನ್ನು ಅವರ ಮುಂದೆ ಪ್ರಸ್ತುತಪಡಿಸುತ್ತೇನೆ. ಹಿಂದುತ್ವದ ಪರ ಹೋರಾಟ, ಭ್ರಷ್ಟಾಚಾರದ ವಿರುದ್ಧದ ಹೋರಾಟ, ವಕ್ಫ್ ಸಂಬಂಧಿತ ಸಮಸ್ಯೆಗಳು ಮತ್ತು ವಂಶ ರಾಜಕಾರಣದ ವಿರುದ್ಧದ ಹೋರಾಟ ಸಂಬಂಧ ನನ್ನ ಬದ್ಧತೆ ಅಚಲವಾಗಿ ಇರಲಿದೆ ಎಂದು ಯತ್ನಾಳ್ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.
I will respond to the notice issued by the BJP Disciplinary Committee Chairman, while also presenting the facts regarding the current state of the BJP in Karnataka. My commitment to the fight for Hindutva, opposition to corruption, Waqf-related issues, and dynasty politics will… https://t.co/i1jk9jsmdO
— Basanagouda R Patil (Yatnal) (@BasanagoudaBJP) December 2, 2024
ಪಕ್ಷ ವಿರೋಧಿ ಚಟುವಟಿಕೆ, ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ಸತತ ಹೇಳಿಕೆಗಳನ್ನು ನೀಡುವುದರ ವಿರುದ್ಧ ಯತ್ನಾಳ್ಗೆ ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. 10 ದಿನಗಳ ಒಳಗಾಗಿ ಉತ್ತರಿಸುವಂತೆಯೂ ಇಲ್ಲವಾದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿಯೂ ಯತ್ನಾಳ್ಗೆ ಹೈಕಮಾಂಡ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ, ಶೋಕಾಸ್ ನೋಟಿಸ್ ಬಗ್ಗೆ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ನೋಟೀಸ್ನಲ್ಲಿ ಏನಿದೆ?
“ರಾಜ್ಯ ಮಟ್ಟದ ಪಕ್ಷದ ನಾಯಕತ್ವದ ವಿರುದ್ಧ ನೀವು (ಬಸನಗೌಡ ಪಾಟೀಲ್ ಯತ್ನಾಳ್) ಮಾಡುತ್ತಿರುವ ನಿರಂತರ ವಾಗ್ದಾಳಿ ಮತ್ತು ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುತ್ತಿರುವ ಬಗ್ಗೆ ಪಕ್ಷದ ವಿವಿಧ ವೇದಿಕೆಗಳಲ್ಲಿ ವರದಿಯಾಗಿದೆ. ರಾಜಕೀಯ ಮತ್ತು ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲಾ ವಿಷಯಗಳ ಬಗ್ಗೆ ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಸಾರ್ವಜನಿಕವಾಗಿ ನೀವು ಹೇಳಿಕೆಗಳನ್ನು ನೀಡುತ್ತಿರುವುದು ಮತ್ತು ನಿಲುವುಗಳನ್ನು ವ್ಯಕ್ತಪಡಿಸುತ್ತಿರುವುದು ಮಾಧ್ಯಮಗಳಲ್ಲಿ ಮತ್ತು ವಿವಿಧ ಪಕ್ಷದ ವೇದಿಕೆಗಳಲ್ಲಿ ವರದಿಯಾಗಿದೆ. ಈ ಹಿಂದೆಯೂ ಹಲವು ಬಾರಿ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆಗ ನೀವು ಸದ್ವರ್ತನೆಯ ಭರವಸೆ ನೀಡಿದ್ದರೂ ಅಶಿಸ್ತಿನ ಕೃತ್ಯಗಳು ನಿಮ್ಮಿಂದ ಅವ್ಯಾಹತವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಇದು ಪಕ್ಷದ ನಿಯಮಗಳ ಗಂಭೀರ ಉಲ್ಲಂಘನೆಯಾಗಿದೆ. ನಿಮ್ಮ ಹಿರಿತನ ಮತ್ತು ಪಕ್ಷದಲ್ಲಿನ ದೀರ್ಘಾವಧಿಯನ್ನು ಗಮನದಲ್ಲಿಟ್ಟುಕೊಂಡು, ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿಯು ಮೃದುವಾದ ದೃಷ್ಟಿಕೋನವನ್ನು ತೆಗೆದುಕೊಂಡಿತ್ತು” ಎಂದು ಶೋಕಾಸ್ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಮುಂದುವರಿದು, “ನಿಮ್ಮ ವಿರುದ್ಧ ಶಿಸ್ತು ಕ್ರಮ ಯಾಕೆ ಕೈಗೊಳ್ಳಬಾರದು ಎಂಬುದನ್ನು ತಿಳಿಸಿ. ಹತ್ತು ದಿನಗಳ ಒಳಗೆ ಪ್ರತಿಕ್ರಿಯೆ ನೀಡಬೇಕು. ಈ ಸಮಯದೊಳಗೆ ನಿಮ್ಮ ವಿವರಣೆಯನ್ನು ಸಲ್ಲಿಸದಿದ್ದಲ್ಲಿ, ಕೇಂದ್ರ ಶಿಸ್ತು ಸಮಿತಿಯು ನಿಮಗೆ ಹೇಳಲು ಏನೂ ಇರುವುದಿಲ್ಲ. ಈ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಮುಂದುವರಿಯುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ”ಎಂದು ಶೋಕಾಸ್ ನೋಟೀಸ್ನಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಕರ್ನಾಟಕ ಬಿಜೆಪಿಯಲ್ಲಿ ಎರಡು ಬಣಗಳ ಸಮರ ಜೋರಾಗಿದೆ. ವಕ್ಫ್ ವಿರುದ್ಧದ ಹೋರಾಟದ ವಿಚಾರದಲ್ಲಿ ಬಿಜೆಪಿ ಒಳಜಗಳ ಬೀದಿಗೆ ಬಂದಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಮಾತುಕತೆ ನಡೆಸಿದ್ದರು. ಈ ಎಲ್ಲ ವಿದ್ಯಮಾನಗಳ ಬೆನ್ನಲ್ಲೇ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಯತ್ನಾಳ್ಗೆ ಶೋಕಾಸ್ ನೋಟಿಸ್ ನೀಡಿ, ಉತ್ತರಿಸಲು 10 ದಿನಗಳ ಕಾಲಾವಕಾಶ ನೀಡಿದೆ. ಈ ನಡುವೆ ಯತ್ನಾಳ್ ಬಣ ಕೂಡ ಹೈಕಮಾಂಡ್ ಭೇಟಿಗೆ ಸಮಯ ಕೇಳಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Basangouda Patil Yatnal: ಬಂಡಾಯವೆದ್ದ ಯತ್ನಾಳ್ಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟೀಸ್